ADVERTISEMENT

ಭಕ್ತಿಯ ಕಡಲೊಳು ಕ್ರೌರ್ಯದ ಅಲೆ

ವಸುಧೇಂದ್ರ, ಬೆಂಗಳೂರು
Published 7 ಮಾರ್ಚ್ 2015, 19:30 IST
Last Updated 7 ಮಾರ್ಚ್ 2015, 19:30 IST

ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಭಕ್ತಿಪ್ರಧಾನ ಸಿನಿಮಾಗಳಿಗೆ ತುಂಬಾ ಮಹತ್ವವನ್ನು ಕೊಡುತ್ತಿದ್ದರು. ಯಾವುದೇ ಭಕ್ತಿಪ್ರಧಾನ ಸಿನಿಮಾ ಬಂದರೂ ತಪ್ಪದೆ ಕಳುಹಿಸುತ್ತಿದ್ದರು. ಚೆನ್ನಾಗಿದೆಯೆಂದರೆ ಎರಡನೆಯ ಬಾರಿಯೂ ಹೋಗುತ್ತಿದ್ದೆವು. ಶಾಲೆಯಲ್ಲಿಯೂ ಭಕ್ತಿಪ್ರಧಾನ ಸಿನಿಮಾಗಳ ಪ್ರಶಂಸೆ ನಡೆಯುತ್ತಿತ್ತು. ಹಾಗೆ ನೋಡಿದರೆ ಸಾಮಾಜಿಕ ಸಿನಿಮಾಗಳಿಗೆ ನಮ್ಮನ್ನು ಕಳುಹಿಸಲು ಹಿಂಜರಿಯುತ್ತಿದ್ದರು. “ಪ್ರೀತಿ-ಪ್ರೇಮ ಅಂತ ಹುಚ್ಚುಚ್ಚಾರೆ ಇರ್ತಾವೆ, ಸಣ್ಣವಯಸ್ಸಿಗೆ ಬೇಡ” ಅಂತ ಅಡ್ಡಿ ಮಾಡುತ್ತಿದ್ದುದೇ ಜಾಸ್ತಿ. ‘ಭಕ್ತಕುಂಬಾರ’, ‘ಭಕ್ತಸಿರಿಯಾಳ‘, ‘ಭಕ್ತಕನಕದಾಸ’, ‘ಸತ್ಯಹರಿಶ್ಚಂದ್ರ’ ಇತ್ಯಾದಿಗಳನ್ನು ಹಲವಾರು ಬಾರಿ ನೋಡಿದ್ದೇನೆ.

ಅಂತಹ ಸಿನಿಮಾಗಳಲ್ಲಿ ಸೊಗಸಾದ ಹಾಡುಗಳೂ ಇರುತ್ತಿದ್ದವು. ಅವುಗಳು ಸಾಕಷ್ಟು ಜನಪ್ರಿಯ ಗೀತೆಗಳಾದ್ದರಿಂದ, ರೇಡಿಯೋ ಮೂಲಕ ಕಿವಿಯ ಮೇಲೆ ಆಗಾಗ ಬೀಳುತ್ತಿದ್ದವು. ಅಂತಹ ಹಾಡುಗಳನ್ನು ದೇವಸ್ಥಾನದಲ್ಲಿಯೂ, ದೇವತಾ ಪೂಜೆಯ ಹೊತ್ತಿನಲ್ಲಿಯೂ ಹೇಳುವ ಸಂಪ್ರದಾಯವಿತ್ತು. ಇತರ ಸಾಮಾಜಿಕ ಸಿನಿಮಾಗಳಲ್ಲಿಯೂ ಕೆಲವೊಮ್ಮೆ ಒಳ್ಳೆಯ ಭಕ್ತಿಗೀತೆಯಿದ್ದರೆ, ಅದನ್ನು ಜನರು ನಿತ್ಯ ಬದುಕಿನಲ್ಲಿಯೂ ಬಳಸಿಕೊಳ್ಳುತ್ತಿದ್ದರು. ಸತ್ಯನಾರಾಯಣ ಪೂಜೆಯಾದರೆ ಹೇಳುವ ಏಕೈಕ ಗೀತೆಯಾಗಿ ‘ಕಾಪಾಡು ಶ್ರೀಸತ್ಯನಾರಾಯಣ’ ಆಗಿತ್ತು. ಯಾವ ದಾಸವರೇಣ್ಯರೂ ಸತ್ಯನಾರಾಯಣ ಸ್ವಾಮಿಯ ಹೆಸರನ್ನು ಎತ್ತಿಲ್ಲವಾದ್ದರಿಂದ ನಮಗೆ ಈ ಸಿನಿಮಾ ಹಾಡು ಬಹುಮುಖ್ಯವಾಗಿತ್ತು. ಅದೇರೀತಿ ದತ್ತಾತ್ರೇಯನ ಪೂಜೆಯನ್ನು ಮಾಡುವವರ ಮನೆಯಲ್ಲಿ ‘ತ್ರಿಮೂರ್ತಿ ರೂಪ ದತ್ತಾತ್ರೇಯ’ ಎಂಬ ಹಾಡನ್ನು ಸುಶ್ರಾವ್ಯವಾಗಿ ಹೇಳುತ್ತಿದ್ದರು.

