ADVERTISEMENT

ಶಿಲ್ಪಿ

ಕಥೆ

ಡಾ.ನಾ.ಡಿಸೋಜ
Published 28 ಮಾರ್ಚ್ 2015, 19:30 IST
Last Updated 28 ಮಾರ್ಚ್ 2015, 19:30 IST

ತನ್ನ ಮದುವೆಯ ವಿಷಯ ಬಂದಾಗ ಪ್ರಧಾನವಾಗಿ ಕೇಳಿಬಂದದ್ದು ಹುಡುಗ ಗುಡಿಗಾರರ ಕೇರಿಯ ತುದಿಯಲ್ಲಿ ಒಂದು ಅಂಗಡಿ ಇರಿಸಿಕೊಂಡಿದ್ದಾನೆ ಅನ್ನುವುದು. ಈ ಮಾತು ಕಿವಿಗೆ ಬಿದ್ದಾಗ ಇವಳ ಮನಸ್ಸಿನಲ್ಲಿ ತೇಲಿ ಹೋದದ್ದು ಅಪ್ಪನ ಅಂಗಡಿಯೇ. ಅಪ್ಪನ ಅಂಗಡಿಯ ಎಲ್ಲ ವಿವರಗಳ ನಡುವೆ ಅವಳು ಮೈಮರೆತಳು ಅನ್ನುವುದು ಕೂಡ ಸುಳ್ಳಲ್ಲ.

ಪೇಟೆಯ ನಡುವೆ ಅನ್ನುವ ಹಾಗೆ ಅಪ್ಪನ ಅಂಗಡಿ ಇದ್ದಿತು. ಈ ಅಂಗಡಿಯ  ಮುಂಬದಿಯಲ್ಲಿಯೇ ವಿಗ್ರಹಗಳನ್ನ ಕೆತ್ತಲೆಂದು ಅಪ್ಪ ಇರಿಸಿಕೊಳ್ಳುತ್ತಿದ್ದ ಕೆಲಸದ ಪೆಟ್ಟಿಗೆ. ಅದರ ಮೂರೂ ದಿಕ್ಕಿನಲ್ಲಿ ವಿವಿಧ ಬಗೆಯ, ಸಣ್ಣ ದೊಡ್ಡ ಚೀರ್ಣಗಳು, ಇನ್ನಿತರೇ ಸಾಮಗ್ರಿಗಳು. ಅಲ್ಲಲ್ಲಿ ಮುಗಿದ, ಗಣಪತಿ, ಸರಸ್ವತಿ, ಲಕ್ಷ್ಮಿ, ವಿಗ್ರಹಗಳು. ಹೊಸ ವಿಗ್ರಹ ಕೆತ್ತಲೆಂದು ಸಿದ್ಧಪಡಿಸಿದ ಶ್ರೀಗಂಧದ ಮರದ ತುಂಡುಗಳು, ಕೆಲವುಗಳ ಮೇಲೆ ತೆಳುವಾಗಿ ಬರೆದ ಚಿತ್ರಗಳು, ಅಪ್ಪ ಕುಳಿತುಕೊಳ್ಳುವ ಮಣೆ. ಅದರ ಮೇಲೆ ಹಾಸಿದ ಮೆದು ವಸ್ತ್ರ, ದೂರದಲ್ಲಿ ಒಂದು ನೀರಿನ ಗಿಂಡಿ. ಇನ್ನು ಹಿಂಬದಿಯ ಗೋಡೆಗಳ ಮೇಲೆ ಹಲಗೆ ಜೋಡಿಸಿ ಮಾಡಿದ ಮರದ ಸೆಲ್ಫು. ಇದರಲ್ಲಿ ಮಾರಾಟ ಮಾಡಲೆಂದೇ ಇರಿಸಿದ ಶ್ರೀಗಂಧದ ವಿವಿಧ ಬಗೆಯ ವಿಗ್ರಹಗಳು. ಕೃಷ್ಣ, ಗೀತಾಬೋಧಿನಿ, ರಾಧಾಕೃಷ್ಣ, ಸರಸ್ವತಿ, ಗಣಪತಿ, ಲಕ್ಷ್ಮಿ, ಶ್ರೀಗಂಧದ ಬೀಸಣಿಕೆ, ಕರಂಡಕ, ಪೆನ್ನು ಸ್ಟ್ಯಾಂಡು, ಬೀಟೆ ಮರದ ಆನೆಗಳು, ಬೆಂಡಿನ ಬಾಸಿಂಗ, ಒಂದೆಡೆ ಶ್ರೀಗಂಧದ ಹಾರಗಳು, ಇತ್ಯಾದಿ. ಸದಾ ಕಾಲ ಮೂಗಿಗೆ ಹಿತ ನೀಡುತ್ತಿದ್ದ ಶ್ರೀಗಂಧದ ಪರಿಮಳ, ಈ ಮರದ ಬೀರುವಿನ ಮಗ್ಗುಲಲ್ಲಿ ಅಪ್ಪನಿಗೆ ಅಲ್ಲಲ್ಲಿ ದೊರೆತ ಪ್ರಶಸ್ತಿ ಪತ್ರಗಳು, ಅಪ್ಪ ಕೆಲಸ ಮಾಡುವಾಗ ತೆಗೆದ ಒಂದು ಫೋಟೋ. ಇದೆಲ್ಲವನ್ನ ಅಂಗಡಿ ಅನ್ನುವ ಶಬ್ದದ ಹಿಂದೆ ಇರಿಸಿಕೊಂಡು ತಾನು ರೋಮಾಂಚನಗೊಂಡದ್ದು ನಿಜ.

