ADVERTISEMENT

ಸರ್ನನ್ ಸಾಹಸ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಸರ್ನನ್ ಸಾಹಸ
ಸರ್ನನ್ ಸಾಹಸ   
ಗಗನಯಾತ್ರಿ ಯೂಜಿನ್ ಸರ್ನನ್ ಇದೇ ವರ್ಷ ಜನವರಿ 16ರಂದು ಮೃತಪಟ್ಟಾಗ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅಮೆರಿಕದ ಅವರು ಚಂದ್ರನ ಮೇಲೆ ಹೆಜ್ಜೆಗುರುತು ಮೂಡಿಸಿಬಂದಿದ್ದಷ್ಟೇ ಅಲ್ಲ, ಬಾಹ್ಯಾಕಾಶದಲ್ಲಿ ನಡೆದಾಡಿದ ಮೂರನೆಯ ಮನುಷ್ಯ ಎನಿಸಿಕೊಂಡವರು. 
 
1966ರಲ್ಲಿ ಸರ್ನನ್ ‘ಜೆಮಿನಿ 9’ ಗಗನನೌಕೆಯಿಂದ ಆಚೆ ಬಾಹ್ಯಾಕಾಶದಲ್ಲಿ ಎರಡು ತಾಸು ಕಳೆದರು. ಆಗ ಸಾವಿನಂಚಿಗೆ ಹೋಗಿ, ಕೊನೆಗೂ ಅವರು ಬದುಕುಳಿದದ್ದೇ ಹೆಚ್ಚು. ‘ನಾಸಾ’ ಆಗಿನ್ನೂ ಬಾಹ್ಯಾಕಾಶದಲ್ಲಿ ನಡೆದಾಡಲು ಅಗತ್ಯವಿದ್ದ ಸುರಕ್ಷಾ ತಂತ್ರಜ್ಞಾನವನ್ನು ಅಷ್ಟಾಗಿ ಅಭಿವೃದ್ಧಿಪಡಿಸಿರಲಿಲ್ಲ. ನಿರ್ವಾತದಲ್ಲಿ ನಡೆದಾಡಲು ಹಾಕಿಕೊಳ್ಳಬೇಕಿದ್ದ ‘ಸ್ಪೇಸ್‌ ಸೂಟ್’ ಭಾರವಿತ್ತು. 
 
ಸರ್ನನ್ ಬೆವರಿನಲ್ಲಿ ತೋಯ್ದುಹೋದರು. ದೇಹದ ತೇವಾಂಶ ಸಂಪೂರ್ಣ ಇಲ್ಲವಾಯಿತು. ಉಸಿರುಗಟ್ಟುವ ಸ್ಥಿತಿಯಲ್ಲೇ ಹೇಗೊ ಸಾವರಿಸಿಕೊಂಡು ಅವರು ಸುರಕ್ಷತಾ ಸ್ಥಳ ತಲುಪಬೇಕಾಯಿತು. ಬದುಕುಳಿದರಾದರೂ ಜೀವ ಬಾಯಿಗೆ ಬಂದಿತ್ತು. 
 
‘ಮೈಕ್ರೋ ಗ್ರ್ಯಾವಿಟಿ’ ವಾತಾವರಣದಲ್ಲಿ ಓಡಾಡಲು ಅಗತ್ಯವಿರುವ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು ಎಂದು ‘ನಾಸಾ’ಗೆ ಇದರಿಂದ ಮನವರಿಕೆಯಾಯಿತು. ‘ಸ್ಪೇಸ್‌ ಸೂಟ್’ಗಳನ್ನು ತಣ್ಣಗಿನ ಅನುಭವ ನೀಡುವಂತೆ ಮರುವಿನ್ಯಾಸಗೊಳಿಸಲಾಯಿತು. 1969ರ ಮೇನಲ್ಲಿ ‘ಅಪೊಲೊ 10’ ಗಗನನೌಕೆಯ ಮೂಲಕ ಸರ್ನನ್ ಮತ್ತೆ ಬಾಹ್ಯಾಕಾಶ ತಲುಪಿದರು. ಚಂದ್ರನ 50,000 ಅಡಿ ಮೇಲ್ಮೈ ಅನ್ನು ನೋಡಿಬಂದರು. 
 
1972ರ ಡಿಸೆಂಬರ್ನಲ್ಲಿ ‘ಅಪೊಲೊ 17’ ಯಾನದ ಕಮಾಂಡರ್ ಆಗುವ ಅವಕಾಶ ಅವರಿಗೆ ಸಿಕ್ಕಿತು. ಚಂದ್ರನತ್ತ ಕೊನೆಯ ಯಾನ ಅದಾಗಿತ್ತು. ಲ್ಯೂನಾರ್ ಪರ್ವತಗಳನ್ನು ಏರಿ ಅವರು ಹಾಗೂ ಸಹವರ್ತಿಗಳು ಒಂದಿಷ್ಟು ಮಾಹಿತಿ ಸಂಗ್ರಹಿಸಿದರು. ನೌಕೆಯನ್ನು ಹತ್ತುವ ಮೊದಲು ಚಂದ್ರನ ಮೇಲೆ ‘ಟಿ.ಡಿ.ಸಿ’ ಎಂದು ದೊಡ್ಡಕ್ಷರಗಳನ್ನು ಕೆತ್ತಿದರು. ಅದು ಅವರ ಮಗಳು ಟ್ರೇಸಿಯ ಇನಿಷಿಯಲ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.