ADVERTISEMENT

ಹೊಂಜು ಕವಿದಾಗ...

ಮಿನುಗು ಮಿಂಚು

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಹೊಂಜು ಕವಿದಾಗ...
ಹೊಂಜು ಕವಿದಾಗ...   
* ಹೊಂಜು ಎಂದರೇನು?
ಮಂಜು ಹಾಗೂ ಹೊಗೆ ಎರಡೂ ಸೇರಿದ ಕಣಗಳಿಂದ ವಾಯುಮಾಲಿನ್ಯವಾಗುತ್ತದೆ. ಅದನ್ನು ‘ಹೊಂಜು’ ಎನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಅದನ್ನು ‘ಸ್ಮಾಗ್’ ಎನ್ನುತ್ತಾರೆ. 1900ರಲ್ಲಿ ಲಂಡನ್‌ನಲ್ಲಿ ಆವರಿಸಿದ್ದ ಮಂಜು ಹಾಗೂ ಹೊಗೆಯನ್ನು ಬಣ್ಣಿಸಲು ಮೊದಲು ‘ಸ್ಮಾಗ್’ ಎಂಬ ಪದವನ್ನು ಬಳಸಲಾಯಿತು. ಕಲ್ಲಿದ್ದಲನ್ನು ಹೆಚ್ಚಿನ ಪ್ರಮಾಣದಲ್ಲಿ ಉರಿಸಿದ್ದರಿಂದ ಅಲ್ಲಿ ವಾಯುಮಾಲಿನ್ಯ ಉಂಟಾಗಿತ್ತು. 
 
* ಅದಕ್ಕೆ ಕಾರಣವೇನು?
ವಾಹನಗಳು ಉಗುಳುವ ಹೊಗೆ, ಕೈಗಾರಿಕೆಗಳು ಹಾಗೂ ವಿದ್ಯುದಾಗಾರಗಳಿಂದ ಹೊರಬರುವ ಹೊಗೆಯಿಂದ ನಗರಗಳಲ್ಲಿ ನೈಟ್ರೊಜನ್ ಆಕ್ಸೈಡ್‌ ಪ್ರಮಾಣ ಹೆಚ್ಚಾಗುತ್ತಿದೆ. ಸೂರ್ಯನ ಕಿರಣಗಳಿಗೂ ಈ ಮಾಲಿನ್ಯಕಾರಕಗಳಿಗೂ ಸಂಪರ್ಕ ಉಂಟಾದಾಗ ರಾಸಾಯನಿಕ ಕ್ರಿಯೆ ನಡೆಯುತ್ತದೆ. ಹೀಗಾದಾಗ ಓಜೋನ್ ಪದರಕ್ಕೂ ತೊಂದರೆ ಉಂಟುಮಾಡಬಲ್ಲ ‘ಹೊಂಜು’ ರೂಪುಗೊಳ್ಳುತ್ತದೆ. 
 
* ಹೊಂಜು ಅಪಾಯಕಾರಿ ಯಾಕೆ?
ಹೊಂಜು ಕವಿದಾಗ ಜನರಿಗೆ ಜ್ವರ ಬರುತ್ತದೆ. ಮಕ್ಕಳು ಹಾಗೂ ವೃದ್ಧರಿಗೆ ಬೇಗ ಸಮಸ್ಯೆ ಉಂಟಾಗುತ್ತದೆ. ಉಸಿರಾಡುವುದು ಕಷ್ಟವಾಗುತ್ತದೆ. ದೃಷ್ಟಿ ಮಂದವಾಗುತ್ತದೆ. ಅಸ್ತಮಾ ಹಾಗೂ ಕಣ್ಣಿನ ಉರಿ ಉಂಟಾಗುತ್ತದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತವೆ. 
 
* ಹೊಂಜಿನ ಸಮಸ್ಯೆ ಹೆಚ್ಚಾಗಿರುವ ನಗರಗಳು ಯಾವುವು?
ಚೀನಾದ ಬೀಜಿಂಗ್, ಇರಾನ್‌ನ ಅಹ್ವಾಜ್, ಮಂಗೋಲಿಯಾದ ಉಲಾನ್ ಬಟೋರ್, ಪಾಕಿಸ್ತಾನದ ಲಾಹೋರ್ ಹಾಗೂ ಭಾರತದ ದೆಹಲಿ ಹೊಂಜಿನ ಪ್ರಮಾಣ ಹೆಚ್ಚಾಗಿರುವ ನಗರಗಳು. 
 
* ದೆಹಲಿಯಲ್ಲಿ ಹೊಂಜು ರೂಪುಗೊಳ್ಳಲು ಕಾರಣವೇನು?
ಈ ವರ್ಷ ನವೆಂಬರ್‌ನಲ್ಲಿ ಎರಡು ದಶಕಗಳಲ್ಲೇ ಕಂಡರಿಯದ ಪ್ರಮಾಣದ ಹೊಂಜು ದೆಹಲಿಯನ್ನು ಕವಿಯಿತು. ನೆರೆಯ ರಾಜ್ಯಗಳಾದ ಪಂಜಾಬ್ ಹಾಗೂ ಹರಿಯಾಣದಲ್ಲಿ ಬೆಳೆಗಳನ್ನು ಸುಟ್ಟಿದ್ದರ ಪರಿಣಾಮ ಈ ಹೊಂಜು ದಟ್ಟವಾಯಿತು ಎನ್ನಲಾಗಿದೆ.
 
ಪಟಾಕಿಗಳನ್ನು ಸಿಡಿಸುವುದು ಹಾಗೂ ವಾಹನಗಳು ಹೊಮ್ಮಿಸುವ ಹೊಗೆಯೂ ಇದಕ್ಕೆ ಕಾರಣ. ದೆಹಲಿ ಸರ್ಕಾರವು ಪ್ರಮುಖ ರಸ್ತೆಗಳಿಗೆ ನೀರು ಚಿಮುಕಿಸುವುದು, ನಿರ್ಮಾಣ ಕಾಮಗಾರಿಗಳನ್ನು ನಿಲ್ಲಿಸುವುದು ಹಾಗೂ ಹಳೆಯ ಕಟ್ಟಡಗಳ ನಾಶಪಡಿಸುವುದನ್ನು ಐದು ದಿನಗಳ ಕಾಲ ನಿಲ್ಲಿಸಿತು. ಶಾಲೆಗಳಿಗೂ ರಜೆ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.