ಈ ಅಂಗಡಿಯಲ್ಲಿ ತಾನು ತನ್ನ ಬಾಲ್ಯವನ್ನ ಕಳೆದದ್ದನ್ನ ಆಕೆ ಮರೆಯಲಾರಳು. ಇಲ್ಲಿಯೇ ಕೂತು ಚೌತಿ ಸಂದರ್ಭದಲ್ಲಿ ಗೌರಿಗೆ ಬಣ್ಣ ಹಚ್ಚಿದ್ದು, ಗಣೇಶನ ಪೀಠ ಸರಿಪಡಿಸಿದ್ದು, ಇಲ್ಲಿಯೇ ಕುಳಿತು ಶ್ರೀಗಂಧದ ಮಣಿ ಪುಶ್ಪ ಹಾರ ಮಾಡಿದ್ದನ್ನ ಆಕೆ ಮರೆತಾಳು ಹೇಗೆ. ಶಾಲೆಗೆ ಹೋಗುವಾಗೊಮ್ಮೆ ಶಾಲೆಯಿಂದ ಹಿಂತಿರುಗಿ ಮನೆಗೆ ಹೋಗುವಾಗೊಮ್ಮೆ ಅಪ್ಪನ ಅಂಗಡಿಗೆ ಬಂದು ಅರ್ಧ ಗಂಟೆ ಅಲ್ಲಿ ಕುಳಿತು ಅಪ್ಪ ಕೆತ್ತುತ್ತಿದ್ದ ವಿಗ್ರಹಗಳನ್ನ ಒಮ್ಮೆ ನೋಡಿ ‘ಅದು ಏಕೆ ಹಾಗೆ, ಇದು ಏಕೆ ಹೀಗೆ’ ಎಂದು ಕೇಳಿ, ಅಪ್ಪ ಅರೆ ಮುಗಿಸಿ ಇರಿಸಿದ ವಿಗ್ರಹಗಳನ್ನ ಒಮ್ಮೆ ಎತ್ತಿ ನೋಡಿ ಮೆಚ್ಚಿ ತಲೆದೂಗಿ, ‘ಅಪ್ಪಯ್ಯಾ... ಈ ಲಕ್ಷ್ಮಿ ಮೈ ಮೇಲಿರೋವಷ್ಟು ಆಭರಣ ಅಮ್ಮನ ಮೈಮೇಲೆ ಯಾಕಿಲ್ಲ?’ ಎಂದು ಕೇಳಿ ಅಪ್ಪನ ಕೈಲಿ ಬೈಸಿಕೊಂಡು, ಶಾಲೆಯ ದಾರಿ ಇಲ್ಲ ಮನೆಯ ದಾರಿ ಹಿಡಿಯುತ್ತಿದ್ದಳು. ಹೀಗೆ ಅಲ್ಲಿಂದ ಹೊರಡುವಾಗ ಅಪ್ಪಯ್ಯ ಅಂಗಿಯ ಬಗಲಗಿಸೆಗೆ ಕೈ ಹಾಕಿ ಎಂಟಾಣೆ ಕೊಟ್ಟು, ‘ತಕಾ, ಏನಾರ ತಿಂದು ಹೋಗು’ ಅನ್ನುತ್ತಿದ್ದ. ಹೀಗಾಗಿ ಗುಡಿಗಾರರ ಕೇರಿಯ ಬಳಿ, ಪೇಟೆಗೆ ತಗುಲಿಕೊಂಡಂತೆ ಇದ್ದ ಅಪ್ಪನ ಅಂಗಡಿ ಮನಸ್ಸಿನಲ್ಲಿ ಮುದನೀಡಿತ್ತು. ಅಪ್ಪ ಇತ್ತೀಚೆಗೆ ತೀರಿಕೊಂಡ ನಂತರ ಈ ಅಂಗಡಿಯ ಚಿತ್ರ ದೂರವಾಗಿದ್ದೂ ಹೌದು. ಆದರೆ ಮದುವೆ ಆಗಿ ಗಂಡನ ಮನೆಗೆ ಬರುವ ತನಕ ಗಂಡ ಸದಾಶಿವನ ಅಂಗಡಿಯ ಕಲ್ಪನೆ ತನ್ನ ಮನಸ್ಸಿಗೆ ಬರಲೇ ಇಲ್ಲ. ಅದು ಅಪ್ಪನ ಅಂಗಡಿಯ ಪ್ರತಿರೂಪವೇ ಅಂದುಕೊಂಡಿದ್ದೆ. ಗಂಡನ ಮನೆಗೆ ಬಂದ ನಾಲ್ಕನೇ ದಿನ ಇರಬೇಕು, ಅದಾರೋ ತನ್ನ ಮನೆ ಮುಂದೆ ನಿಂತು ಎದಿರು ಮನೆಯವರನ್ನ ಕೇಳುತ್ತಿದ್ದರು–

‘ಪೆಟ್ಟಿಗೆ ಅಂಗಡಿ ಸದಾಶಿವನ ಮನೆ ಇದೇ ಏನ್ರಿ?’
ಅವರು ಹೌದು ಎಂದರು. ಮನೆ ಕೇಳಿಕೊಂಡು ಬಂದಾತ ತನ್ನ ಮನೆಯ ಬಾಗಿಲು ತಟ್ಟಿದ.

‘ಸದಾಶಿವಪ್ಪ ಈ ಬಾಳೆ ಗೊನಿ ಮನೇಲಿ ಇಡಲಿಕ್ಕೆ ಹೇಳಿದಾನೆ’ ಎಂದು ತನ್ನ ಸೈಕಲ್ಲಿನ ಮೇಲಿನಿಂದ ಒಂದು ಬಾಳೇಕಾಯಿ ಗೊನೆಯನ್ನ ಕೆಳಗೆ ಇಳಿಸಿದ. ಗೊನೆ ತಂದು ಅಂಗಳದಲ್ಲಿ ಇರಿಸಿ ಇವಳು ಯೋಚಿಸುತ್ತ ನಿಂತಳು. ಗಂಡನದು ಪೆಟ್ಟಿಗೆ ಅಂಗಡಿಯೇ? ಅಲ್ಲಿ ಬಾಳೇಹಣ್ಣು ಮಾರುತ್ತಾರೆಯೇ? ಎಲ್ಲ ಗುಡಿಗಾರರ ಹಾಗೆ ಗಂಡ ಶ್ರೀಗಂಧದಲ್ಲಿ ಕೆತ್ತಿದ ಕಲಾಕೃತಿಗಳನ್ನ ಇರಿಸಿಲ್ಲವೆ? ಈ ಪ್ರಶ್ನೆಗಳು ಅವಳನ್ನ ಆಗಿನಿಂದಲೇ ಕಾಡತೊಡಗಿದವು. ಈ ಪ್ರಶ್ನೆಗೆ ಅವಳಿಗೆ ಉತ್ತರ ಸಿಕ್ಕಿದ್ದು ಮಾತ್ರ ತಡವಾಗಿ.

ಕೇರಿಯವರೆಲ್ಲ ಒಂದು ದಿನ ದೇವಸ್ಥಾನಕ್ಕೆಂದು ಹೊರಟಾಗ– ‘ಬನ್ನಿ ಸುನಂದ, ನಮ್ಮೂರ ದೇವಸ್ಥಾನ ನೋಡಿಕೊಂಡು ಬರಬಹುದು’ ಎಂದರು. ಈಕೆಗೂ ಅಸೆಯಾಯಿತು. ಮದುವೆಯಾಗಿ ಈ ಊರಿಗೆ ಬಂದ ನಂತರ ಊರನ್ನೂ ನೋಡಿಲ್ಲ. ದೇವಸ್ಥಾನಕ್ಕೂ ಹೋಗಿಲ್ಲ. ಹೋಗಿ ದೇವರಿಗೊಂದು ಹಣ್ಣುಕಾಯಿ ಮಾಡಿಸಿಕೊಂಡು ಬಂದರಾಯಿತು ಎಂದು ಅವಳೂ ಹೊರಟಳು. ದೇವಸ್ಥಾನಕ್ಕೆ ಹೋಗುವುದಲ್ಲವೇ? ಹೊಸ ಸೀರೆ ಉಟ್ಟಳು, ಆಸಕ್ತಿಯಿಂದ ಅಲಂಕರಿಸಿಕೊಂಡಳು. ಮಹಿಳೆಯರ ಜೊತೆಯಲ್ಲಿ ಕೇರಿಯಿಂದ ಹೊರಟ ಅವಳು ಇನ್ನೇನು ತಮ್ಮ ಕೇರಿ ದಾಟುವಾಗ ಜೊತೆಗಿದ್ದ ಸರೋಜ– ‘ಓ ಸುನಂದಕ್ಕನ ಗಂಡ ಅಂಗಡಿ ಹೊರಗೇ ಇದಾರೆ... ನೋಡಿ’ ಎಂದಾಗ ಅದೊಂದು ಬಗೆಯ ನಾಚಿಕೆ ಎನಿಸಿ, ಆಕೆ ರಸ್ತೆಯ ಮಗ್ಗುಲ ಅಂಗಡಿ ನೋಡಿದಳು. ಅದು ಯಾವುದೋ ಹೋಟೆಲಿನ ಮಗ್ಗುಲಲ್ಲಿ ಇರಿಸಿದ ಒಂದು ಪೆಟ್ಟಿಗೆ ಅಂಗಡಿ. ಹೊರಗೆ ತೂಗುಬಿದ್ದ ಬಾಳೇಗೊನೆಗಳು, ಗುಟ್ಕಾ ಪ್ಯಾಕೆಟ್‌ಗಳು, ಸಾಲು ಸಾಲಾಗಿ ಜೋಡಿಸಿದ ಚಾಕ್ಲೆಟ್ ಬಾಟಲಿಗಳು, ಮೂಲೆಯಲ್ಲಿ ವರಗಿ ಕುಳಿತ ಗಂಡ.

