ADVERTISEMENT

ಶಾರ್ಕ್ ಜೀವನದ ಕಥೆ- ವ್ಯಥೆ

ಎನ್.ವಾಸುದೇವ್
Published 16 ಸೆಪ್ಟೆಂಬರ್ 2017, 19:30 IST
Last Updated 16 ಸೆಪ್ಟೆಂಬರ್ 2017, 19:30 IST
ಶಾರ್ಕ್ ಜೀವನದ ಕಥೆ- ವ್ಯಥೆ
ಶಾರ್ಕ್ ಜೀವನದ ಕಥೆ- ವ್ಯಥೆ   

ಶಾರ್ಕ್.
ಈ ಹೆಸರೇ ಸಾಗರಾವಾರದ ಬಲಿಷ್ಠ, ಭಯಂಕರ, ಬೇಟೆಗಾರ ಪ್ರಾಣಿಯೊಂದರ ಭೀತಿಗೊಳಿಸುವ ಚಿತ್ರವನ್ನು ಮನದಲ್ಲಿ ಮೂಡಿಸುತ್ತದೆ, ಅಲ್ಲವೇ? ಇಸವಿ 1975ರ, ಆ ಕಾಲದಲ್ಲೇ ₹60 ಕೋಟಿ ವ್ಯಯಿಸಿ ನಿರ್ಮಿಸಿದ, ವಿಶ್ವವಿಖ್ಯಾತ ಚಲನಚಿತ್ರ ‘ಜಾಸ್’ (Jaws) ಆಗಿನಿಂದಲೂ ಮೂಡಿಸಿರುವ, ವಿಶ್ವವ್ಯಾಪಕವೂ ಆಗಿರುವ ಒಂದು ಮಿಥ್ಯಾ ಕಲ್ಪನೆ ಅದು. ಆ ಚಲನಚಿತ್ರದಲ್ಲಿ ಯು.ಎಸ್.ಎ.ಯ ‘ನ್ಯೂ ಇಂಗ್ಲೆಂಡ್’ನ ಕಡಲಂಚಿನ ವಿಹಾರ ತಾಣವೊಂದಕ್ಕೆ ಒಂದು ಭಾರೀ ಶಾರ್ಕ್ ಮತ್ತೆ ಮತ್ತೆ ಎರಗುತ್ತದೆ; ಚಿತ್ರವೀಕ್ಷಕರೇ ಬೆದರಿ ಚೀರಾಡುವಂತೆ, ಕಡಲಿಗಿಳಿದ ಪ್ರವಾಸಿ ಈಜುಗಾರರ ಮೇಲೆ ಭೀಕರ ದಾಳಿ ನಡೆಸುತ್ತದೆ; ಕೈ ಕಾಲುಗಳನ್ನು ತುಂಡರಿಸಿ, ಶರೀರವನ್ನು ಛಿದ್ರಗೊಳಿಸಿ, ತಿಂದು ಹಾಕುತ್ತದೆ. ಕಡೆಗೆ ಆ ‘ನರ ಭಕ್ಷಕ’ನನ್ನು ಭಾರಿ ಸಾಹಸದಿಂದ ಕಡಲಾಳದಲ್ಲಿ ಕೊಲ್ಲಲಾಗುತ್ತದೆ.

ವಿಪರ್ಯಾಸ ಏನೆಂದರೆ, ಆ ಇಡೀ ಕಲ್ಪನೆ ವಾಸ್ತವದಿಂದ ಬಹಳ ದೂರ. ‘ಜಾಸ್’ ಸಿನಿಮಾದ ಬೃಹತ್‌ ಗಾತ್ರದ, ರಕ್ಕಸ ಬಾಯಿಯ, ಘೋರ ದಂತ ಪಂಕ್ತಿಯ, ಭೀಮ ಬಲದ, ಮಿಂಚಿನ ವೇಗದ ಬೇಟೆಗಾರ ‘ದಿ ಗ್ರೇಟ್ ವೈಟ್ ಶಾರ್ಕ್’ ( ಚಿತ್ರ-1, 6) ನಿಜವಾಗಿ ನರಭಕ್ಷಕ ಅಲ್ಲವೇ ಅಲ್ಲ. ಅಷ್ಟೇ ಅಲ್ಲ, ಶಾರ್ಕ್‌ನದು ಅದೊಂದೇ ವಿಧವೂ ಅಲ್ಲ.

