ADVERTISEMENT

ರಪುಂಝಲಳ ಬಂಗಾರದಂಥ ಕೂದಲು ಮತ್ತು ನನ್ನ ಆತ್ಮವೂ

ಸ್ಮಿತಾ ಮಾಕಳ್ಳಿ
Published 4 ನವೆಂಬರ್ 2017, 19:30 IST
Last Updated 4 ನವೆಂಬರ್ 2017, 19:30 IST
ರಪುಂಝಲಳ ಬಂಗಾರದಂಥ ಕೂದಲು ಮತ್ತು ನನ್ನ ಆತ್ಮವೂ
ರಪುಂಝಲಳ ಬಂಗಾರದಂಥ ಕೂದಲು ಮತ್ತು ನನ್ನ ಆತ್ಮವೂ   

ನನ್ನ ನಗುವನ್ನು ನೀವು ಕಿತ್ತುಕೊಳ್ಳಬಹುದು

ಆದರೆ ನನ್ನ ಇರುವನ್ನಲ್ಲ

ಏಕೆಂದರೆ,

ADVERTISEMENT

ಕಣ್ಣುಗಳು ಇಲ್ಲದೆಯೂ ಕೂಡ

ನಾನು ನಗಬಲ್ಲೆ.

ನನ್ನ ಕನಸಿನ ಓಟಕ್ಕೆ

ನೀವು ಅಡ್ಡಿಯಾಗಬಹುದು

ಅದರ ರೆಕ್ಕೆಗಳನ್ನು ಚೂರೇ ಚೂರು

ಚಿವುಟಬಹುದು

ಬಹುತೇಕ ನೀವು ಅವುಗಳನ್ನು

ಹರಿಯಲೂಬಹುದು

ಆದರೆ

ನನ್ನ ಹೆಜ್ಜೆಗಳನ್ನು ಸುಳ್ಳಾಗಿಸಲಾರಿರಿ

ಆಸ್ಥೆಯಿಂದ ನನ್ನ ಕೂದಲನ್ನು

ಕತ್ತರಿಸಿದ ನಿಮ್ಮ ಕೈಗಳನ್ನು

ನೋಡುತ್ತೇನೆ

ಎಂಥ ಅಂದವುಂಟು

ಅವು ನಯವಾಗಿ ಇನ್ನಷ್ಟು

ಕೃತಕ ಜಡೆಗಳ ಕಥೆಯನ್ನು

ಹೆಣೆಯಲೂಬಹುದು.

ಆದರೆ ನೆನಪಿಡಿ

ರಪುಂಝಲಳ ಬಂಗಾರದಂಥ

ಕೂದಲು ಕೂಡ

ಒಮ್ಮೆ ತುಂಡರಿಸಿ ಬಿದ್ದಿತ್ತ!

ನನ್ನ ಮಾತುಗಳನ್ನು ನೀವು

ಗಂಟಲೊಳು ಉಳಿಸಿಬಿಡಬಹುದು

ಆದರೆ ನಾನು ಹೇಳಬಹುದಾದ

ನನ್ನದೇ ಕಥೆಯನ್ನಲ್ಲ.

ನನ್ನ ಆತ್ಮದಾಣೆಗೂ ನೀವು

ನನ್ನ ಪ್ರೀತಿಯ ಉತ್ಕಟತೆಯನ್ನು

ಕಸಿಯಲು ಆಗುವುದಿಲ್ಲ.

ಏಕೆಂದರೆ

ನಮ್ಮ ಕೈ ಬೆರಳ ಹಿಡಿತದ ಬಂಧವು

ನಿಮ್ಮ ಹುಸಿ ತೋರಿಕೆಗಳಿಗಿಂತ ದೊಡ್ಡದು.

ನೀವು ನನಗಾಗಿ ಅಥವಾ

ನಾನು ನಿಮಗಾಗಿ

ಕೊಟ್ಟ ಸಮಯಗಳ ಬಗ್ಗೆ

ಯಾವುದೇ ಮರುಕಗಳಿಲ್ಲ.

ಸಾಧ್ಯವಾದರೆ ಅಲ್ಲೊಂದು

ಪಾರಿಜಾತವ ನೆಟ್ಟು

ಪರಿಮಳವ ಪಸರಿಸುತ್ತೇನೆ

ಅಲ್ಲದಿದ್ದಲ್ಲಿ

ಅದು ನನ್ನ ಕಥೆಯಾಗುವುದಿಲ್ಲ.

ಆದರೆ ನೆನಪಿಡಿ

ನಿಮ್ಮ ಯಾವ ಚಲನೆಗಳು

ಹಿಮದಷ್ಟೇ ತಣ್ಣಗಿನ ಮಾತುಗಳು

ಸುಂದರವಾದ ಕ್ಯಾಕ್ಟಸ್ಸಿನ ಕುಂಡಗಳಂತೆಯೋ

ಇಲ್ಲಾ

ಒಣ ಬಳ್ಳಿಯಾಗಿ ಜೋತು ಬೀಳಬಹುದೇ ಹೊರತು

ಆರೋಗ್ಯಕರ ಬೇವೂ ಆಗಲಾಗದು.

ಕಡೆಯಲ್ಲಿ

ರಪುಂಝಲ್ ಮುಡಿದ ಹೂಗಳು,

ಅವಳ ಮಾತನಾಡುವ ಗೋಸುಂಬೆ,

ಕೆನೆಯುವ ಕುದುರೆ, ಆ ತರಲೆಗಣ್ಣಿನ ಹುಡುಗ

ಎಲ್ಲವೂ

ಅವಳು ಕಾಣಬಯಸಿದ ಆಕಾಶಬುಟ್ಟಿಗಳೊಂದಿಗೆ

ಅವಳನ್ನು ಅರಳಿಸುತ್ತವೆ.

ಅಂತೆಯೇ ನಿಮ್ಮ

ಊರೊಳಗಿನ ಸದ್ದುಗಳು,

ಸುರುಳಿ ಸುರುಳಿಯಾದ

ಅಲೆಗಳು,

ಪ್ರಾರ್ಥಿಸುವ ನನ್ನ ಚೈತನ್ಯವನ್ನು ಹುದುಗಿಸಲಾರವು.

ಆಮೆನ್.

ರಪುಂಝಲ್: ಜರ್ಮನಿಯ ಬ್ರದರ್ಸ್ ಗ್ರಿಮ್ ಸೃಷ್ಟಿಸಿರುವ ಕಾಲ್ಪನಿಕ ಕಥೆಯಲ್ಲಿನ ಒಂದು ಪಾತ್ರ. ಮಾಂತ್ರಿಕ ಶಕ್ತಿಯ ಉದ್ದನೆಯ ಜಡೆಗಾಗಿ ರಪುಂಝಲ್ ಜನಪ್ರಿಯಳು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.