ನಾಚಿ ಕೆಂಪೇರುತ್ತಿದ್ದ ಸುನಂದ ಥಟ್ಟನೆ ಇಳಿದುಹೋದಳು. ಅವಳಲ್ಲಿ ಇದ್ದ ಉತ್ಸಾಹ ಉಡುಗಿಹೋಯಿತು. ತಲೆ ಎತ್ತಿ ಗಂಡನನ್ನ ನೋಡುತ್ತಿದ್ದ ಅವಳು ತಲೆ ಬೇರೆಡೆಗೆ ತಿರುಗಿಸಿದಳು. ದೇವಾಲಯಕ್ಕೆಹೋಗುವ ಹುರುಪು ಕೂಡ ಅವಳಲ್ಲಿ ಮಾಯವಾಯಿತು. ಅದೊಂದು ಯಾಂತ್ರಿಕ ಕ್ರಿಯೆ ಎಂಬಂತೆ ಆಕೆ ಉಳಿದ ಮಹಿಳೆಯರ ಜೊತೆ ಹೆಜ್ಜೆ ಹಾಕಿದಳು.

ರಾತ್ರಿ ಊಟ ಮುಗಿಸಿ ಗಂಡನ ಮಗ್ಗುಲಲ್ಲಿ ಪವಡಿಸುವಾಗ ಅವಳು ಇಳಿದನಿಯಲ್ಲಿ ಕೇಳಿದಳು– ‘ನಮ್ಮದು ಬೀಡಿ ಸಿಗರೇಟು ಅಂಗಡಿಯಾ?’

ಏಕೋ ಮಾತಿನಲ್ಲಿ ನಿರಾಶೆ, ನಿರುತ್ಸಾಹವಿತ್ತು. ಇದು ಅವಳ ಗಂಡ ಸದಾಶಿವನ ಮನಸ್ಸಿಗೂ ತಾಗಿತು.
‘ಹೌದು, ಹಾಗೆ ಯಾಕೆ ಕೇಳ್ತೀಯ?’

‘ನನಗೆ ಗೊತ್ತಿರಲಿಲ್ಲ... ನೀವೂ ಹೇಳಲಿಲ್ಲ... ನಾನು ನಮ್ಮದು ಶ್ರೀಗಂಧದ ವಿಗ್ರಹ, ಹಾರ ಮಾರುವ ಅಂಗಡಿ ಇರಬೇಕು ಅಂದುಕೊಂಡಿದ್ದೆ... ನೀವು ಅಲ್ಲಿ ಕೂತು ವಿಗ್ರಹ ಮಾಡತಿರತೀರಾ ಅಂದುಕೊಂಡಿದ್ದೆ. ಅವಳ ಬೇಸರ–ನೋವು ಮಾತುಗಳಲ್ಲಿ ತುಂಬಿತ್ತು.

‘ಪ್ರಾರಂಭದಲ್ಲಿ ನಾನು ಅದು ಇದು ಕೆತ್ತಿದ್ದು ಇದೆ. ನಂತರ ನಮ್ಮಪ್ಪ ನನಗೆ ಏನೂ ಕಲಿಸಲೇ ಇಲ್ಲ... ಶ್ರೀಗಂಧದ ಕಲೆಗೆ ಅಂತಹಾ ಬೆಲೆ ಇಲ್ಲ ಅನ್ನುವ ಕಾರಣಕ್ಕೆ ಅಪ್ಪ ನನ್ನನ್ನ ಈ ಕಲೆಯಿಂದ ದೂರ ಇರಿಸಿದ. ನಾನು ಹ್ಯಾಗೆ ಶ್ರೀಗಂಧದ ಕಲಾವಿದ ಆಗೋದು... ಹೀಗೆ ಅಂತಾನೆ ಅಪ್ಪ ಈ ಅಂಗಡಿ ಹಾಕಿ ಕೊಟ್ಟ... ಇದು ಸಾಕು ನಿನ್ನ ಜೀವನಕ್ಕೆ ಅಂದ’. ಬಹಳ ನಿಸೂರಾಗಿ ನುಡಿದ ಸದಾಶಿವ. ಆದರೆ, ಹೆಂಡತಿಗಾದ ನಿರಾಶೆಯ ಬಿಸಿ ಅವನಿಗೆ ತಗುಲದೇ ಇರಲಿಲ್ಲ. ಹೀಗೆಂದೇ ಆತ ಆಕೆಯನ್ನ ತನ್ನ ಕಡೆ ತಿರುಗಿಸಿಕೊಂಡು–

‘ಗುಡಿಗಾರರು ಕೆತ್ತನೆ ಕೆಲಸ ಮಾಡಲೇಬೇಕು ಅನ್ನೋದು ಹಿಂದಾಯ್ತು... ಈಗ ನಮ್ಮವರು ಪೋಲೀಸರು, ಗುಮಾಸ್ತರು, ಮೇಷ್ಟ್ರು ಅಂತೆಲ್ಲ ಕೆಲಸ ಮಾಡತಿದಾರೆ. ನಮಗೂ ಏನೂ ಕಡಿಮೆ ಇಲ್ಲ. ಅಂಗಡಿಯಿಂದ ದಿನದ ಖರ್ಚಿಗೆ ಕಾಸು ಬರುತ್ತೆ...’

ಸುನಂದ ಹಾಂ ಹೂಂ ಅನ್ನಲಿಲ್ಲ. ಅವಳ ಮೌನ ಎಲ್ಲವನ್ನ ಬಿಡಿಸಿ ಹೇಳಿತು ಸದಾಶಿವನಿಗೆ. ಆತ ಹೆಂಡತಿಯನ್ನ ತಬ್ಬಿಕೊಂಡು ಅವಳ ನಿರಾಶೆಗೆ ಸಾಂತ್ವನ ಹೇಳುವ ಯತ್ನ ಮಾಡಿದ. ಆಕೆ ಕೂಡ ಇವನ ತೋಳುಗಳಲ್ಲಿ ಸೇರಿಕೊಳ್ಳುತ್ತ ತನ್ನನ್ನ ಸಂತೈಸಿಕೊಂಡಳು.