ಈ ಹೊತ್ತಿನಲ್ಲಿ ಒಮ್ಮೆ ಈ ಭಕ್ತಿಪ್ರಧಾನ ಸಿನಿಮಾಗಳನ್ನು ಅವಲೋಕಿಸಿದರೆ ಅವು ನಿಜಕ್ಕೂ ಮಕ್ಕಳು ನೋಡಬಹುದಾದ ಚಿತ್ರಗಳಾಗಿದ್ದವೆ ಎಂದು ನನಗೆ ಅನುಮಾನವಾಗುತ್ತದೆ. ಈ ಭಕ್ತಿಯ ಸಿನಿಮಾಗಳಲ್ಲಿ ಅದು ಹೇಗೋ ವಿಪರೀತವಾದ ಕ್ರೌರ್ಯ ಸೇರಿಕೊಂಡಿರುತ್ತಿತ್ತು. ಅವುಗಳಲ್ಲಿನ ಕ್ರೌರ್ಯದ ದೃಶ್ಯಗಳನ್ನು ಗಮನಿಸಿದರೆ ಈಗಲೂ ನನ್ನ ಮೈನಡುಗುತ್ತದೆ. ಅಂದಮೇಲೆ ಆ ಎಳೆಯ ವಯಸ್ಸಿನಲ್ಲಿ ಅಂತಹ ಕ್ರೌರ್ಯವನ್ನು ಭಕ್ತಿಯ ನೆಪದಲ್ಲಿ ನೋಡುವ ಅವಶ್ಯಕತೆಯಿತ್ತೇ ಎಂದು ನನಗೆ ಅನುಮಾನವಾಗುತ್ತದೆ. ‘ಭಕ್ತ ಕುಂಬಾರ’ ಸಿನಿಮಾವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಜೀವಂತ ಎಳೆಯ ಮಗುವನ್ನು ಗೋರ ಕುಂಬಾರ ಕಾಲಿನಲ್ಲಿ ಹಾಕಿ ತುಳಿದು, ಮಡಿಕೆ ಮಾಡುವ ಜೇಡಿ ಮಣ್ಣಿನೊಡನೆ ಸೇರಿಸಿಬಿಡುತ್ತಾನೆ. ಈ ದೃಶ್ಯವನ್ನು ಲಕ್ಷಣವಾಗಿ ಹಲವಾರು ನಿಮಿಷಗಳ ಕಾಲ ತೋರಿಸುತ್ತಲೇ ಹೋಗುತ್ತಾರೆ. ಕಾಲಿಗೆ ಸಿಕ್ಕಿಬೀಳುವ ಮಗನೂ ಗೊತ್ತಾಗದಂತಹ ಭಕ್ತಿ ನಿಜಕ್ಕೂ ಇರಬೇಕೆ? ಅದು ಆರೋಗ್ಯಕರವೆ? ಭಗವಂತನಿಗಿಂತಲೂ ಎಳೆಯ ಮಗುವನ್ನು ಹೆಚ್ಚು ಜತನದಿಂದ ನೋಡಿಕೊಳ್ಳಬೇಕಲ್ಲವೆ? ಇಂತಹ ಯಾವ ಪ್ರಶ್ನೆಗಳು ನನಗೆ ಆ ಹೊತ್ತಿನಲ್ಲಿ ಮೂಡುವುದು ಸಾಧ್ಯವಿರುತ್ತಿರಲಿಲ್ಲ. ಹಿರಿಯರೂ ಹೀಗೆ ಪ್ರಶ್ನಿಸಿದ್ದನ್ನು ನಾನು ಕಂಡಿಲ್ಲ. ಆದರೆ ಎಲ್ಲೆಯಿಲ್ಲದ ಕ್ರೌರ್ಯವಂತೂ ಈ ಭಕ್ತಿ ಸಿನಿಮಾಗಳಲ್ಲಿ ಮುಂದುವರೆಯುತ್ತಿತ್ತು. ‘ಭಕ್ತ ಕುಂಬಾರ’ ಸಿನಿಮಾದ ಕ್ರೌರ್ಯ ಇಲ್ಲಿಗೇ ನಿಲ್ಲುವದಿಲ್ಲ. ಯಾವುದೋ ಹೊತ್ತಿನಲ್ಲಿ ಹೆಂಡತಿಯರಿಬ್ಬರು ತನ್ನ ಕೈ ಮುಟ್ಟಿದರೆಂಬ ಕಾರಣಕ್ಕೆ ಎರಡೂ ಕೈಗಳನ್ನು ಕಡೆದುಕೊಂಡುಬಿಡುತ್ತಾನೆ. ಹಸಿಹಸಿ ರಕ್ತವನ್ನು ಹರಿಸುತ್ತಾ ತನ್ನೆರಡೂ ಮೊಂಡು ಕೈಗಳನ್ನು ತೋರಿಸುತ್ತಾ ‘ವಿಠ್ಠಲಾ, ಎಲ್ಲಾ ನಿನ್ನಿಚ್ಛೆ’ ಎನ್ನುವ ದೃಶ್ಯ ಈಗ ನೆನಸಿಕೊಂಡರೆ ಹೆದರಿಕೆಯಾಗುತ್ತದೆ.

