ADVERTISEMENT

‘ಬೀಯಿಂಗ್‌ ಯು’: ಒಂದು ಮನ ಮಿಡಿಯುವ ಕಥೆ!

ವಿಜಯ್ ಜೋಷಿ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ತಾಯಿ ನೂರಿ ಜೊತೆ ನಿಖಿತಾ ಮತ್ತು ನೇಹಾ
ತಾಯಿ ನೂರಿ ಜೊತೆ ನಿಖಿತಾ ಮತ್ತು ನೇಹಾ   

‘ಮೊದಲೆಲ್ಲ ನನ್ನ ಸ್ನೇಹಿತರು ಫೇಸ್‌ಬುಕ್‌ ಮೂಲಕ ತಮ್ಮ ಖುಷಿಗಳ ಬಗ್ಗೆ, ಚಿಕ್ಕಪುಟ್ಟ ಬೇಸರಗಳ ಬಗ್ಗೆ, ತಾವು ಮನಸಾರೆ ನಕ್ಕ ಸಂಗತಿಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ನನ್ನ ಫೇಸ್‌ಬುಕ್‌ ಸ್ನೇಹಿತರೆಲ್ಲರೂ ಎಡ, ಬಲ, ಹಿಂದೂ, ಮುಸ್ಲಿಂ ವಿಷಯಗಳ ಬಗ್ಗೆ ಮಾತ್ರ ಮಾತನಾಡಲು ಆರಂಭಿಸಿದ್ದಾರೆ...’ ಎಂದು ಹೆಣ್ಣುಮಗಳೊಬ್ಬಳು ಈಚೆಗೆ ಮಾತಿನ ನಡುವೆ ಹೇಳಿದರು. ಫೇಸ್‌ಬುಕ್‌ನಲ್ಲಿ ಇರುವವರೆಲ್ಲರೂ ಈ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎನ್ನಲಾಗದಿದ್ದರೂ, ಅವರ ಮಾತಿನಲ್ಲಿ ಒಂದಿಷ್ಟು ಸತ್ಯ ಖಂಡಿತ ಇದೆ.

ಸಾಮಾಜಿಕ ಮಾಧ್ಯಮಗಳು ಜಗಳ, ಸುಳ್ಳು ಸುದ್ದಿಗಳ ವೇದಿಕೆಯಾಗುತ್ತಿರುವ ಹೊತ್ತಿನಲ್ಲಿ, ಅದೇ ಮಾಧ್ಯಮಗಳನ್ನು ಬಳಸಿಕೊಂಡು ಮಾನವೀಯ ಕಾರ್ಯವೊಂದಕ್ಕೆ ಹಣ ಸಂಗ್ರಹಿಸಿದೆ ‘ಬೀಯಿಂಗ್ ಯು’ (Being You) ವೇದಿಕೆ. ಒಂಬತ್ತು ವರ್ಷ ವಯಸ್ಸಿನ, ಮುದ್ದು ಮುಖದ ಬಾಲಕಿಯೊಬ್ಬಳ ಚಿಕಿತ್ಸೆಗೆ ಲಕ್ಷ ಲಕ್ಷ ರೂಪಾಯಿ ಹಣ ಸಂಗ್ರಹಿಸಿದ ಕಥೆಯ ಕೇಂದ್ರಸ್ಥಾನದಲ್ಲಿ ‘ಬೀಯಿಂಗ್ ಯು’ ಇದೆ.

ಒಂಬತ್ತು ವರ್ಷ ವಯಸ್ಸಿನ ಆ ಬಾಲಕಿಯ ಹೆಸರು ನೇಹಾ. ಆಕೆ ಶ್ರೀಮಂತ ಕುಟುಂಬದ ಕುಡಿ. ಆದರೆ ಆಕೆಯ ತಂದೆ ಉದ್ದಿಮೆಯೊಂದರಲ್ಲಿ ಹಣ ತೊಡಗಿಸಿ ಕೈಸುಟ್ಟುಕೊಂಡವರು.

ADVERTISEMENT

ಅವರು ಹಣ ಕಳೆದುಕೊಂಡಿದ್ದು ಬೇರೆಯದೇ ವಿಚಾರ. ಆದರೆ, 2016ನೆಯ ಇಸವಿಯಲ್ಲಿ ಒಂದು ದಿನ ನೇಹಾ ತನಗೆ ವಿಪರೀತ ಬೆನ್ನು ನೋವು ಎಂದು ಹೇಳಲು ಆರಂಭಿಸಿದಳು. ಪರೀಕ್ಷಿಸಿದ ವೈದ್ಯರು, ಆಕೆಗೆ ಲ್ಯುಕೇಮಿಯಾ (ಒಂದು ಬಗೆಯ ಕ್ಯಾನ್ಸರ್) ಇದೆ ಎಂದು ಹೇಳಿದರು. ಇದನ್ನು ಕೇಳಿ ದಿಕ್ಕುತೋಚದಂತಾಯಿತು ಆಕೆಯ ಪಾಲಕರಿಗೆ. ನೇಹಾಳನ್ನು ವೆಲ್ಲೂರಿನ ಸಿ.ಎಂ.ಸಿ ಆಸ್ಪತ್ರೆಗೆ ಕರೆದೊಯ್ದು ಕಿಮೋಥೆರಪಿ ಆರಂಭಿಸಲಾಯಿತು.

