ADVERTISEMENT

ರಾಷ್ಟ್ರೀಯತೆಯ ಹಲವು ತೊರೆಗಳು ಕೂಡಿ ಹರಿವ ಒಲಿಂಪಿಕ್ಸ್‌ ಮಹಾನದಿ

ಪಿ.ಜಿ.ಪೂಣಚ್ಚ
Published 30 ಜುಲೈ 2016, 19:30 IST
Last Updated 30 ಜುಲೈ 2016, 19:30 IST
ಚಿತ್ರ: ಕೆ.ಎನ್. ಶಾಂತಕುಮಾರ್
ಚಿತ್ರ: ಕೆ.ಎನ್. ಶಾಂತಕುಮಾರ್   

ಡಾರ್ವಿನ್‌ ಸಿದ್ಧಾಂತದ ಅನ್ವಯ ಮಾನವನ ವಿಕಾಸ ಪ್ರಕ್ರಿಯೆ ಕುತೂಹಲಕಾರಿ. ಭೂಮಿಯ ಮೇಲಿನ ಇತರೆ ಎಲ್ಲಾ ಜೀವಜಲಚರಗಳಿಗಿಂತಲೂ ಬುದ್ಧಿವಂತಿಕೆಯಿಂದಾಗಿ ಮಾನವ ತನ್ನ ಬದುಕಿನ ಶೈಲಿಯನ್ನು ದಿನೇ ದಿನೇ ಸುಧಾರಿಸಿಕೊಳ್ಳುತ್ತಾ ಬಂದಿದ್ದಾನೆ, ಆಧುನಿಕಗೊಂಡಿದ್ದಾನೆ. ಇದು ಸಾವಿರಾರು ವರ್ಷಗಳ ಪ್ರಕ್ರಿಯೆ.

ಈ ವಿಕಾಸ ಮತ್ತು ರೂಪಾಂತರ ಪ್ರಕ್ರಿಯೆಯಲ್ಲಿ ಹತ್ತು ಹಲವು ಸಂಗತಿಗಳು ಇಡೀ ಮನುಕುಲವನ್ನು ಏಕಛಾವಣಿಯ ಅಡಿ ತರುವಲ್ಲಿ ಪ್ರಭಾವ ಬೀರಿವೆ. ಸಂಗೀತ–ಕಲೆಗಳೇ ಅಲ್ಲದೆ, ಗೌತಮ ಬುದ್ಧ, ಏಸುಕ್ರಿಸ್ತ, ಪ್ರವಾದಿ ಮಹಮ್ಮದ್, ಕಾರ್ಲ್‌ ಮಾರ್ಕ್ಸ್‌ ಮುಂತಾದವರ ಚಿಂತನೆಗಳು, ದೂರಸಂಪರ್ಕ ಸಾಧನಗಳು ಮತ್ತು ಟೆಲಿವಿಷನ್‌ ಸೇರಿದಂತೆ ವಿಜ್ಞಾನ ತಂತ್ರಜ್ಞಾನದ ಸಾವಿರಾರು ಆವಿಷ್ಕಾರಗಳು ಏಕಛಾವಣಿಯಂತೆ ಕೆಲಸ ಮಾಡಿವೆ.

 ವಿಭಿನ್ನ ದೇಶ–ಸಮುದಾಯಗಳ ನಡುವೆ ಸ್ನೇಹ ಅರಳಿಸುವ ಮಾನವೀಯ ಮೌಲ್ಯಗಳ ತಳಹದಿಯಲ್ಲಿ ನಮಗೆ ‘ಒಲಿಂಪಿಕ್ಸ್‌ ಆಂದೋಲನ’ವೂ ಇಂತಹದ್ದೊಂದು ಮಹತ್ತರ ಛಾವಣಿಯಂತೆ ಎದ್ದು ಕಾಣುತ್ತಿದೆ. ವ್ಯಕ್ತಿಯೊಬ್ಬ ತನ್ನ ದೈಹಿಕ ಶಕ್ತಿ–ಸಾಮರ್ಥ್ಯ ಪ್ರದರ್ಶನದಲ್ಲಿ ಇತರರಿಗಿಂತ ಮೇಲು ಎಂಬುದನ್ನು ಸಾಬೀತು ಪಡಿಸಿ ಸಮಾಜದಲ್ಲಿ ಗೌರವ ಪಡೆಯುತ್ತಿದ್ದ ಪ್ರಾಚೀನ ಒಲಿಂಪಿಕ್ಸ್‌ನ ದಿನಗಳಿಂದ ಈವರೆಗೆ ಈ ಆಂದೋಲನ ವಿಭಿನ್ನ ರೂಪಾಂತರಗಳನ್ನು ಕಂಡಿದೆ.

ಒಲಿಂಪಿಕ್ಸ್‌ನ ವಿಶ್ವ ಮಾನವ ಚಿಂತನೆಯ ಸಿಂಚನದ ಅಡಿಯಲ್ಲೇ ರಾಷ್ಟ್ರೀಯವಾದದ ವಿವಿಧ ಸ್ವರೂಪಗಳು ಮತ್ತು ವರ್ಣಭೇದದ ಕರಾಳ ಮುಖಗಳನ್ನೂ ಕಂಡಿದ್ದೇವೆ. ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿ ದೇಶಗಳ ನಡುವಣ ಹಣಾಹಣಿಗಳನ್ನೂ ನೋಡಿದ್ದೇವೆ.

ರಾಜ ಮಹಾರಾಜರ ಅಬ್ಬರ, ಬಂಡವಾಳಶಾಹಿಗಳ ದೌಲತ್ತುಗಳನ್ನೂ ನೋಡಿದ್ದೇವೆ. ಈ ಕೂಟ ಅಮೆರಿಕ ಮತ್ತು ರಷ್ಯಾಗಳಂತಹ ಶಕ್ತಿಕೇಂದ್ರಗಳ ರಾಜಕೀಯದ ಆಡುಂಬೊಲವಾಗಿದ್ದ ನಿದರ್ಶನವೂ ಇದೆ.

ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ವೃದ್ಧಿಯ ಸದುದ್ದೇಶದ ಮೂಲ ಪರಿಕಲ್ಪನೆಯ ಚೌಕಟ್ಟಿನಲ್ಲಿಯೇ ಮನುಷ್ಯಮಾತ್ರರಿಗೆ ಮಾರಕವಾಗುವಂತಹ ಉದ್ದೀಪನಾ ಮದ್ದು ಸೇವನೆಯ ಜಾಲದ ಪೆಡಂಭೂತವನ್ನೂ ನೋಡಿದ್ದೇವೆ. ಇಂತಹ ಹತ್ತು ಹಲವು ಸಕಾರಾತ್ಮಕ ಮತ್ತು ನಕಾರಾತ್ಮಕ ಹೆಜ್ಜೆ ಗುರುತುಗಳೊಡನೆ ಒಲಿಂಪಿಕ್ಸ್‌ ಆಂದೋಲನವೆಂಬ ಜೀವನದಿಯು ಪ್ರವಹಿಸುತ್ತಲೇ ಇದೆ.

