ADVERTISEMENT

ಹೂವಿನ ಸಂತೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 19:30 IST
Last Updated 14 ಜನವರಿ 2017, 19:30 IST
ಹೂವಿನ ಸಂತೆ
ಹೂವಿನ ಸಂತೆ   

ಹೂವಿನ ಸಂತೆ

ಹೂವಿನ ಸಂತೆ ಇದು ಹೂವಿನ ಸಂತೆ
ಮರೆತು ಬನ್ನಿರಿ ಸೊಪ್ಪು ಮೆಂತೆ
ಬಿಟ್ಟು ಬನ್ನಿರಿ ತರಕಾರಿ ಕಂತೆ
ಮಾಡುವುದಿಲ್ಲ ಗುಲಾಬಿ ‘ಲಾಬಿ’
ಕಣ್ಣಿಗೆ ಸೊಂಪಿನ ಜಿಲೇಬಿ!
ಹೂವಿನ ಸಂತೆ ಇದು ಹೂವಿನ ಸಂತೆ

ಹೂವಿನ ಸಂತೆ ಇದು ಹೂವಿನ ಸಂತೆ
ಕನಕಾಂಬರದ ಬಿಳಿ ಬಿಳಿ ತೊಟ್ಟು
ಬರಬರ ಜೋಡಿಸಿ ಮಾಲೆಯ ಕಟ್ಟು
ಅರಳಿದೆ ಮಲ್ಲಿಗೆ ಹೂ ಬಾಲೆ
ತುರುಬಿಗೆ ಅಂದದ ತೋಮಾಲೆ!
ಹೂವಿನ ಸಂತೆ ಇದು ಹೂವಿನ ಸಂತೆ
ಹೂವಿನ ಸಂತೆ ಇದು ಹೂವಿನ ಸಂತೆ
ಕಣ್ಣಾಮುಚ್ಚೇ ಆಡುವ ಕಾಕಡ
ಎಲೆ ಮರೆಯಲ್ಲಿ ಅಡಗಿದೆ ಪಾಕಡ
ಬಣ್ಣವ ತೋರಿದೆ ದಾಸವಾಳ
ಗಾತ್ರವೆ ಇದರ ಜೀವಾಳ!
ಹೂವಿನ ಸಂತೆ ಇದು ಹೂವಿನ ಸಂತೆ

ADVERTISEMENT

ಹೂವಿನ ಸಂತೆ ಇದು ಹೂವಿನ ಸಂತೆ
ತುತ್ತೂರಿ ಊದಿದೆ ಸ್ಪಟಿಕ
ಬಳ್ಳಿಯು ಬಳುಕಿತು ಬಳಿಕ
ಚಿಟ್ಟೆಯ ಕಣ್ಣಿಗೆ ಆಸೆಯ ನೋಟ
ಮಧುವನು ಹೀರಿ ಕಿತ್ತಿತು ಓಟ!
ಹೂವಿನ ಸಂತೆ ಇದು ಹೂವಿನ ಸಂತೆ
*
-ಟಿ.ಎಸ್‌. ನಾಗರಾಜ ಶೆಟ್ಟಿ

***

-ನಲ್ಲಿಯ ಅಳು

ಅಮ್ಮ ಅಮ್ಮ
ಅಡುಗೆಮನೆ ನಲ್ಲಿ
ಸದಾ ಅಳುವುದು ಏಕಮ್ಮ?

ಹೆಚ್ಚಿದ ಈರುಳ್ಳಿಯ ಕಾರಣವೆ?
ಒಗ್ಗರಣೆಯ ಘಾಟಿನ ಕಾರಣವೆ?
ದಿನವೂ ನೀನದರ ಕಿವಿ ಹಿಂಡುವೆಯೇ?
ಒಂಟಿಕಾಲಲಿ ನಿಂತೂ ನಿಂತೂ ನೋವಾಯ್ತೆ?
ಜನರು ನೀರನು ಪೋಲು ಮಾಡುವರೆಂದೆ?

ಹೀಗೆ ಒಂದರ ಹಿಂದೆ ಒಂದು
ಪ್ರಶ್ನೆಗಳ ಪೋಣಿಸಿದ ಚಂದು
ಅಮ್ಮ ಬಾಯಿ ಬಿಡುವುದರೊಳಗೆ
ಕರವಸ್ತ್ರವೊಂದನು ತಂದು
ಸೋರುವ ನಲ್ಲಿಯ ಬಂಧಿಸಿದ

ಅಮ್ಮ ಅಮ್ಮ
ನಲ್ಲಿ ಅಳುವುದ ನಿಲ್ಲಿಸಿತೆಂದು
ಚಪ್ಪಾಳೆ ತಟ್ಟುತ ನಲಿದ.

*
-ವಿಜಯಕುಮಾರ್‌ ಹುತ್ತನಹಳ್ಳಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.