(ಪುಟ್ಟ ಗೊಂಬೆಯಂತೆ ಕಾಣುವ ನೇಹಾ!)

ಒಮ್ಮೆ ಸುಧಾರಿಸಿದಂತೆ ಕಂಡ ಆಕೆಯ ಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಿತು. ಅಂದಾಜು ₹ 50 ಲಕ್ಷ ವೆಚ್ಚವಾಗುವ ಅಸ್ಥಿಮಜ್ಜೆ ಕಸಿ (ಬಿ.ಎಂ.ಟಿ) ನಡೆಸಬೇಕು ಎಂದು ವೈದ್ಯರು ನೇಹಾಳ ಪಾಲಕರಿಗೆ ತಿಳಿಸಿದರು. ಆ ಆಸ್ಪತ್ರೆಯಿಂದ ನೇಹಾಳನ್ನು ಇನ್ನೊಂದೆಡೆ ಕರೆದೊಯ್ದರು. ಅದು ಆಯುರ್ವೇದಿಕ್ ಆಸ್ಪತ್ರೆ. ಎರಡು ತಿಂಗಳ ಚಿಕಿತ್ಸೆಯ ನಂತರವೂ ನೇಹಾಳ ಪರಿಸ್ಥಿತಿ ಸುಧಾರಿಸಲಿಲ್ಲ. ಆಗ ನೇಹಾಳನ್ನು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಯಿತು. ಇವೆಲ್ಲ ಏನೇ ಇದ್ದರೂ, ನೇಹಾಳಿಗೆ ಅಸ್ಥಿಮಜ್ಜೆಯ ಕಸಿ ಮಾಡಿಸಲೇಬೇಕಿತ್ತು. ಈ ಎಲ್ಲ ವಿವರಗಳನ್ನು ನೇಹಾಳ ತಾಯಿ ಶೇಖ್‌ ನೂರಿ ಫೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ... ಎದೆಗೆ ತಾಕುವಂತೆ.

ನೂರಿ ಅವರು ಈ ಎಲ್ಲವನ್ನೂ ವಿವರಿಸಿರುವುದು ‘ಬೀಯಿಂಗ್‌ ಯು’ ಫೇಸ್‌ಬುಕ್‌ ಪುಟದಲ್ಲಿ. ಈ ಪುಟವನ್ನು ಹುಟ್ಟುಹಾಕಿದ್ದು ಪ್ರೀತಿ ರೈ. ಇವರು ಮಂಗಳೂರಿನವರು, ಈಗ ನೆಲೆಸಿರುವುದು ಬೆಂಗಳೂರಿನಲ್ಲಿ. ಪ್ರೀತಿ ಅವರಿಗೆ ಒಂದು ದಿನ ಹೇಗೋ ನೇಹಾ ಬಗ್ಗೆ ಗೊತ್ತಾಯಿತು. ‘ಅವರ ಕಥೆ ಹೇಗೆ ನನ್ನ ಕಣ್ಣಿಗೆ ಬಿತ್ತು ಎಂಬುದು ನೆನಪಿಗೆ ಬರುತ್ತಿಲ್ಲ. ಅವಳ ಬಗ್ಗೆ ಗೊತ್ತಾದ ನಂತರ ನಾನು ಬ್ಯಾಪ್ಟಿಸ್ಟ್‌ ಆಸ್ಪತ್ರೆಗೆ ಹೋಗಿ ನೋಡಿಬಂದೆ’ ಎಂದು ನೆನಪಿಸಿಕೊಳ್ಳುತ್ತಾರೆ ಪ್ರೀತಿ.

‘ಬೀಯಿಂಗ್ ಯು’ ಎಂಬುದು ಸ್ಫೂರ್ತಿದಾಯಕ ಕಥೆಗಳನ್ನು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮುಟ್ಟಿಸಿ, ‘ಏನೇ ಆದರೂ ಜೀವನದಲ್ಲಿ ಭರವಸೆ ಕಳೆದುಕೊಳ್ಳಬೇಡಿ’ ಎಂಬ ಸಂದೇಶವನ್ನು ಪಸರಿಸುವ ಉದ್ದೇಶ ಹೊಂದಿರುವ ವೇದಿಕೆ. ‘ನೇಹಾ ಸ್ಥಿತಿಯನ್ನು ಕಂಡ ನಾನು ಕ್ರೌಡ್‌ಫಂಡಿಂಗ್‌ ಮೂಲಕ ಆಕೆಯ ಚಿಕಿತ್ಸೆಗೆ ಹಣ ಒಟ್ಟುಹಾಕುವ ಆಲೋಚನೆ ಮಾಡಿದೆ. ಆ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದೆ’ ಎಂದು ಪ್ರೀತಿ ತಿಳಿಸುತ್ತಾರೆ.