ಸ್ಥಳೀಯತೆಯಿಂದ ವಿಶ್ವಮಟ್ಟಕ್ಕೆ...
ಪ್ರಾಚೀನ ಗ್ರೀಸ್‌ನ ಅಥೆನ್ಸ್‌ನಲ್ಲಿರುವ ಒಲಿಂಪಿಯ ಬೆಟ್ಟದ ಅಂಚಿನಲ್ಲಿ ಕ್ರಿಸ್ತಪೂರ್ವ 776ರ ಆಸುಪಾಸಿನಲ್ಲಿ ಆರಂಭವಾದ ‘ಒಲಿಂಪಿಕ್ಸ್‌’ ಎಂಬ ದೈವಿಕ ಆಚರಣೆ ಶುರುವಿನಲ್ಲಿ ಸ್ಥಳೀಯತೆಯನ್ನೇ ಮೈದುಂಬಿಕೊಂಡಿತ್ತು. ಗ್ರೀಕರ ನಂಬಿಕೆಯಂತೆ ಝೆವುಸ್‌ ಎಂಬ ದೇವರು ಒಲಿಂಪಸ್‌ ಬೆಟ್ಟದ ಮೇಲೆ ನಿಂತು ಇಡೀ ಭೂಮಂಡಲವನ್ನೇ ಆಳುತ್ತಿದ್ದ.

ಆತನನ್ನು ನಾಲ್ಕು ವರ್ಷಗಳಿಗೊಮ್ಮೆ ಆ ಬೆಟ್ಟದ ಬಳಿ ಗ್ರೀಕರೆಲ್ಲರೂ ಸೇರಿ ಆರಾಧಿಸುತ್ತಿದ್ದರು. ಪರಸ್ಪರ ಬಡಿದಾಡುತ್ತಿದ್ದ ಸಮುದಾಯಗಳೆಲ್ಲವೂ ಒಲಿಂಪಿಕ್ಸ್‌ ದಿನಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಒಗ್ಗೂಡಿ ಪ್ರಾರ್ಥಿಸುತ್ತಿದ್ದರು. ಆ ದೇವನನ್ನು ಸಂಪ್ರೀತಗೊಳಿಸುವುದಕ್ಕಾಗಿ ವಿವಿಧ ದೈಹಿಕ ಸ್ವರ್ಧೆಗಳನ್ನು ನಡೆಸುತ್ತಿದ್ದರು. ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದ ಆ ಸ್ಥಳೀಯ ಮಟ್ಟದ ಸಂಪ್ರದಾಯವೇ ವರ್ಷಗಳು ಉರುಳಿದಂತೆ ರಾಷ್ಟ್ರೀಯ ಸ್ವರೂಪ ಕಂಡುಕೊಂಡಿದೆ. 1896ರಲ್ಲಿ ಫ್ರಾನ್ಸ್‌ನ ಕೂಬರ್ತಿ ಎಂಬುವವರ ಆಸಕ್ತಿಯಿಂದಾಗಿ ಇದು ಅಂತರರಾಷ್ಟ್ರೀಯ ಸ್ವರೂಪ ಪಡೆದುಕೊಂಡಿತು.

ಪ್ರತಿಯೊಂದು ಕೂಟದಲ್ಲಿಯೂ ವಿಭಿನ್ನ ದೇಶಗಳು ತಮ್ಮ ರಾಷ್ಟ್ರೀಯತೆಯ ಪ್ರಜ್ಞೆ ಮೆರೆಯುವುದರ ಬಗ್ಗೆಯೇ ಹೆಚ್ಚು ಆಸಕ್ತಿ ತೋರಿದಂತಿತ್ತು. ಇಲ್ಲವೇ ತಮ್ಮ ರಾಷ್ಟ್ರೀಯ ಪ್ರಜ್ಞೆಯ ಸಮರ್ಥನೆಗಾಗಿ ಈ ಕೂಟವನ್ನು ಬಳಸಿಕೊಂಡಿದ್ದೂ ಇದೆ.

ಬರ್ಲಿನ್‌ನಲ್ಲಿ 1936ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಹಿಟ್ಲರ್‌ ತನ್ನ ಜನಾಂಗೀಯ ಮೇಲರಿಮೆ ಪ್ರದರ್ಶನಕ್ಕೆ ಶಕ್ತಿ ಮೀರಿ ಯತ್ನಿಸಿದ್ದನು. ಜರ್ಮನರ ಜನಾಂಗೀಯ ವಾದದ ಸಮರ್ಥನೆಗೆ ಆ ದೇಶ ನೇರವಾಗಿ ಪೈಪೋಟಿಗೆ ಇಳಿದಿತ್ತು. ಆದರೆ ಅಮೆರಿಕದ ಕಪ್ಪು ವರ್ಣೀಯ ಜೆಸ್ಸಿ ಓವೆನ್ಸ್‌ ಮತ್ತು ಭಾರತದ ಧ್ಯಾನ್‌ಚಂದ್‌ ನೇತೃತ್ವದ ಹಾಕಿ ತಂಡ ಅಲ್ಲಿ ಅದ್ಭುತ ಸಾಮರ್ಥ್ಯ ನೀಡಿ, ಹಿಟ್ಲರ್‌ನ ಜನಾಂಗೀಯವಾದಕ್ಕೆ ಸೆಡ್ಡು ಹೊಡೆದು ನಿಂತಿದ್ದು ಚರಿತ್ರಾರ್ಹ.

ಆಗ ವೇಗದ ಓಟಗಾರ ಜೆಸ್ಸಿ 4 ಚಿನ್ನದ ಪದಕಗಳನ್ನು ಗೆದ್ದರೆ, ಭಾರತ ಆ ಸಂದರ್ಭದ ಪ್ರತಿಷ್ಠೆಯ ಕ್ರೀಡೆ ಹಾಕಿಯ ಫೈನಲ್‌ನಲ್ಲಿ ಜರ್ಮನಿಯನ್ನು 7 ಗೋಲುಗಳ ಅಂತರದಿಂದ ಸೋಲಿಸಿ ಚಿನ್ನ ಗೆದ್ದಿತ್ತು. ಆಂಗ್ಲರ ವಸಾಹತು ದೇಶವಾದ ಭಾರತ ಈ ಮಟ್ಟಿಗಿನ ಗೆಲುವು ಕಂಡಿದ್ದು ಹಿಟ್ಲರ್‌ಗೆ ಮುಖಭಂಗ ಎನ್ನಿಸಿತ್ತು.