ವೈವಿಧ್ಯ-ವೈಶಿಷ್ಟ್ಯ
ವಾಸ್ತವವಾಗಿ ಶಾರ್ಕ್‌ಗಳು ನೂರಾರು ವಿಧಗಳಿವೆ. ಈ ವರೆಗೆ ಸಮೀಪ ನಾಲ್ಕು ನೂರು ವಿಧಗಳ ಶಾರ್ಕ್‌ಗಳನ್ನು ಗುರುತಿಸಿ ಹೆಸರಿಸಲಾಗಿದೆ: ‘ಗ್ರೇಟ್ ವೈಟ್ ಶಾರ್ಕ್ (ಚಿತ್ರ-1,6), ಓಷಿಯಾನಿಕ್ ವೈಟ್ ಟಿಪ್ (ಚಿತ್ರ -8), ಟೈಗರ್ ಶಾರ್ಕ್ (ಚಿತ್ರ- 4), ಸಿಲ್ಕೀ ಶಾರ್ಕ್, ಹ್ಯಾಮರ್ ಹೆಡ್ ಶಾರ್ಕ್ (ಚಿತ್ರ -5), ಬ್ಲೂ ಶಾರ್ಕ್, ಲೆಮನ್ ಶಾರ್ಕ್, ನರ್ಸ್ ಶಾರ್ಕ್, ಬುಲ್ ಶಾರ್ಕ್, ವ್ಹೇಲ್ ಶಾರ್ಕ್ (ಚಿತ್ರ -2), ಥ್ರೆಷರ್ ಶಾರ್ಕ್, ಸ್ಯಾಂಡ್ ಬಾರ್ ಶಾರ್ಕ್... ಇತ್ಯಾದಿ’.

ADVERTISEMENT

ಸಹಜವಾಗಿಯೇ ಶಾರ್ಕ್‌ಗಳದು ಭಾರಿ ಗಾತ್ರಾಂತರ ಕೂಡ (ಚಿತ್ರ-3 ಮತ್ತು ಚಿತ್ರ-7ರಲ್ಲಿ ಗಮನಿಸಿ). ಶಾರ್ಕ್‌ಗಳಲ್ಲೆಲ್ಲ ವ್ಹೇಲ್ ಶಾರ್ಕ್‌ನದೇ ಅತ್ಯಂತ ಅಧಿಕ ತೂಕ-ಗಾತ್ರ. ಅದು 40 ಅಡಿ ಉದ್ದ ಬೆಳೆದು 22 ಟನ್‌ವರೆಗೂ ತೂಗುತ್ತದೆ (ಇಡೀ ಮತ್ಸ್ಯ ವರ್ಗದಲ್ಲಿ ವ್ಹೇಲ್ ಶಾರ್ಕ್‌ನದೇ ತೂಕ-ಗಾತ್ರಗಳ ಗರಿಷ್ಠ ದಾಖಲೆ). ಶಾರ್ಕ್ ಲೋಕದ ಅತ್ಯಂತ ಕುಬ್ಜ ‘ದಿ ಡ್ವಾರ್ಫ್ ಲ್ಯಾಂಟರ್ನ್ ಶಾರ್ಕ್’. ಅದರದು ಗರಿಷ್ಠ ಏಳೇ ಅಂಗುಲ ಉದ್ದ, 25 ಗ್ರಾಂನಷ್ಟೇ ತೂಕ. ಅತ್ಯುಗ್ರ ಬೇಟೆಗಾರ ಶಾರ್ಕ್ ಪ್ರಭೇದಗಳಲ್ಲೆಲ್ಲ ‘ದಿ ಗ್ರೇಟ್ ವೈಟ್’ನದೇ ಅತ್ಯಂತ ಭಾರಿ ಗಾತ್ರ-ತೂಕ: ಅದು 20 ಅಡಿ ಉದ್ದ ತಲುಪಿ, ಒಂದು ಟನ್‌ಗೂ ಅಧಿಕ ತೂಕ ಮುಟ್ಟುತ್ತದೆ.

