ADVERTISEMENT

ಹೊಳೆ

ಚಂದ ಪದ್ಯ

ರಾಧೇಶ ತೋಳ್ಪಾಡಿ ಎಸ್.
Published 11 ಅಕ್ಟೋಬರ್ 2014, 19:30 IST
Last Updated 11 ಅಕ್ಟೋಬರ್ 2014, 19:30 IST
ಈಶ್ವರ ಬಡಿಗೇರ
ಈಶ್ವರ ಬಡಿಗೇರ   

ಜುಳು ಜುಳು ಕುಲು ಕುಲು ಉಲಿಯುತ್ತ
ಫಳ ಫಳ ಹೊಳೆಯುತ ಬಳುಕುತ್ತ
ಚುಳು ಪುಳು ಚುಳು ಪುಳು ತುಳುಕುತ್ತ
ಇಳೆಯವ್ವನ ಮೈ ತಳೆಯುತ್ತ

ಹೊಳೆ ಹೊಳೆ ಹೊಳೆ ಹೊಳೆ ಸಾಗುತಿದೆ
ಎದೆಯೊಳಗೇನೋ ಆಗುತಿದೆ!

ಓಡುತ ನಡೆಯುತ ಚಣ ನಿಂತು
ತನ್ನನು ತಾನೇ ಸುತ್ತುವುದು
ಫಕ್ಕನೆ ಏನನೊ ನೆನೆಯುತ್ತ
ಕೆನೆಯುತ ಯಾತಕೊ ತೊನೆಯುವುದು

ADVERTISEMENT

ತನ್ನದೆ ತಾಳಕೆ ಕುಣಿಯುವುದು
ಕುಣಿಯುತ ದಣಿಯುತ ಮಣಿಯುವುದು

ತೆರೆ ತೆರೆ ಆಡುತ ನೊರೆ ಬುರುಗು
ನೀಲಿಯ ಸೀರೆಗೆ ಹೂ ಮೆರುಗು
ಚಣ ಚಣ ಹೊಸ ಹೊಸ ವಿನ್ಯಾಸ
ಮರೆಯದೆ ಋಷಿಗೂ ಸನ್ಯಾಸ?

ಅಳುವುದೊ ನಗುವುದೊ ಗೊತ್ತಿಲ್ಲ
ಹೇಳಲು ಕೇಳಲು ಹೊತ್ತಿಲ್ಲ!

ಮೀನುಗಳೊಂದಿಗೆ ಓಡುತ್ತ
ಬಂಡೆಗಳೊಂದಿಗೆ ಹಾಡುತ್ತ
ದಡಗಳ ಗಿಡಗಳ ನೋಡುತ್ತ
ಹಾಡಿನ ನೀರನು ಊಡುತ್ತ

ಜಡ ಚೇತನಗಳ ಪೊರೆಯುವುದೆ?
ನದಿಯದೆ ಬೆಚ್ಚಗೆ ಮಿಡಿಯುವುದೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.