ಸಾಮಾಜಿಕ ಸಮರಸಕ್ಕೆ ಪ್ರೇರಕ
ಅಮೆರಿಕದಲ್ಲಿ ಶತಮಾನದ ಹಿಂದೆ ಜನಾಂಗೀಯ ತಾರತಮ್ಯ ಅಸಹನೀಯವಾಗಿತ್ತು. ಬಿಳಿಯರು ಕಪ್ಪು ವರ್ಣೀಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದರು. ಆ ಕಾಲಘಟ್ಟದಲ್ಲಿ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ರಾಷ್ಟ್ರೀಯತೆಯ ಪ್ರಜ್ಞೆ ಹೆಚ್ಚು ಪ್ರಖರಗೊಂಡಿತ್ತು. ಆಗ ವೇಗದ ಓಟ, ಲಾಂಗ್‌ಜಂಪ್‌ಗಳಲ್ಲಿ ಜೆಸ್ಸಿ ಓವೆನ್ಸ್‌ ಪದಕ ತರಬಲ್ಲ ಎಂದು ಖಾತ್ರಿಯಾದಾಗ ಆತನನ್ನೇ ರಾಷ್ಟ್ರೀಯ ತಂಡದೊಳಗೆ ಸೇರಿಸಿಕೊಳ್ಳಲಾಯಿತು. ಆತ ಚಿನ್ನ ಗೆದ್ದು ಬಂದಾಗ ಶ್ವೇತವರ್ಣೀಯರು ಅಭಿಮಾನದಿಂದ ಕಾಣುತ್ತಾರೆ.

ಬಾಕ್ಸರ್‌ ಮಹಮದ್ ಅಲಿ ಕೂಡಾ ಅಮೆರಿಕವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗುತ್ತಾರೆ, ನಿಜ. ಆದರೆ ಅಮೆರಿಕದೊಳಗೆ ವರ್ಣಭೇದ ಮನಸ್ಥಿತಿ ಜೀವಂತವಿರುವುದರ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಅಟ್ಲಾಂಟ ಒಲಿಂಪಿಕ್ಸ್‌ನಲ್ಲಿ ಜ್ಯೋತಿ ಹೊತ್ತಿಸುವ ಗೌರವವನ್ನು ಮಹಮದ್ ಅಲಿಯವರಿಗೆ ನೀಡಲಾಗಿತ್ತು.

ತಮ್ಮ ಅಪ್ರತಿಮ ಪ್ರತಿಭೆ, ಸಾಮರ್ಥ್ಯದಿಂದ ಒಲಿಂಪಿಕ್ಸ್‌ ಅಂಗಣದಲ್ಲಿ ಎತ್ತರದ ಸಾಧನೆ ತೋರಿರುವ ಕಪ್ಪು ವರ್ಣೀಯರನ್ನು ಹೊರತು ಪಡಿಸಿ ಅಮೆರಿಕದ ಕ್ರೀಡೆಯನ್ನು ನೋಡುವಂತೆಯೇ ಇಲ್ಲ. ಅವರನ್ನು ಹೊರತು ಪಡಿಸಿದರೆ, ಜಗತ್ತಿನ ಅಥ್ಲೆಟಿಕ್ಸ್‌ ಶಕ್ತಿಯೇ ನೀರಸವಾಗಿ ಬಿಡುತ್ತದೆ. ಇವತ್ತು ಅಮೆರಿಕ ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಯೋಚಿಸಿದಾಗ ಕಪ್ಪು ವರ್ಣೀಯ ಅಥ್ಲೀಟ್‌ಗಳ ಹೆಗ್ಗಳಿಕೆ ಸ್ಮೃತಿಪಟಲದಲ್ಲಿ ಮೂಡುತ್ತದೆ.

ಪೋರ್ಚುಗಲ್‌ನಲ್ಲಿ ಶತಮಾನಗಳಿಂದಲೂ ಕಪ್ಪು ಜನರನ್ನು ನಿಕೃಷ್ಟವಾಗಿ ಕಾಣುತ್ತಿದ್ದರು. ಅವರದು ಗುಲಾಮಿ ಬದುಕಾಗಿತ್ತು. 50ರ ದಶಕದಲ್ಲಿ ಆಕಸ್ಮಿಕವಾಗಿ ಫುಟ್‌ಬಾಲ್‌ ಆಡಲಿಳಿದ ಕಪ್ಪು ಹುಡುಗ ಯುಸೆಬಿಯೊನನ್ನು ಬಿಳಿಯರು ಯಾವ ಮೈದಾನದೊಳಗೂ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಆತನ ಆಟದ ಅಪ್ರತಿಮ ಕೌಶಲ್ಯ ಆ ನೆಲದ ಫುಟ್‌ಬಾಲ್‌ಪ್ರಿಯರ ಮನ ಗೆದ್ದಿತು. ಆತ ರಾಷ್ಟ್ರೀಯ ತಂಡದೊಳಗೂ ಸ್ಥಾನ ಗಳಿಸಿದ.

1966ರ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ 3ನೇ ಸ್ಥಾನಕ್ಕೇರುವಲ್ಲಿ ಯುಸೆಬಿಯೊ ಪಾತ್ರ ಬಲು ದೊಡ್ಡದು. ಯುರೋಪ್‌ನ ಚಿನ್ನದ ಬೂಟು ಪಡೆದ ಹೆಗ್ಗಳಿಕೆ ಇವರದು. ವರ್ಷದ ಹಿಂದೆ ಯುಸೆಬಿಯೊ ನಿಧನರಾದರು. ಇವತ್ತು ಆ ದೇಶದಲ್ಲಿ ಫುಟ್‌ಬಾಲ್‌ ರಾಷ್ಟ್ರೀಯತೆಯ ಪ್ರತೀಕದಂತಿದೆ. ಯುಸೆಬಿಯೊ ಆ ನಾಡಿನ ರಾಷ್ಟ್ರೀಯ ಹೆಮ್ಮೆ, ಹೆಗ್ಗಳಿಕೆಯಾಗಿದ್ದಾರೆ. ಈಚೆಗಿನ ದಶಕಗಳಲ್ಲಿ ಒಲಿಂಪಿಕ್ಸ್‌ನ ಫುಟ್‌ಬಾಲ್‌ನಲ್ಲಿ ಪೋರ್ಚುಗಲ್ ತನ್ನ ಮಹತ್ವದ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದೆ. ಅಂಗಣದಲ್ಲಿ ಬಿಳಿಯರು, ಕರಿಯರೆಂಬ ತಾರತಮ್ಯ ಕಡಿಮೆಯಾಗಿದೆ. ಆ ದೇಶದ ಎಲ್ಲರಿಗೂ ಯುಸೆಬಿಯೊ ಬದುಕು, ಸಾಧನೆ ಮಾದರಿಯಾಗಿದೆ.