ಸ್ಪಷ್ಟವಾಗಿಯೇ ಎಲ್ಲ ಶಾರ್ಕ್‌ಗಳೂ ಮತ್ಸ್ಯ ವರ್ಗಕ್ಕೇ ಸೇರಿವೆ. ಆದರೆ ಅವು ಗಟ್ಟಿ ಮೂಳೆಗಳ ಅಸ್ಥಿಪಂಜರವನ್ನು ಪಡೆದಿಲ್ಲ. ಶಾರ್ಕ್‌ಗಳ ಶರೀರದ್ದೆಲ್ಲ ‘ಮೃದ್ವಸ್ಥಿ’ಗಳು ( ಕಾರ್ಟಿಲೇಜ್); ಮೃದುವಾದ, ಹಗುರವಾದ ನಿರ್ಮಿತಿಗಳು ಅವು. ಎಲ್ಲ ಶಾರ್ಕ್‌ಗಳೂ ಸಾಗರವಾಸಿ ಬೇಟೆಗಾರರಾಗಿವೆ; ಸಂಪೂರ್ಣ ಮಾಂಸಾಹಾರಿಗಳಾಗಿವೆ. ಎದೆಭಾಗದಿಂದ ಚಾಚಿದ ದೃಢ ‘ಈಜು ರೆಕ್ಕೆ’ಗಳನ್ನು(ಫಿನ್ಸ್) ಪಡೆದಿರುವುದು ಅವುಗಳ ವಿಶಿಷ್ಟ ದೇಹಲಕ್ಷಣ (ಚಿತ್ರಗಳಲ್ಲಿ ಗಮನಿಸಿ).

ಸಮುದ್ರ ಸಿಂಹ, ಸೀಲ್, ಡಾಲ್ಫಿನ್, ಪೆಂಗ್ವಿನ್, ತಮಗಿಂತ ಚಿಕ್ಕ ಇತರ ಶಾರ್ಕ್‌ಗಳು, ಎಲುಬಿನ ಮೀನುಗಳು, ರೇಗಳು, ಸ್ಕೇಟ್‌ಗಳು... ಇತ್ಯಾದಿ ಬಹು ವಿಧ ಸಾಗರ ಪ್ರಾಣಿಗಳೇ ಶಾರ್ಕ್‌ಗಳ ಆಹಾರ. ಶ್ರೇಷ್ಠ ಬೇಟೆಗಾರರಾಗಿರುವ ಭಾ‌ರಿ ಶಾರ್ಕ್‌ಗಳು ಬಲಿ ಪ್ರಾಣಿಗಳನ್ನು ವೇಗವಾಗಿ ಬೆನ್ನಟ್ಟಿ ಹಿಡಿಯುತ್ತವೆ; ಅವನ್ನು ಬಲವಾಗಿ ಕಚ್ಚುತ್ತವೆ; ನೆತ್ತರೆಲ್ಲ ಸೋರಿ ಅವು ಸತ್ತ ನಂತರ ನಿಧಾನವಾಗಿ ತಿನ್ನುತ್ತವೆ. ಇದು ಅವುಗಳ ನೈಸರ್ಗಿಕ ಬೇಟೆ ವಿಧಾನ. ಹಿಂಸೆ ನೀಡಿ ಆನಂದ ಪಡುವುದಾಗಲೀ, ನೋವು ನೀಡಿ ವಿನೋದ ಪಡೆಯುವುದಾಗಲೀ ಶಾರ್ಕ್‌ಗಳಿಗೆ ಗೊತ್ತೇ ಇಲ್ಲ ; ಅಂಥವೆಲ್ಲ ಕೇವಲ ದುರುಳ ಮನುಷ್ಯರ ಕೆಲಸ .