ಗಂಡ ಹೇಳಿದ ಹಾಗೆ ಅವಳಿಗೆ ಏನೂ ಕಡಿಮೆ ಇರಲಿಲ್ಲ. ಊರಿನ ಗುಡಿಗಾರರ ಹಾಗೆ ಅವಳ ಮನೆ ತಕ್ಕಮಟ್ಟಿಗಿತ್ತು. ಗಂಡ ಹೆಂಡತಿ ನೆಮ್ಮದಿಯಿಂದಲೇ ಇದ್ದರು. ಗಂಡ ಪೆಟ್ಟಿಗೆ ಅಂಗಡಿ ಇರಿಸಿಕೊಂಡಿದ್ದಾನೆ ಅನ್ನುವ ಒಂದು ವ್ಯಥೆ ಅವಳಲ್ಲಿ ಇದೀಗ ಕಾಣಿಸಿಕೊಂಡದ್ದನ್ನ ಬಿಟ್ಟರೆ ಬೇರೆ ಚಿಂತೆ ಇರಲಿಲ್ಲ. ಆದರೆ ಉಳಿದ ಗುಡಿಗಾರ ಮನೆತನದವರು ಕುಶಲ ಕರ್ಮಿಗಳು ಅನ್ನುವ ಹೆಸರಿನಲ್ಲಿ ಶ್ರೀಗಂಧದ ಕೆಲಸ ಮಾಡುತ್ತಾರೆ. ಗುಡಿಗಾರರ ವಿಷಯ ಬಂದಾಗ ಮೈಸೂರು ಅರಮನೆಯ ಅಂಬಾಭವಾನಿ ತೊಟ್ಟಿಯ ವಿಷಯ ಬರುತ್ತದೆ. ಬೆಂಗಳೂರಿನ ವಿಧಾನಸೌಧದ ವಿಷಯ ಬರುತ್ತದೆ. ಜೋಗ ನೋಡಲು ಯಾರೋ ವಿದೇಶೀಯರು ಬರುತ್ತಾರೆ ಅನ್ನುವಾಗ, ಯಾರೋ ರಾಜ್ಯಪಾಲರು ಬರುತ್ತಾರೆ ಎಂದಾಗ, ಮಂತ್ರಿಗಳು ಬರಲಿದ್ದಾರೆ ಅಂದಾಗ ಸರಕಾರಿ ವಾಹನ ಗುಡಿಗಾರರ ಕೇರಿಗೆ ಧಾವಿಸುತ್ತದೆ.

‘ಒಂದು ಶ್ರೀಕೃಷ್ಣ ಗೀತಾಬೋಧಿನಿ ಬೇಕು’.
‘ಒಂದು ರಾಧಾಕೃಷ್ಣ ಬೇಕು’.

‘ಒಂದು ಶಿವತಾಂಡವ... ಒಂದು ಗಣೇಶ... ಒಂದು ಸರಸ್ವತಿ... ಬೇಗನೆ ಬೇಕು’.
ಕೆಲಸಕ್ಕೆ ಆದೇಶ ಕೊಡುವಾಗ ಮರ್ಯಾದೆಯಿಂದ ಹಣ ನೀಡುತ್ತಾರೆ. ಮಾಡಿದ ಕೃತಿಯನ್ನ ಕೊಂಡೊಯ್ಯುವಾಗ ಎಲೆ ಅಡಿಕೆ ಇರಿಸಿ ಹಣ ಕೊಡುತ್ತಾರೆ. ಕೈ ಮುಗಿಯುತ್ತಾರೆ. ಸಭೆ ಸಮಾರಂಭ ನಡೆದಾಗ ಕರೆದು ಗೌರವಿಸುತ್ತಾರೆ. ಗುಡಿಗಾರ ಅನ್ನುವ ಶಬ್ದವಿಲ್ಲದೆ ಯಾರೂ ಮಾತನಾಡುವುದೇ ಇಲ್ಲ. ಆದರೆ ತನ್ನ ಗಂಡ ಸದಾಶಿವನಿಗೆ ಈ ಗೌರವ ದೊರೆಯುತ್ತದೆಯೇ? ಈಗಲೇ ಅವನನ್ನ ಜನ ‘ಪೆಟ್ಟಿಗೆ ಅಂಗಡಿ ಸದಾಶಿವ’ ಎಂದು ಕರೆಯುತ್ತಾರೆ. ಸುನಂದ ಮುಖ ಮುಚ್ಚಿಕೊಳ್ಳುತ್ತಾಳೆ. ಗಂಡ ಏನೇ ಹೇಳಲಿ ಅವಳಿಗೆ ಸಮಾಧಾನ ಆಗುವುದಿಲ್ಲ.

ಇದೇ ಒಂದು ವ್ಯಥೆಯಾಯಿತು ಆಕೆಗೆ. ತನ್ನ ಸಮುದಾಯದ ಇತರೇ ಹೆಂಗಸರ ಎದಿರು ತನಗೆ ಅವಮಾನವಾಯಿತು ಎಂದು ನೊಂದಳು. ನಾಡೆಲ್ಲ ಗೌರವಿಸುವ ಗುಡಿಗಾರಿಕೆ ಅನ್ನುವ ಕೆಲಸದಿಂದ ತನ್ನ ಮನೆ ದೂರ ಉಳಿಯಿತೇ ಎಂದು ಬೇಸರ ಪಟ್ಟುಕೊಂಡಳು. ಈ ಅವಮಾನದಿಂದ ತಪ್ಪಿಸಿಕೊಳ್ಳಬೇಕೆಂದೇ ಅವಳು ಒಂದು ದಿನ ಗಂಡನನ್ನೇ ಕೇಳಿದಳು– ‘ನನಗೆ ಮನೇಲಿ ಕಾಲ ಕಳೆಯೋದು ಕಷ್ಟ. ಸೊಸೈಟಿಯಿಂದ ಗಂಧ ತಂದು ಹಾರ ಕಟ್ಟಲಿಕ್ಕೆ ಶುರು ಮಾಡಲಾ?’.

ಅವನು ಮೊದಲು ‘ಅದೊಂದು ಕೆಲಸ ಯಾಕೆ’ ಎಂದೇ ಮುಖ ಮುರಿದ. ಆದರೆ ಇವಳ ಒತ್ತಾಯ ಅತಿಯಾದಾಗ– ‘ಮಾಡತೀನಿ ಅಂತೀಯಲ್ಲ, ಮಾಡು’ ಎಂದು ತನ್ನ ಅನುಮತಿ ನೀಡಿದ.      ಅವಳು ಸಂತಸದಿಂದಲೇ ಮನೆಯಲ್ಲಿಯೇ ಕುಳಿತು ಗಂಧದ ವಿವಿಧ ಬಗೆಯ ಹಾರಗಳನ್ನ ಮಾಡತೊಡಗಿದಳು. ಅಪ್ಪನ ಮನೆಯಲ್ಲಿ ಇದ್ದಾಗ ಸದಾ ತಾನು ಶ್ರೀಗಂಧದ ಪರಿಮಳವನ್ನೇ ಆಸ್ವಾದಿಸುತ್ತಿದ್ದೆ.  ಗಂಡನ ಮನೆಗೆ ಬಂದಮೇಲೆ ಈ ಪರಿಮಳ ದೂರವಾಗಿತ್ತು. ಆದರೆ ಯಾವಾಗ ಎಲ್ಲ ಗುಡಿಗಾರ ಹೆಂಗಸರ ಹಾಗೆ ತಾನು ಗಂಧದ ಹಾರ ಮಾಡತೊಡಗಿದೆನೋ ಮತ್ತೆ ಆ ಪರಿಮಳ ಕೈ ಹಿಡಿಯಿತು ಎಂದಾಕೆ ಹಿಗ್ಗಿದಳು. ಆದರೂ ಗಂಡನ ಅಂಗಡಿಯ ಬಗ್ಗೆ ಅವಳಲ್ಲಿ ಅಂತಹಾ ಒಳ್ಳೆಯ ಭಾವನೆ ಇರಲಿಲ್ಲ. ಅದು ಒಳ್ಳೆಯ ಕೆಲಸವೇ. ಆದರೆ ಅದು ತಮಗೆ ಹೇಳಿದ್ದಲ್ಲ ಅನ್ನುವುದೇ ಅವಳ ವಾದ. ಚೀರ್ಣ– ಚಾಣ ಹಿಡಿುವ ಕೈಯಲ್ಲಿ ಬೀಡಿ ಸಿಗರೇಟು ಹಿಡಿಯುವುದೇ ಎಂದವಳು ಗಂಡನಿಗೆ ಕೇಳಿಯೂ ಬಿಟ್ಟಳು.