ಆಸ್ಟ್ರೇಲಿಯಾಕ್ಕೆ ಮೂರು ಶತಮಾನಗಳಿಂದೀಚೆಗೆ ಹೋಗಿ ನೆಲೆಸಿದ ಆಂಗ್ಲರು ಅಲ್ಲಿನ ಲಕ್ಷಾಂತರ ಮೂಲನಿವಾಸಿಗಳ ಕಗ್ಗೊಲೆಗೈದು ತಮ್ಮದೇ ಸಾಮ್ರಾಜ್ಯ ಕಟ್ಟಿದ್ದು ಇತಿಹಾಸ. ಮೂಲನಿವಾಸಿಗಳ ವಿಭಿನ್ನ ಸಂಸ್ಕೃತಿಯನ್ನೇ ಅವರು ನಾಶ ಮಾಡಿದರು. 90ರ ದಶಕದ ಸಂದರ್ಭದಲ್ಲಿ ಅಥೆನ್ಸ್‌ನಲ್ಲಿ ನಡೆದ ‘ವಿಶ್ವ ಅಥ್ಲೆಟಿಕ್ಸ್‌’ ಸಂದರ್ಭದಲ್ಲಿ 400 ಮೀಟರ್ಸ್‌ ಓಟದಲ್ಲಿ ಚಿನ್ನ ಗೆಲ್ಲುವ ಕ್ಯಾಥಿ ಫ್ರೀಮನ್‌ ಎಂಬ ಓಟಗಾರ್ತಿ ತಾನು ಪ್ರತಿನಿಧಿಸುವ ಆಸ್ಟ್ರೇಲಿಯಾದ ಧ್ವಜವನ್ನು ಎತ್ತಿ ಹಿಡಿದರು.

ಜತೆಗೆ ಇನ್ನೊಂದು ಧ್ವಜವನ್ನೂ ಹಿಡಿದು, ಟ್ರ್ಯಾಕ್‌ನಲ್ಲಿ ಮೌನವಾಗಿ ಒಂದು ಸುತ್ತು ಬಂದು ಸುಮ್ಮನಾದರು. ಅದು ಮೂಲನಿವಾಸಿ ಹೋರಾಟಗಾರರ ಧ್ವಜ. ಆ ಮೌನವೇ ಜಗತ್ತಿನಾದ್ಯಂತ ದೊಡ್ಡ ಸಂಚಲನ ಉಂಟು ಮಾಡಿತು. ಆಸ್ಟ್ರೇಲಿಯಾದಲ್ಲಿ ಮೂಲನಿವಾಸಿಗಳು ಅನುಭವಿಸಿದ ರೌರವ ನರಕದ ಬಗ್ಗೆ ಸಾವಿರಾರು ಲೇಖನಗಳು ಪ್ರಕಟಗೊಂಡವು. ಆಸ್ಟ್ರೇಲಿಯಾ ನಾಚಿ ತಲೆತಗ್ಗಿಸಿತು.

ಸಿಡ್ನಿಯಲ್ಲಿ 16 ವರ್ಷಗಳ ಹಿಂದೆ ಒಲಿಂಪಿಕ್ಸ್‌ ನಡೆಯಿತು. ಅದರ ಉದ್ಘಾಟನಾ ಸಮಾರಂಭ ಒಂದು ರೀತಿಯಲ್ಲಿ ಬಿಳಿಯರ ‘ಪಶ್ಚಾತ್ತಾಪ’ದ ಕಾರ್ಯಕ್ರಮದಂತೆ ಕಾಣುತ್ತಿತ್ತು. ಅಂದಿನವರೆಗೆ ಮೂಲನಿವಾಸಿಗಳ ಕುರಿತು ಹೊರಜಗತ್ತಿನೊಡನೆ ಯಾವುದೇ ಸಂವಹನ ನಡೆಸದೇ ಇದ್ದ ಆಸ್ಟ್ರೇಲಿಯಾದ ಆಡಳಿತಗಾರರು ಆ ಉದ್ಘಾಟನಾ ಸಮಾರಂಭದಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಮೂಲನಿವಾಸಿಗಳೂ ಆಸ್ಟ್ರೇಲಿಯಾ ರಾಷ್ಟ್ರೀಯತೆಯ ಜೀವದ್ರವ್ಯ ಎಂದು ಒಪ್ಪಿಕೊಂಡರು.

ಮುನ್ನೂರು ವರ್ಷಗಳಿಗೂ ಹಿಂದೆ, ಅಂದರೆ ಬಿಳಿಯರು ಮೊದಲ ಬಾರಿಗೆ ಆಸ್ಟ್ರೇಲಿಯಾ ಖಂಡಕ್ಕೆ ಕಾಲಿಡುವುದಕ್ಕಿಂತ ಮೊದಲು – ಆ ನೆಲದಲ್ಲಿದ್ದ ಸಂಸ್ಕೃತಿ, ಜನಜೀವನ, ಜನಪದ ಇಂತಹವುಗಳನ್ನೇ ಮೂಲವಾಗಿಟ್ಟುಕೊಂಡು ಅದ್ಭುತವಾದ ದೃಶ್ಯಕಾವ್ಯವೊಂದು ಸಿಡ್ನಿ ಕ್ರೀಡಾಂಗಣದಲ್ಲಿ ಮೂಡಿ ಬಂದಿದ್ದನ್ನು ಜಗತ್ತಿನಾದ್ಯಂತ ಟೆಲಿವಿಷನ್‌ನಲ್ಲಿ ಜನ ನೋಡಿದರು.

ಆ ಒಲಿಂಪಿಕ್ಸ್‌ನಲ್ಲಿ ಜ್ಯೋತಿ ಹೊತ್ತಿಸುವ ಗೌರವವನ್ನೂ ಮೂಲನಿವಾಸಿ ಅಥ್ಲೀಟ್‌ ಕ್ಯಾಥಿ ಫ್ರೀಮನ್‌ಗೆ ನೀಡಲಾಯಿತು. ಆಸ್ಟ್ರೇಲಿಯಾ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಇವತ್ತು ಮೂಲನಿವಾಸಿಗಳ ಅದ್ಭುತ ಪರಂಪರೆಯೂ ಕಣ್ಣಿಗೆ ಕಟ್ಟುವಂತಿದೆ.

ಇತ್ತೀಚಿನ ದಶಕಗಳಲ್ಲಿ ಯುರೋಪ್‌ನ ಬಹುತೇಕ ದೇಶಗಳ ಒಲಿಂಪಿಕ್ಸ್‌ ತಂಡಗಳಲ್ಲಿ ಕಪ್ಪು ವರ್ಣೀಯರು ಇದ್ದೇ ಇರುತ್ತಾರೆ. ಶತಮಾನದ ಹಿಂದೆ ಇಂತಹದ್ದೊಂದು ಸಾಧ್ಯತೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