ಸಂಶೋಧಕರು, ಜೀವವಿಜ್ಞಾನಿಗಳು ಸ್ಪಷ್ಟವಾಗಿ ಪತ್ತೆ ಮಾಡಿರುವಂತೆ ಶಾರ್ಕ್‌ಗಳಿಗೆ ನರಭಕ್ಷಣೆಯ ವಿಶೇಷ ಉದ್ದೇಶವಾಗಲಿ, ಆಸಕ್ತಿಯಾಗಲಿ ಕಿಂಚಿತ್ತೂ ಇಲ್ಲ. ಶಾರ್ಕ್‌ಗಳು ಮನುಷ್ಯರ ಮೇಲೆರಗುವುದು ಸಂಪೂರ್ಣ ಆಕಸ್ಮಿಕ; ಅತ್ಯಂತ ಅಪರೂಪ ಕೂಡ. ವಾಸ್ತವ ಏನೆಂದರೆ ಭಾರಿ ಗಾತ್ರದ ಶಾರ್ಕ್ ವಿಧಗಳ ಪೈಕಿ ನಾಲ್ಕೇ ನಾಲ್ಕು ವಿಧಗಳು ಮಾತ್ರ - ದಿ ಗ್ರೇಟ್ ವೈಟ್ ಶಾರ್ಕ್, ಟೈಗರ್ ಶಾರ್ಕ್, ವೈಟ್ ಟಿಪ್ ಮತ್ತು ಬುಲ್ ಶಾರ್ಕ್‌ಗಳು - ಕಡಲಂಚಿನ ಸನಿಹಗಳಲ್ಲೇ ಬೇಟೆಯಾಡುವ ಕ್ರಮ ಹೊಂದಿವೆ.

ಹಾಗೆ ಬೀಚುಗಳ ಬಳಿ ಆಹಾರ ಅನ್ವೇಷಿಸುತ್ತ ಬರುವ ಈ ಶಾರ್ಕ್‌ಗಳು ಅಲ್ಲೇ ವಿಹಾರಕ್ಕೆಂದು ಈಜಿಗಿಳಿದ ಮನುಷ್ಯರು ಸಿಕ್ಕರೆ ಅಂತಹರನ್ನೂ ಬಲಿಪ್ರಾಣಿ ಎಂದು ತಪ್ಪಾಗಿ ಗ್ರಹಿಸಿ ಬಾಯಿಹಾಕುತ್ತವೆ. ತಮ್ಮ ತಪ್ಪು ತಿಳಿದೊಡನೆ ಗಾಯಗೊಂಡ ನರಬಲಿಯನ್ನು ಅಲ್ಲೇ ಬಿಟ್ಟು ಹೋಗುವುದೇ ಬಹಳ ಸಾಮಾನ್ಯ. ಶಾರ್ಕ್‌ಗಳು ಮನುಷ್ಯರನ್ನು ಬೇಟೆಯಾಡುವುದು ತೀರ ವಿರಳ ; ತಿಂದುಬಿಡುವುದಂತೂ ವಿರಳಾತಿವಿರಳ!

ಅಗತ್ಯ -ಮಹತ್ವ
ಸಾಗರ ಜೀವಜಾಲದಲ್ಲಿ ಶಾರ್ಕ್‌ಗಳ - ವಿಶೇಷವಾಗಿ ಭಾರಿ ಗಾತ್ರದ ಶಾರ್ಕ್‌ಗಳ - ಪಾತ್ರವಂತೂ ಅನನ್ಯ, ಅಮೂಲ್ಯ. ಸಾಗರದಲ್ಲಿನ ಸಾವಿರಾರು ‘ಆಹಾರ ಸರಪಳಿ’ಗಳ, ‘ಆಹಾರ ಪಿರಮಿಡ್’ಗಳ ಶಿಖರದಲ್ಲಿ ಶಾರ್ಕ್‌ಗಳ ಸ್ಥಾನ. ಹಾಗೆಂದರೆ ಪ್ರತಿ ಆಹಾರ ಸರಪಳಿಯ ಉಳಿದೆಲ್ಲ ಪ್ರಾಣಿಗಳ ಸಂಖ್ಯಾ ನಿಯಂತ್ರಣದಲ್ಲಿ ಶಾರ್ಕ್‌ಗಳು ನೇರವಾಗಿಯೋ, ಪರೋಕ್ಷವಾಗಿಯೋ ನಿರ್ಣಾಯಕ ಪಾತ್ರ ಪಡೆದಿವೆ. ಶಾರ್ಕ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಇರದಿದ್ದರೆ ಅವುಗಳ ಬಲಿ ಪ್ರಾಣಿಗಳ ಸಂಖ್ಯೆ ಅನಿಯಂತ್ರಿತವಾಗಿ ಹೆಚ್ಚುತ್ತದೆ.