ಆದರೆ ಒಂದು ಸಮಾಧಾನದ ಸಂಗತಿಯೆಂದರೆ ಎಲ್ಲರಿಗೂ ಈ ಕ್ರೌರ್ಯ ತಾತ್ಕಾಲಿಕ ಎನ್ನುವ ಅಂಶ ಗೊತ್ತಿರುತ್ತಿತ್ತು. ಮುಂದೆ ಅದು ಹೇಗೋ ಭಗವಂತ ಪ್ರತ್ಯಕ್ಷನಾಗಿ ಸತ್ತ ಮಗುವನ್ನೂ ಬದುಕಿಸುತ್ತಾನೆಂದೂ, ಕಡಿದ ಕೈಗಳನ್ನೂ ಚಿಗುರಿಸುತ್ತಾನೆಂದೂ ನಮಗೆ ತಿಳಿದಿರುತ್ತಿತ್ತು. ಒಂದು ವೇಳೆ ಅಚಾನಕ್ಕಾಗಿ ಸಿನಿಮಾದ ಮಧ್ಯದಲ್ಲಿಯೇ ಕರೆಂಟ್ ಹೋದರೂ, ಮರು ದಿನದ ಶೋನಲ್ಲಿಯಾದರೂ ಭಗವಂತ ಪ್ರತ್ಯಕ್ಷನಾಗಿ ಎಲ್ಲ ಕಷ್ಟವನ್ನೂ ಪರಿಹರಿಸುತ್ತಾನೆ ಎನ್ನುವುದು ನಮಗೆ ಗೊತ್ತಿರುತ್ತಿತ್ತು. ಆದ್ದರಿಂದಲೇ ಮನಸ್ಸಿಗೆ ಸ್ವಲ್ಪ ಧೈರ್ಯವಿರುತ್ತಿತ್ತು. ಆದರೂ ಅಂತಹ ಕ್ರೌರ್ಯದ ದೃಶ್ಯವನ್ನು ನೋಡುತ್ತಾ ಅರಗಿಸಿಕೊಳ್ಳುವುದು ಹೇಗೆ? ಜೀವದೊಳಗೆ ಆಗುತ್ತಿರುವ ಹತ್ತಿಕ್ಕದ ನಡುಕವನ್ನು ಹತೋಟಿಗೆ ತರುವುದು ಹೇಗೆ? ಅದಕ್ಕೊಂದು ಚಿಕ್ಕ ಪರಿಹಾರವಿತ್ತು. ನಮ್ಮ ಅಕ್ಕಪಕ್ಕ ಕುಳಿತವರು ನಮ್ಮವರಲ್ಲದಿದ್ದರೂ ಅವರಿಗೆ “ಮುಂದೆ ದೇವರು ಎಲ್ಲ ಸರಿಮಾಡ್ತಾನೆ... ಎಲ್ಲ ಸರಿ ಮಾಡ್ತಾನೆ...” ಎಂದು ಹೇಳುತ್ತಿದ್ದೆವು. ಅವರಿಗೆ ಸಮಾಧಾನ ಮಾಡುವುದಕ್ಕಿಂತಲೂ ನಾವು ನಿರಾಳವಾಗುತ್ತಿದ್ದುದು ಮುಖ್ಯವಾಗಿರುತ್ತಿತ್ತು. ಪುಣ್ಯವಶಾತ್‌ ಕಥೆಯ ಅಂತ್ಯ ಗೊತ್ತಾದದ್ದಕ್ಕೆ ಯಾರಿಗೂ ಬೇಸರವೇನೂ ಆಗುತ್ತಿರಲಿಲ್ಲ.

ಮಗುವಿನ ಸಾವು ಅಥವಾ ಕೊಲೆಯೇ ಕ್ರೌರ್ಯದ ಪರಾಕಾಷ್ಠೆ ಇರಬೇಕು. ಆದ್ದರಿಂದಲೇ ಬಹಳಷ್ಟು ಭಕ್ತಿಪ್ರಧಾನ ಸಿನಿಮಾಗಳಲ್ಲಿ ಮತ್ತೆಮತ್ತೆ ಮಗುವನ್ನು ಕುಂಟು ನೆಪದಲ್ಲಿ ಸಾಯಿಸುವ ಸಂದರ್ಭಗಳು ಮೂಡಿಬರುತ್ತವೆ. ‘ಭಕ್ತ ಸಿರಿಯಾಳ’ ಸಿನಿಮಾದ ಕತೆಯನ್ನೊಮ್ಮೆ ಜ್ಞಾಪಿಸಿಕೊಳ್ಳಿ. ಮಗುವನ್ನು ಕೈಯಾರೆ ಕೊಂದು, ಅವನ ಶಿರವನ್ನು ಒರಳಿನಲ್ಲಿ ಹಾಕಿ ಒನಕೆಯಿಂದ ಜಜ್ಜಿ, ಅದರ ಆಂಬೊಡೆಯನ್ನು ಮಾಡಿ ಭಿಕ್ಷುಕನ ರೂಪದಲ್ಲಿ ಬಂದ ಶಿವನಿಗೆ ಬಡಿಸಲಾಗುತ್ತದೆ! ಸ್ವಲ್ಪಮಟ್ಟಿಗೆ ‘ಸತ್ಯಹರಿಶ್ಚಂದ್ರ’ ಕತೆ ವಾಸಿ, ಮಗು ಲೋಹಿತಾಶ್ವ ಹಾವು ಕಡಿದು ಸರಳವಾಗಿ ಸಾಯುತ್ತಾನೆ. ‘ಭಕ್ತ ಪ್ರಹ್ಲಾದ’ನಂತೂ ಹಲವು ಸೃಜನಶೀಲ ಕ್ರಮದಲ್ಲಿ ಸಾವಿನ ದವಡೆಗೆ ಹೋಗಿಬಂದು ಬದುಕಿ ಉಳಿಯುವುದು ಅವನ ಪುಣ್ಯಕ್ಕಿಂತಲೂ ಹೆಚ್ಚಾಗಿ ಪ್ರೇಕ್ಷಕರ ಪುಣ್ಯವೆಂದೇ ನನಗನ್ನಿಸುತ್ತದೆ. ‘ರಾಘವೇಂದ್ರ ವೈಭವ’ ಚಿತ್ರದಲ್ಲಂತೂ ಪುಟ್ಟ ಮಗುವೊಂದು ಮಾವಿನಹಣ್ಣಿನ ರಸಾಯನ ಪಾತ್ರೆಯಲ್ಲಿ ಬಿದ್ದು ಅಸು ನೀಗುತ್ತದೆ.

