ADVERTISEMENT

ಹೂಮನೆ ಮತ್ತು ನಾನು

ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನಿತ ಕವಿತೆ

ಕಾವ್ಯಶ್ರೀ ನಾಯ್ಕ
Published 26 ಅಕ್ಟೋಬರ್ 2013, 19:30 IST
Last Updated 26 ಅಕ್ಟೋಬರ್ 2013, 19:30 IST

ಸೇವಂತಿಗೆ, ಇರುವಂತಿಗೆ, ಕನಕಾಂಬರ
ಮೊಲ್ಲೆ ಕರವೀರ
ತೀರಾ ಇತ್ತೀಚಿನ ಜರ್ಬೆರಾ
ಎಲ್ಲವೂ ಇದೆ
ಮೊನ್ನೆ ಊಟಿಯಿಂದ ಅಪ್ಪನ ಜೊತೆ
ಹೊಸದೊಂದು ಬಂತು
ಕಾಶೀಯಾತ್ರೆಯಿಂದ ಅಜ್ಜ ತಂದಿದ್ದಕ್ಕೆ
ಎಲೆಗಳೇ ಇಲ್ಲ
ಬಳ್ಳಿಗೆ ಹೂಭಾರವಲ್ಲ

"ರೇರ್ ಕಲೆಕ್ಷನ್" ತುಂಬಾ ಚೆನ್ನಾಗಿವೆ
ಅಮ್ಮನೆದೆಯಲ್ಲಿ ನೂರು
ಹೂಗಳ ಪರಿಷೆ
ಪೇಪರಿನ ಮರೆಯಲ್ಲೇ ತುಳುಕಿದ್ದು
ಅಪ್ಪನ ಮೀಸೆ
ನಾನೂ ಅಷ್ಟೆ, ಮೋಟುದ್ದ ಜಡೆಗೆ
ಮಾರುದ್ದ ಹೂಮುಡಿದು
ನೆಲಗುಡಿಸಿದ್ದ ನೆನಪು

ಸೆಂಟಿಮಂಟಲ್ ಅಜ್ಜಿಯುಸಿರು
ಬಾಗಿಲೆದುರಿನ ಪಾರಿಜಾತಗಿಡದಲ್ಲಿ
ಪುಷ್ಪಾರ್ಚನೆಯಿಂದಲೇ ಆಕೆ
ಮೊಳಕೆಯೊಡದದ್ದಂತೆ

ಆಷಾಢದ ಮಳೆಯಲ್ಲೂ
ಬೆಚ್ಚಗೆ ಮಲಗಿದ್ದೆ
ಹೂಮನೆಯ ಮಾಳಿಗೆ ಮೇಲೆ
ಜಡಿಗಾಳಿ ಜಿನುಗುಝರಿಗಳ್ಯಾವವೂ
ಎನ್ನೊಳಗೆಲ್ಲ ಹರಿಯೆ!
ರಾತ್ರೋರಾತ್ರಿ ಅಚ್ಚಬಿಳಿ ಫ್ರಾಕಿನ ತುಂಬ
ಕೆಂಪು ಹೂವರಳಿ ನಿಂತಿದ್ದವು...
ಅಷ್ಟೆ...

ADVERTISEMENT

ನೋಡಲಾಗದು ಗೆಳತಿ
ಹೂಮನೆಯ ಮಂದಿಯ
ಕಪ್ಪಿಟ್ಟ ಮುಖ
ನೀ ಏನೇ ಅನ್ನು
ನೂರ್ದೆಸೆಯಿಂದ ನುಗ್ಗುವ
ಚಳಿಗಾಳಿಗೆ ಮುಂದಣ ಜಗುಲಿ
ಹೇಳಿಮಾಡಿಸಿದ್ದಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.