ವಿಶೇಷವಾಗಿ ಹವಳ ಲೋಕಗಳಲ್ಲಿ (ಚಿತ್ರ-12) ಮತ್ತು ಕಡಲ ಕಳೆಗಳ ಅಡವಿಗಳಲ್ಲಿ ಶಾರ್ಕ್‌ಗಳ ಸಂಖ್ಯೆ ಕಡಿಮೆಯಾದರೆ ಅಂಥ ಜೀವಾವಾರಗಳ ಸಮತೋಲನ ಅಧ್ವಾನಗೊಳ್ಳುತ್ತದೆ. ಶಾರ್ಕ್‌ಗಳು ಸಾಮಾನ್ಯವಾಗಿ ದುರ್ಬಲ ಮತ್ತು ರೋಗಿಷ್ಠ ಬಲಿಪ್ರಾಣಿಗಳನ್ನೇ ಬೇಟೆಯಾಡುತ್ತವೆ; ಸಹಜವಾಗಿಯೋ, ರೋಗಗ್ರಸ್ತವಾಗಿಯೋ ಮೃತವಾಗಿ ಕಡಲ ನೆಲಕ್ಕೆ ಬೀಳುವ ಇತರ ಭಾರಿ ಪ್ರಾಣಿಗಳ ಶವಗಳನ್ನೂ ತಿಂದುಹಾಕುತ್ತವೆ. ತನ್ಮೂಲಕ ಇತರ ಪ್ರಾಣಿಗಳ ಆರೋಗ್ಯಭರಿತ ಸಂತತಿಯಷ್ಟೇ ಉಳಿಯಲು ಹಾಗೂ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಕಡಲಿನಾವಾರದಲ್ಲಿ ಹರಡದಿರಲು ಭಾರೀ ನೆರವು ನೀಡುತ್ತಿವೆ!

ಪ್ರಸ್ತುತ ಪರಿಸ್ಥಿತಿ
ವಿಪರ್ಯಾಸ ಏನೆಂದರೆ, ಅಷ್ಟೆಲ್ಲ ಮಹತ್ವದ ಪ್ರಾಣಿಗಳಾಗಿದ್ದರೂ ಪ್ರಸ್ತುತ ಎಲ್ಲ ಸಾಗರಗಳಲ್ಲೂ ಶಾರ್ಕ್‌ಗಳು ತೀರ ದುಸ್ಥಿತಿಯಲ್ಲಿವೆ; ದುರಂತದ ಹಾದಿಯಲ್ಲಿವೆ. ಶಾರ್ಕ್‌ಗಳ ಈ ದೌರ್ಭಾಗ್ಯಕ್ಕೆ ಮೂಢ ಮನುಷ್ಯರ ಧನದಾಹ ಮತ್ತು ವಿಕೃತ ಜಿಹ್ವಾ ಚಾಪಲ್ಯಗಳೇ ಕಾರಣ! ಶಾರ್ಕ್‌ಗಳ ಪ್ರಸ್ತುತ ಶೋಚನೀಯ ಸ್ಥಿತಿಯನ್ನು ನಿಚ್ಚಳಗೊಳಿಸುವ ಈ ಒಂದೆರಡು ಅಂಕಿ-ಅಂಶಗಳನ್ನು ನೀವೇ ಗಮನಿಸಿ:

* ವಿಶ್ವಮಾನ್ಯ, ಪ್ರತಿಷ್ಠಿತ ಸಂಸ್ಥೆ ‘ದಿ ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (ಐ.ಯು.ಸಿ.ಎನ್.)’ನ ಅಪಾಯದಲ್ಲಿರುವ ಪ್ರಭೇದಗಳ ಕೆಂಪು ಪಟ್ಟಿಯಲ್ಲಿ ಶಾರ್ಕ್‌ಗಳ 64 ಪ್ರಭೇದಗಳಿವೆ! ಆ ಪೈಕಿ ಹನ್ನೊಂದು ಪ್ರಭೇದಗಳಂತೂ ಅಳಿದೇಹೋಗುವ ಸ್ಥಿತಿಯನ್ನು ತಲುಪಿವೆ!