‘ಈ ಪೆಟ್ಟಿಗೆ ಅಂಗಡಿ ಇಡಲಿಕ್ಕೆ ನಿಮಗೆ ಮನಸ್ಸಾದರೂ ಹೇಗೆ ಬಂತು?’
‘ನಮ್ಮ ಬೀದಿ ತುದೀಲಿದ್ದ ಕೃಷ್ಣಾ ಕೆಫೆ ಪಕ್ಕದ ಪೆಟ್ಟಿಗೆ ಅಂಗಡೀನ ಯಾರೋ ಮಾರತೀನಿ ಅಂದರಂತೆ. ಅಪ್ಪ ಅದನ್ನ ಕೊಂಡುಕೊಂಡು ನನ್ನನ್ನ ಅಲ್ಲಿ ಕೂರಿಸಿದ. ಇದರಲ್ಲಿ ನನ್ನ ತಪ್ಪೇನಿದೆ?’ ಎಂದು ಸದಾಶಿವ ತನ್ನ ಕಾರ್ಯವನ್ನ ಸಮರ್ಥಿಸಿಕೊಂಡ. ಆದರೆ ಇದರ ಹಿಂದೆಯೇ ಆತ ತಾನು ಕೂಡ ಶ್ರೀಗಂಧದ ಕೆತ್ತನೆ ಕೆಲಸ ಮಾಡುತ್ತಿದ್ದುದನ್ನ ಒಪ್ಪಿಕೊಂಡ.

‘ಎಲ್ಲ ಗುಡಿಗಾರರ ಹಾಗೆ ಅಪ್ಪ ಕೂಡ ನನ್ನನ್ನ ಪಕ್ಕದಲ್ಲಿ ಕೂರಿಸಿಕೊಂಡು ಚಿತ್ರ ಬರೆಯೋದನ್ನ, ಸಣ್ಣ ಸಣ್ಣ ಫಲಕಗಳ ಮೇಲೆ ಕೆತ್ತೋದನ್ನ, ಚೀರ್ಣ ಹಿಡಿಯೋದನ್ನ ಹೇಳಿ ಕೊಡತಿದ್ದ... ನಾನೂ ಕೂಡ ಆಸಕ್ತಿಯಿಂದ ಅದು ಇದು ಕೆತ್ತುತ್ತಿದ್ದೆ. ನನಗೆ ವಿಗ್ರಹ ಮಾಡುವುದರಲ್ಲಿ, ಕೆತ್ತನೆ ಕೆಲಸದಲ್ಲಿ ತುಂಬಾ ಆಸಕ್ತಿ ಇತ್ತು. ಆದರೆ ಅಪ್ಪನಿಗೆ ಅದು ಯಾಕೋ ಮಗ ಗುಡಿಗಾರ ಆಗೋದು ಬೇಕಿರಲಿಲ್ಲ. ಹೀಗಾಗಿ ಈ ಅಂಗಡಿ ಕುತ್ತಿಗೆಗೆ ಬಿದ್ದ ಮೇಲೆ ನಾನು ಚೀರ್ಣ ಹಿಡಿಯೋದನ್ನ ಬಿಟ್ಟೆ’ ಎಂದು ತನ್ನ ಬಾಲ್ಯದ ದಿನಗಳನ್ನ ಹೆಂಡತಿಯ ಎದಿರು ತೋಡಿಕೊಂಡ.

ಈ ಮಾತನ್ನ ಕೇಳಿದಾಗ ಗಂಡನ ಮೇಲಿದ್ದ ಅವಳ ಅಭಿಪ್ರಾಯ ಬದಲಾಯಿತು. ಗಂಡ ಉದ್ದೇಶಪೂರ್ವಕವಾಗಿ ಗುಡಿಗಾರಿಕೆಯನ್ನ ಬಿಟ್ಟವನಲ್ಲ ಅನ್ನುವುದು ಖಚಿತವಾಗಿ ಆಕೆ ಆತನನ್ನ ನೋಡುವ ತನ್ನ ದೃಷ್ಟಿಯನ್ನ ಬದಲಾಯಿಸಿಕೊಂಡಳು. ಗುಡಿಗಾರಿಕೆಯ ಬಗ್ಗೆ ಗಂಡನಿಗೆ ಆಸಕ್ತಿ ಇತ್ತು ಅನ್ನುವ ಮಾತನ್ನ ಅವನ ಬಾಯಿಂದಲೇ ಕೇಳಿದಾಗ ಅವಳು ರೋಮಾಂಚನಗೊಂಡಳು.
ಗಂಡ ನಿತ್ಯ ತನ್ನ ಪೆಟ್ಟಿಗೆ ಅಂಗಡಿಗೆ ಹೋಗಿ ಬರುತ್ತಿದ್ದ. ಈಕೆ ಮನೆಯಲ್ಲಿಯೇ ಕುಳಿತು ಗಂಧದ ಹಾರ ಮಾಡುತ್ತಿದ್ದಳು. ಮಾಡಿದ ಹಾರಗಳನ್ನ ಸೊಸೈಟಿಗೆ ಕೊಂಡೊಯ್ದು ಕೊಟ್ಟು ಬರುತ್ತಿದ್ದಳು. ಇದರಿಂದಾಗಿ ಅವಳಿಗೆ ಸಾಕಷ್ಟು ಹಣ ಕೂಡ ಬರುತ್ತಲಿತ್ತು. ಒಂದು ದಿನ ಅವಳು ಮನೆಯ ಮಹಡಿಯನ್ನ ಏರಿ ಅಲ್ಲಿ ರಾಶಿ ಬಿದ್ದ ವಸ್ತುಗಳನ್ನ ಕೆದಕಿ ನೋಡತೊಡಗಿದಳು. ಬಹಳ ವರ್ಷಗಳಿಂದ ಅಲ್ಲಿ ಬೇಡವಾದುದೆಲ್ಲ ರಾಶಿ ಬಿದ್ದಿದ್ದರಿಂದ ರಾತ್ರಿಯೆಲ್ಲ ಇಲಿಗಳ ಕಾಟ ಅತಿಯಾಗಿತ್ತು. ಅವುಗಳ ಓಡಾಟದಿಂದಾಗಿ ನಿದ್ದೆ ಕೂಡ ಬರುತ್ತಿರಲಿಲ್ಲ. ಗಂಡ ಸದಾಶಿವ ‘ಅಲ್ಲಿ ಅದೇನು ಇದೆಯೋ ನೋಡು’ ಎಂದಿದ್ದ.

