ADVERTISEMENT

ಸಂಕಲನ ವ್ಯವಕಲನದ ಕುಶಲ ನೇಯ್ಗೆ

ವಿಶಾಖ ಎನ್.
Published 30 ಏಪ್ರಿಲ್ 2016, 19:36 IST
Last Updated 30 ಏಪ್ರಿಲ್ 2016, 19:36 IST
-ಸುರೇಶ್ ಅರಸ್
-ಸುರೇಶ್ ಅರಸ್   

ಸಿನಿಮಾ ಸಂಕಲನದ ವಿಷಯ ಎತ್ತಿದರೆ ದಕ್ಷಿಣ ಭಾರತ ಸಿನಿಮಾಗಳ ಮಟ್ಟಿಗೆ ಎದ್ದುಕಾಣುವ ಹೆಸರು ಸುರೇಶ್ ಅರಸ್. ನಟ ಸುಂದರ್‌ಕೃಷ್ಣ ಅರಸ್ ಸಹೋದರ ಎನ್ನುವುದನ್ನು ಮೀರಿ ಬೆಳೆದು ಕನ್ನಡ, ತಮಿಳು, ಮಲಯಾಳಂ ಸಿನಿಮಾಗಳ ಸಂಕಲನಕಾರನಾಗಿ ಛಾಪು ಮೂಡಿಸಿದವರು ಈ ಅರಸ್.

ತಮ್ಮನ್ನು ತಾವು ‘ಸಿನಿಮಾ ವಿದ್ಯಾರ್ಥಿ’ ಎಂದು ಸದಾ ಕರೆದುಕೊಳ್ಳುವ ಸುರೇಶ್, ಸರಳತೆ ಸಜ್ಜನಿಕೆಯಿಂದ ಎಂಥವರಿಗೂ ಒಂದೇ ಭೇಟಿಗೆ ಮೆಚ್ಚಾಗಬಲ್ಲವರು. ತಮ್ಮ ಸಿನಿಮಾ ಜ್ಞಾನವನ್ನು ಅಸ್ಖಲಿತ ಕನ್ನಡದಲ್ಲಿ ಅವರು ಹೇಳುವುದರಲ್ಲೂ ಒಂದು ಸೊಗಸುಗಾರಿಕೆ ಇದೆ. ಪುಟಿಯುವ ಉತ್ಸಾಹದ ಅವರೊಂದಿಗೆ ‘ಮುಕ್ತಛಂದ’ ಪುರವಣಿಗಾಗಿ ವಿಶಾಖ ಎನ್. ಸಂದರ್ಶನ ಮಾಡಿದ್ದಾರೆ.

ಪಟ್ಟಾಂಗ * ಚಲನಚಿತ್ರ ಸಂಕಲನಕಾರ
ಸುರೇಶ್ ಅರಸ್ ಸಂದರ್ಶನ

*ಸಿನಿಮಾ ಎಡಿಟಿಂಗ್ ಎಂದ ಕೂಡಲೇ ನಿಮಗೆ ನೆನಪಾಗುವ ಎರಡು ಘಟನೆಗಳು ಯಾವುವು?
‘ಊರುಕ್ಕು ನೂರು ಪೇರ್’ ಎಂಬ ತಮಿಳು ಸಿನಿಮಾವನ್ನು ಬಿ. ಲೆನಿನ್ ನಿರ್ದೇಶಿಸಿದ್ದರು. ಏಪ್ರಿಲ್ 1ನೇ ತಾರೀಖು ಬೆಳಿಗ್ಗೆ 6 ಗಂಟೆಗೇ ಅವರು ಫೋನ್ ಮಾಡಿ, ತಮ್ಮ ಸಿನಿಮಾ ಎಡಿಟ್ ಮಾಡಲು ಕರೆದರು. ಅಷ್ಟು ಬೆಳಿಗ್ಗೆ ಅವರು ಏಪ್ರಿಲ್ ಫೂಲ್ ಮಾಡುತ್ತಿರಬಹುದು ಎಂದು ನಾನು ಭಾವಿಸಿದೆ. ಮರುದಿನ ಎಡಿಟಿಂಗ್‌ಗೆ ಕರೆದು ಅವರು ನನ್ನ ಅಭಿಪ್ರಾಯವನ್ನು ಹುಸಿಗೊಳಿಸಿದರು. ಆ ಸಿನಿಮಾಗೆ ಅವರಿಗೆ ಶ್ರೇಷ್ಠ ನಿರ್ದೇಶಕ ರಾಷ್ಟ್ರಪ್ರಶಸ್ತಿ ಬಂದಿತು.