* ಭಾರೀ ಶಾರ್ಕ್‌ಗಳ ಎಂಟು ಪ್ರಭೇದಗಳ ‘ಜನ ಸಂಖ್ಯೆ’ ಇಸವಿ 1970ರಿಂದ ಈಚೆಗೆ, ಎಂದರೆ ಐವತ್ತು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ, ಶೇಕಡ ಐವತ್ತಕ್ಕೂ ಅಧಿಕ ಕಡಿಮೆಯಾಗಿದೆ! ದಿ ಗ್ರೇಟ್ ವೈಟ್ ಶಾರ್ಕ್‌ನ ಸಂಖ್ಯೆ 79%ರಷ್ಟು ಕುಸಿದಿದೆ. ಥ್ರೆಷರ್ ಶಾರ್ಕ್‌ನ ಜನ ಸಂಖ್ಯೆ 80% ರಷ್ಟು ಕಡಿಮೆಯಾಗಿದೆ; ಸ್ಯಾಂಡ್ ಬಾರ್ ಶಾರ್ಕ್‌ನದು 87%; ಹ್ಯಾಮರ್ ಹೆಡ್ ಶಾರ್ಕ್‌ನದು 89%; ಬುಲ್ ಶಾರ್ಕ್ ಮತ್ತು ಡಸ್ಕೀ ಶಾರ್ಕ್‌ಗಳ ಸಂಖ್ಯಾ ಕುಸಿತ 99%! ಶಾರ್ಕ್‌ಗಳಿಗೆ ಇನ್ನೆಲ್ಲಿ ಉಳಿಗಾಲ?

* ಇತ್ತೀಚಿನ ಹಲವಾರು ಸರ್ವೇಕ್ಷಣೆಗಳ ಪ್ರಕಾರ ಪ್ರಸ್ತುತ ಜಗದಾದ್ಯಂತ ಪ್ರತಿ ವರ್ಷ ಮನುಷ್ಯರಿಗೆ ಬಲಿಯಾಗುತ್ತಿರುವ ಸರ್ವ ವಿಧ ಶಾರ್ಕ್‌ಗಳ ಒಟ್ಟು ಸಂಖ್ಯೆ ಸಮೀಪ 100 ದಶ ಲಕ್ಷ! ಎಂದರೆ ಹತ್ತು ಕೋಟಿ! ಗರಿಷ್ಠ ಸಂಖ್ಯೆಯಲ್ಲಿ ಶಾರ್ಕ್‌ಗಳನ್ನು ಬೇಟೆಯಾಡುತ್ತಿರುವ ಮೊದಲ ಐದು ರಾಷ್ಟ್ರಗಳ ಪಟ್ಟಿಯಲ್ಲಿ ನಮ್ಮ ದೇಶವೂ ಇದೆ!

ಏಕೆ ಹೀಗೆ?
ಅದಕ್ಕೆಲ್ಲ ಮುಖ್ಯ ಕಾರಣ ಈಗಾಗಲೇ ಹೇಳಿದಂತೆ ಕೋಟ್ಯಂತರ ಮನುಷ್ಯರ ವಿಕೃತ ಜಿಹ್ವಾಚಾಪಲ್ಯ. ಮಾಂಸಕ್ಕಾಗಿ ಶಾರ್ಕ್‌ಗಳ ಬೇಟೆ ನಡೆದಿರುವುದಷ್ಟೇ ಅಲ್ಲದೆ ಅದಕ್ಕಿಂತ ಬಹಳ ಮುಖ್ಯವಾಗಿ ಅವುಗಳ ‘ಈಜು ರೆಕ್ಕೆ (ಫಿನ್)’ಗಳಿಗಾಗಿ ಶಾರ್ಕ್‌ಗಳ ಕ್ರೂರ ಕೊಲೆ ನಡೆದಿದೆ. ಶಾರ್ಕ್‌ಗಳ ಈಜುರೆಕ್ಕೆಗಳಿಂದ ತಯಾರಿಸುವ ‘ಶಾರ್ಕ್ ಫಿನ್ ಸೂಪ್’ (ಚಿತ್ರ-14 ) ಜಗತ್ತಿನ ಬಹಳ ಕಡೆ - ಅತ್ಯಂತ ವ್ಯಾಪಕವಾಗಿ ಚೈನಾ ದೇಶದಲ್ಲಿ - ಪರಮ ಪ್ರಿಯ! (ಅದಕ್ಕಾಗಿ ಸಂಗ್ರಹಿಸಿ ರಾಶಿ ಹಾಕಿರುವ ಶಾರ್ಕ್ ಫಿನ್‌ಗಳನ್ನು ಚಿತ್ರ-9ರಲ್ಲಿ ನೋಡಿ). ಆ ಖಾದ್ಯಕ್ಕಾಗಿ ಶಾರ್ಕ್‌ಗಳು ನರಕ ಯಾತನೆಯ ದಾರುಣ ಅಂತ್ಯ ಕಾಣುತ್ತಿವೆ. ಏಕೆಂದರೆ, ಕಡಲಲ್ಲಿ ಭಾರಿ ಬಲೆಗಳನ್ನು ಬೀಸಿ ಶಾರ್ಕ್‌ಗಳನ್ನು ಸೆರೆ ಹಿಡಿದು, ಅವುಗಳ ಈಜು ರೆಕ್ಕೆಗಳನ್ನು ಕತ್ತರಿಸಿ ಪಡೆದು (ಚಿತ್ರ-11, 13)

