ADVERTISEMENT

ಸಾವಿನ ಮಂಪರಿಂದ ಹೊರತಂದ ಕಂದನ ಕರೆ

ಭಾವಸೇತು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 19:30 IST
Last Updated 31 ಡಿಸೆಂಬರ್ 2016, 19:30 IST
ಚಿತ್ರಗಳು: ಮದನ್ ಸಿ.ಪಿ.
ಚಿತ್ರಗಳು: ಮದನ್ ಸಿ.ಪಿ.   
ನಸುಕಿನ ಆರರ ಸುಮಾರಿಗೆ ನನ್ನ ಮೊಬೈಲಿಗೆ ಕರೆ ಮಾಡಿ ಜೋರಾಗಿ ಅಳತೊಡಗಿದ ಆಕೆಯ ವರ್ತನೆಯಿಂದ ಒಮ್ಮೆಲೆ ಗಾಬರಿಯಾಗಿತ್ತು! ರೋದಿಸುತ್ತಿದ್ದವಳಿಗೆ ತುಸು ಸಮಾಧಾನ ಹೇಳಿ ಚಿಕಿತ್ಸೆಗೆ ಅಗತ್ಯವಾದ ಮಾಹಿತಿ ಕಲೆಹಾಕಿ, ಔಷಧಿಯ ಕಿಟ್‌ನೊಂದಿಗೆ ಹತ್ತು ಮೈಲು ದೂರದ ಆ ಮಹಿಳೆಯ ಮನೆಯತ್ತ ಬೈಕು ಓಡಿಸಿದೆ. ಹಸುವಿನ ಪರಿಸ್ಥಿತಿ ಗಂಭೀರವಾಗಿತ್ತು. 
 
ಮನೆಯವರ ಮುದ್ದಿನ ಜರ್ಸಿ ದನ ಆಗಲೋ ಈಗಲೋ ಕೊನೆಯುಸಿರು ಎಳೆಯುವಂತೆ ಬಿದ್ದಿದೆ. ಕಣ್ಣಾಲಿಗಳು ಮುಚ್ಚಿಕೊಂಡಿವೆ. ಕುತ್ತಿಗೆ–ಕಾಲುಗಳು ಸೆಟೆದುಕೊಂಡಿವೆ, ಹೃದಯ ಕ್ಷೀಣವಾಗಿ ಬಡಿದುಕೊಳ್ಳುತ್ತಿದೆ. ತಣ್ಣಗಾಗುತ್ತಿರುವ ದೇಹ ತುರ್ತುಚಿಕಿತ್ಸೆಯನ್ನು ಬೇಡುತ್ತಿದೆ. ಅದರ ಮಾಲೀಕಳ ಸ್ಥಿತಿಯೂ ಕರುಣಾಜನಕ. ಅತ್ತು ಅತ್ತು ಕಣ್ಣುಗಳು ಕೆಂಪಾಗಿವೆ. ಹಸುವಿನ ಹಣೆಯನ್ನು ಸವರುತ್ತಾ ಅಲ್ಲಿಯೇ ಕುಸಿದು ಕುಳಿತಿದ್ದಾಳೆ. ಗಂಡ ಬೇರೆ ಊರಲ್ಲಿಲ್ಲ. ಅಮ್ಮನ ಸ್ಥಿತಿ, ಹಸುವಿನ ಪರಿಸ್ಥಿತಿ ಕಂಡು ಬೆಪ್ಪಾಗಿ ಕುಳಿತಿವೆ ಪುಟ್ಟ ಮಕ್ಕಳೆರಡು!
 
