ADVERTISEMENT

ಮಧ್ಯಕಾಲದ ಹೆಣ

ಹಜರತ ಅಲಿ ಇ.ದೇಗಿನಾಳ, ವಿಜಯಪುರ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಚಿತ್ರ: ವೆಂಕಟ್ರಮಣ ಭಟ್
ಚಿತ್ರ: ವೆಂಕಟ್ರಮಣ ಭಟ್   

ಅಮಾವಾಸ್ಯೆಯ ಕಗ್ಗತ್ತಲ ನಟ್ಟನಡು ರಾತ್ರಿಯಲಿ
ಮಧ್ಯಕಾಲದ ಹೆಣ ಎದ್ದು ಕುಳಿತು
ತನ್ನ ಆತ್ಮೀಯ ಗೆಳೆಯ ಸತ್ತ ದನಭಕ್ಷಕನನ್ನ
ಹುಡುಕುತ್ತಿದೆ ಸುತ್ತುಮುತ್ತು
ಏನೇನು ಕಾಣುತ್ತಿಲ್ಲ ಕೂನ
ಸ್ಮಶಾನದಲ್ಲಿಯೇ ಇದು ಸ್ಮಶಾನ ಮೌನ

ಕಣ್ಣುಜ್ಜುಜ್ಜಿ ಮಿಟುಕಿಸಿ ನೋಡುತ್ತಿದೆ ಹೆಣ
ಅರೆ! ಅರೆ! ಇನ್ನೂ ಇದ್ದಾವಲ್ಲ ಮಿಂಚುಹುಳ
ಮುಖ ಕಳೆಗುಂದಿಲ್ಲ ನಕ್ಷತ್ರಗಳ!
ಆದರೆ... ತಾನು ಗೊಟಕ್ಕೆನ್ನುವಾಗ
ಸರ್ವಪ್ರೇಕ್ಷಕವಾಗಿದ್ದ ಕಾರ್ಗತ್ತಲೆ
ಇನ್ನೂ ಕರಗಿಯೇ ಇಲ್ಲ!
ಕಾರಿರುಳ ಆತುಕೊಂಡಿರುವ ಹಾವು
ಇನ್ನೂ ಪೊರೆಬಿಟ್ಟಿಲ್ಲ
ಸಮೀಪದಲ್ಲಿಯೆ ಕೈಪಂಪು ಹೊಡೆವ ಸದ್ದು
ಮನುಷ್ಯರು ಕಾಣುತ್ತಿಲ್ಲ ನೀರೂ ಇಲ್ಲ
ಹೆಣಕ್ಕೆ ಖಾತ್ರಿಯಾಗಿ ಬೆಪ್ಪನೆ ಬೆವರುತ್ತಿದೆ
ಇಲ್ಲಿ ಇನ್ನೂ ದೆವ್ವದ ಕಾಟ ನಿಂತಿಲ್ಲ!

ಬನ್ನಿ ಗೆಳೆಯರೆ ಬೇಗ ಬನ್ನಿ
ಜವಾರಿ ಶೇಂಗಾ ಗೊಂಜಾಳ ತೆನಿ ಬಂಪರ್ ಬೆಳೆದಿದೆ
ಕೆದರಿ ತಿನ್ನಿ-
ಮಡ್ಡಿಯ ಕೊಕಾಟ್ಯಾ ನರಿ ದಾವತ್ ನೀಡುತ್ತಿದೆ
ತನ್ನವರಿಗೆ ಅಡವಿ ಮಿಕಗಳಿಗೆ
ಹೊಲ ಹಾಳುಗೆಡವಿದ ಈ ಹೀನ ನರಿಗಳನ್ನು
ತಿರವ್ಯಾಡಿ ಬಡಿದು ಕೊಲ್ಲಲು
ಉರಗಪತಾಕನಂತೆ ಹೆಣಕ್ಕೆ ಏಳಬೇಕಿನಿಸುತ್ತಿದೆ...
ನರಿಗಳು ಹಂದಿಗಳು ಹೀಗೆ
ಬಹಿರಂಗ ಕೂಗುವಾಗ
ಬೊಗಳುತ್ತಿದ್ದವು ಊರ ಕಂತ್ರಿ ನಾಯಿಗಳಾದರೂ ಅಂದು
ಇಂದು ಅದೂ ಕೇಳುತ್ತಿಲ್ಲ
ಎಲ್ಲಿ ಕುಂಭಸಂಭವನ ಶಿಷ್ಯರು ಶಬ್ದವೇದಿ
ಬಾಣ ಪ್ರಯೋಗಿಸಿರಬಹುದೆ..?
ತುಸುತುಸುವೇ ಬೆಳಕು ಹರಿದಂತೆ
ತುಸು ದೂರದಲ್ಲಿ ಹಸಿರು ಬನ
ಎತ್ತೆತ್ತರವಾದ ಸೊಕ್ಕಿನ ಮರಗಳು
ಪಕ್ಕದಲ್ಲಿಯೇ ಸೊರಗಿ ನಿಂತಿರುವ
ಕುರುಚಲು ಗಿಡಗಳು
ಮೈತುಂಬ ಬೇಡಿಯಂತೆ ಹಬ್ಬಿಕೊಂಡಿರುವ ಬಳ್ಳಿಗಳು
ಅಲ್ಲಲ್ಲಿ ನಾಯಿ ತುಳಸಿ ಸಸ್ಯಗಳು
ಮೇಲೆ ಗೊಡ್ಡ ಬಿಳಿಮೋಡಗಳು. . .

ADVERTISEMENT

ಹೆಣ ಹಿರಿಹಿರಿ ಹಿಗ್ಗುತ್ತಿದೆ
ತಾನು ದೆವ್ವಗಿವ್ವ ಏನೂ ಆಗಿಲ್ಲವೆಂದು
ಆದರೆ ಭಯವೋ ಭಯ
ತನ್ನವೇ ಕೈ-ಕಾಲು ಕಣ್ಣು ತಲೆ ನೋಡಿಕೊಳ್ಳಲು!
ಇನ್ನೂ ನೋಡಬೇಕೆನಿಸುತ್ತಿರುವಂತಿದೆ ಹೊರಕ್ಕೆ
ಆದರೆ ಕೆಳಗಾರೊ ಕಾಲೆಳೆಯುತ್ತಿದ್ದಾರೆ
ಗೋರಿಯೊಳಕ್ಕೆ
ಅಯ್ಯೋ! ತನಗೂ ದೆವ್ವ ಹಿಡಿದಿದೆ-ಉಳಸ್ರಿ ಉಳಸ್ರಿ!
ಜೋರಾಗಿ ಚೀರಬೇಕೆಂದರೆ
ನಾಲಿಗೆಯೇ ಬಿದ್ದು ಹೋಗಿದೆ...
ಹೆಣಕ್ಕೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.