ಒಲಿಂಪಿಕ್ಸ್‌ನಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ಹಂತ ಹಂತವಾಗಿ ಜನಮನ ಗೆಲ್ಲುತ್ತಾ ಬಂದ ಕಪ್ಪು ವರ್ಣೀಯರು ಆಯಾ ದೇಶಗಳ ಜನರ ಅಭಿಮಾನದ ಸಂಕೇತವಾಗಿದ್ದಾರೆ. ಜೆಸ್ಸಿ ಓವೆನ್ಸ್‌, ಯುಸೆಬಿಯೊ, ಕ್ಯಾಥಿ ಫ್ರೀಮನ್‌ ಒಲಿಂಪಿಕ್ಸ್‌ ಅಂಗಳದಲ್ಲಿ ತೋರಿದ ಶಕ್ತಿ ಸಾಮರ್ಥ್ಯದಿಂದಾಗಿ ಇವತ್ತು ಜಗತ್ತಿನಾದ್ಯಂತ ಸಾಮಾಜಿಕ ನೆಲೆಯಲ್ಲಿಯೂ ದೊಡ್ಡ ರೂಪಾಂತರವಾಗಿದೆ. ಸಂಬಂಧಪಟ್ಟ ದೇಶಗಳ ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿಯೂ ಮಾನವೀಯ ಮೌಲ್ಯಗಳು ಪ್ರವಹಿಸುವಂತಾಗಿವೆ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಲಿಂಪಿಕ್ಸ್‌ ಆಂದೋಲನ ಎನ್ನುವುದು ಧರ್ಮಕ್ಕೂ ಪರ್ಯಾಯವಾಗಿ ಬೆಳೆದು ಬಂದಿದೆ ಎಂದರೆ ಅತಿಶಯೋಕ್ತಿ ಎನಿಸದು.

ಅಚ್ಚರಿ ತಂದ ಭಾರತ–ಪಾಕ್‌ ಮುನಿಸು
ಭಾರತ ಸ್ವತಂತ್ರಗೊಂಡ ಮರುವರ್ಷವೇ ಲಂಡನ್‌ನಲ್ಲಿ ಒಲಿಂಪಿಕ್ಸ್‌ ನಡೆಯಿತು. ಆವರೆಗೆ ಭಾರತದ ಕ್ರೀಡಾಪಟುಗಳು ಆಂಗ್ಲರ ಯೂನಿಯನ್‌ ಜಾಕ್‌ ಧ್ವಜದಡಿಯಲ್ಲೇ ಪಾಲ್ಗೊಂಡಿದ್ದರು. ಅದೇ ಮೊದಲ ಬಾರಿಗೆ ತ್ರಿವರ್ಣ ಧ್ವಜದಡಿಯಲ್ಲಿ ಭಾಗವಹಿಸುವ ಸಂಭ್ರಮ ಭಾರತದ ಕ್ರೀಡಾಪಟುಗಳದಾಗಿತ್ತು. ಈ ಕುರಿತು ಭಾರತದ ಹಾಕಿ ದಂತಕಥೆಗಳಲ್ಲಿ ಒಬ್ಬರಾದ ಬಲಬೀರ್‌ ಸಿಂಗ್‌ ಸೀನಿಯರ್‌ ಅವರು ತಮ್ಮ ‘ದಿ ಗೋಲ್ಡನ್‌ ಹ್ಯಾಟ್ರಿಕ್‌’ ಕೃತಿಯಲ್ಲಿ ಬರೆದಿರುವುದು ಬಲು ಅರ್ಥಪೂರ್ಣವಾಗಿದೆ.

‘‘ಅದೇ ಮೊದಲ ಬಾರಿಗೆ ತ್ರಿವರ್ಣ ಧ್ವಜದ ಅಡಿಯಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡ ರೋಮಾಂಚನ ನಮ್ಮದಾಗಿತ್ತು. ಸರ್ವತಂತ್ರ ಸ್ವತಂತ್ರ ದೇಶದ ಪ್ರತಿನಿಧಿಗಳು ನಾವು ಎಂಬ ಹೆಮ್ಮೆ  ಮತ್ತು ಅಭಿಮಾನ ಭಾರತ ತಂಡದಲ್ಲಿದ್ದ ಪ್ರತಿಯೊಬ್ಬರಲ್ಲೂ ಇತ್ತು. ಹಿಂದೆ ಬ್ರಿಟಿಷ್‌ ಇಂಡಿಯಾವನ್ನು ಭಾರತೀಯರು ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸುತ್ತಿದ್ದರೆ, ಈಗ ತಾಯಿನೆಲದ ಪ್ರೀತಿಯ ರಾಷ್ಟ್ರೀಯ ಪ್ರಜ್ಞೆ ಪ್ರಖರಗೊಂಡಿತ್ತು.

ಸ್ವಾತಂತ್ರ್ಯ ಚಳವಳಿಗೆ ಜಯ ಸಿಕ್ಕಿತ್ತು, ನಿಜ. ಆದರೆ ರಾಷ್ಟ್ರಪ್ರೇಮ, ರಾಷ್ಟ್ರೀಯತೆಯ ಪ್ರಜ್ಞೆಯ ಕಾವು ನಮ್ಮೆಲ್ಲರಲ್ಲೂ ಪ್ರಜ್ವಲಿಸುತ್ತಿತ್ತು. ಆದರೆ ಆ ಸಲ ಇದೆಲ್ಲವನ್ನೂ ಮೀರಿ ನನ್ನನ್ನು ಹೆಚ್ಚು ಕಾಡಿದ್ದು ಪಾಕಿಸ್ತಾನ ತಂಡದ ಉಪಸ್ಥಿತಿ!’’ ಎಂದೂ ಅವರು ಬರೆದಿದ್ದಾರೆ.

‘‘ಸ್ವಾತಂತ್ರ್ಯಪೂರ್ವದಲ್ಲಿ ಒಂದೇ ತಂಡದಲ್ಲಿ ಆಡುತ್ತಿದ್ದವರಲ್ಲಿ ಕೆಲವರು ಸ್ವಾತಂತ್ರ್ಯಾನಂತರ ಪಾಕಿಸ್ತಾನಕ್ಕೆ ಹೋದರು. ಲಂಡನ್‌ಗೆ ಬಂದಿದ್ದ ಪಾಕ್‌ ಹಾಕಿ ತಂಡದಲ್ಲಿದ್ದ ನಿಯಾಜ್‌ ಖಾನ್‌, ದಾರಾ, ಶಾರುಖ್‌, ಮೆಹಮೂದ್‌ ಮುಂತಾದವರು ಒಲಿಂಪಿಕ್ಸ್‌ ಗ್ರಾಮದಲ್ಲಿ ಸಿಕ್ಕಿದಾಗ ಮುಖ ತಿರುಗಿಸಿಕೊಂಡು, ಎತ್ತಲೋ ನೋಡುತ್ತಾ ಹೊರಟುಹೋದರು. ಕೇವಲ ಎರಡು ವರ್ಷಗಳ ಮೊದಲು ನಾವೆಲ್ಲಾ ಆತ್ಮೀಯ ಗೆಳೆಯರಾಗಿದ್ದೆವು. ಈಗ ಅಪರಿಚಿತರಂತಾಗಿ ಬಿಟ್ಟಿದ್ದೆವು’’ ಎಂದೂ ಬಲಬೀರ್‌ ಸಿಂಗ್‌ ತಮ್ಮ ಕೃತಿಯಲ್ಲಿ ನೆನಪಿಸಿಕೊಂಡಿದ್ದಾರೆ.

ಆ ದಿನಗಳಲ್ಲಿ ಭಾರತ ಮತ್ತು ಪಾಕ್‌ ತಂಡಗಳಿಗೆ ಒಲಿಂಪಿಕ್ಸ್‌ನಲ್ಲಿ ತಮ್ಮ ರಾಷ್ಟ್ರೀಯತೆಯ ಹೆಗ್ಗಳಿಕೆಯನ್ನು ಎತ್ತಿ ಹಿಡಿಯುವುದೇ ಮುಖ್ಯವಾಗಿತ್ತು. ಆಗ, ಉಭಯ ದೇಶಗಳ ರಾಷ್ಟ್ರೀಯ ಕ್ರೀಡೆ ಎಂದು ಹಾಕಿ ಬಿಂಬಿತಗೊಂಡಿತ್ತು. 1948, 52, 56ರ ಒಲಿಂಪಿಕ್ಸ್‌ಗಳಲ್ಲಿ ಭಾರತ ಹಾಕಿಯಲ್ಲಿ ಚಿನ್ನ ಗೆದ್ದಿತ್ತು. ಆಗ ಇಡೀ ದೇಶ ಸಂಭ್ರಮಿಸಿತ್ತು. ಹಾಕಿ ಈ ದೇಶದ ರಾಷ್ಟ್ರೀಯ ಪ್ರಜ್ಞೆಯ ಸಂಕೇತದಂತಿತ್ತು. ಪಾಕ್‌ ಕೂಡಾ ಒಲಿಂಪಿಕ್ಸ್‌ ಚಿನ್ನಕ್ಕಾಗಿ ಶಕ್ತಿಮೀರಿ ಪ್ರಯತ್ನಿಸುತ್ತಲೇ ಇತ್ತು.

1960ರ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಪಾಕಿಸ್ತಾನ ಫೈನಲ್‌ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಚಿನ್ನವನ್ನು ಎತ್ತಿಕೊಂಡಾಗ ಭಾರತ ನಿರಾಸೆಗೊಂಡಿತ್ತು. ಈ ಪಂದ್ಯ ಕೇವಲ ಕ್ರೀಡೆಯಷ್ಟೇ ಆಗಿರಲಿಲ್ಲ. ಎರಡೂ ದೇಶಗಳ ಪ್ರತಿಷ್ಠೆಯ ಸಂಕೇತವಾಗಿತ್ತು. ಈ ಸೋಲಿನ ನಂತರ ಭಾರತದಲ್ಲಿ ಹಾಕಿಯ ಕುರಿತು ಜನ ಆಸಕ್ತಿ ಕಳೆದುಕೊಳ್ಳತೊಡಗಿದರು.

64ರಲ್ಲಿ ಭಾರತ ಚಿನ್ನವನ್ನು ಮರಳಿ ಗೆದ್ದಿತಾದರೂ ಹಿಂದಿನ ಸಂಭ್ರಮ ಕಾಣಲಿಲ್ಲ. ನಂತರದ ದಿನಗಳಲ್ಲಿ ಭಾರತ ಈ ಕ್ರೀಡೆಯಲ್ಲಿ ಹಿಂದಿನ ಹಿರಿಮೆಯನ್ನು ಗಳಿಸಲಿಲ್ಲ. ಅಂದು ಭಾರತ ತಂಡ ಜಗತ್ತಿನ ಇನ್ನಾವುದೇ ದೇಶದ ಎದುರು ಸೋತಿದ್ದರೂ ಅಷ್ಟೊಂದು ನೊಂದುಕೊಳ್ಳುತ್ತಿರಲಿಲ್ಲವೇನೋ ?

ಒಲಿಂಪಿಕ್ಸ್‌ ವಿಶ್ವಮಾನವ ಪರಿಕಲ್ಪನೆಯೊಂದಿಗೆ ಜೀವ ತಳೆದಿದೆ. ಆರಂಭದ ಒಲಿಂಪಿಕ್ಸ್‌ ಚಾರ್ಟರ್‌ ಪ್ರಕಾರ ಇದರಲ್ಲಿ ಸ್ವರ್ಧೆ ಎನ್ನುವುದು ದೇಶದೇಶಗಳ ನಡುವಣ ಸಮರ ಅಲ್ಲ, ಅದು ವೈಯಕ್ತಿಕ ಅಥವಾ ಗುಂಪುಗಳ ಆಟಗಳ ನಡುವಣ ‘ಸಾಮರ್ಥ್ಯ ಪ್ರದರ್ಶನ’ ಅಷ್ಟೆ. ಆದರೆ ಕ್ರಮೇಣ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯತೆ ಮೂಲಕವೇ ಸೋಲು ಗೆಲುವು ಮತ್ತು ಪಾಲ್ಗೊಳ್ಳುವಿಕೆಗಳನ್ನು ಗುರುತಿಸುವ ವ್ಯವಸ್ಥೆ ಬಂದಿದ್ದರಿಂದ ರಾಷ್ಟ್ರೀಯ ಭಾವನೆಗಳು ಪ್ರಖರಗೊಂಡವು.

ಭಾರತ ಮತ್ತು ಪಾಕಿಸ್ತಾನಗಳು ಹಾಕಿಗೆ ಸಂಬಂಧಿಸಿದಂತೆ ಅನುಭವಿಸಿದ ಸಂಭ್ರಮ ಮತ್ತು ಯಾತನೆಯಂತಹ ನಿದರ್ಶನಗಳು ಜಗತ್ತಿನಾದ್ಯಂತ ಕಂಡುಬಂದಿವೆ. ಇವತ್ತು ಒಲಿಂಪಿಕ್ಸ್‌ ಎನ್ನುವುದು ರಾಷ್ಟ್ರೀಯತೆಗಳ ನಡುವಣ ಪ್ರತಿಷ್ಠೆಯ ಕಣವಾಗಿ ರೂಪಾಂತರಗೊಂಡಿದೆ.

ಕೆಲವೊಮ್ಮೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ನಿಟ್ಟಿನಲ್ಲಿ ಬದ್ಧವೈರಿಗಳೂ ಸಾಂಸ್ಕೃತಿಕ ನೆಲೆಯಲ್ಲಿ ಒಂದುಗೂಡಿದ ನಿದರ್ಶನಗಳೂ ಇವೆ. ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯ ದೇಶಗಳ ನಡುವಣ ಕಿತ್ತಾಟ ಇಡೀ ಜಗತ್ತಿಗೇ ತಿಳಿದಿದೆ.