ಒಂದು ದಿನ ಬಿಡುವು ಮಾಡಿಕೊಂಡು ಸುನಂದ ಮಹಡಿ ಏರಿದಳು. ಒಂದು ಚಾಪೆಯನ್ನೋ ಇನ್ನೇನನ್ನೋ ಅದರ ಮೇಲೆ ಹೊದೆಸಿದ್ದರು. ಬಹಳ ದಿನಗಳಿಂದ ಮುಚ್ಚಿ ಇರಿಸಿದ್ದರಿಂದ ಧೂಳು, ಬಲೆ, ವಾಸನೆ ಅಲ್ಲಿ ಸಾಮ್ರಾಜ್ಯ ಸ್ಥಾಪಿಸಿತ್ತು. ನಿಧಾನವಾಗಿ ಅಲ್ಲಿಯದೆಲ್ಲವನ್ನ ತೆಗೆದು ಬದಿಗೆ ಇರಿಸಿದಾಗ ಅವಳ ಕೈಗೆ ಸಿಕ್ಕ ವಸ್ತುಗಳೆಂದರೆ ಅರೆಬರೆಯಾಗಿ ಕೆತ್ತಿದ ಕೆಲ ಶ್ರೀಗಂಧದ ವಿಗ್ರಹಗಳು. ಬಹಳ ದಿನ ಬೆಳಕು ಗಾಳಿ ಇಲ್ಲದ್ದರಿಂದ ಈ ವಸ್ತುಗಳು ಕರಿಗಟ್ಟಿ ಹೋಗಿದ್ದವು. ಆದರೆ ಅವುಗಳ ಕಲಾತ್ಮಕತೆ ಕಡಿಮೆ ಆಗಿರಲಿಲ್ಲ. ಅವೆಲ್ಲವನ್ನ ಸುನಂದ ಕೆಳಗೆ ತಂದು ಇರಿಸಿದಳು. ಅವಳ ದೃಷ್ಟಿಯಲ್ಲಿ ಅವೆಲ್ಲ ಉತ್ತಮ ಕಲಾಕೃತಿಗಳೇ. ಮಹಿಷಾಸುರ ಮರ್ದಿನಿ, ಕಾಳಿಂಗ ಮರ್ದನ ಕೃಷ್ಣ, ವೀರಭದ್ರ, ಗೋಪಾಲಕೃಷ್ಣ, ಬಾಲಗೋಪಾಲ– ಅಸ್ಪಷ್ಟವಾಗಿ ಆಕಾರ ಪಡೆಯುತ್ತಿದ್ದ ಕಲಾಕೃತಿಗಳು. ಸುನಂದ ತನ್ನ ತಂದೆ ಕೆತ್ತುವಾಗ ಇಂತಹ ವಿಗ್ರಹಗಳನ್ನು ತಯಾರಿಸುವುದನ್ನು ಕಂಡಿದ್ದಳು. ಇವುಗಳ ಪರಿಚಯ ಅವಳಿಗೂ ಇತ್ತು. ಆದರೆ ಇಲ್ಲಿಯ ವಿಗ್ರಹಗಳ ದೋಷ ಅಂದರೆ ಇವು ಪೂರ್ಣವಾಗಿ ಆಕಾರ ತಳೆದಿರಲಿಲ್ಲ.
ಒರಟೊರಟಾಗಿ, ಅರೆಬರೆಯಾಗಿ ದೇಹದ ಭಂಗಿ ಪೂರ್ಣವಾಗದೆ, ತೊಟ್ಟ ಆಭರಣಗಳು ಸ್ಪಷ್ಟವಾಗದೆ ಹಿಂಬದಿಯ ನೋಟ, ನಿಂತ ಪೀಠ ಎಲ್ಲವೂ ಅಪೂರ್ಣವಾಗಿ ವಿಗ್ರಹಗಳು ಒರಟೊರಟಾಗಿ ಕಾಣುತ್ತಿದ್ದವು.

ಸುನಂದ ಅವುಗಳನ್ನ ಒರೆಸಿ ಮೇಜಿನ ಮೇಲೆ ಜೋಡಿಸಿದಳು. ತನ್ನ ಮಾವ ಗುಡಿಗಾರ ಗಂಗಾಧರಪ್ಪ ಉತ್ತಮ ಕಲಾವಿದರಾಗಿದ್ದರೆಂಬುದು ಅವಳಿಗೆ ತಿಳಿದಿತ್ತು. ಅವರು ಮಾಡಿದ ಕಲಾಕೃತಿಗಳೇ ಇವು ಅನ್ನುವುದರಲ್ಲಿ ಸಂದೇಹವಿಲ್ಲ. ಗುಡಿಗಾರರು ಒಂದು ಬಾರಿ ಒಂದೇ ಕಲಾ ಕೃತಿಯನ್ನ ಮಾಡುವುದಿಲ್ಲ. ಒಟ್ಟಿಗೇನೆ ಹಲವು ಕೃತಿಗಳನ್ನ ಕೆತ್ತಲು ಇರಿಸಿಕೊಂಡು ಒಂದರ ಮೈಮಾಟ, ಇನ್ನೊಂದರ ನಿಲುವು, ಮತ್ತೊಂದರ ಮುಖ ಭಾವ, ಹಿನ್ನೆಲೆ, ಆಭರಣ, ಹೀಗೆ ಕೆತ್ತುತ್ತಾ ಹೋಗುತ್ತಾರೆ. ಗಂಗಾಧರಪ್ಪ ಕೂಡ ಹೀಗೆಯೇ ಕೆಲಸವನ್ನ ಮಾಡುತ್ತಿದ್ದವರು, ಸಾಯುವ ಸಮಯದಲ್ಲಿ ಈ ಎಲ್ಲ ಕೃತಿಗಳ ರಚನೆಯಲ್ಲಿ ತೊಡಗಿಕೊಂಡಿದ್ದಿರಬಹುದು, ಅವರ ಮರಣಾನಂತರ ಮಾತ್ರ ಇವು ಹೀಗೆ ಮೂಲೆಗುಂಪಾಗಿವೆ ಎಂದು ಸುನಂದ ತಿಳಿದಳು. ಅವಳಿಗೆ ತುಂಬಾ ಸಂಕಟವಾಯಿತು ಕೂಡ, ಆಕೆ ಗಂಡನ ದಾರಿ ಕಾದಳು.

ಸದಾಶಿವ ಮನೆಗೆ ಬಂದವನೇ ಮೊದಲು ಇವುಗಳನ್ನ ನೋಡಿದ. ‘ಸುನಂದ ಇದೆಲ್ಲ ಎಲ್ಲಿತ್ತು?’ ಎಂದು ಕೇಳಿದ. ‘ಅಪ್ಪ ತೀರಿಕೊಂಡ ನಂತರ ನಾನೇ ಇದನ್ನ ತೆಗೆದುಕೊಂಡು ಹೋಗಿ ಮೆತ್ತಿನ ಮೇಲೆ ಹಾಕಿದ್ದೆ’ ಎಂದು ಪಶ್ಚಾತ್ತಾಪ ಪಟ್ಟ.

‘ಪೆಟ್ಟಿಗೆ ಅಂಗಡಿ ಗಲಾಟೇಲಿ ನಾನು ಇದನ್ನೆಲ್ಲ ಮರೆತೇ ಬಿಟ್ಟೆ ನೋಡು’ ಎಂದು ನೊಂದು ನುಡಿದ.
ಸುನಂದ ಒಂದೊಂದನ್ನೇ ಅವನಿಗೆ ತೋರಿಸಿದಳು.

‘ಈ ಕೃಷ್ಣ ನೋಡಿ... ಕದಂಬರ ಕಾಲದ್ದು. ಇದು ಹೊಯ್ಸಳ ಶೈಲಿ, ಇದು ವಿಜಯ ನಗರ...’ ಎಂದೆಲ್ಲ ಅವಳು ಹೇಳುವಾಗ ಸದಾಶಿವ ಬೆರಗಾದ. ಅವನಿಗೆ ಶೈಲಿ, ಕೃತಿ, ಇತ್ಯಾದಿಗಳ ಬಗ್ಗೆ ಏನೂ ತಿಳಿದಿರಲಿಲ್ಲ. ಆದರೆ ತನ್ನ ಮನೆಯಲ್ಲಿ ತಂದೆಯ ಮಗ್ಗುಲಲ್ಲಿ ಕುಳಿತ ಸುನಂದ ಎಲ್ಲ ತಿಳಿದಿದ್ದಳು. ತನ್ನ ಮಾವನ ಕಲಾವಂತಿಕೆಯನ್ನ ಕೂಡ ಆಕೆ ಈಗ ಪ್ರಶಂಸೆ ಮಾಡಿದ್ದು ಸದಾಶಿವನಿಗೆ ಸಂತಸ ತಂದಿತು.