ಬಾಣಂತಿ ದನಗಳಲ್ಲಿ ಇದ್ದಕ್ಕಿದ್ದಂತೆ ರಕ್ತದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾದಾಗ ಹೀಗಾಗುವುದುಂಟು. ಡ್ರಿಪ್ ಸೆಟ್‌ನ ಮೂಲಕ ಹನಿ ಹನಿಯಾಗಿ ಸುಣ್ಣದ ದ್ರಾವಣ ರಕ್ತಕ್ಕೆ ಸೇರಿಸತೊಡಗಿದೆ. ನನ್ನ ನಿರ್ಧಾರ ಸರಿಯೆನ್ನುವಂತೆ ಅರ್ಧ ಬಾಟಲ್ ದ್ರಾವಣ ಖಾಲಿಯಾಗುತ್ತಿದ್ದಂತೆ ಕ್ಷೀಣವಾಗಿದ್ದ ಉಸಿರಾಟ ಸರಾಗವಾಯ್ತು, ಹೃದಯದ ಬಡಿತ ಸಹಜವಾಗತೊಡಗಿತು. ಮೆಲ್ಲನೆ ಕಣ್ಣು ಆಡಿಸುವುದನ್ನು ಕಂಡ ಅವಳ ಮೊಗದಲ್ಲಿ ಭರವಸೆ. ಒಂದು ಗಂಟೆಯಲ್ಲಿ ಒಂದು ಬಾಟಲ್ ಔಷಧ ದೇಹ ಸೇರಿದರೂ ಅದು ತಲೆ ಎತ್ತಲಿಲ್ಲ. ಕುತ್ತಿಗೆ, ಕಾಲುಗಳು ಇನ್ನೂ ಸೆಟೆದುಕೊಂಡೇ ಇದ್ದವು. ಬಹುಶಃ ಇನ್ನೊಂದು ಬಾಟಲ್ ಔಷಧ ಬೇಕಾಗಬಹುದು. ನನ್ನ ಅನುಭವದಂತೆ ಔಷಧ ಒಳ ಸೇರುತ್ತಿರುವಾಗಲೆ ಹಸು ದಢಕ್ಕನೆ ಎದ್ದು ನಿಂತು ಹುಲ್ಲೂ ತಿನ್ನಬೇಕು! ಆದರೆ ನಿರೀಕ್ಷೆ ಹುಸಿಯಾಗುವಂತೆ ಎರಡನೇ ಬಾಟಲ್ ಖಾಲಿಯಾಗುತ್ತಾ ಬಂದರೂ ಎದ್ದು ನಿಲ್ಲುವುದು ಹೋಗಲಿ, ತಲೆಯನ್ನೂ ಮೇಲೆತ್ತಲಿಲ್ಲ. ಮುಂದೇನು ಮಾಡಲಿ? 
 
ನನ್ನ ಮಂಡೆ ಬಿಸಿಯಾಗತೊಡಗಿತು. ಲೆಕ್ಕಾಚಾರವೆಲ್ಲಾ ತಪ್ಪುತ್ತಿದೆ. ಈಗ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದರೆ ಆಕೆ ಪುನಃ ಗೋಳಾಡುತ್ತಾಳೆ. 
 
ಥಟ್ಟನೆ ಆಲೋಚನೆಯೊಂದು ಮೊಳೆಯಿತು. ಹಸುವಿನ ಮೈದಡವುತ್ತಿದ್ದವಳಿಗೆ ಅದರ ಕರು ತರುವಂತೆ ಹೇಳಿದೆ. ಕೊಟ್ಟಿಗೆಯ ಮೂಲೆಯಲ್ಲಿ ಮಲಗಿದ ಕರುವನ್ನು ಎಬ್ಬಿಸಿಕೊಂಡು ಬಂದಳು. ಕರುವನ್ನು ನಿಧಾನವಾಗಿ  ತಾಯಿಯ ಮುಖದ ಹತ್ತಿರ ತಂದೆ. ತಾಯಿಯನ್ನು ಮೂಸುತ್ತಾ ಅದು ಸಣ್ಣಗೆ ‘ಅಂಬಾ...’ ಅಂದಿದ್ದೇ ತಡ ಪ್ರಜ್ಞೆಯೇ ಇಲ್ಲದಂತೆ ಮಲಗಿದ್ದ ಹಸು ತಾನೂ ‘ಅಂಬಾ’ ಎಂದು ಕೂಗುತ್ತಾ ಎದ್ದು ನಿಂತೇಬಿಟ್ಟಿತು! ನರನಾಡಿಗಳಲ್ಲಿ ವಾತ್ಸಲ್ಯದ ಪ್ರವಾಹ ಹರಿದಂತೆ ಕಂದನನ್ನು ನೆಕ್ಕತೊಡಗಿತು. ಮಾತೃಪ್ರೇಮದ ಆ ಪರಿಗೆ ನಾನೂ ದಂಗಾಗಿದ್ದೆ. ಆಕೆಯಂತೂ ಖುಷಿಯನ್ನು ತಡೆಯಲಾಗದೆ ಹಸುವಿನ ಮೊಗವನ್ನು ಬಾಚಿ ತಬ್ಬಿಕೊಳ್ಳುತ್ತಾ  ನನ್ನತ್ತ ಕೃತಜ್ಞತೆಯಿಂದ ನೋಡಿದಾಗ ನಾನೂ ಭಾವುಕನಾಗಿದ್ದೆ!
–ಡಾ. ಮುರಳೀಧರ ಕಿರಣಕೆರೆ, ತೀರ್ಥಹಳ್ಳಿ          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.