ADVERTISEMENT

‘ಮಾಲ್ಗುಡಿ ಡೇಸ್’ ಧಾರಾವಾಹಿಯ ಸಂಕಲನ ನಡೆಯುತ್ತಿದ್ದುದು ಬೆಂಗಳೂರಿನಲ್ಲಿ. ಆಗ ವಿಲ್ಸನ್ ಗಾರ್ಡನ್‌ನಲ್ಲಿ ನಾನು ವಾಸ ಮಾಡುತ್ತಿದ್ದೆ. ಅಲ್ಲಿಯೇ ಒಂದು ಮನೆಯಲ್ಲಿ ಎಡಿಟಿಂಗ್ ಮಾಡುತ್ತಿದ್ದೆವು. ಆಗ ವಿದ್ಯುತ್ ಸಮಸ್ಯೆ. ಬೆಳಿಗ್ಗೆ 7ಕ್ಕೇ ಕರೆಂಟ್ ಹೋಯಿತು. ಕೆ.ಇ.ಬಿ. ಸಿಬ್ಬಂದಿ ಜೊತೆ ಆಗ ನಮಗೆ ಒಳ್ಳೆಯ ಸಂಬಂಧವಿತ್ತು. ಫೋನ್ ಮಾಡಿದೆ. ಇಡೀ ದಿನ ಕರೆಂಟ್ ಬರುವುದಿಲ್ಲ ಎಂದರು.

ಶಂಕರ್‌ನಾಗ್ ಇನ್ನೂ ಅಲ್ಲಿಗೆ ಬಂದಿರಲಿಲ್ಲ. ನಾನು ಸ್ಕೂಟರ್ ಹತ್ತಿ ಹೊರಟೆ. ಇನ್ನೇನು ಸ್ಕೂಟರ್ ಸಾಗಬೇಕು, ಅಷ್ಟರಲ್ಲಿ ಎದುರಲ್ಲಿ ಶಂಕರ್‌ನಾಗ್ ಕಾರ್ ಬಂದು ನಿಂತಿತು. ಅವರಿಗೆ ಕರೆಂಟ್ ಬರುವುದಿಲ್ಲ ಎಂದೆ. ಕಾರಿನಿಂದ ಇಳಿದವರೇ, ತಮಾಷೆ ಮಾಡಬೇಡ ಎಂದು ನನ್ನ ಬೆನ್ನಿಗೆ ಸಣ್ಣಗೆ ಗುದ್ದಿದರು. ತಕ್ಷಣ ಕರೆಂಟ್ ಬಂದುಬಿಟ್ಟಿತು. ಮೂರು ದಿನ ಸತತವಾಗಿ ಸಂಕಲನ ಮಾಡಿಕೊಂಡು ಅಲ್ಲಿಯೇ ಕುಳಿತೆವು. ಇವೆರಡು ಘಟನೆಗಳನ್ನು ನಾನು ಮರೆಯಲಾರೆ.

*ನೀವು ಜನಪ್ರಿಯ ಸಿನಿಮಾಗಳಿಗೂ ಸಂಕಲನ ಮಾಡಿರುವಿರಿ. ಪರ್ಯಾಯ ಸಿನಿಮಾಗಳಲ್ಲೂ ಹೆಸರು ಮಾಡಿದ್ದೀರಿ. ಎರಡೂ ಸಿನಿಮಾಗಳ ಪ್ರೇಕ್ಷಕವರ್ಗ ಬೇರೆಬೇರೆ. ಇಂಥ ಸಿನಿಮಾಗಳನ್ನು ನೋಡುವ ಕ್ರಮ ಹೇಗಿರಬೇಕು ಎಂದು ನಿಮಗನ್ನಿಸುತ್ತದೆ?
ಇದು ಸಂಕೀರ್ಣವಾದ ಪ್ರಶ್ನೆ. ಬ್ರಿಜ್ ಸಿನಿಮಾ ಮಾಡುವವರಿಗೆ ತಮ್ಮ ಸಿನಿಮಾ ನಿಧಾನಗತಿಯಲ್ಲೇ ಇರಬೇಕೆಂಬ ನಂಬಿಕೆ ಇದೆ. ಕಮರ್ಷಿಯಲ್ ಸಿನಿಮಾದವರಿಗೆ ವೇಗ ಎಂದರೆ ಇಷ್ಟ. ಸಿನಿಮಾ ನಿಧಾನಗತಿಯಲ್ಲಿಯೇ ಇರಬೇಕೆಂದೇನೂ ಇಲ್ಲ.

ಅತಿ ವೇಗದ ಅಗತ್ಯವೂ ಇಲ್ಲ. ನೋಡುಗನಾಗಿ ನನಗೆ ಸಿನಿಮಾ ಇಷ್ಟವಾಗಬೇಕು ಅಷ್ಟೆ. ಕಥೆಗೆ ಅಪಚಾರವಾಗದಂತೆ ದೃಶ್ಯಗಳನ್ನು ನೇಯುವುದರಲ್ಲಿಯೇ ಕುಶಲತೆ ಇದೆ. ಗಿರೀಶ್ ಕಾಸರವಳ್ಳಿ ಅವರ ‘ಆಕ್ರಮಣ’ ಸಿನಿಮಾ ಒಳ್ಳೆಯ ಪೇಸ್‌ನಲ್ಲಿದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ. ಬಾಲುಮಹೇಂದ್ರ ಅವರ ‘ಕೋಕಿಲ’ ಮಾಡಿದಾಗ ಅದನ್ನು ಬ್ರಿಜ್ ಸಿನಿಮಾ ಎಂದೇ ಅಂದುಕೊಂಡಿದ್ದರು. ಆದರೆ ಕಮರ್ಷಿಯಲ್ ಆಗಿಯೂ ಅದು ಯಶಸ್ವಿಯಾಯಿತು.

ಹೊಡಿ, ಬಡಿ, ಕಡಿ ಎಂಬ ಸೂತ್ರವನ್ನು ಹೊರತುಪಡಿಸಿಯೂ ಒಳ್ಳೆಯ ಕಮರ್ಷಿಯಲ್ ಸಿನಿಮಾಗಳನ್ನು ಮಾಡಬಹುದು. ಅದಕ್ಕೆ ಹಲವು ಉದಾಹರಣೆಗಳಿವೆ. ಅಂತೆಯೇ ನಿಧಾನಗತಿಯಲ್ಲಿ ಇಲ್ಲದ ಬ್ರಿಜ್ ಸಿನಿಮಾವನ್ನು ಕೂಡ ಮಾಡಬಹುದು. ಜನರಿಗೆ ಏನು ಇಷ್ಟವಾಗುತ್ತದೆ ಎನ್ನುವುದನ್ನು ಆಯಾ ಕಾಲಘಟ್ಟವೇ ನಿರ್ಧರಿಸುತ್ತದೆ. ನಾನಂತೂ ಎಂಥ ಬಗೆಯ ಸಿನಿಮಾ ಆದರೂ ಮೊದಲಿಗೆ ಒಬ್ಬ ಪ್ರೇಕ್ಷಕನಾಗಿಯೇ ನೋಡುತ್ತೇನೆ.

*ಕೆಲವು ನಿರ್ದೇಶಕರು ಲಕ್ಷಾಂತರ ಅಡಿಗಳಷ್ಟು ಶಾಟ್‌ಗಳನ್ನು ಚಿತ್ರೀಕರಿಸಿಕೊಂಡು ಬಂದು ಎಡಿಟಿಂಗ್ ಟೇಬಲ್ ಮೇಲೆ ಇಡುತ್ತಾರೆ. ಇನ್ನು ಕೆಲವರು ಹೆಚ್ಚು ಆಯ್ಕೆಗಳನ್ನು ಸಂಕಲನಕಾರನಿಗೆ ಕೊಡದಂತೆಯೇ ಚಿತ್ರೀಕರಿಸಿಕೊಂಡಿರುತ್ತಾರೆ. ಈ ಎರಡು ಮಾದರಿಗಳಲ್ಲಿ ಯಾವುದು ನಿಮ್ಮ ಪ್ರಕಾರ ಹೆಚ್ಚು ಸರಿ?
ಒಬ್ಬ ಸಂಕಲನಕಾರನಾಗಿ ನನಗೆ ಮೆಟೀರಿಯಲ್ ಜಾಸ್ತಿ ಇದ್ದಷ್ಟೂ ಅನುಕೂಲ. ಜೊಳ್ಳು ಯಾವುದು, ಗಟ್ಟಿ ಯಾವುದು ಎಂದು ನಿರ್ಧರಿಸಲು ಆಯ್ಕೆಗಳಿರುತ್ತವೆ. ತಮಿಳು ನಿರ್ದೇಶಕ ಬಾಲ ನಾಲ್ಕೈದು ಲಕ್ಷ ಅಡಿ ಶೂಟ್ ಮಾಡಿಕೊಂಡು ಬರುತ್ತಾರೆ. ನಟ ನಟಿಯರ ಹತ್ತಿರ ಚೆನ್ನಾಗಿ ಕೆಲಸ ತೆಗೆಸಬೇಕೆಂದು ಅವರು ಹಾಗೆ ಮಾಡಿರುತ್ತಾರೆ. ಅವರು ಕೊಡುವ ಆಯ್ಕೆಗಳಲ್ಲಿ ಉತ್ತಮವಾದ ಒಂದು ಶಾಟ್ ಹೆಕ್ಕುವುದು ನನಗೆ ಸೃಜನಶೀಲತೆಯ ಅವಕಾಶವಾಗಿ ಕಾಣುತ್ತದೆ.

*ಹೆಚ್ಚು ಚಿತ್ರೀಕರಿಸುವುದು ದುಬಾರಿ ಬಾಬತ್ತಲ್ಲವೇ? ಕನ್ನಡದಲ್ಲಿ ಇಷ್ಟೊಂದು ಆಯ್ಕೆಗಳನ್ನು ಕೊಡುವ ನಿರ್ದೇಶಕರನ್ನು ನೀವು ಕಂಡಿದ್ದೀರಾ?
ಸರಿಯಾದ ರೀತಿಯಲ್ಲಿ ಯೋಜಿಸಿ, ಚಿತ್ರೀಕರಣ ಮಾಡಿದರೆ ಇದು ದುಬಾರಿ ಬಾಬತ್ತೇನೂ ಅಲ್ಲ. ಮರುಚಿತ್ರೀಕರಣ ಮಾಡುವ ಪ್ರಸಂಗ ಬಂದರೆ ಇದಕ್ಕಿಂತ ಹೆಚ್ಚು ಖರ್ಚಾಗುತ್ತದೆ.

ಕನ್ನಡದಲ್ಲಿ ನಾನು ಹೆಚ್ಚು ಕಮರ್ಷಿಯಲ್ ಸಿನಿಮಾಗಳ ಸಂಕಲನ ಮಾಡಿಲ್ಲ. ಪಿ. ವಾಸು ಆ ರೀತಿ ಆಯ್ಕೆಗಳನ್ನು ಕೊಡುತ್ತಾರೆ. ಎಷ್ಟೋ ನಿರ್ದೇಶಕರು ಸೀನ್‌ಗಳನ್ನು ವಿವರಿಸಿದಾಗ ಹುಬ್ಬೇರಿಸಿರುತ್ತೇವೆ. ಚಿತ್ರೀಕರಣ ಆದಮೇಲೆ ಅದು ಸಪ್ಪೆಯಾಗಿ ಬಂದಿರುತ್ತದೆ. ಕೆಲವೊಮ್ಮೆ ಇದು ಉಲ್ಟಾ ಆಗುವ ಸಾಧ್ಯತೆಯೂ ಇದೆ. ಸಂಕಲನಕಾರನಿಗೆ ಹೆಚ್ಚು ಆಯ್ಕೆಗಳಿದ್ದರಷ್ಟೇ ಅವರ ಕೆಲಸಕ್ಕೆ ಅರ್ಥ ಎನ್ನುವುದು ನನ್ನ ಅನುಭವ.

*ತಂತ್ರಜ್ಞಾನದ ಪ್ರಗತಿಯಿಂದ ಸಿನಿಮಾ ಸೃಜನಶೀಲತೆ ಹಾಳಾಗುತ್ತಿದೆ ಎಂದು ಒಮ್ಮೆ ನೀವು ಹೇಳಿದ್ದಿರಿ. ಸದಾ ಅಪ್‌ಡೇಟ್ ಆಗುವ ನಿಮಗೆ ಯಾಕೆ ಹೀಗೆ ಅನ್ನಿಸಿತು?
ಟೂಲ್ಸ್ ಹಾಗೂ ಟೆಕ್ನಿಕ್ ಎರಡಕ್ಕೂ ವ್ಯತ್ಯಾಸವಿದೆ. ಟೂಲ್ಸ್ ಬಳಸಿ, ಕಂಟೆಂಟ್ ಅನ್ನು ಉತ್ತಮಪಡಿಸಬೇಕು. ನಮ್ಮಲ್ಲಿ ಬಹಳಷ್ಟು ಜನ ತಪ್ಪುಗಳನ್ನು ಮುಚ್ಚಿಹಾಕಲು ತಂತ್ರಜ್ಞಾನ ಬಳಸುತ್ತಿದ್ದಾರೆ. ಇದು ಅತಿಯಾದಾಗ ಸಿನಿಮಾ ಪ್ರೇಕ್ಷಕರು, ವಿಮರ್ಶಕರಿಗೆ ಕಿರಿಕಿರಿ ಆಗುತ್ತದೆ. ಉದಾಹರಣೆಗೆ, ನಿರ್ದಿಷ್ಟ ಶಾಟ್‌ನಲ್ಲಿ ಎರಡು ಮೂರು ಸೆಕೆಂಡ್‌ನಷ್ಟು ಡಿಸಾಲ್ವ್ ಮಾಡಿ ನೋಡೋಣ ಎಂದು ನಾವು ಈಗ ಅಂದುಕೊಳ್ಳುತ್ತೇವೆ.

ಮೊದಲು ಅದು ಟೆಕ್ಸ್ಟ್‌ನಲ್ಲಿ ಇರುತ್ತಿತ್ತು. ಸೃಜನಶೀಲತೆಯ ಭಾಗವಾಗಿ ಅದು ಉಳಿದಿರುತ್ತಿತ್ತು. ಈಗ ಬಳಸಬೇಕು ಎಂದುಕೊಂಡು ಪ್ರಜ್ಞಾಪೂರ್ವಕವಾಗಿ ಡಿಸಾಲ್ವ್ ಮಾಡುತ್ತೇವೆ. ಇದು ದೊಡ್ಡ ಹೊಡೆತ ನೀಡುತ್ತಿದೆ. ಸ್ಪಾಟ್ ಎಡಿಟಿಂಗ್‌ನ ಪರಿಕಲ್ಪನೆಯೂ ಈಗ ಬಂದಿದೆ.

ಒಂದೇ ಒಂದು ಶಾಟ್ ಚಿತ್ರೀಕರಿಸಿ ಅದನ್ನು ಅಲ್ಲಿಯೇ ಎಡಿಟ್ ಮಾಡುವುದು ನನ್ನ ಪ್ರಕಾರ ನಿರರ್ಥಕ. ಒಂದಿಡೀ ಕೃತಿಗೆ ಮೌಲ್ಯ ಇರುತ್ತದೆಯೇ ವಿನಾ ಅದರ ಒಂದು ಪದ ಅಥವಾ ಒಂದು ಪ್ಯಾರಾ ನೋಡಿ ಎಡಿಟ್ ಮಾಡುವುದು ವೃತ್ತಿಪರತೆ ಅಲ್ಲ.

ಸಿನಿಮಾ ಮಟ್ಟಿಗೂ ಇದು ಅನ್ವಯಿಸುತ್ತದೆ. ಸ್ಪಾಟ್ ಎಡಿಟಿಂಗ್‌ನಿಂದ ಖರ್ಚು ಕೂಡ ಜಾಸ್ತಿಯಾಗುತ್ತದೆ. ಇದರ ಬದಲು ಮೊದಲೇ ಅಂದುಕೊಂಡಿದ್ದನ್ನು ಚಿತ್ರೀಕರಿಸಿಕೊಂಡು, ಆಮೇಲೆ ಸಂಕಲನ ಮಾಡಿಸಿದರೆ ಒಂದು ದಿನಕ್ಕೆ ಒಂದು ಸಾವಿರ ರೂಪಾಯಿ ಖರ್ಚಾಗಬಹುದಷ್ಟೆ.

*ಭಾರತೀಯ ಸಿನಿಮಾಗಳನ್ನು ನೋಡುವ ವಿದೇಶೀಯರು ‘ಇಲ್ಲಿ ಮಾತೇ ಮುಂದೆ, ಚಿತ್ರಿಕೆಗಳು ಹಿಂದೆ’ ಎಂದು ಸಾಮಾನ್ಯೀಕೃತ ಆರೋಪ ಮಾಡುತ್ತಾರೆ. ಯಾಕೆ ಹೀಗೆ?
ಮೌನ, ಮಾತು, ವಿಶುಯಲ್ಸ್ ಸೇರಿ ಸಿನಿಮಾ ರೂಪುಗೊಳ್ಳುತ್ತದೆ. ನಾವು ಇದೇ ಸಿನಿಮಾ, ಇದನ್ನು ಹೀಗೆಯೇ ಮಾಡುತ್ತೇವೆ, ಇದನ್ನೇ ನೋಡಿ ಎಂದು ಜನರಿಗೆ ಮೊದಲಿನಿಂದಲೂ ಮೂರು ಆಯಾಮಗಳಲ್ಲಿ ಹೇಳುತ್ತಾ ಬಂದಿದ್ದೇವೆ. ಎಂಬತ್ತರ ದಶಕದಲ್ಲಿ ಕೇರಳದಲ್ಲಿ ಚಿತ್ರಮಂದಿರದ ಎದುರು ಹಾದು ಹೋದರೆ ಮೈಲಿಗೆಯಾಗುತ್ತದೆ ಎಂದು ಜನ ಭಾವಿಸುತ್ತಿದ್ದ ಸ್ಥಿತಿ ಇತ್ತು.

ಆಗ ಕನ್ನಡದಲ್ಲಿ ಸಿನಿಮಾ ಶ್ರೇಷ್ಠ ಮಾಧ್ಯಮ ಎನಿಸಿಕೊಂಡಿತ್ತು. ಈಗ ನೋಡಿ, ಮಲಯಾಳದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಹಿಂದೆ ಬಂಗಾಳಿಯಲ್ಲಿ ಅತ್ಯುತ್ತಮ ಸಿನಿಮಾಗಳು ಬರುತ್ತಿದ್ದವು. ಈಗ ಅಲ್ಲಿ ಸದ್ದೇ ಇಲ್ಲ. ಸಿನಿಮಾದಲ್ಲಿ ಮೌನ ಅಥವಾ ಚಿತ್ರಿಕೆಗಳ ಸಾಂದ್ರತೆ ಹೆಚ್ಚಾಗಬೇಕು ಎನ್ನುವುದು ಪಾಶ್ಚಾತ್ಯ ಸಿನಿಮಾಗಳ ದೃಷ್ಟಿಯಿಂದ ನಿಜವೇ ಇರಬಹುದು. ಅದು ಇಲ್ಲಿ ಜಾರಿಗೆ ಬರಲು ಇನ್ನಷ್ಟು ವರ್ಷಗಳೇ ಬೇಕು.

*ರಾಜಕುಮಾರ್‌ ಅವರ ಯಾವ ಚಿತ್ರಗಳಲ್ಲಿಯೂ ಕೆಲಸ ಮಾಡುವ ಅವಕಾಶ ನಿಮಗೆ ಸಿಗಲಿಲ್ಲ. ಅವರು ನಿಮ್ಮ ಕೆಲಸ ಕಂಡು ಎಂದಾದರೂ ಮಾತನಾಡಿದ್ದರೇ?
ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಬಂದಾಗಲೇ ‘ಬಾಂಬೆ’ ಸಿನಿಮಾದ ಸಂಕಲನಕ್ಕಾಗಿ ನನಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಆಗ ದೆಹಲಿಯ ಕರ್ನಾಟಕ ಭವನದಲ್ಲಿ ಅವರನ್ನು ಭೇಟಿ ಮಾಡಿದ್ದೆ. ಭಗವಾನ್‌ ಅವರು ನನ್ನನ್ನು ಪರಿಚಯ ಮಾಡಿಕೊಟ್ಟರು. ನನ್ನ ಸಿನಿಮಾಗಳ ಕುರಿತು ಅವರೇ ರಾಜಕುಮಾರ್‌ ಅವರಿಗೆ ವಿವರಿಸಿದರು. ನಾನು ಕೆಲಸ ಮಾಡಿದ ಸಿನಿಮಾಗಳನ್ನು ನೋಡುವ ಬಯಕೆಯನ್ನು ರಾಜಕುಮಾರ್‌ ಆ ದಿನ ವ್ಯಕ್ತಪಡಿಸಿದ್ದರು. ಆದರೆ, ಅವರಿಗೆ ಅವನ್ನು ತೋರಿಸುವ ಅವಕಾಶವೇ ಕೈಗೂಡಲಿಲ್ಲ.

*ಕೆ. ಬಾಲಚಂದರ್‌, ಮಣಿರತ್ನಂ, ಬಾಲುಮಹೇಂದ್ರ ತರಹದ ಭಿನ್ನ ಸಂವೇದನೆಯ ನಿರ್ದೇಶಕರ ಸಿನಿಮಾಗಳಲ್ಲಿ ನೀವು ಕೆಲಸ ಮಾಡಿದ್ದೀರಿ. ಅವರಲ್ಲಿ ನೀವು ಕಂಡ ಸಾಮ್ಯತೆ ಏನು?
ಮೂರೂ ಜನರೂ ಕಥೆಗೆ ಒಳಪಟ್ಟೇ ಕೆಲಸ ಮಾಡುತ್ತಾರೆ. ಅದರ ಹೊರತಾದ ಕಸರತ್ತುಗಳು ಅವರ ಸಿನಿಮಾಗಳಲ್ಲಿ ಇರುವುದಿಲ್ಲ.

*ಇಷ್ಟೆಲ್ಲಾ ದಶಕಗಳ ಕಾಲ ಕೆಲಸ ಮಾಡಿದ ನೀವು ಹೆಚ್ಚು ಕಲಿತದ್ದು ಯಾರಿಂದ?
ಎರಡನೇ ಯೋಚನೆಯೇ ಇಲ್ಲದೆ ಶಂಕರ್‌ನಾಗ್‌ ಹೆಸರನ್ನು ಹೇಳುವೆ. ಅವರ ಜೊತೆ ನಾನು ಯಾವ ಸಿನಿಮಾಗೂ ಕೆಲಸ ಮಾಡಲಿಲ್ಲ. ಆದರೆ, ‘ಮಾಲ್ಗುಡಿ ಡೇಸ್‌’ ಕಂತುಗಳಲ್ಲಿ ಕೆಲಸ ಮಾಡುವಾಗ ಬದುಕಿನ ಹಲವು ಪಾಠಗಳನ್ನು ಕಲಿತೆ. ದಿನಕ್ಕೆ ಅವರಿಗೆ 100 ಗಂಟೆ ಇರಬೇಕಿತ್ತು. ಅಷ್ಟು ವರ್ಕೋಹಾಲಿಕ್‌. 24 ಗಂಟೆಗಳಲ್ಲೇ 100 ಗಂಟೆಗಳಲ್ಲಿ ಮಾಡಬಹುದಾದ ಕೆಲಸವನ್ನು ಅವರು ಮಾಡಿ ಮುಗಿಸುತ್ತಿದ್ದರು. ಅದರಲ್ಲಿ ನಿದ್ದೆಯೂ ಸೇರಿರುತ್ತಿತ್ತು. ಕೋಪ ಮಾಡಿಕೊಳ್ಳದೆ ನಗುನಗುತ್ತಾ ಎಲ್ಲರಿಂದ ಅವರು ಕೆಲಸ ತೆಗೆಸುತ್ತಿದ್ದರು. ಯಾರಲ್ಲಿ ಏನು ಒಳ್ಳೆಯ ಅಂಶಗಳಿವೆಯೋ ಅವನ್ನು ಅರಿತುಕೊಂಡೇ ಅವರು ಕೆಲಸ ತೆಗೆಸುತ್ತಿದ್ದುದು. ಆ ರೀತಿ ದುಡಿಸಿಕೊಳ್ಳುವ ಅವರ ಚಾಕಚಕ್ಯತೆ ಕಂಡು ನಾನೂ ಅದನ್ನು ಅಳವಡಿಸಿಕೊಂಡೆ. ನನ್ನ ಸಹಾಯಕರಿಂದಲೂ ಹಾಗೆಯೇ ಕೆಲಸ ತೆಗೆಸಿದೆ.

*ನಿಮ್ಮ ಗರಡಿಯಲ್ಲಿ ಪಳಗಿದ ಅರ್ಧ ಡಜನ್‌ಗಿಂತ ಹೆಚ್ಚು ಪ್ರತಿಭಾವಂತರು ಚಿತ್ರರಂಗದಲ್ಲಿ ಸಂಕಲನಕಾರರಾಗಿದ್ದಾರೆ. ನಿಮ್ಮ ಈ ಗುರು–ಶಿಷ್ಯ ಪರಂಪರೆ ನೋಡಿದರೆ ಏನನ್ನಿಸುತ್ತದೆ?
ಇದು ಖುಷಿ ಕೊಡುವ ವಿಷಯ. ತನ್ನ ಶಿಷ್ಯನು ಡಾಕ್ಟರೋ ಎಂಜಿನಿಯರ್ರೋ ಆದರೆ ಮೇಷ್ಟರು ಖುಷಿಪಡುವುದು ಸಹಜ. ನಾನೂ ಸಂಕಲನಕಾರರಾಗಿ ಹೆಸರು ಮಾಡುವವರನ್ನು ಕಂಡು ಹಿಗ್ಗಿದ್ದೇನೆ. ಅವರು ಮಾಡುವ ಕೆಲಸ ಚೆನ್ನಾಗಿದ್ದರೆ ಅಭಿನಂದಿಸದೇ ಇರುವುದಿಲ್ಲ. ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ನೋಡುವುದು ನಾನೇ ಎಂದು ಗರ್ವದಿಂದ ಹೇಳಿಕೊಳ್ಳುತ್ತಾ ಇರುತ್ತೇನೆ. ಕನ್ನಡದಲ್ಲಿ ಕೆಂಪರಾಜು ಬೆಳೆದಿದ್ದಾರೆ. ತಮಿಳಿನಲ್ಲಿ ಸರವಣ, ಗಣೇಶ್, ಶಿವು ಹೀಗೆ ಅನೇಕ ಪ್ರತಿಭಾವಂತರು ನನ್ನ ಶಿಷ್ಯರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

*ಇತ್ತೀಚೆಗೆ ನೀವು ನೋಡಿದ ಕನ್ನಡದ ಅತ್ಯುತ್ತಮ ಸಿನಿಮಾ ಯಾವುದು?
ನಿಜಕ್ಕೂ ಹೇಳಬೇಕೆಂದರೆ ಯಾವುದೂ ಅಷ್ಟು ಇಷ್ಟವಾಗಲಿಲ್ಲ.

*‘ನೀರ್ ದೋಸೆ’ ಸಿನಿಮಾ ಕೆಲಸ ಯಾವ ಹಂತದಲ್ಲಿದೆ. ನಿರ್ದೇಶಕ ವಿಜಯ ಪ್ರಸಾದ್‌ ಅವರ ಕೆಲಸ ನಿಮಗೆ ಹಿಡಿಸಿತೆ?
ಅವರು ಸರಸ್ವತಿ ಪುತ್ರ. ತುಂಬಾ ಕಷ್ಟದಲ್ಲಿ ಇರುವಾಗ ಈ ಸಿನಿಮಾ ಮಾಡುತ್ತಿದ್ದಾರೆ. ಇನ್ನು 15–20 ದಿನಗಳಲ್ಲಿ ಸಿನಿಮಾ ಕೆಲಸ ಮುಗಿಯುತ್ತದೆ. ಅವರಿಗೆ ಆರ್ಥಿಕ ಸಂಕಷ್ಟ ಇದ್ದರೂ ಸಿನಿಮಾ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಅವರಿಗೆ ನಾನೇ ಎರಡು ಅವಕಾಶಗಳನ್ನು ಕೊಡಿಸಿದೆ. ಅವನ್ನು ಬೇಡ ಎಂದು, ಮೊದಲು ಈ ಸಿನಿಮಾ ಮುಗಿಸಲು ಸಂಕಲ್ಪ ಮಾಡಿದರು. ಸಿನಿಮಾ ಮೇಲೆ ಪ್ರೀತಿ ಇರುವ ಇಂಥ ನಿರ್ದೇಶಕರ ಸಂಖ್ಯೆ ಹೆಚ್ಚಾಗಬೇಕು.


*ಸಿನಿಮಾ ಸಂಕಲನವನ್ನು ನೀವು ಹೇಗೆ ವ್ಯಾಖ್ಯಾನಿಸುವಿರಿ?
ಸಿನಿಮಾ ನೋಡುವಾಗ ಅದು ಎಡಿಟ್‌ ಆಗಿದೆ ಎಂದು ನೋಡುಗರಿಗೆ ಗೊತ್ತಾಗಬಾರದು. ಅದು ಕಸುಬುದಾರಿಕೆಯ ಎಡಿಟಿಂಗ್‌.

*ನೀವು ಕೆಲಸ ಮಾಡಿದ ಮರೆಯಲಾಗದ ಸಿನಿಮಾಗಳು ಯಾವುವು?
‘ಮೈಸೂರು ಮಲ್ಲಿಗೆ’, ‘ಸಂತ ಶಿಶುನಾಳ ಷರೀಫ’, ‘ಆಸ್ಫೋಟ’, ‘ಸಾಮ್ರಾಟ್‌’, ‘ರೋಜಾ’, ‘ಬಾಂಬೆ’, ‘ರಮಣ’, ‘ಅಮರ್‌ಕಲಂ’... ಈ ಎಲ್ಲಾ ಸಿನಿಮಾಗಳಿಗೂ ಮಿಗಿಲಾಗಿ ‘ಮಾಲ್ಗುಡಿ ಡೇಸ್’. 

ದಕ್ಷಿಣ ಭಾರತ ಚಿತ್ರರಂಗದಲ್ಲಿ ‘ಸಂಕಲನಕಾರರ ರಾಜ’ ಎನ್ನಬಹುದಾದ ಸೃಜನಶೀಲ ಸುರೇಶ್‌ ಅರಸ್‌. ‘ಬ್ಯಾಂಕರ್‌ ಮಾರ್ಗಯ್ಯ’ ತರಹದ ಪರ್ಯಾಯ ಕನ್ನಡ ಸಿನಿಮಾ ಸಂಕಲನದ ಮೂಲಕ ತಣ್ಣಗೆ ಗುರುತಾದ ಅವರು, ಕಾಲಕ್ರಮೇಣ ದಕ್ಷಿಣ ಭಾರತದ ಪ್ರಮುಖ ಸಂಕಲನಕಾರರಾಗಿ ರೂಪುಗೊಂಡರು.

‘ಬಾಂಬೆ’ ಸಿನಿಮಾದ ಕೆಲಸಕ್ಕೆ ರಾಷ್ಟ್ರಪ್ರಶಸ್ತಿಯ ಗೌರವ ಅವರಿಗೆ ಸಂದಿತು. ಕರ್ನಾಟಕದಲ್ಲಿ ಐದು ರಾಜ್ಯ ಪ್ರಶಸ್ತಿ, ತಮಿಳುನಾಡಿನಲ್ಲಿ ಎರಡು ರಾಜ್ಯ ಪ್ರಶಸ್ತಿಗಳೂ ಅವರ ಗೌರವವನ್ನು ಹೆಚ್ಚಿಸಿವೆ.

‘ಮೈಸೂರು ಮಲ್ಲಿಗೆ’, ‘ಆಸ್ಫೋಟ’ (ಕನ್ನಡ), ‘ರೋಜಾ’, ‘ಬಾಂಬೆ’, ‘ತಿರುಡಾ ತಿರುಡಾ’ (ತಮಿಳು), ‘ದಿಲ್‌ ಸೆ’ (ಹಿಂದಿ) ಮೊದಲಾದ ಸಿನಿಮಾಗಳು ಅವರ ಕೆಲಸಕ್ಕೆ ಸಾಕ್ಷ್ಯ ಒದಗಿಸುವಂತಿವೆ. ಕನ್ನಡ ಚಿತ್ರರಂಗದಲ್ಲಿನ ಅವರ ಒಟ್ಟಾರೆ ಸಾಧನೆಗೆ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ-2014’ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.