ಐವತ್ತರ ದಶಕದ ಆರಂಭದಲ್ಲಿ ನಡೆದ ಕೊರಿಯ ಯುದ್ಧದ ನಂತರ ಈ ಎರಡೂ ದೇಶಗಳ ಮಂದಿ ಪರಸ್ಪರ ಮುಖ ನೋಡಲಾಗದಷ್ಟು ವೈರತ್ವ ಬೆಳೆಸಿಕೊಂಡಿದ್ದರು. ಆದರೆ ಸಿಡ್ನಿಯಲ್ಲಿ ಈ ಎರಡೂ ದೇಶಗಳು ಏಕಧ್ವಜದ ಅಡಿಯಲ್ಲಿ ಸ್ವರ್ಧಿಸಿ ಅಚ್ಚರಿ ಮೂಡಿಸಿದ್ದವು. ತಮ್ಮ ನಡುವಣ ರಾಷ್ಟ್ರೀಯತೆಯ ಹೆಗ್ಗಳಿಕೆಯ ಪೈಪೋಟಿಯ ಪ್ರಶ್ನೆಗಳಿಗಿಂತ ಒಲಿಂಪಿಕ್ಸ್‌ನಲ್ಲಿ ಇತರ ರಾಷ್ಟ್ರೀಯತೆಗಳನ್ನು ಮೀರಿ ನಿಲ್ಲುವುದು ಬಲು ಮುಖ್ಯ ಎಂದು ಈ ಎರಡೂ ರಾಷ್ಟ್ರಗಳಿಗೆ ಅನ್ನಿಸಿದ್ದೊಂದು ವಿಶೇಷ.

ವಿಮೋಚನೆಯ ನಂತರದ ಹೆಗ್ಗುರಿ
ಸಾಮ್ರಾಜ್ಯಶಾಹಿ ಮತ್ತು ವಸಾಹತು ದೇಶಗಳೆಂಬ ಪರಿಕಲ್ಪನೆ ಮಾನವ ನಾಗರಿಕತೆಯ ಜತೆಜತೆಗೇ ಬಂದಿದೆ. ಸಮುದ್ರಯಾನದಲ್ಲಿ ಹೆಚ್ಚಿನ ಪರಿಣತಿ ಸಿಗುತ್ತಿದ್ದಂತೆಯೇ ಪ್ರಬಲರು ತಮಗೆ ಹೊಸದೆನಿಸಿದ ಭೂಪ್ರದೇಶಗಳಿಗೆ ಹೋಗಿ ನೆಲೆಸಿ, ಅಂತಹ ಪ್ರದೇಶಗಳನ್ನು ತಮ್ಮ ದೇಶದ ಅಧೀನಕ್ಕೆ ಒಳಪಡಿಸಿಕೊಳ್ಳುತ್ತಿದ್ದರು. ಕಳೆದ ಐದಾರು ಶತಮಾನಗಳಲ್ಲಿ ಇಂಥದ್ದೊಂದು ಪ್ರಕ್ರಿಯೆ ಜಗತ್ತಿನಾದ್ಯಂತ ಬಲು ವ್ಯಾಪಕವಾಗಿ ನಡೆದುಹೋಯಿತು.

ಕಳೆದ ಶತಮಾನದಲ್ಲಿ ಇಂಥದ್ದೊಂದು ವ್ಯವಸ್ಥೆಯಿಂದ ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕದ ಅನೇಕ ಸಣ್ಣಪುಟ್ಟ ದೇಶಗಳು ವಿಮೋಚನೆಗೊಂಡವು. ಕಾಲು ಶತಮಾನದ ಹಿಂದೆ ಸೋವಿಯತ್‌ ಒಕ್ಕೂಟದಿಂದಲೂ ಕೆಲವು ಪ್ರದೇಶಗಳು ಹೊರಬಂದು ಹೊಸ ದೇಶಗಳಾಗಿ ಗುರುತಿಸಿಕೊಂಡವು. ಇಂತಹ ಎಲ್ಲಾ ದೇಶಗಳು ಕೂಡಾ ತಮ್ಮನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಒಲಿಂಪಿಕ್ಸ್‌ ಕೂಟವನ್ನು ವೇದಿಕೆಯನ್ನಾಗಿಸಿಕೊಂಡಿವೆ.

ಕೆಲವು ದೇಶಗಳಂತೂ ತಮ್ಮನ್ನು ಶತಮಾನಗಳ ಕಾಲ ಆಳಿದ ಪ್ರಬಲ ದೇಶಗಳ ವಿರುದ್ಧವೇ ಒಲಿಂಪಿಕ್ಸ್‌ನ ವಿಭಿನ್ನ ಕ್ರೀಡೆಗಳಲ್ಲಿ ಗೆಲುವು ಗಳಿಸುವುದನ್ನೇ ಗುರಿಯಾಗಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ ಎನ್ನುವುದು ವಿವಿಧ ರಾಷ್ಟ್ರೀಯತೆಗಳ ನಡುವಣ ಆಡುಂಬೊಲದಂತೆ ಕಂಡುಬರತೊಡಗಿತು.

ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವುದು ಕೂಡ ಪ್ರತಿಷ್ಠೆಯ ಪ್ರಶ್ನೆಯೇ ಆಗಿದೆ. ಅಂತಹ ಸಂದರ್ಭಗಳಲ್ಲಿ ಆತಿಥೇಯ ದೇಶಗಳು ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿನ ಮುಂದೆ ಇಡಲು ತುದಿಗಾಲಲ್ಲಿ ನಿಂತಿರುತ್ತವೆ. ಹಿಟ್ಲರನು ನಾಜಿ ಸಿದ್ಧಾಂತದ ಸಮರ್ಥನೆಗೆ ಒಲಿಂಪಿಕ್‌ ಅನ್ನು ಬಳಸಿಕೊಂಡರೆ, ಚೀನಾ ದೇಶವು ಜಗತ್ತಿನ ಶಕ್ತಿಕೇಂದ್ರ ತಾನು ಎಂಬುದನ್ನು ಬಿಂಬಿಸಿಕೊಳ್ಳಲು 2008ರ ‘ಬೀಜಿಂಗ್‌ ಒಲಿಂಪಿಕ್ಸ್‌’ ಅನ್ನು ಬಳಸಿಕೊಂಡಿತು.

ಟೆಲಿವಿಷನ್‌ ಮೂಲಕ ಜಗತ್ತಿನ ಮೂಲೆ ಮೂಲೆಗಳನ್ನು ತಲುಪಲು ಸಾಧ್ಯವಾದಂತಹ ಸ್ಥಿತಿ ಬಂದಾಗ ಒಲಿಂಪಿಕ್ಸ್‌ನಲ್ಲಿ ವಿಭಿನ್ನ ರೀತಿಯ ಬೆಳವಣಿಗೆಗಳು ಕಂಡುಬಂದವು.ಹೀಗಾಗಿ 60ರ ದಶಕದ ನಂತರ ಬಹುರಾಷ್ಟ್ರೀಯ ಕಂಪೆನಿಗಳಿಂದ ಒಲಿಂಪಿಕ್ಸ್‌ಗೆ ಹಣದ ಹೊಳೆ ಹರಿಯತೊಡಗಿತು. ಇದರ ಜತೆಗೇ ಕ್ರೀಡಾಪಟುಗಳಲ್ಲಿ ಸ್ವರ್ಧೆ ಹೆಚ್ಚಿದ್ದಲ್ಲದೆ, ಉತ್ತಮ ಫಲಿತಾಂಶಕ್ಕಾಗಿ ಉದ್ದೀಪನಾ ಮದ್ದು ಸೇವನೆಯ ಕರಾಳ ಮುಖವೂ ಕಂಡು ಬರತೊಡಗಿತು. 1988ರ ಸೋಲ್‌ ಒಲಿಂಪಿಕ್ಸ್‌ನಲ್ಲಿ ಕೆನಡಾದ ಬೆನ್‌ ಜಾನ್ಸನ್‌ ಪ್ರಕರಣ ಇದಕ್ಕೆ ಸ್ಪಷ್ಟ ನಿದರ್ಶನ.