ಇಂತಹ ಕತೆಗಳು ಮಕ್ಕಳ ಮೇಲೆ ಎಂತಹ ಭೀಕರ ಪರಿಣಾಮವನ್ನು ಬೀರಬಹುದು ಎನ್ನುವುದಕ್ಕೆ ನನ್ನದೇ ಬಾಲ್ಯದ ಒಂದು ಉದಾಹರಣೆಯನ್ನು ಕೊಡಬಲ್ಲೆ. ‘ಭಕ್ತ ಸಿರಿಯಾಳ’ ಸಿನಿಮಾ ನೋಡಿ ಬಂದ ಮೇಲೆ, ಅಪ್ಪ-ಅಮ್ಮ ಸೇರಿ ಮಗನ ತಲೆಯನ್ನು ಒನಕೆಯಿಂದ ಜಜ್ಜಿ ಆಂಬೊಡೆ ಮಾಡುವ ಸಂಗತಿ ನನ್ನನ್ನು ವಿಪರೀತವಾಗಿ ಹೆದರಿಸಿತ್ತು. ನಮ್ಮಪ್ಪ-ಅಮ್ಮರೂ ಶಿವನ ಮೇಲೆ ಸಾಕಷ್ಟು ಭಕ್ತಿಯನ್ನು ಇಟ್ಟುಕೊಂಡಿದ್ದರು. ದಿನನಿತ್ಯ ತಪ್ಪದೆ ಶಿವಾಲಯಕ್ಕೆ ಹೋಗಿ ತುಪ್ಪದ ದೀಪ ಹಚ್ಚುತ್ತಿದ್ದರು. ಇವರ ಭಕ್ತಿಗೆ ಮೆಚ್ಚಿ ನಮ್ಮ ಮನೆಗೂ ಶಿವ ಭಿಕ್ಷೆಗೆ ಬಂದು ನನ್ನ ತಲೆಯ ಆಂಬೊಡೆ ಕೇಳಿದರೆ ಗತಿಯೇನು ಎಂಬ ಹೆದರಿಕೆ ನನ್ನನ್ನು ಆವರಿಸಿಕೊಂಡು ಬಿಟ್ಟಿತ್ತು. ಮನೆಯಲ್ಲಿ ಅಕ್ಕನೂ ಇದ್ದಳಾದರೂ, ಸಿನಿಮಾದಲ್ಲಿ ಶಿವನು ಜಾಣನಾದ ಗಂಡು ಹುಡುಗನ ತಲೆಯನ್ನೇ ಬೇಡುತ್ತಾನೆ; ನಮ್ಮಕ್ಕ ಶಾಲೆಯಲ್ಲಿ ಅಷ್ಟೇನೂ ಒಳ್ಳೆಯ ಅಂಕ ತೆಗೆಯುತ್ತಿರಲಿಲ್ಲವಾದ್ದರಿಂದ ಆಕೆಯ ತಲೆಯ ಆಂಬೊಡೆ ಕೇಳಲಿಕ್ಕಿಲ್ಲವೆಂದು ನನಗನ್ನಿಸಿತ್ತು. ಸಿನಿಮಾದ ಕೊನೆಯಲ್ಲಿ ಈಶ್ವರನು ಸಿರಿಯಾಳ ದಂಪತಿಯ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಮಗುವನ್ನು ಬದುಕಿಸಿಕೊಡುತ್ತಾನಾದರೂ, ನಮ್ಮ ಅಪ್ಪ-ಅಮ್ಮರ ಭಕ್ತಿಯ ಬಗ್ಗೆ ನನಗೆ ಅಂತಹ ಭರವಸೆಗಳೇನೂ ಇರಲಿಲ್ಲ. ಏಕಾದಶಿ ದಿನ ಒಮ್ಮೊಮ್ಮೆ ಅಪ್ಪ ಊಟ ಮಾಡಿ ಬಿಡುತ್ತಿದ್ದ. ತಲೆ ನೋವು ಬಂದಿದೆ ಎಂಬ ನೆಪವೊಡ್ಡಿ ಅಮ್ಮ ಒಂದೊಂದು ಸಲ ಪೂಜೆ ಮಾಡುವುದಕ್ಕೂ ಮುಂಚೆ ಕಾಫಿ ಕುಡಿದು ಬಿಡುತ್ತಿದ್ದಳು. ಇಂತಹವರ ಭಕ್ತಿಯ ಮೇಲೆ ಯಾವ ಭರವಸೆಯನ್ನಿಟ್ಟು ತಲೆ ಒಡ್ಡುವುದು? ನಾನು ಪ್ರತಿನಿತ್ಯ ಶಿವನ ದೇವಾಲಯಕ್ಕೆ ಹೋಗಿ “ದಯವಿಟ್ಟು ನಮ್ಮ ಮನೆಗೆ ಭಿಕ್ಷೆಗೆ ಬರಬೇಡ, ಬೇಕಿದ್ದರೆ ಪಕ್ಕದ ಮನೆಗೆ ಹೋಗು” ಎಂದು ಭಕ್ತಿಯಿಂದ ಬೇಡಿಕೊಳ್ಳಲಾರಂಭಿಸಿದೆ. ನನ್ನ ದುರದೃಷ್ಟಕ್ಕೆ ಪಕ್ಕದ ಮನೆಯ ಇಬ್ಬರು ಹುಡುಗರು ಶಾಲೆಯಲ್ಲಿ ದಡ್ಡರಿದ್ದರು. ಯಾಕೋ ಯಾವುದೂ ಸರಿ ಹೊಂದದೆ ಹೆದರಿಕೆ ಹೆಚ್ಚಾಗಿ ನನಗೆ ಕೆಟ್ಟ ಕನಸುಗಳು ಬೀಳಲಾರಂಭಿಸಿದವು. ಒಂದು ರಾತ್ರಿ ಭಯಾನಕವಾದ ಕನಸೊಂದು ಬಿದ್ದು, ಎಚ್ಚರವಾಗಿ ಅಳುತ್ತಾ ಕೂತು ಬಿಟ್ಟೆ. ಅಮ್ಮನಿಗೂ ಎಚ್ಚರವಾಯ್ತು. ಏನಾಯ್ತೆಂದು ವಿಚಾರಿಸಿದಳು. ಆಕೆಗೆ ಎಲ್ಲವನ್ನೂ ಹೇಳಿಬಿಟ್ಟೆ. ಅಮ್ಮನಿಗೆ ಅರ್ಥವಾಯ್ತು. ನನ್ನ ಬೆನ್ನು ಸವರಿ “ನೋಡಪ್ಪಾ ರಾಜ, ಶಿವ ಅಲ್ಲ, ಅವರಪ್ಪ ಬಂದ್ರೂ ನಿನ್ನ ಕೂದಲು ಕೊಂಕೋದಕ್ಕೆ ನಾನು ಬಿಡಲ್ಲ. ಮುಂದಕ್ಕೆ ಹೋಗು ಅಂತ ದಬಾಯಿಸಿ ಅಟ್ಟಿ ಬಿಡ್ತೀನಿ” ಎಂದು ಧೈರ್ಯ ತುಂಬಿದಳು. ಅಂದಿನಿಂದ ನನ್ನ ಹೆದರಿಕೆ ಮಾಯವಾಯ್ತು.

ಒಟ್ಟಾರೆಯಾಗಿ ಭಕ್ತಿಪ್ರಧಾನ ಕತೆಗಳಲ್ಲಿ ಹಸಿಹಸಿ ಕ್ರೌರ್ಯ ಮತ್ತೆ ಮತ್ತೆ ಮರುಕಳಿಸುತ್ತದೆ. ತಾಯಿ ರೇಣುಕೆಯ ತಲೆಯನ್ನೇ ಕತ್ತರಿಸುವ ಪರಶುರಾಮ, ತಂದೆ ಅರ್ಜುನನ ಶಿರವನ್ನೇ ಛೇದಿಸುವ ಬಬ್ರುವಾಹನ, ತನ್ನ ಕಣ್ಣುಗಳನ್ನೇ ಬಾಣದ ಮೊನಚಿಂದ ಕಿತ್ತು ಹೊರಗಿಡುವ ಕಣ್ಣಪ್ಪ – ಒಂದೇ, ಎರಡೇ! ಯಾವ ಕತೆಯನ್ನು ತೆಗೆದುಕೊಂಡರೂ ಕಂಗೆಡಿಸುವಂತಹ ಕ್ರೌರ್ಯ. ವಿಶೇಷವೆಂದರೆ ಯಾವುದೇ ಸೆನ್ಸಾರ್ ಮಂಡಳಿಯೂ ಇದನ್ನು ಕ್ರೌರ್ಯವೆಂದು ಪರಿಗಣಿಸದೆ, ಸಮಾಜದ ಎಲ್ಲ ವರ್ಗದ ಜನಗಳ ವೀಕ್ಷಣೆಗೆ ಅನುಮತಿ ನೀಡುತ್ತಿದ್ದುದು. ಬಹುಶಃ ಭಕ್ತಿಯ ಅಬ್ಬರದ ಸ್ವರದಲ್ಲಿ ಈ ಕ್ರೌರ್ಯದ ಧ್ವನಿ ಅಡಗಿ ಹೋಗುತ್ತಿತ್ತು ಅನ್ನಿಸುತ್ತದೆ. ಸೆನ್ಸಾರ್‌ ಮಂಡಳಿಗೆ ಅಥವಾ ಭಕ್ತಿಯಿಂದ ಈ ಚಿತ್ರಗಳನ್ನು ನೋಡುತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಇದು ಸಮಸ್ಯೆಯೇ ಆಗುತ್ತಿರಲಿಕ್ಕಿಲ್ಲವೇನೋ!
ಭಕ್ತಿಯ ಜೊತೆ ಕ್ರೌರ್ಯ ಯಾಕೆ ತಳಕು ಹಾಕಿಕೊಂಡಿದೆ? ಇದು ಮೂಲಭೂತ ಪ್ರಶ್ನೆ. ಇದು ಕೇವಲ ಹಿಂದೂ ಧರ್ಮದ ಭಕ್ತಿಯ ಕತೆಗಳಿಗೆ ಮಾತ್ರ ಸೀಮಿತವಲ್ಲವೆನ್ನಿಸುತ್ತದೆ.

