ADVERTISEMENT

ಶಾಲೆ ಬಿಡಬಾರದೆಂದು ಮಾಸ್ತರರ ಹೋರಾಟ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ಶಾಲೆ ಬಿಡಬಾರದೆಂದು ಮಾಸ್ತರರ ಹೋರಾಟ
ಶಾಲೆ ಬಿಡಬಾರದೆಂದು ಮಾಸ್ತರರ ಹೋರಾಟ   

ಸುಮಾರು 50 ವರ್ಷಗಳ ಹಿಂದೆ ನಾನು ಗೋಕಾಕ ತಾಲ್ಲೂಕಿನ ಯಾದವಾಡ ಶಾಲೆಯಲ್ಲಿ 5ನೇ ವರ್ಗದಲ್ಲಿ ಓದುತ್ತಿದ್ದೆ. ಟೀಚರ್  ಬಹಳ ಬಡಿಯುತ್ತಾರೆ ಎನ್ನುವ ಕಾರಣಕ್ಕೆ ಶಾಲೆ ಬಿಟ್ಟುಬಿಟ್ಟೆ. ಆಗ ಹನುಮಂತರಾವ ಚಿತ್ರಗಾರ ಎಂಬುವರು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಕೆಲವು ದಿನಗಳ ನಂತರ ಚಿತ್ರಗಾರ ಮಾಸ್ತರರು ನಮ್ಮ ಮನೆಗೆ ಬಂದು, ನಾನು ಶಾಲೆಗೆ ಗೈರುಹಾಜರಿ ಆಗಿರುವ ಬಗ್ಗೆ ನನ್ನ ತಂದೆಗೆ ಹೇಳಿ ಪುನಾ ಶಾಲೆಗೆ ಬರಲು ತಿಳಿಸಿದರು.

‘ನೀನು ಜಾಣ ಹುಡುಗ’ ಎಂದು ನನ್ನ ಬೆನ್ನು ತಟ್ಟಿ, ‘ಶಾಲೆ ತಪ್ಪಿಸಬೇಡ, ನಿಮ್ಮ ವರ್ಗದ ಗುರುಗಳಿಗೆ ಬಡಿಯಬೇಡಿರಿ ಎಂದು ಹೇಳುವೆ. ನಾಳೆಯಿಂದ ತಪ್ಪದೇ ಶಾಲೆಗೆ ಬರಬೇಕು’ ಎಂದು ಮಾಸ್ತರರು ಹೇಳಿಹೋದರು. ಮತ್ತೆ ಒಂದು ವಾರದ ನಂತರ ಚಿತ್ರಗಾರ ಮಾಸ್ತರರು ನಮ್ಮ ಮನೆಗೆ ಬಂದು ‘ಶಾಲೆಗೆ ಬರಲೇಬೇಕು’ ಎಂದು ಆಗ್ರಹ ಮಾಡಿದರು. ಆಗಲೂ ನಾನು ಶಾಲೆಗೆ ಹೋಗಲಿಲ್ಲ.

ಮಾಸ್ತರರು ನಮ್ಮ ಮನೆಗೆ ಮೂರನೇ ಬಾರಿ ಆಗಮಿಸಿ ನಾನು ಓದು ಮುಂದುವರಿಸುವುದಕ್ಕೆ ಅನುಕೂಲವಾಗುವಂತೆ ಒಂದು ಸರಳ ಪರಿಹಾರ ಸೂಚಿಸಿದರು. ನಾನು ಓದುತ್ತಿದ್ದ ಯಾದವಾಡ ಸ್ಕೂಲ್ ಸಮೀಪದಲ್ಲಿಯೇ ಕೊಪ್ಪದಟ್ಟಿ ಗ್ರಾಮದಲ್ಲಿ ಮತ್ತೊಂದು ಶಾಲೆಯಿದೆ. ಆ ಶಾಲೆಗೆ ಹೋಗಲು ಸೂಚಿಸಿ, ನನ್ನ ಟ್ರಾನ್ಸಫರ್ ಸರ್ಟಿಫಿಕೇಟ್ ಕೊಟ್ಟರು. ನಾನು ಕೊಪ್ಪದಟ್ಟಿ ಶಾಲೆಯಲ್ಲಿ ಓದು ಮುಂದುವರಿಸಿದೆ. ಮುಂದೆ ಯಾದವಾಡ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿ ಗೋಕಾಕ ಜೆ.ಎಸ್.ಎಸ್. ಕಾಲೇಜಿನಲ್ಲಿ ಓದಿ  ಬಿ.ಎಸ್‌ಸಿ ಪದವಿ ಪಡೆದೆ. ಇದರಿಂದಾಗಿ ಕನ್ನಡ ಮತ್ತು ಇಂಗ್ಲಿಷ್ ಪ್ರಮುಖ ಪತ್ರಿಕೆಗಳಲ್ಲಿ ವರದಿಗಾರನಾಗಿ ಮತ್ತು ಕೈಗಾರಿಕೆ ರಂಗದಲ್ಲಿ ವಿವಿಧ ಜವಾಬ್ದಾರಿ ಕೆಲಸಗಳನ್ನು ಮಾಡುವ ಭಾಗ್ಯ ದೊರೆಯಿತು.

ADVERTISEMENT

ನಾನು ಸಾಮಾನ್ಯ ಕುಟುಂಬದ ವಿದ್ಯಾರ್ಥಿಯಾಗಿದ್ದೆ. ನಮ್ಮ ತಂದೆ ಟೇಲರಿಂಗ್ ಕೆಲಸ ಮಾಡುತ್ತಿದ್ದರು. ಚಿತ್ರಗಾರ ಮಾಸ್ತರರು ನನ್ನನ್ನು ನಿರ್ಲಕ್ಷಿಸಿಬಿಡಬಹುದಾಗಿತ್ತು. ನಿವೃತ್ತಿಯ ಅಂಚಿನಲ್ಲಿ ಇದ್ದರು. ಕಷ್ಟದಿಂದಲೇ ನಡೆದುಕೊಂಡು ನಮ್ಮ ಮನೆಯ ಅಂಗಳಕ್ಕೆ ಮೂರು ಬಾರಿ ಬಂದು ‘ನಾನು ಶಾಲೆ ಬಿಡಬಾರದು ಕಲಿಯಲೇಬೇಕು’ ಎಂದು ಒಂದು ರೀತಿಯಲ್ಲಿ ಹೋರಾಟ ಮಾಡಿದ ಮಾಸ್ತರರ ಚಿತ್ರ ನನ್ನ ಮನಸ್ಸಿನಲ್ಲಿ ಸದಾ ಕೃತಜ್ಞತೆಯಿಂದ ಉಳಿದಿದೆ.
–ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.