ADVERTISEMENT

ವರ್ಣರಂಜಿತ ‘ಕಲೈಡಸ್ಕೋಪ್’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 19:30 IST
Last Updated 22 ಏಪ್ರಿಲ್ 2017, 19:30 IST
ವರ್ಣರಂಜಿತ ‘ಕಲೈಡಸ್ಕೋಪ್’
ವರ್ಣರಂಜಿತ ‘ಕಲೈಡಸ್ಕೋಪ್’   

ಪ್ರತಿವರ್ಷ ಫೆಬ್ರುವರಿ ತಿಂಗಳ ಮೊದಲರ್ಧ ಹರಿಯಾಣ ಹಾಗೂ ದೆಹಲಿ ಗಡಿಗೆ ಹೊಂದಿಕೊಂಡ ಸೂರಜ್ಕುಂಡ್ ಎಂಬ ಹಳ್ಳಿಯಲ್ಲಿ ವರ್ಣರಂಜಿತ ‘ಕಲೈಡಸ್ಕೋಪ್’ ನೋಡಬಹುದು. ಭಾರತದ ಬಗೆಬಗೆಯ ಕಲೆಗಳು ಅಲ್ಲಿ ಅನಾವರಣಗೊಳ್ಳುತ್ತವೆ. ಕರಕುಶಲ ವಸ್ತುಗಳು, ಕೈಮಗ್ಗದ ವಸ್ತ್ರಗಳ ಮಹಾಮೇಳವಿದು. ದೇಶದಲ್ಲೇ ಅತಿ ದೊಡ್ಡ ಮೇಳಗಳಲ್ಲಿ ಇದು ಒಂದಾಗಿದ್ದು, ದೇಶ ವಿದೇಶಗಳ ಹಲವು ಕಲಾವಿದರು, ಕುಶಲಕರ್ಮಿಗಳು ಭಾಗವಹಿಸುತ್ತಾರೆ.

ಈ ಕಲಾಮೇಳ ಶುರುವಾದುದು 1987ರಲ್ಲಿ. ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲೆಂದು ಭಾರತ ಸರ್ಕಾರ ಪ್ರಾರಂಭಿಸಿತು. ವಿದೇಶಿ ಪ್ರವಾಸಿಗರು ತಮ್ಮ ಪ್ರವಾಸ ಕಾರ್ಯಕ್ರಮದ ಪಟ್ಟಿಗೆ ಇದನ್ನೂ ಸೇರಿಸಿಕೊಳ್ಳುವಷ್ಟು ಈ ಮೇಳ ಇಂದು ಜನಪ್ರಿಯವಾಗಿದೆ. ಸೂರಜ್ಕುಂಡ್  ಎಂದರೆ ‘ಸೂರ್ಯನ ನದಿ’ ಎಂದೇ ಅರ್ಥ.

ಬಟಾಬಯಲು ಇದ್ದಕ್ಕಿದ್ದಂತೆ ಬಣ್ಣಬಣ್ಣದ ಮಳಿಗೆಗಳಿಂದ ಕಂಗೊಳಿಸತೊಡಗುತ್ತದೆ. ರೇಷ್ಮೆ ಹಾಗೂ ಹತ್ತಿಯ ಬಟ್ಟೆಗಳು, ಪುಟ್ಟ ಪುಟ್ಟ ಕನ್ನಡಿಗಳನ್ನು ಬಳಸಿ ಅಲಂಕಾರ ಮಾಡಿದ ವಸ್ತ್ರಗಳು, ಕುಡಿಕೆ ಚಿತ್ತಾರ, ಹರಳಿನ ವಸ್ತುಗಳು, ಟೆರ್ರಾಕೋಟಾ ಆಭರಣಗಳು, ಬಿದಿರಿನ ಅಲಂಕಾರಿಕ ವಸ್ತುಗಳು ಎಲ್ಲವೂ ಇಲ್ಲಿನ ಆಕರ್ಷಣೆಗಳು.

ಲಡಾಖ್‌ನ ಪಶ್ಮಿನಾ ಶಾಲುಗಳು ಸಿಕ್ಕಿಂನ ಲೋಹದ ಪರಿಕರಗಳು, ರಾಜಸ್ತಾನದ ಬೊಂಬೆಗಳು, ಒಡಿಶಾದ ಕುಸುರಿ ಮಾಡಿದ ಕೊಡೆಗಳು, ಪಂಜಾಬ್‌ನ ಚಿತ್ತಾಪಹಾರಿ ಮರದ ಕೆತ್ತನೆ ಇಲ್ಲಿ ಕಾಣಲು ಸಾಧ್ಯ.

ಕೆಲವು ಮಳಿಗೆಗಳಲ್ಲಿ ಕುಶಲಕರ್ಮಿಗಳು ಹೇಗೆಲ್ಲಾ ಕೆಲಸ ಮಾಡುತ್ತಾರೆ ಎಂಬ ಪ್ರಾತ್ಯಕ್ಷಿಕೆಯೂ ಇರುತ್ತದೆ. ಬಿದಿರಿನಿಂದ ಕೈಚೀಲ ತಯಾರಿಸುವ ಬಗೆ, ರೇಷ್ಮೆಸೀರೆ ನೇಯುವ ಸೂಕ್ಷ್ಮವನ್ನು ಪ್ರವಾಸಿಗರು ನೋಡಬಹುದು. ಅಷ್ಟೇ ಅಲ್ಲ, ತಾವೇ ಮಡಕೆಯನ್ನೂ ತಯಾರಿಸಬಹುದು. ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಂಗಕಮ್ಮಟಗಳೂ ಮೇಳದಲ್ಲಿ ನಡೆಯುತ್ತವೆ.

‘ನಾಟ್ಯಶಾಲಾ’ ಎಂಬ ಬಯಲು ರಂಗಮಂದಿರದಲ್ಲಿ ಜಾನಪದ ನೃತ್ಯಗಳು, ನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳ ಪ್ರದರ್ಶನ ನಡೆಯುತ್ತದೆ. ಹಗ್ಗದ ಮೇಲೆ ನಡೆಯುವವರು, ಡ್ರಮ್ಮರ್‌ಗಳು, ಜಾದೂಗಾರರು, ಮೆಹೆಂದಿ ಕಲಾವಿದರಿಗೂ ಈ ಮೇಳ ತಾವು ನೀಡುತ್ತದೆ. ದೇಶದ ವಿವಿಧ ಬಗೆಯ ತಿನಿಸುಗಳನ್ನು ಪೂರೈಸುವ ಆಹಾರ ಮಳಿಗೆಗಳೂ ಮೇಳದಲ್ಲಿ ಇರುತ್ತವೆ.

ಈ ಪ್ರತಿಷ್ಠಿತ ಮೇಳದಲ್ಲಿ ‘ಸಾರ್ಕ್’ ರಾಷ್ಟ್ರಗಳ ನಾಗರಿಕರಷ್ಟೇ ಅಲ್ಲದೆ ಯುರೋಪ್ ಹಾಗೂ ಆಫ್ರಿಕಾದ ಕೆಲವು ದೇಶಗಳ ಜನರೂ ಭಾಗವಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.