ADVERTISEMENT

ಮಗು ಬೇಕಾ? ತಕಳ್ಳಿ...

​ಪ್ರಜಾವಾಣಿ ವಾರ್ತೆ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಚಿತ್ರ: ಮದನ್‌ ಸಿ.ಪಿ.
ಚಿತ್ರ: ಮದನ್‌ ಸಿ.ಪಿ.   

ನನಗೆ ಮೊದಲಿಂದಲೂ ವೈದ್ಯವೃತ್ತಿಯಲ್ಲಿ ಅಪಾರ ಆಸಕ್ತಿ. ಆಸೆಪಟ್ಟಂತೆ ಎಂಬಿಬಿಎಸ್‌ ಮಾಡಿ ಮೈಸೂರು ಸೇರಿದೆ. ನಾನು ವೃತ್ತಿ ಆರಂಭಮಾಡಿದ್ದು ಗ್ರಾಮೀಣ ಪ್ರದೇಶಗಳ ಸೇವೆಯ ಅಧಿಕಾರಿಯಾಗಿ (ಮೊಬೈಲ್‌ ಎಜುಕೇಷನ್‌ ಅಂಡ್‌ ಸರ್ವೀಸ್‌ ಯುನಿಟಿ).

ಪ್ರತಿದಿನ ನಮ್ಮ ತಂಡ ಒಂದಲ್ಲಾ ಒಂದು ಗ್ರಾಮಕ್ಕೆ ಭೇಟಿ ನೀಡಬೇಕಾಗುತ್ತಿತ್ತು. ಪ್ರತಿದಿನ ಹೊಸ ರೋಗಿಗಳನ್ನು ತಪಾಸಣೆ ಮಾಡಬೇಕಾಗುತ್ತಿತ್ತು. ಹಳ್ಳಿಯ ಜನರ ಮುಗ್ಧತೆ, ಅಮಾಯಕತೆ, ಅವರು ನಮ್ಮ ಮೇಲೆ ಇಟ್ಟಿದ್ದ ನಂಬಿಕೆ ಹಾಗೂ ಪ್ರೀತಿ ನಮ್ಮನ್ನು ಅವರಿಗೆ ಹತ್ತಿರವಾಗುವಂತೆ ಮಾಡಿತು.

ನಮ್ಮ ತಿರುಗಾಟದಲ್ಲಿ ಪುಟ್ಟಮ್ಮ ಎನ್ನುವ ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬಳ ಭೇಟಿಯಾಯಿತು. ಆಕೆಗೆ, ಆರು ಜನ ಹೆಣ್ಣುಮಕ್ಕಳು. ಅವಳು ಪುನಾ ಗರ್ಭಿಣಿಯಾಗಿದ್ದಳು. ಅವಳ ಗಂಡ ಖಡಾಖಂಡಿತವಾಗಿ ಹೇಳಿದ್ದ: ‘ಈ ಸಲವೂ ಹೆಣ್ಣುಮಗುವಾದರೆ ನಿನ್ನನ್ನು ಉಳಿಸಲ್ಲ’. ನಾನು ಆ ಹಳ್ಳಿಗೆ ವಿಜಿಟ್‌ಗೆ ಹೋದಾಗ – ‘ಡಾಕ್ಟ್ರೇ ಈ ಸಲ ಹೆಣ್ಣಾದರೆ ನನ್ನ ಗಂಡ ನನ್ನನ್ನು ಉಳಿಸಲ್ಲ. ನನ್ನ ಮಕ್ಕಳು ಅನಾಥರಾಗಿಬಿಡ್ತಾರೆ’ ಎಂದು ಅತ್ತಿದ್ದಳು. ನಾನು ಅವಳಿಗೆ ಸಮಾಧಾನ ಹೇಳಿದ್ದೆ.

ADVERTISEMENT

ಇದಾದ ಒಂದಷ್ಟು ದಿನಗಳ ನಂತರ ಒಂದು ಸ್ವಯಂಸೇವಾ ಸಂಸ್ಥೆಯ ಕೋರಿಕೆಯ ಮೇರೆಗೆ, ಸ್ವಿಟ್ಜರ್ಲೆಂಡ್‌ ದಂಪತಿಯನ್ನು ಕರೆದುಕೊಂಡು ಗ್ರಾಮೀಣ ಪ್ರದೇಶಗಳಿಗೆ ಹೋಗಬೇಕಾಯಿತು. ನಾವು ಪುಟ್ಟಮ್ಮನ ಮನೆಯ ಬಳಿಗೆ ಬಂದಾಗ ಒಳಗಿನಿಂದ ಜೋರಾಗಿ ಅಳುವ ಶಬ್ದ ಕೇಳಿಸಿತು. ಪುಟ್ಟಮ್ಮ ನನ್ನನ್ನು ನೋಡಿ ಜೋರಾಗಿ ಅಳುತ್ತಾ, ‘ಡಾಕ್ಟ್ರೆ ದ್ಯಾವ್ರು ಈ ಸಲಾನೂ ಮೋಸ ಮಾಡ್ಬುಟ್ಟ. ನನ್ನ ಗಂಡ ಕೆಲ್ಸದಿಂದ ಬಂದಮ್ಯಾಲೆ ನನ್ನನ್ನು ಉಳಿಸಾಕ್ಕಿಲ್ಲ’ ಎಂದಳು. ನಮ್ಮ ಕಣ್ಣೆದುರಿಗೇ ಮಗುವಿನ ಬಾಯಿಗೆ ಏನೋ ಹಾಕಿದಳು. ನಾನು ತಕ್ಷಣ ಮಗುವನ್ನೆತ್ತಿಕೊಂಡು, ಅದರ ಬಾಯಿಯಲ್ಲಿದ್ದುದ್ದನ್ನು ಹೊರತೆಗೆದೆ. ನ್ಯಾಫ್ತಲೀನ್ ಉಂಡೆಗಳ ಪುಡಿ! ನಾನು ಬಾಯಿ ಸ್ವಚ್ಛ ಮಾಡಿದೆ.

ಜೊತೆಯಲ್ಲಿದ್ದ ವಿದೇಶಿ ದಂಪತಿಗೆ ಘಟನೆಯನ್ನು ವಿವರಿಸಿದೆ. ಅವರಿಗೆ ಆಶ್ಚರ್ಯವೋ ಆಶ್ಚರ್ಯ! ‘ನಮಗೆ ಮಕ್ಕಳಿಲ್ಲ. ನಮಗೆ ಮಗು ಕೊಡುತ್ತಿರಾ ಕೇಳಿ’ ಎಂದರು. ಪುಟ್ಟಮ್ಮನಿಗೆ ಹೇಳಿದಾಗ ಅವಳು – ‘ತಕಳ್ಳಿ’ ಎಂದು ಮಗುವನ್ನು ಕೊಟ್ಟೇಬಿಟ್ಟಳು. ಮಗು ಸ್ವಿಟ್ಜರ್‍ಲೆಂಡ್‌ನಲ್ಲಿ ಆರಾಮವಾಗಿ ಬೆಳೆಯುತ್ತಿದೆ!
–ಡಾ. ಎಚ್‌.ವಿ. ರಮಾ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.