‘ನೋಡಿ ಮಾವನವರು ಒಂದು ದೊಡ್ಡ ಆಸ್ತೀನ ಬಿಟ್ಟು ಹೋಗಿದಾರೆ... ಇವುಗಳನ್ನ ಮತ್ತೆ ಕೆತ್ತಿ ಪೂರ್ಣಗೊಳಿಸಿದರೆ ಈ ವಿಗ್ರಹಗಳು ಸಾವಿರಾರು ರುಪಾಯಿಗೆ ಬಿಕರಿ ಆಗತಾವೆ... ಈ ಕೆಲಸ ಈಗ ಆಗಬೇಕು. ಹಣಕ್ಕಾಗಿ ಅಲ್ಲವಾದರೂ ನಿಮ್ಮ ತಂದೆ ಮಾಡಿದ ಕೃತಿ ಅನ್ನುವ ಕಾರಣಕ್ಕೆ ಇದು ಆಗಬೇಕು’ ಎಂದಳು. ಸದಾಶಿವ ಹೆಂಡತಿಯ ಮುಖ ನೋಡಿದ. ಆಕೆ ಅದೇ ಬಿರುಸಿನಲ್ಲಿ ತನ್ನ ಮಾತನ್ನ ಮುಂದುವರೆಸಿದಳು. ‘ನೀವು ಗುಡಿಗಾರ್ ಗಂಗಾಧರಪ್ಪನವರ ಮಗ ಅಲ್ವೇ... ಅವರು ಅಪೂರ್ಣವಾಗಿ ಬಿಟ್ಟು ಹೋಗಿರೋ ಈ ಕಲಾ ಕೃತಿಗಳನ್ನ ನೀವೇ ಪೂರ್ಣ ಮಾಡಬೇಕು... ಇದು ನಿಮಗೊಂದು ಸವಾಲು...’.

ಹೆಂಡತಿಯ ದೃಢ ಮಾತಿಗೆ ಸದಾಶಿವ ಕಂಪಿಸಿದ. ‘ಅಯ್ಯೋ ನನ್ನಿಂದ...’

‘ಇಲ್ಲ, ನೀವು ಈ ಕೆಲಸ ಮಾಡಲೇ ಬೇಕು...’ ಎಂದು ಮತ್ತೆ ನುಡಿದಳು ಸುನಂದ.

ಹೊಸದೊಂದು ಆಪತ್ತು ಬಂತಲ್ಲ ಅನ್ನುವ ಹಾಗೆ ಸದಾಶಿವ ಹತ್ತಿರದ ಕುರ್ಚಿಯ ಮೇಲೆ ಕುಸಿದು ಕುಳಿತ. ಸುನಂದಳ ಮಾತು ಅವನ ಮೇಲೆ ಪ್ರಖರವಾದ ಪರಿಣಾಮ ಮಾಡುತ್ತಿತ್ತು. ಆಕೆ ದೃಢ ಸ್ವರದಲ್ಲಿ ಆತ್ಮಾಭಿಮಾನದಿಂದ ಹೇಳಿದ್ದು ಅವನ ಮನಸ್ಸಿಗೆ ನಾಟುತ್ತಿತ್ತು. ಹೀಗೆ ಕುಳಿತವನು ಮತ್ತೆ ಎದ್ದು ಮೇಜಿನ ಮೇಲಿನ ಮರದ ತುಂಡುಗಳ ನಡುವೆ ಏನನ್ನೋ ಹುಡುಕಿದ. ಒಂದು ಅರೆ ಮುಗಿದ ಕಲಾಕೃತಿ ಸಿಗಲು ಅದನ್ನ ಕೈಗೆತ್ತಿಕೊಂಡು ಆಸಕ್ತಿಯಿಂದ ನೋಡಿದ. ಬಟ್ಟೆಯಿಂದ ಅದನ್ನ ಮತ್ತೆ ಮತ್ತೆ ಒರೆಸಿದ. ಹೆಂಡತಿಯತ್ತ ಅದನ್ನ ಚಾಚಿ ‘ನೋಡು’ ಎಂದ.

ಅದು ಸಾಲಾಗಿ ನಿಂತ ಐದು ಕುದುರೆಗಳ ಒಂದು ಫಲಕ. ಸುನಂದ ಆಸಕ್ತಿಯಿಂದ ಅದನ್ನ ನೋಡಿದಳು. ಕುದುರೆಗಳು ನಿಂತ ಭಂಗಿ, ಅವುಗಳ ನಿಲುವು, ಹಣೆಯ ಮೇಲೆ ಬಂದು ಬಿದ್ದ ಕೂದಲು, ಹೊಳೆಯುವ ಕಣ್ಣು, ಒಂದರ ಹಿಂದೆ ಒಂದರಂತೆ ನಿಂತ ಕುದುರೆಗಳಲ್ಲಿ ಕೊನೆಯ ಕುದುರೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿತ್ತು. ಉಳಿದ ಕುದುರೆಗಳ ಮುಂದಿನ ಕಾಲು ಕತ್ತು ಕಾಣುತ್ತಲಿತ್ತು. ಆದರೆ ಅಲ್ಲಿ ಕಾಣುತ್ತಿದ್ದುದೆಲ್ಲವೂ ಕಲಾತ್ಮಕವಾಗಿತ್ತು. ಅದನ್ನು ಅವಳು ಗಮನಿಸಿದಳು.

‘ಇದು ಯಾರು ಕೆತ್ತಿದ್ದು?’ ಎಂದು ಕೇಳಿದಳು. ‘ನಾನೇ, ಆದರೆ ಇದನ್ನ ಪೂರ್ಣ ಮಾಡಲಿಕ್ಕೆ ನನ್ನಿಂದ ಆಗಲಿಲ್ಲ, ಅಪ್ಪ ಬಿಡಲಿಲ್ಲ...’ ಎಂದ. ಸುನಂದ ಗಂಡ ಕೆತ್ತಿದ ಆ ಕೃತಿಯನ್ನ ತದೇಕಚಿತ್ತಳಾಗಿ ನೋಡಿದಳು. ಬಹಳ ವರ್ಷಗಳ ಕಾಲ ಅದನ್ನ ಮೂಲೆಯಲ್ಲಿ ಇರಿಸಿದ್ದರಿಂದ ಅದಕ್ಕೆ ಬಲೆ ಹೆಣೆದಿತ್ತು, ಕೊಳೆ ಸೇರಿತ್ತು. ಅದು ಮಸಕಾಗಿತ್ತು. ಆದರೂ ಅದರಲ್ಲಿಯ ಆಕರ್ಷಣೆ ಕಡಿಮೆ ಆಗಿರಲಿಲ್ಲ. ಆಕ್ಷಣದಲ್ಲಿ ಏನನಿಸಿತೋ, ಅವಳು– ‘ಗುಡಿಗಾರಿಕೆ ಈ ಮನೇಲಿ ಇನ್ನೂ ಜೀವಂತವಾಗಿದೆ. ಇದನ್ನ ಉಳಿಸಬೇಕು’ ಎಂದಳು.