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲೂ ಕ್ರೌರ್ಯದಿಂದ ಕೂಡಿದ ಇಂತಹ ಭಕ್ತಿಯ ಕತೆಗಳಿವೆಯೆಂದು ಇತಿಹಾಸಕಾರರು ಹೇಳುತ್ತಾರೆ. ಕ್ರೌರ್ಯವಿಲ್ಲದ ಭಕ್ತಿಯ ಕಥನ ಸಪ್ಪೆಯಾಗಿ ಬಿಡುತ್ತದೆಯೆ? ಭಗವಂತಹ ಮಹಿಮೆಯ ಗಾಢತೆಯನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ಕ್ರೌರ್ಯ ಮಹತ್ವದ ಪಾತ್ರ ವಹಿಸುತ್ತದೆಯೆ? ಕ್ರೌರ್ಯದ ತಂತ್ರದಿಂದ ಭಕ್ತರ ಮಧ್ಯೆ ಭಯವನ್ನು ಬಿತ್ತುವುದು ಈ ಕತೆಗಳ ಉದ್ದೇಶವೆ? ಅಥವಾ ಬದುಕಿನಲ್ಲಿ ಬಹಳಷ್ಟು ಕ್ರೌರ್ಯರೂಪದ ಕಷ್ಟಗಳನ್ನು ಎದುರಿಸುವ ಭಕ್ತನಿಗೆ, ತನ್ನ ಕಷ್ಟಗಳೂ ಭಗವಂತನ ಭಕ್ತಿಯ ಮಾರ್ಗದ ಮೂಲಕ ಒಂದು ದಿನ ಪರಿಹಾರವಾಗುತ್ತವೆಂಬ ಆಶಾಕಿರಣ ಮೂಡಿಸುತ್ತವೆಯೆ? ಬಹುಶಃ ಇವೆಲ್ಲವೂ ಸತ್ಯವಾಗಿರಬಹುದು. ಹಿರಿಯರು ಇದನ್ನೆಲ್ಲಾ ಒಂದು ರೀತಿಯಲ್ಲಿ ಅರ್ಥ ಮಾಡಿಕೊಂಡು ಭಕ್ತಿ ಕಥನಕ್ಕೂ, ವಾಸ್ತವ ಜೀವನಕ್ಕೂ ಇರುವ ಅಂತರವನ್ನು ತಿಳಿದುಕೊಂಡಿರುತ್ತಾರಾದ್ದರಿಂದ ಅವರಿಗೆ ಅದು ಅಷ್ಟೊಂದು ಬಾಧಿಸುವದಿಲ್ಲ. ಆದರೆ ಅಂತಹ ಆಲೋಚನಾ ಶಕ್ತಿಯೇ ಇಲ್ಲದ ಮಕ್ಕಳ ಮೇಲೆ ಈ ತರಹದ ಕತೆಗಳು ಯಾವ ಪ್ರಭಾವವನ್ನು ಬೀರುತ್ತವೆ ಎಂದು ನನಗೆ ಕಳವಳವಾಗುತ್ತದೆ.

ಸರಳವಾದ ಭಕ್ತಿಯ ಬಗ್ಗೆ ಜನರಿಗೆ ಯಾವತ್ತೂ ಆಕರ್ಷಣೆ ಕಡಿಮೆಯೆನ್ನಿಸುತ್ತೆ. ಸುಮ್ಮನೆ ಯಾರೋ ಪೂಜೆ ಮಾಡುವುದನ್ನೋ, ಜಪ ಮಾಡುವುದನ್ನೋ ನೋಡಲು ಯಾರಿಗೂ ಉತ್ಸಾಹ ಮೂಡುವುದಿಲ್ಲ. ಅದೇ ದೇವರ ಹೆಸರಿನಲ್ಲಿ ಬೆಂಕಿಯಲ್ಲಿ ಓಡಾಡುವ ಭಕ್ತನ ಆವೇಶವನ್ನು ಜ್ಞಾಪಿಸಿಕೊಳ್ಳಿ, ಮುಳ್ಳಿನ ಹಾವುಗೆಯ ಮೇಲೆ ನಿಲ್ಲುವುದನ್ನು ಕಲ್ಪಿಸಿಕೊಳ್ಳಿ, ಬೆನ್ನಿನ ಚರ್ಮಕ್ಕೆ ಕೊಕ್ಕೆ ಹಾಕಿಕೊಂಡು ರಥವನ್ನು ಎಳೆಯುವ ಸಂದರ್ಭ ಊಹಿಸಿಕೊಳ್ಳಿ– ಅಂತಹ ಕಡೆಯಲ್ಲಿ ಖಂಡಿತವಾಗಿಯೂ ಜನಜಂಗುಳಿ ಸೇರುತ್ತದೆ. ಭಕ್ತಿಯಲ್ಲಿ ದೇಹದಂಡನೆಯ ಸಂಗತಿ ಪ್ರಧಾನವಾಗಿ ಸೇರಿಕೊಂಡಿದೆ ಎಂಬುದನ್ನು ಗಮನಿಸಬಹುದು. ನಮಸ್ಕಾರ ಹಾಕುವುದು, ದಿಂಡು ಉರುಳಿಸುವುದು, ಉಪವಾಸ ಮಾಡುವುದು, ಕೈ ಸುಟ್ಟುಕೊಂಡು ಆರತಿ ಮಾಡುವುದು–– ಒಟ್ಟಾರೆಯಾಗಿ ದೇಹದಂಡನೆ ಭಕ್ತಿಯಲ್ಲಿ ಯಥೇಚ್ಛವಾಗಿ ಕಂಡು ಬರುತ್ತದೆ. ಒಂದು ರೀತಿ ಆಲೋಚಿಸಿದರೆ ದೇಹದಂಡನೆ ಆರೋಗ್ಯಕ್ಕೆ ಒಳ್ಳೆಯದೇ ಅನ್ನಿಸುತ್ತದೆ. ಆದರೆ ಅದು ಯಾವಾಗ ಕ್ರೌರ್ಯದ ರೂಪವನ್ನು ಹಿಡಿಯುತ್ತದೆಯೋ, ಅದರ ಹದ ತಪ್ಪುತ್ತದೆ. ತನಗೇನಾದರೂ ಬೇಕು ಎಂದೆನಿಸಿದಾಗ ಚಂಡಿ ಹಿಡಿದು ಅಳುವ ಮಗುವಿನಂತೆ ಭಕ್ತಿಯಲ್ಲಿ ಕ್ರೌರ್ಯ ಕಂಡು ಬರುತ್ತದೆ. ಸುಲಭವಾಗಿ ಕೇಳಿದ್ದನ್ನು ಕೊಡದ ಭಗವಂತನಿಗೆ ಮೆಣಸಿನಕಾಯಿ ಹೊಗೆಯನ್ನೂ ಹಾಕುವ ಸಂಪ್ರದಾಯ ಕೆಲವು ಭಕ್ತರಲ್ಲಿ ಇದೆ.