ನೇಹಾ ಎದುರಿಸುತ್ತಿರುವ ಪರಿಸ್ಥಿತಿಯನ್ನು ಜನರೆದುರು ಇಟ್ಟು ಆಕೆಗಾಗಿ ಕನಿಷ್ಠ ₹ 5 ಲಕ್ಷ ಹಣ ಒಗ್ಗೂಡಿಸುವ ಪಣ ತೊಟ್ಟ ಈ ವೇದಿಕೆ, ಇದಕ್ಕಾಗಿ ನೇಹಾ ಮತ್ತು ಆಕೆಯ ಸಹೋದರಿ ನಿಖಿತಾಳ ಫೋಟೊಶೂಟ್ ನಡೆಸಿತು. ನೇಹಾ, ನಿಖಿತಾ ಮತ್ತು ತಾಯಿ ನೂರಿ ಅವರನ್ನು ಸ್ಟುಡಿಯೋಗೆ ಕರೆದುಕೊಂಡು ಬರಲಾಗಿತ್ತು. ಫೋಟೊಶೂಟ್‌ ವೇಳೆ ತಾಯಿ ತನ್ನ ಕರುಳ ಕುಡಿಯ ಸ್ಥಿತಿ ಕಂಡು ಆಗಾಗ ಭಾವುಕರಾಗುತ್ತಿದ್ದರು.

(ನಿಖಿತಾ ಮತ್ತು ನೇಹಾ)

ಅಂದಹಾಗೆ, ಚಿಕಿತ್ಸೆಗೆ ಹಣ ಒಗ್ಗೂಡಿಸುವ ಉದ್ದೇಶದಿಂದ ನಡೆದ ಈ ಫೋಟೊಶೂಟ್ ಮಾಡಿಕೊಟ್ಟಿದ್ದು ಜಾಹೀರಾತುಗಳಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಡುವ ಛಾಯಾಗ್ರಾಹಕ, ಬೆಂಗಳೂರಿನಲ್ಲಿ ನೆಲೆಸಿರುವ ಸೆಂಥಿಲ್ ಕುಮಾರ್. ‘ಬೀಯಿಂಗ್‌ ಯು’ ವೇದಿಕೆಯ ಕ್ರಿಯಾಶೀಲತೆಗೆ ಜನರ ಸ್ಪಂದನೆ ಹೇಗಿತ್ತೆಂದರೆ, ಮೂರೇ ದಿನಗಳಲ್ಲಿ ₹ 5 ಲಕ್ಷ ಸಂಗ್ರಹ ಆಯಿತು. ಸಾಮಾಜಿಕ ಜಾಲತಾಣಗಳನ್ನು ಮನುಷ್ಯನ ಕಷ್ಟಗಳಿಗೆ ನೆರವಾಗುವ ರೀತಿಯಲ್ಲಿ ಬಳಸಿಕೊಳ್ಳುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?!

ಈಗ ನೇಹಾಗೆ ಅಸ್ಥಿಮಜ್ಜೆ ಕಸಿ ನಡೆಸಲಾಗಿದ್ದು, ಆಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ. ಚಿಕಿತ್ಸೆಗಾಗಿ ಕಾಲಕಾಲಕ್ಕೆ ಆಸ್ಪತ್ರೆಗೆ ಹೋಗಿಬರುವುದು ಮುಂದುವರಿದಿದೆ.

ಈ ಬರಹದ ಆರಂಭದಲ್ಲಿ ಉಲ್ಲೇಖಿಸಿದ್ದ ಹೆಣ್ಣುಮಗಳ ಮಾತುಗಳತ್ತ ಮತ್ತೆ ಗಮನ ಹರಿಸೋಣ. ಆ ಹೆಣ್ಣುಮಗಳ ಮಾತುಗಳನ್ನು ಅವರ ಅನುಮತಿಯಿಲ್ಲದೆಯೇ ತುಸು ವಿಸ್ತರಿಸೋಣ. ‘ಧರ್ಮ, ಸಿದ್ಧಾಂತಗಳ ಬಗ್ಗೆ ಮಾತ್ರವೇ ಅಲ್ಲದೆ, ಮನುಷ್ಯರ ಕಷ್ಟಗಳ ಬಗ್ಗೆಯೂ ಇಂತಹ ಮಾಧ್ಯಮಗಳ ಮೂಲಕ ಮಾತನಾಡಿದಾಗ ಅವು ಇನ್ನಷ್ಟು ಆಪ್ತವಾಗುತ್ತ ವೆಯೇನೋ...’ ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.