ಈ ಸೂಕ್ಷ್ಮಗಳನ್ನೆಲ್ಲಾ ಗಮನಿಸುತ್ತಾ ಹೋದಾಗ ಜಾರ್ಜ್‌ ಆರ್ವೆಲ್‌ ಮಾತು ಅರ್ಥಪೂರ್ಣ ಎನಿಸುತ್ತದೆ. ‘‘ಗಂಭೀರವಾದ ಕ್ರೀಡಾ ಹಣಾಹಣಿಗೂ ಸೌಹಾರ್ದತೆಗೂ ಏನೇನೂ ಕೂಡಿ ಬರುವುದಿಲ್ಲ. ಇಂತಹ ಸ್ವರ್ಧೆಗಳು ವೈರತ್ವದಿಂದ, ಅಸೂಯೆಯಿಂದ, ಅಹಂಕಾರದಿಂದ ಕೂಡಿರುತ್ತದೆ. ನಿಯಮಗಳನ್ನು ಗಾಳಿಗೆ ತೂರಲು ಎಲ್ಲರೂ ತುದಿಗಾಲಲ್ಲಿ ನಿಂತಿರುತ್ತಾರೆ’’.

ವಿಶ್ವಮಾನವ ಪರಿಕಲ್ಪನೆಯ ಮೂಲ ಆಶಯದ ಒಲಿಂಪಿಕ್ಸ್‌ಗೂ, ಅದು ದಶಕದಿಂದ ದಶಕಕ್ಕೆ ರೂಪಾಂತರಗೊಂಡಿರುವ ಈಗಿನ ಒಲಿಂಪಿಕ್ಸ್‌ನ ಸ್ವರೂಪಕ್ಕೂ ಆಕಾಶ ಭೂಮಿಯಷ್ಟು ವ್ಯತ್ಯಾಸಗಳಿವೆ ಎಂದೆನಿಸುತ್ತದೆ. ಹಲವು ಸಲ ರಾಜಕಾರಣದ ವೈರತ್ವ ಕ್ರೀಡಾಂಗಣಕ್ಕೂ ವರ್ಗಾವಣೆಗೊಂಡಿರುವುದಕ್ಕೆ ಒಲಿಂಪಿಕ್ಸ್‌ ನಡೆದು ಬಂದ ಹಾದಿಯಲ್ಲೇ ನಿದರ್ಶನಗಳು ಸಿಗುತ್ತವೆ. ಅದೇನೇ ಇದ್ದರೂ, ವಿಶ್ವವನ್ನು ಒಂದು ಸದುದ್ದೇಶದ ಆಶಯದ ನೆಲೆಯಲ್ಲಿ ಹಿಡಿದಿಟ್ಟುಕೊಳ್ಳುವ ಶಕ್ತಿ ಇವತ್ತಿಗೂ ಒಲಿಂಪಿಕ್ಸ್‌ ಆಂದೋಲನಕ್ಕೆ ಇದೆ ಎನ್ನುವುದೂ ಸತ್ಯ.

ರಿಯೊ ಒಲಿಂಪಿಕ್ಸ್‌ನಲ್ಲಿರುವ ಕ್ರೀಡೆಗಳು
ಡೈವಿಂಗ್‌, ಈಜು, ಸಿಂಕನರೇಜಡ್‌ ಈಜು, ವಾಟರ್‌ ಪೊಲೊ, ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌, ಬಾಕ್ಸಿಂಗ್‌, ಕೆನೊಯಿಂಗ್‌, ಸೈಕ್ಲಿಂಗ್‌, ಈಕ್ವೇಸ್ಟ್ರಿಯನ್‌ (ಡ್ರೆಸೆಜ್‌, ಇವೆಂಟಿಂಗ್ ಹಾಗೂ ಜಂಪಿಂಗ್‌), ಫೆನ್ಸಿಂಗ್, ಹಾಕಿ, ಫುಟ್‌ಬಾಲ್‌, ಗಾಲ್ಫ್‌, ಜಿಮ್ನಾಸ್ಟಿಕ್‌ (ಆರ್ಟಿಸ್ಟ್‌, ರಿದಮ್ ಮತ್ತು ಟ್ರಂಪೊಲಿನ್‌), ಹ್ಯಾಂಡ್‌ಬಾಲ್‌, ಜೂಡೊ, ಮಾಡರ್ನ್‌ ಪೆಂಟಥ್ಲಾನ್‌, ರೋಯಿಂಗ್‌, ರಗ್ಬಿ ಸವೆನ್ಸ್‌, ಸೇಲಿಂಗ್‌, ಶೂಟಿಂಗ್‌, ಟೇಬಲ್ ಟೆನಿಸ್‌, ಟೇಕ್ವಾಂಡೊ, ಟೆನಿಸ್‌, ಟ್ರಯಥ್ಲಾನ್‌, ವಾಲಿಬಾಲ್‌ (ವಾಲಿಬಾಲ್‌–2 ಹಾಗೂ ಬೀಚ್‌ ವಾಲಿಬಾಲ್‌), ವೇಟ್‌ಲಿಫ್ಟಿಂಗ್‌, ಕುಸ್ತಿ (ಫ್ರೀಸ್ಟೈಲ್‌ ಹಾಗೂ ಗ್ರಿಕೊ ರೋಮನ್).

ವರ್ತುಲಗಳ ರೂಪಕ!
‘ಒಲಿಂಪಿಕ್ ಚಿಹ್ನೆ’ಯಲ್ಲಿ ಒಂದಕ್ಕೊಂದು ಹೆಣೆದುಕೊಂಡಿರುವ ಐದು ವರ್ತುಲಗಳು ಇವೆಯಷ್ಟೇ; ಈ ಐದು ವರ್ತುಲಗಳು ಪ್ರಪಂಚದ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ. (ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದೇ ಎಂದು ಪರಿಗಣಿಸಲಾಗಿದೆ). ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ಐದು ವರ್ತುಲಗಳು ಐದು ವರ್ಣಗಳಲ್ಲಿ (ಕೆಂಪು, ನೀಲಿ, ಹಸಿರು, ಹಳದಿ ಹಾಗೂ ಕಪ್ಪು) ಗೋಚರಿಸುತ್ತವೆ. ವಿಶೇಷವೆಂದರೆ, ವಿಶ್ವದ ಪ್ರತಿಯೊಂದು ರಾಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ (ಒಲಿಂಪಿಕ್‌ ಚಿಹ್ನೆಯಲ್ಲಿರುವ ಐದು ಬಣ್ಣಗಳು ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.