ಈ ಮಾತು ಸದಾಶಿವನಿಗೆ ಅರ್ಥವಾಗಿದ್ದು ಮಾತ್ರ ಆತ ಮಾರನೇ ದಿನ ಮನೆಗೆ ಬಂದಾಗ. ಮನೆಯ ಹೊರ ಕೋಣೆಯಲ್ಲಿ ಆಕೆ ಒಂದು ಕೆತ್ತನೆ ಕೆಲಸ ಮಾಡುವ ಪೆಟ್ಟಿಗೆ ತಂದು ಜೋಡಿಸಿದ್ದಳು. ಅದರ ಮುಂದೆಯೇ ಹಲವಾರು ಚೀರ್ಣಗಳು, ಚಾಣಗಳು. ಬಾಗಿನ ಚಾಣ, ಪಟ್ಟಿ ಚಾಣ, ರೇಖೇ ಚಾಣ, ಒಮ್ಮೈ ಚಾಣ, ತೆನೆ ಚಾಣ ಇತ್ಯಾದಿ ವಿವಿಧ ಬಗೆಯ ಚಾಣಗಳು.

‘ಸುನಂದ ಇದೆಲ್ಲ ಏನು?’ ಎಂದು ಅಚ್ಚರಿಯಿಂದ ಕೇಳಿದ ಸದಾಶಿವ. ಆ ಚಾಣಗಳ ಮೇಲೆ ಪ್ರೀತಿಯಿಂದ ಕೈ ಆಡಿಸುತ್ತ.

‘ನೀವು ಅರ್ಧ ಮಾಡಿರೋ ಈ ಫಲಕವನ್ನ ಕೆತ್ತಿ ಮುಗಿಸಬೇಕು... ನಾನು ಅವರಿವರ ಮನೆಯಿಂದ ಈ ಎಲ್ಲ ಉಪಕರಣಗಳನ್ನ ತಂದು ಇಲ್ಲಿ ಇರಿಸಿದ್ದೇನೆ... ನೀವು ಮನಸ್ಸು ಮಾಡಬೇಕು’ ಎಂದು      ಖಡಾಖಂಡಿತವಾಗಿ ಅನ್ನುವಂತೆ ನುಡಿದಳು ಸುನಂದ. ಸದಾಶಿವ ಹೆಂಡತಿಯ ಮುಖ ನೋಡಿದ.

‘ಈಗಂತೂ ಅಂಗಡಿಗೆ ಹೋಗಬೇಕು... ಮುಂದೆ ನೋಡೋಣ’ ಎಂದು ಸದಾಶಿವ ತುಸು ಅಳುಕುತ್ತಲೇ ನುಡಿದು ಅಂಗಡಿಗೆ ಹೊರಟ. ಸುನಂದ ಏನೂ ಮಾತನಾಡಲಿಲ್ಲ. ಆ ರಾತ್ರಿ ಊಟ ಮುಗಿಸಿ ಬಂದ ಸದಾಶಿವ ಪೆಟ್ಟಿಗೆಯ ಮುಂದೆ ಕುಳಿತು ತಾನು ಚಿಕ್ಕಂದಿನಲ್ಲಿ ಅರೆಬರೆಯಾಗಿ ಮುಗಿಸಿದ ಶ್ರೀಗಂಧದ ತುಂಡನ್ನ ಕೈಯಲ್ಲಿ ಹಿಡಿದುಕೊಂಡು ಕುಳಿತಿರುವುದನ್ನ ಸುನಂದ ನೋಡಿದಳು. ಬಾಗಿನ ಚಾಣವನ್ನ ಬೆರಳ ನಡುವೆ ಹಿಡಿದುಕೊಂಡು ಸದಾಶಿವ ಶ್ರೀಗಂಧದ ಮೆದು ಮರದಿಂದ ಎಳೆಎಳೆಯಾಗಿ ಮರವನ್ನ ಎಬ್ಬಿಸತೊಡಗಿದ. ಕೈಲಿದ್ದ ಆ ಮರದ ತುಂಡನ್ನು ಕೆಳಗೆ ಇರಿಸಿದಾಗ ಹಿಂದಿಗಿಂತಲೂ ಮಿಗಿಲಾಗಿ ಆ ಮರದ ತುಂಡು ಒಂದು ಆಕಾರವನ್ನ ಪಡೆದದ್ದನ್ನು ಸುನಂದ ಕಂಡಳು.

ಮತ್ತೊಂದು ದಿನ ಸದಾಶಿವ ಹೆಂಡತಿಯನ್ನ ಕೇಳಿದ– ‘ಸುನಂದ ಅಂಗಡೀನ ನೋಡಿಕೊಳ್ಳುವವರು ಯಾರು?’. ‘ಅಂಗಡಿ ಜವಾಬ್ದಾರಿ ನನಗಿರಲಿ, ನಿಮಗೆ ಅದರ ಚಿಂತೆ ಬೇಡ’ ಎಂದಳು.

ಸದಾಶಿವ ಮತ್ತೂ ಮಾತಿಗೆ ತೊಡಗಿದ– ‘ಈ ವೃತ್ತಿಯಿಂದ ಹೊಟ್ಟೆ ತುಂಬುವುದಿಲ್ಲ ಅಂತ ಅಪ್ಪ ಅಂಗಡಿ ಹಾಕಿ ಕೊಟ್ಟ, ಮತ್ತೆ ಇದೇ ವೃತ್ತಿಗೆ ಇಳಿಯೋದ?’.

‘ನೀವು ನಿರಾಶೆ ಪಡಬೇಡಿ... ಈ ಕಲೆ ನಮ್ಮ ಕೈ ಬಿಡಲಾರದು ಅನ್ನುವ ನಂಬಿಕೆ ಇರಲಿ’.
ಮನೆಯಲ್ಲಿಯೇ ಕುಳಿತು ಸದಾಶಿವ ಕೆಲಸವನ್ನ ಮುಂದುವರೆಸಿದ. ಬಿಡುವಾದಾಗ ಸುನಂದ ಸದಾಶಿವನನ್ನ ಗುಡಿಗಾರಿಕೆಯಲ್ಲಿ ಹೆಸರು ಮಾಡಿದ ಸಾಗರದ ಗುಡಿಗಾರ ಚಿಕ್ಕಣ್ಣ, ಗುಡಿಗಾರ ಶಾಂತಪ್ಪ, ಗುಡಿಗಾರ ಮಂಜುನಾಥಪ್ಪ ಮೊದಲಾದವರ ಮನೆಗೆ ಕರೆದೊಯ್ದಳು. ಅವರ ಕೆಲಸದ ರೀತಿಯನ್ನ ಸದಾಶಿವ ಗಮನಿಸಿದ. ಅವರಿಂದ ಉಪಯುಕ್ತವಾದ ಹಲವು ವಿಚಾರಗಳನ್ನ ತಿಳಿದುಕೊಂಡ.
***
ಈಗ ಸುನಂದ ಗುಡಿಗಾರರ ಕೇರಿಯ ತುದಿಯಲ್ಲಿ ಕೃಷ್ಣಭವನದ ಮಗ್ಗುಲಲ್ಲಿ ಇರುವ ಪೆಟ್ಟಿಗೆ ಅಂಗಡಿಯನ್ನೇ ಒಂದು ಗುಡಿಗಾರರ ಅಂಗಡಿಯನ್ನಾಗಿ ಪರಿವರ್ತಿಸುವ ವಿಚಾರದಲ್ಲಿದ್ದಾಳೆ. ಅವಳ ಮಾತಿಗೆ ಹೋಟೆಲು ಮಾಲಿಕರು ಅನುಮತಿ ನೀಡಿದ್ದಾರೆ. ಸುನಂದ ಆ ದಿನಕ್ಕಾಗಿ ಕಾಯುತ್ತಿದ್ದಾಳೆ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT