ADVERTISEMENT

ಸರಕಾರದ ದುಡ್ಡು ಪೀರಸಾಬನಿಗೆ ಬೇಡ!

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 19:30 IST
Last Updated 11 ಮಾರ್ಚ್ 2017, 19:30 IST
ಚಿತ್ರ: ಮದನ್‌ ಸಿ.ಪಿ
ಚಿತ್ರ: ಮದನ್‌ ಸಿ.ಪಿ   

ಆಗ ನಾನು ದಿನಪತ್ರಿಕೆಯೊಂದರ ಮುಧೋಳ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಬೆಳಗಲಿ ಗ್ರಾಮದಲ್ಲಿ ಮೂವರು ಬುದ್ಧಿಮಾಂದ್ಯ ಸಹೋದರರು ಬೀದಿಯಲ್ಲಿ ಅಲೆಯುವುದನ್ನು ನೋಡಿದ್ದೆ. ಅವರ ಬಗ್ಗೆ ವರದಿ ಬರೆಯಲು ಅವರು ವಾಸವಾಗಿದ್ದ ತೋಟದ ಮನೆಗೆ ಹೋದೆ.

ಅಲ್ಲಿ ಐವರು ಬುದ್ಧಿಮಾಂದ್ಯ ಯುವಕರು ಇರುವುದನ್ನು ನೋಡಿ ಚಕಿತನಾದೆ. ಇವರೆಲ್ಲ 18–25 ವರ್ಷ ವಯಸ್ಸಿನವರು. ತೋಟದಲ್ಲಿ ಕೆಲಸಮಾಡುತ್ತಿದ್ದ ಈ ಮಕ್ಕಳ ತಂದೆ ನಾನು ಬಂದಿರುವುದನ್ನು ಗಮನಿಸಿ ನನ್ನ ಬಳಿಗೆ ಬಂದರು. ನಾನು ಬಂದ ಉದ್ದೇಶ ಹೇಳಿದೆ. ‘ನೀವು ಪೇಪರಿನಲ್ಲಿ ಬರೆಯಿರಿ, ಆದರೆ ಸರಕಾರ ಅಥವಾ ಸಂಘ ಸಂಸ್ಥೆಗಳು ಈ ಮಕ್ಕಳಿಗೆ ಹಣ ಸಹಾಯ ಮಾಡಬೇಕು ಎಂದು ಮಾತ್ರ ಬರೆಯಬೇಡಿರಿ. ನಮಗೆ ಯಾರ ಸಹಾಯವೂ ಬೇಕಾಗಿಲ್ಲ’ ಎಂದು ಪೀರಸಾಬ ಹೇಳಿದ.

ನನ್ನ ವರದಿ ರಾಜ್ಯಮಟ್ಟದ ವರದಿಯಾಗಿ ಪ್ರಕಟವಾಯಿತು. ಸಂಜೆ ಪೀರಸಾಬ ಪತ್ರಿಕೆ ಕೈಯಲ್ಲಿ ಹಿಡಿದುಕೊಂಡು ನಮ್ಮ ಮನೆಗೆ ಬಂದ. ‘ನಾನು  ನಿಮಗೆ ಸರಕಾರದ ಸಹಾಯ ಬೇಕು ಎಂದು ಬರೆಯಬೇಡ ಅಂತ ಹೇಳಿದ್ದೆ. ಆದರೆ ನೀವು ಸರಕಾರ ಸಹಾಯ ಮಾಡಬೇಕು ಎಂದು ಯಾಕೆ ಬರೆದಿದ್ದೀರಿ?’ ಎಂದು ಪ್ರಶ್ನಿಸಿದ.

‘ನಿಮಗೆ ಓದಲು ಬರುವುದಿಲ್ಲವೆ? ನಾನು ಸಹಾಯ ಬೇಕು ಎಂದು ಬರೆದೇಯಿಲ್ಲ. ಒಂದೇ ಕುಟುಂಬದಲ್ಲಿ ಐವರು ಬುದ್ಧಿಮಾಂದ್ಯರು ಇರುವ ಬಗ್ಗೆ ಮಾತ್ರ ಬರೆದಿರುವೆ’ ಎಂದು ಹೇಳಿದೆ. ‘ನನಗೆ ಓದಲು ಬರೆಯಲು ಬರುವುದಿಲ್ಲ. ಕೆಲವರು ನನಗೆ ಹಾಗೆ ಹೇಳಿದರು’ ಎಂದು ಪೀರಸಾಬ ವಿವರಿಸಿದ.

ಪೀರಸಾಬ ಸ್ವಲ್ಪ ಸಮಾಧಾನಗೊಂಡಂತೆ ಕಾಣಿಸಿತು. ಪೀರಸಾಬ ತನಗೆ ಸರಕಾರದ ಸಹಾಯ ಬೇಡ ಎಂದು ಇಷ್ಟು ಗಟ್ಟಿಯಾಗಿ ಯಾಕೆ ಹೇಳುತ್ತಾನೆ?  ಕಾರಣ ಏನಿರಬಹುದು? ಎಂಬ ಪ್ರಶ್ನೆ ಕಾಡತೊಡಗಿತು.

‘ಸರಕಾರ ಸಹಾಯ ಬೇಡವೇ ಬೇಡ ಎಂದು ಹಟ ಯಾಕೆ ನಿಮಗೆ?’ ಎಂದು ನಾನು ನಿಧಾನವಾಗಿ ಕೇಳಿದೆ. ಆತ ಹೇಳಿದ ಉತ್ತರ ಲೋಕದ ಕಣ್ಣು ತೆರೆಸುವಂತೆ ಇತ್ತು.

‘ಸರ್ ನನಗೆ 8 ಎಕರೆ ತೋಟ ಇದೆ. ಕಬ್ಬು ಬೆಳೆಯುತ್ತೇನೆ. ಎಮ್ಮೆಗಳಿವೆ, ಆಡುಕುರಿಗಳನ್ನು ಸಾಕಿದ್ದೇನೆ. ಕೋಳಿ ಸಾಕಿದ್ದೇನೆ. ನನ್ನ 5 ಜನ ಮಕ್ಕಳು ಅಷ್ಟಿಷ್ಟು ಕೃಷಿ ಕೆಲಸ ಮಾಡುತ್ತಾರೆ. ನಾನು ಹಜ್ ಯಾತ್ರೆಗೆ ಹೋಗಿ ಬಂದಿದ್ದೇನೆ. ಹಜ್ ಯಾತ್ರೆ ಮಾಡಿದವರು ಪರರ ದುಡ್ಡಿಗೆ ಆಸೆ ಪಡಬಾರದು. ನನಗೆ ಹರಾಮಿ ದುಡ್ಡು ಬೇಡ’ ಎಂದು ಪೀರಸಾಬ ಹೇಳಿದ.

ಸರಕಾರದ ದುಡ್ಡು ಹೇಗಾದರೂ ಮಾಡಿ ಗಿಟ್ಟಿಸಲು ಹವಣಿಸುವವರು ಬಹಳ ಜನ ಇದ್ದಾರೆ. ಅವರ ನಡುವೆ ಪೀರಸಾಬ ಒಂದು ಬೆಳಕಿನ ಗೆರೆಯಂತೆ ಕಾಣುತ್ತಾನೆ.
–ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT