ADVERTISEMENT

ಮಾಸ್ತಿ ಮತ್ತು ಬೇಂದ್ರೆ ಬಾಂಧವ್ಯ

ಮುಕ್ತ ಛಂದ

ಜಿ.ಕೃಷ್ಣಪ್ಪ
Published 12 ಜುಲೈ 2014, 19:30 IST
Last Updated 12 ಜುಲೈ 2014, 19:30 IST

29.8.1992ರಲ್ಲಿ ಕೆ.ಜಿ.ಎಫ್. ಸಮೀಪದ ದೊಡ್ಡ ಪೊನ್ನಾಂಡಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ದ.ರಾ. ಬೇಂದ್ರೆ ಕವನ ಗಾಯನ ಸ್ಪರ್ಧೆಗೆ ವಾಮನ ಬೇಂದ್ರೆಯವರು ಬಂದಿದ್ದರು. ಕಾರ್ಯಕ್ರಮದ ಮಾರನೇ ದಿನ ಬೆಂಗಳೂರಿನಲ್ಲಿರುವ ಮಾಸ್ತಿಯವರ ಮನೆಗೆ ಹೋಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದರು. ನಾನು ಅವರ ಜೊತೆಗೂಡಿ ಹೋದೆನು. ಬಸವನಗುಡಿಯಲ್ಲಿರುವ ಮಾಸ್ತಿ ಮನೆ ತಲುಪುವಾಗ್ಗೆ ರಾತ್ರಿ ಏಳು ಗಂಟೆಯಾಗಿತ್ತು. ಗೇಟ್‌ ಬಳಿ ನಿಂತ ವಾಮನ ಬೇಂದ್ರೆಯವರು ಗೇಟ್‌ ಚಿಲಕ ಆಡಿಸುತ್ತ ಶಬ್ದ ಮಾಡಿದರು. ಮನೆಯಿಂದ ಹಿರಿಯ ಹೆಣ್ಣು ಜೀವ ‘ಯಾರು?’ ಎಂದು ಪ್ರಶ್ನೆ ಮಾಡಿತು. ಇವರು ‘ನಾನು ಬಾಳಾ’ ಎಂದರು.

ಮಾಸ್ತಿಯವರ ಮಗಳು ತಾಯಿ ಇಂದಿರ ಸ್ವಲ್ಪ ಆತುರವಾಗಿ ಉತ್ಸಾಹದಲ್ಲಿ ಹೆಜ್ಜೆ ಹಾಕುತ್ತ ಬಂದು ‘ಏನೊ ಬಾಳಾ, ಮೊದಲೆಲ್ಲ ಸ್ಕೂಲಿಗೆ ರಜಾ ಬಂದಾಗ ಇಲ್ಲೆ ಇರ್‍ತಿದ್ದಿ. ಈಗ ಬರೋದೆಯಿಲ್ಲ’ ಎಂದು ಆತ್ಮಿಯವಾಗಿ ಮಾತಾಡಿಸಿ ಕೈಹಿಡಿದು ಎಳೆದುಕೊಂಡು ಹೋದರು. ಅವರ ಪತಿ ಶೇಷಾದ್ರಿಯವರು ಕತ್ತೆತ್ತಿ ನೋಡಿ ‘ವಾಮನ ಬೇಂದ್ರೇನಾ ಬನ್ನಿ, ಬನ್ನಿ’ ಎಂದು ಸ್ವಾಗತಿಸಿದರು.

ಅಕ್ಕ ತಮ್ಮನ ಸಲಿಗೆಯ ಮಾತುಕತೆ, ಹಿಂದಿನ ನೆನಪಿನ ಸುಖ, ಹುಮ್ಮಸ್ಸಿನ ನಗೆ ಕಾಣುತ್ತ ನಾನು ಮೂಕನಾದೆ.
ವಾಮನ ಬೇಂದ್ರೆಯವರು ನನ್ನನ್ನು ಅವರಿಗೆ ಪರಿಚಯಿಸಿದರು. ಆ ಪೂಜ್ಯ ದಂಪತಿಗಳು ‘ಬೇಂದ್ರೆ ಕಾವ್ಯದ ಕೆಲಸ ಚೆನ್ನಾಗಿ ಮಾಡಿ. ಅದು ಆಗಬೇಕಾದ್ದು’ ಎಂದು ಆಶೀರ್ವದಿಸಿದರು.

ಮಾಸ್ತಿಯವರ ಮನೆಯಿಂದ ಹಿಂದಿರುಗಿ ಬರುವಾಗ ವಾಮನ ಬೇಂದ್ರೆಯವರು ತಮ್ಮ ತಂದೆ ದ.ರಾ. ಬೇಂದ್ರೆಯವರಿಗೆ ಮಾಸ್ತಿಯವರು ಅಣ್ಣನಂತಿದ್ದರು ಎಂದು ಹೇಳಿದರು. ತಮ್ಮ ತಂದೆಗೆ ಸ್ಥಿರ ನೌಕರಿಯಿಲ್ಲದಿರುವಾಗ (1936ರಿಂದ 1944) ಮಾಸ್ತಿಯವರು ‘ಜೀವನ’ ಪತ್ರಿಕೆಗೆ ಸಂಪಾದಕನನ್ನಾಗಿ ನೇಮಿಸಿಕೊಂಡು ಆಸರೆಯಾದ ವಿಷಯ ತಿಳಿಸಿದರು.

ಶಾಂತ ರಾತ್ರಿಯಲ್ಲಿ, ಮಿನುಗುವ ನಕ್ಷತ್ರಗಳೇ ಸಾಕ್ಷಿಯೆಂಬಂತೆ ಮಧುರ ಜೀವಿಗಳ ಅಮೂಲ್ಯ ಸಂಬಂಧಗಳ ತಿಳಿವಿಗೆ ಒಳಗಾದ ನಾನು ವಾಮನ ಬೇಂದ್ರೆಯವರ ಪ್ರತಿ ನುಡಿಗೆ ಮೈಯೆಲ್ಲಾ ಕಿವಿಯಾಗಿ ನಿಂತಿದ್ದೆ. ಹಲವು ವರ್ಷಗಳ ನಂತರ ಮಾಸ್ತಿಯವರ ಮನೆಗೆ ಹೋಗಿ ಬಂದ ಸಮಾಧಾನದಲ್ಲಿ ಅವರು ತುಂಬಾ ಖಾಸಗಿಯಾಗಿ ಒಂದು ವಿಷಯ ನನಗೆ ತಿಳಿಸಿದರು. ಅದು ಮಾನವೀಯ ಸಂಬಂಧದ, ಕನ್ನಡ ಸಾಹಿತ್ಯ ಸಂಸ್ಕೃತಿಯ ಮೇರು ವ್ಯಕ್ತಿಗಳ ಅತಿ ಮೌಲಿಕ ಸಂಗತಿಯಾಗಿರುವುದರಿಂದ, ವಾಮನ ಬೇಂದ್ರೆಯವರ ಕ್ಷಮೆ ಕೇಳಿ ಈಗ ಹೇಳುತ್ತಿರುವೆನು.

ಮಾಸ್ತಿಯವರು ದ.ರಾ. ಬೇಂದ್ರೆಯವರಿಗೆ ಅವರ ಕುಟುಂಬ ನಿರ್ವಹಣೆಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದರು. ಬೇಂದ್ರೆಯವರಿಗೆ 1944ರಲ್ಲಿ ಸೊಲ್ಲಾಪುರದ ಡಿ.ಎ.ವಿ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆ ದೊರಕಿತು. ಸ್ಥಿರ ನೌಕರಿ ದೊರಕಿ ಹಲವು ವರ್ಷಗಳಾದ ಮೇಲೆ ಒಮ್ಮೆ ಬೇಂದ್ರೆಯವರು ಬೆಂಗಳೂರಿಗೆ ಬಂದು ಅಣ್ಣ ಮಾಸ್ತಿಯವರನ್ನು ಕಂಡರು. ಮಾತುಕತೆ ಆದಮೇಲೆ ಒಂದು ಹಣದ ಗಂಟನ್ನು ಮಾಸ್ತಿಯವರಿಗೆ ನೀಡಿ ಹೇಳಿದರು.

‘ಇದು ನೀವು ನನಗೆ ಕಷ್ಟದ ದಿನಗಳಲ್ಲಿ ಪ್ರತಿ ತಿಂಗಳು ನೀಡಿದ ಹಣ, ಸ್ವೀಕರಿಸಿ’. ‘ಅದು ನಿನಗೆ ಕೊಟ್ಟಿದ್ದು, ಅದು ನಿನಗೆ ಸೇರಿದ್ದು. ನೀನು ತೆಗೆದುಕೊಂಡು ಹೋಗು’.ಆಗ ಹಣ ಹಿಂದಕ್ಕೆ ತೆಗೆದುಕೊಂಡು ಹೋಗಲು ಒಪ್ಪದ ತಮ್ಮ, ಸ್ವೀಕರಿಸದ ಅಣ್ಣನ ನಡುವೆ ಸ್ವಲ್ಪ ಹೊತ್ತು ಸರಿದುಹೋಯಿತು. ಕೊನೆಗೆ ಮೌನ ಮುರಿದ ಅಣ್ಣ ಮಾಸ್ತಿ,

‘ಆಯಿತು. ಆ ಹಣ ಇಟ್ಟು ಹೋಗು’ ಎಂದರು. ತಮ್ಮ ಬೇಂದ್ರೆಗೆ ಮನಸ್ಸು ಹಗುರವಾಯಿತು. ವರ್ಷಗಳು ಸರಿದು ಹೋದವು. ದ.ರಾ. ಬೇಂದ್ರೆಯವರ ಮಗಳು ಮಂಗಳಾಳ ಮದುವೆಯ ಕರೆಯೋಲೆ ಮಾಸ್ತಿಯವರಿಗೆ ತಲುಪಿತು. ಮಾಸ್ತಿ ಅವರು ತಮ್ಮ ಸೋದರ ಬೇಂದ್ರೆಯ ಮಗಳ ಮದುವೆಗೆ ಸಂಭ್ರಮದಿಂದ ಹೋಗಿ ಸಡಗರದಿಂದ ಓಡಾಡಿದರು. ವಧು ಮಂಗಳಾಳಿಗೆ ಬೇಂದ್ರೆ ಕೊಟ್ಟಿದ್ದ ಆ ಇಡೀ ಹಣದ ಗಂಟನ್ನು ಹಾಗೇ ತಂದು ಉಡುಗೊರೆಯಾಗಿ ನೀಡಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.