ಅವನ್ನು ಕಡಲಿಗೇ ವಾಪಸ್ ತಳ್ಳಲಾಗುತ್ತದೆ. ಹಾಗೆ ಅಂಗಹೀನವಾದ ಶಾರ್ಕ್‌ಗಳು ಈಜಲಾಗದೆ ರಕ್ತ ಸುರಿಸುತ್ತ ಕಡಲಲ್ಲಿ ಮುಳುಗುತ್ತವೆ; ತಳ ಸೇರುತ್ತವೆ; ಜೀವಂತ ಇರುವಾಗಲೇ ನಿಸ್ಸಹಾಯಕವಾಗುತ್ತವೆ. ಕಡಲ ತಳದ ಇತರ ಬೇಟೆಗಾರರು ಇಂಥ ಶಾರ್ಕ್‌ಗಳನ್ನು ಹರಿದು ತಿಂದು ಮುಗಿಸುತ್ತವೆ.

ಕ್ರೂರ, ವಿಕೃತ ಮನುಷ್ಯರ ಇಂತಹ ಅವಿರತ ಬೇಟೆಯ ಪ್ರಾಣಹಾರಕ ಕಾಟ ಒಂದೆಡೆಯಾದರೆ, ಶಾರ್ಕ್‌ಗಳ ಜನ ಸಂಖ್ಯೆ ಕ್ಷಿಪ್ರವಾಗಿ ಕ್ಷೀಣಿಸಲು ಮತ್ತೂ ಒಂದು ಕಾರಣ ಇದೆ. ಶಾರ್ಕ್‌ಗಳು ಪ್ರೌಢ ಹಂತ ತಲುಪಲು, ಸಂತಾನ ವರ್ಧನೆಯನ್ನಾರಂಭಿಸಲು ಅವುಗಳ ವಯಸ್ಸು ಇಪ್ಪತ್ತು ವರ್ಷ ದಾಟಬೇಕು.

ಮನುಷ್ಯರ ಕೈ ಸೇರದೆ ಹೇಗಾದರೂ ಆ ಹಂತ ತಲುಪಿದರೂ ಶಾರ್ಕ್‌ಗಳ ಸಂತಾನ ವರ್ಧನಾ ವೇಗ ತುಂಬ ಕಡಿಮೆ: ವರ್ಷಕ್ಕೆ ಒಂದೇ ಒಂದರಿಂದ ಗರಿಷ್ಠ 10-12 ಮರಿಗಳು ಅಷ್ಟೆ! ಹಾಗಾಗಿ, ಶಾರ್ಕ್‌ಗಳ ಬೇಟೆ ನಿಲ್ಲುವವರೆಗೂ ಅವುಗಳ ಜನ ಸಂಖ್ಯೆ ಕ್ಷಿಪ್ರವಾಗಿ ಕ್ಷೀಣಿಸುತ್ತ ಅಳಿದೇ ಹೋಗುವುದು ಅನಿವಾರ್ಯ. ಆದ್ದರಿಂದಲೇ ಶಾರ್ಕ್ ಗಳ ಜೀವನದ ಕಥೆಯ ತುಂಬ ಇರುವುದೆಲ್ಲ ಬರೀ ದುರಂತದ್ದೇ ವ್ಯಥೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.