ಹಾಗಂತ ನಾನು ನಾಸ್ತಿಕ ಮನುಷ್ಯನೇನೂ ಅಲ್ಲ. ನವರಸಗಳಲ್ಲಿ ನನಗೆ ಭಕ್ತಿರಸವೇ ಹೆಚ್ಚು ಇಷ್ಟವಾಗುತ್ತದೆ. ಯಾರಾದರೂ ಸುಶ್ರಾವ್ಯವಾಗಿ ದಾಸರ ಕೀರ್ತನೆಯನ್ನು ಹಾಡಿದರೆ ಈಗಲೂ ಮೈಮರೆಯುತ್ತೇನೆ. ಹಿಮಾಲಯದ ಕಣಿವೆಗಳಲ್ಲಿ ಅಡ್ಡಾಡುವಾಗ ಭಗವಂತನ ಕ್ಷೇತ್ರದಲ್ಲಿಯೇ ಇದ್ದೇನೆ ಎಂಬ ಭಾವ ಆವರಿಸಿ ಬಿಡುತ್ತದೆ. ನೂರಾರು ಜನರು ಮಸೀದಿಯಲ್ಲಿ ಮೊಣಕಾಲು ಬಗ್ಗಿಸಿ ಪ್ರಾರ್ಥನೆ ಮಾಡುವಾಗ ನನ್ನ ಮೈಯಲ್ಲಿ ರೋಮಾಂಚನವಾಗುತ್ತದೆ. ನನ್ನ ಕೈ ಮೀರಿದ ಕಷ್ಟಗಳು ಎದುರಾದಾಗ ನನ್ನದೇ ಆದ ಭಗವಂತನ ಮೊರೆ ಹೋಗುತ್ತೇನೆ. ಆದರೆ ಭಕ್ತಿಯೇನಿದ್ದರೂ ನನಗೆ ಸಾತ್ವಿಕ ರೂಪದಲ್ಲಿ ಇಷ್ಟವಾಗುತ್ತದೆಯೋ ಹೊರತು, ವೀರರಸದಲ್ಲಿ ಅಲ್ಲ. ಭಕ್ತಿ ಮನಸ್ಸನ್ನು ಅರಳಿಸುವ ಸಂಗತಿಯೇ ಹೊರತು, ಹೆದರಿಕೆಯಲ್ಲಿ ಕುಬ್ಜಗೊಳಿಸುವಂತಹದ್ದಲ್ಲ. ಭಕ್ತಿಯ ಫಲಶೃತಿ ಸಂತೋಷವೇ ಹೊರತು, ಭಯವಲ್ಲ. ದೇವರ ಪ್ರಸಾದವನ್ನು ಸ್ವೀಕರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳದೆ, ತಿರಸ್ಕರಿಸಿದರೆ ಸಕಲ ದಾರಿದ್ರ್ಯವೂ ನಿನ್ನನ್ನು ವಕ್ಕರಿಸುತ್ತದೆ ಎಂದು ಹೆದರಿಸುವುದೇ ಭಕ್ತಿ ಕತೆಗಳ ಮೂಲ ಆಶಯವಾಗಿದೆ.

ನಮ್ಮೂರಿನ ಗಂಡಿ ನರಸಿಂಹಸ್ವಾಮಿ ದೇವಸ್ಥಾನದ ಜಾತ್ರೆಗೆ ಸ್ಥೂಲಕಾಯದ ಹೆಂಗಸೊಬ್ಬಳು ತಪ್ಪದೆ ಬರುತ್ತಿದ್ದಳು. ಗೋಧಿ ಬಿಳುಪಿನ ಮೈಬಣ್ಣದ, ಹಣೆಗೆ ಇಷ್ಟುದ್ದದ ಕುಂಕುಮವನ್ನೂ ಮತ್ತು ಗಲ್ಲದ ತುಂಬಾ ಅರಿಷಿಣವನ್ನು ಹಚ್ಚುವ, ದಟ್ಟ ಹಸಿರು ಇಳಕಲ್‌ ಸೀರೆಯನ್ನು ಉಟ್ಟಿರುತ್ತಿದ್ದ ಈಕೆ ಮೈನವಿರೇಳಿಸುವಂತೆ ಹಾಡುಗಳನ್ನು ಹಾಡುತ್ತಿದ್ದಳು. ಆದರೆ ಅರ್ಚಕರು ದೇವರಿಗೆ ಮಂಗಳಾರತಿ ಮಾಡಿ ಭಗಭಗನೆ ಉರಿಯುವ ಹತ್ತಾರು ಬತ್ತಿಗಳ ಹಿತ್ತಾಳೆಯ ತಟ್ಟೆಯನ್ನು ಆಕೆಯ ಮುಂದೆ ಹಿಡಿದರೆ, ಗಪ್ಪನೆ ಅದಿಷ್ಟೂ ಉರಿಯುವ ಬತ್ತಿಗಳನ್ನು ಬಾಯಲ್ಲಿ ಹಾಕಿಕೊಂಡು ಜಗಿದು ನುಂಗಿ, ಕಣ್ಣು ಮುಚ್ಚಿಕೊಂಡು ನೆಲಕ್ಕೆ ಕುಸಿಯುತ್ತಿದ್ದಳು. ಸುತ್ತಮುತ್ತ ಇದ್ದವರೆಲ್ಲಾ ಭಕ್ತಿಯಿಂದ ಈಕೆಗೆ ಕೈಮುಗಿಯುತ್ತಿದ್ದರು. ಈಕೆ ನಮ್ಮಮ್ಮನ ಗೆಳತಿಯಾಗಿದ್ದಳು. ನನ್ನ ಮೇಲೆ ವಿಶೇಷ ಪ್ರೀತಿಯಿತ್ತು. ಆದರೆ ಈಕೆ ಎಲ್ಲಿಯೇ ಕಂಡರೂ ನಾನು ಹೆದರಿಕೊಳ್ಳುತ್ತಿದ್ದೆ. ಇನ್ನಿಲ್ಲದ ಅಕ್ಕರೆಯಿಂದ ಆಕೆ “ಬಾರೋ ರಾಜ, ನನ್ನ ಹತ್ತಿರ ಬಾರೋ” ಎಂದು ಪ್ರೀತಿಯಿಂದ ಕರೆದರೂ ಹೋಗುತ್ತಿರಲಿಲ್ಲ. ನಮ್ಮ ಭಕ್ತಿಯ ಆವೇಶ ಮನುಷ್ಯರ ನಡುವಿನ ಪ್ರೀತಿಯನ್ನು ಹೆಚ್ಚಿಸುವಂತಹದಾಗಿರಬೇಕೇ ಹೊರತು ಹೆದರಿಕೆಯ ಕಂದರವನ್ನಲ್ಲ.

ಇತ್ತೀಚಿನ ದಿನಗಳಲ್ಲಿ ಭಕ್ತಿಪ್ರಧಾನ ಸಿನಿಮಾಗಳು ಕಡಿಮೆಯಾಗಿವೆ. ಜನರಲ್ಲಿ ಭಕ್ತಿ ಕಡಿಮೆಯಾಗಿದೆಯೋ, ಅಂತಹ ಸಿನಿಮಾಗಳನ್ನು ಮಾಡಲು ಬಂಡವಾಳ ಸಿಗುತ್ತಿಲ್ಲವೋ ಗೊತ್ತಿಲ್ಲ– ಒಟ್ಟಾರೆಯಾಗಿ ಅವುಗಳ ದಾಂಧಲೆ ಕಡಿಮೆಯಾಗಿದೆ. ಆದರೆ ಸಿನಿಮಾಗಳಲ್ಲಿ ಕ್ರೌರ್ಯ ಮಾತ್ರ ಹಾಗೇ ಉಳಿದುಕೊಂಡು ಬಿಟ್ಟಿದೆ. ಭಕ್ತಿಯ ಸಿನಿಮಾಗಳಲ್ಲಿ ಕ್ರೌರ್ಯದ ಪರಿಣಾಮಗಳನ್ನು ಪರಿಹರಿಸಲು ಕೊನೆಯಲ್ಲಿ ಭಗವಂತನಾದರೂ ಬರುತ್ತಿದ್ದ, ಆದರೆ ಮಚ್ಚು-ಲಾಂಗುಗಳನ್ನು ಹಿಡಿದುಕೊಂಡು ರುಂಡ ಚೆಂಡಾಡುವ ನಮ್ಮ ಹೊಸ ಸಿನಿಮಾ ಕತೆಗಳಲ್ಲಿ ಅಂತಹ ಆಶಾಭಾವನೆಯನ್ನೂ ಇಟ್ಟುಕೊಳ್ಳುವಂತಿಲ್ಲ. ತಮ್ಮ ಏರಿಯಾದ ರೌಡಿಯೊಬ್ಬ ಲಾಂಗನ್ನು ಹಿಡಿದುಕೊಂಡು ಬಂದು ತಮ್ಮಪ್ಪನ ತಲೆಯನ್ನು ತೆಗೆಯುತ್ತಾನೆ ಎಂದು ಮಗುವೊಂದು ಹೆದರಿಕೊಂಡರೆ, ಅದಕ್ಕೆ ಸಮಾಧಾನ ಮಾಡುವ ಯಾವ ಮಾತುಗಳನ್ನೂ ಈಗಿನ ತಾಯಿ ಹೇಳಲು ಸಾಧ್ಯವಿಲ್ಲ. ಸೆನ್ಸಾರ್ ಮಂಡಳಿಯವರು ಯಾವತ್ತಿನಂತೆ ಇಂತಹ ಸಿನಿಮಾಗಳಿಗೆ ಅನುಮತಿ ಕೊಡುತ್ತಿದ್ದಾರೆ, ಮಕ್ಕಳಾದಿಯಾಗಿ ಹಿರಿಯರು ವೀಕ್ಷಿಸುತ್ತಿದ್ದಾರೆ. ಯಾವುದೋ ಒಂದು ಚುಂಬನದ ದೃಶ್ಯಕ್ಕೆ ನಾವು ತಲೆ ಕೆಡಿಸಿಕೊಳ್ಳುವಷ್ಟು ರುಂಡ ಚೆಂಡಾಡುವ ಕ್ರೌರ್ಯದ ದೃಶ್ಯಕ್ಕೆ ತಲೆಕೆಡಿಸಿಕೊಳ್ಳುವದಿಲ್ಲ. ನಾನಂತೂ ಕ್ರೌರ್ಯಕ್ಕೆ ಹೆದರಿದಷ್ಟು ಕಾಮದ ದೃಶ್ಯಗಳಿಗೆ ಹೆದರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT