ಚಳಿ ತೀಡಿಕೊಂಡ ಎಳೆಬಿಸಿಲಿನ ಸಂಕ್ರಾಂತಿ ಆಚರಣೆಯಲ್ಲಿ ಮನುಷ್ಯ–ಪ್ರಾಣಿ–ಪ್ರಕೃತಿಯ ಕೊಂಡಿಯೊಂದು ಇರುವುದು ಸ್ಪಷ್ಟ. ಈ ಸಾಂಸ್ಕೃತಿಕ ವಿವರಗಳಲ್ಲಿ ಅಡಕವಾಗಿರುವ ತತ್ತ್ವ ಬದುಕಿನ ಪಾಠವನ್ನೂ ಹೇಳುತ್ತದೆ.
*****
ಕಾಲದ ನಿರಂತರತೆಗೂ ಜೀವ ಜಗತ್ತಿನ ಆಯಾ ಸಾಂದರ್ಭಿಕ ಬದುಕಿಗೂ ಬಿಡಿಸಲಾಗದ ಆಂತರಂಗಿಕ ಸಂಬಂಧವಿದ್ದು, ಅದರಲ್ಲಿ ಪ್ರಾಕೃತಿಕ ಬದಲಾವಣೆಯೂ ಸೇರಿಕೊಂಡಿದೆ. ಈ ಹೊತ್ತಿನ ಚಳಿಗಾಲದಲ್ಲಿ ಜೀವಜಾಲದ ಚಟುವಟಿಕೆ ತುಸು ನಿಧಾನ. ಹೀಗಾಗಿ ಮಾರ್ಗಳಿ ಮಾಸದಲ್ಲಿ ಗಿಡ ನೆಡುವ ಪ್ರಕ್ರಿಯೆ ನಡೆಯುವುದಿಲ್ಲ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ತೆನೆ ಹೊತ್ತ ಪೈರಿನ ಹಸಿರು ಕುಂದುತ್ತ ಅದೆಲ್ಲ ಧಾನ್ಯದ ರೂಪಾಗುತ್ತ, ಅದು ರೈತರ ಸಂತೋಷಕ್ಕೆ ಕಾರಣವಾಗುತ್ತದೆ. ಇದು ವಸಂತಪೂರ್ವದ ಸುಗ್ಗಿ ಕಾಲ. ಶಿಷ್ಟ ಕವಿಗಳು, ಜನಪದರು ತಮ್ಮ ಸುತ್ತಿನ ಚರಾಚರಕ್ಕೆಲ್ಲ ನಾಮಧೇಯ, ರೂಪ ಕೊಟ್ಟು ಮಾತನಾಡಿಸಿದಂತೆ ಕಾಲಪುರುಷನಿಗೂ ಜೀವ ಕೊಟ್ಟಿರುತ್ತಾರೆ. ಅದರಂತೆ ವಸಂತನು ಕಾಲದ ಸುಂದರಾಂಗ. ಋತುಮಾನಗಳಲ್ಲಿ ಆತನದೇ ಮೇಲುಗೈ. ಈ ವಸಂತನ ಆಗಮನದ ಪೂರ್ವಕಾಲವೆಂದರೆ ಚಳಿಗಾಲ. ಮಳೆರಾಯನ ನಂತರದವನು. ಮಳೆ ನಿಂತು ಪ್ರಕೃತಿ ಹೆಚ್ಚು ಚೈತನ್ಯಪೂರ್ಣ ಎನ್ನಿಸುವುದು ಈ ಸಂದರ್ಭದಲ್ಲೇ. ಈ ಸಂಕ್ರಾಂತಿಯ ದಿನಗಳು ಎಂಥವೆಂದರೆ, ನಡು ಮಧ್ಯಾಹ್ನವೂ ಬೆಳಗಿನಂತೆಯೇ ತೋರುತ್ತದೆ. ಏರು ಬಿಸಿಲಿನಲ್ಲಿಯೂ ಸಣ್ಣದಾಗಿ ಮೈ ಮುಟ್ಟುವ ಚಳಿ ಹಿತವಾಗಿರುತ್ತದೆ. ವಸಂತ ಪೂರ್ವದ ಈ ಸಂಧಿ ಕಾಲದ ಸೌಂದರ್ಯವನ್ನು ನೋಡ ಬಯಸುವವರು ಯಾವುದಾದರೂ ದಟ್ಟ ಕಾನನದ ನಡುವೆ ಮಧ್ಯಾನ್ಹವೋ, ಸಂಜೆಯೋ ನಿಂತರೆ ಹಿಡಿದಿಡಲಾಗದ, ವರ್ಣಿಸಲಾಗದ ಹಿತಕರ ಅನುಭವವಾಗುತ್ತ ಇಡೀ ಪ್ರಕೃತಿಯ ತುಂಬೆಲ್ಲ ಬೆಳ್ಳಿಯ ರೇಖೆಗಳು ಅಲೆ ಅಲೆಯಾಗಿ ಹೊಳೆದು ಅದು ಆಕಾಶ ಭೂಮಿಯ ನಡುವೆ ತೇಲಾಡುವಂತೆ ತೋರುತ್ತದೆ.
ಮೇಲಿನಂಥ ಕಾಲವನ್ನು ಪರ್ವ ಕಾಲ, ಸಂಕ್ರಮಣ ಕಾಲವೆಂದು ಕರೆಯಲಾಗಿದೆ. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುವ ಈ ಸಮಯವನ್ನು ಉತ್ತರಾಯಣ ಪುಣ್ಯ ಕಾಲವೆನ್ನಲಾಗಿದೆ. ದೈವದ ನೆಲೆಯ ತೀರ್ಥಯಾತ್ರೆಗೆ ಹೋಗುವವರ ಸಂಖ್ಯೆ ಇದೇ ಕಾಲದಲ್ಲಿ ಹೆಚ್ಚು. ಅದೂ ಜನಪದರಲ್ಲಿ ಈ ಬಗೆಯ ಮಾಘ ಮಾಸದ ಯಾತ್ರೆ ಅಧಿಕ. ಯಾಕೆಂದರೆ ಸಂಕ್ರಾಂತಿಯ ಹೊತ್ತಿಗೆ ಹೊಲಗದ್ದೆಗಳು ಹೊತ್ತ ಫಲವನ್ನು ಇಳಿಸಿಕೊಂಡು ಮುಂದಿನ ಫಲವತ್ತತೆಗೆ ಸಿದ್ಧವಾಗುವಲ್ಲಿ ನೆಲ ಬೀಳು ಬಿದ್ದಿರುತ್ತದೆ. ಈ ಸಮಯದಲ್ಲಿ ಭೂಮಿತಾಯಿ ಬಹಿಷ್ಠೆಯಾಗಿರುವಳೆಂದೇ ತಿಳಿದು ಜನ ಮಾಗಿ ಯಾತ್ರೆ ಕೈಗೊಳ್ಳುತ್ತಾರೆ. ಇಂಥ ಕಾಲವು ಪ್ರಕೃತಿಯ ವರ್ಣಮಯ ಸ್ವರ್ಗಸದೃಶ ಸುಂದರಕಾಲವೋ ಅಥವಾ ಅದನ್ನೇ ಮನುಷ್ಯ ಇನ್ನೊಂದು ಅರ್ಥದಲ್ಲಿ, ಸತ್ತರೆ ಪರಲೋಕದಲ್ಲೂ ಇಂಥದೇ ಸಂತಸದ ನೆಲೆ ಸಿಗುತ್ತದೆ ಎಂದುಕೊಂಡನೋ ಗಮನಿಸಬೇಕು!
ಜೀವಜಗತ್ತು ಪ್ರಕೃತಿ ಸಂಬಂಧದ ಹಿನ್ನೆಲೆಯಲ್ಲಿ ದೀರ್ಘಕಾಲ ಬದುಕಿ ಜೀವನಾಂತ್ಯ ಕಾಣುವುದಕ್ಕೂ ಒಂದು ಸರಿಯಾದ ಸಮಯ ಹುಡುಕುತ್ತಾ ಆ ಬಯಕೆಯನ್ನು ಈ ಉತ್ತರಾಯಣ ಪುಣ್ಯಕಾಲದಲ್ಲಿ ಕಂಡುಕೊಂಡನೇ? ಇದೇನೇ ಇರಲಿ ಸೂರ್ಯನು ಕಕ್ಷೆ ಬದಲಿಸುವ ಉತ್ತರಾಯಣ ಕಾಲ ನೋಡುವ ಕಂಗಳ, ಅನುಭವಿಸುವ ಮನಸಿನ ಪುಣ್ಯಕಾಲವೇ ಸರಿ.
ಆದಿಮ ಕ್ರಮದ ಬೇಟೆ ಆಟ
ಸಂಕ್ರಾಂತಿಯ ಹಿಂಚುಮುಂಚಿನ ಚಳಿ ಬಿಸಿಲ ವಾತಾವರಣವನ್ನು ಅನುಭವಿಸುತ್ತ ಪ್ರಾಣಿಗಳೂ ತಂತಮ್ಮ ಬೇಟೆಯ ಆತುರವನ್ನು ಮರೆತು ಗಿಡಮರಗಳೆಡೆ ಅವಿತು ಕುಳಿತಿರುವಲ್ಲಿ ಇತ್ತ ಗ್ರಾಮೀಣರು ಕತ್ತಿ, ಕಠಾರಿ, ಭರ್ಜಿ ಹಿಡಿದು ಅತ್ಯುತ್ಸಾಹದಿಂದ ತಮ್ಮ ಬೇಟೆಗೆ ಹೊರಡುವುದಿದೆ. ಪ್ರಾಕೃತಿಕ ಹಬ್ಬಗಳು ಎಂದು ಆಚರಣೆಗೆ ಬಂದವೋ ಅಂದಿನಿಂದಲೂ ಈ ಬೇಟೆಯ ಮೋಜು ಪಳೆಯುಳಿಕೆಯಾಗಿ ಉಳಿದುಕೊಂಡಿದೆ. ಬೇಟೆ ದೊರೆಯದಿದ್ದರೆ ಒಂದು ಮೊಲವನ್ನಾದರೂ ಹೊಡೆದ ಗಂಡಸರು ಕಲ್ಲುಗುಡ್ಡಗಳತ್ತಣಿಂದ ಕೊಂಬು ಕಹಳೆ ಊದಿಸಿ ವೀರಾವೇಶದಿಂದ ಊರ ದಿಡ್ಡಿ ಬಾಗಿಲ ಕಡೆ ಬರುತ್ತ, ಹೆಂಗಸರಿಂದ ಮಂಗಳಾರತಿ ಎತ್ತಿಸಿಕೊಳ್ಳುವುದುಂಟು. ಅರಣ್ಯದ ಸರಹದ್ದಿನಲ್ಲಿರುವವರಾದರೆ ಹಂದಿ ಬೇಟೆ ಸಿಕ್ಕಿಬಿಡಬಹುದು. ಬೇಟೆ ಯಾವ ತೆರನದೇ ಆಗಲಿ ಅದರ ಉತ್ಸಾಹ ಎಲ್ಲಕ್ಕಿಂತ ಮಿಗಿಲಾದುದು. ಈ ಬಗೆಯ ಊರಾಚೆಯ ಬೇಟೆ ಸಂಕ್ರಾಂತಿ, ಯುಗಾದಿಯ ಬಿಡುವಿನ ಕಾಲದಲ್ಲಿ ಆಗುವುದಿದೆ. ಇತಿಹಾಸದ ಈ ಆದಿಮ ಕ್ರಮದ ಆಟವನ್ನು ಮನುಷ್ಯ ಮರೆಯುವುದಾದರೂ ಹೇಗೆ? ಪಶುಗಳನ್ನು ಪಳಗಿಸಿ, ತಮ್ಮ ನೆಲೆಗಳನ್ನು ಸ್ಥಾಪಿಸಿ ವ್ಯವಸಾಯ ಬದುಕನ್ನು ರೂಢಿಸಿಕೊಂಡಾಕ್ಷಣಕ್ಕೆ ಆದಿಮ ಆಹಾರ ಸಂಪಾದನೆಯ ಕ್ರಮವನ್ನು ಬಿಡಲಾಗುವುದೇ? ಹಾಗಾಗಿ ಈ ಹಬ್ಬದ ಹಿಂಚುಮುಂಚು ಬೇಟೆಯ ಮನರಂಜನೆ ಹೇಗೋ ಉಳಿದುಕೊಂಡಿದೆ. ಇದು ರಾಜ ಮಹಾರಾಜರ ಯಾವೊತ್ತಿನ ಹವ್ಯಾಸವೂ ಆಗಿದ್ದಿತೆಂಬುದು ಹಳೆಯ ಕಾವ್ಯ ಕಥನಗಳಲ್ಲಿ ಇನ್ನಿಲ್ಲದಂತೆ ವರ್ಣಿತವಾಗಿದೆ. ಅಷ್ಟೇ ಅಲ್ಲ, ಬೇಟೆಗೆ ಹೋದ ಮಹಾರಾಜರ ಬದುಕಿನಲ್ಲಿ ಅನೇಕ ಆಕಸ್ಮಿಕಗಳೂ ಆ ಹೊತ್ತಿನಲ್ಲಿಯೇ ಜರುಗಿ ಹೋದದ್ದುಂಟು. ಇದು ಜೀವಜಗತ್ತಿನ ಲಾಗಾಯ್ತಿನ ಆಹಾರ ಸಂಪಾದನೆ ಮತ್ತು ಆರಾಧನೆಗೆ ಸಂಬಂಧಪಟ್ಟ ಸಂಗತಿ. ಆದರೆ, ಕಾಲ ಚಕ್ರದಂತೆ ಕೆಲವು ಜೀವ ರಾಶಿಗಳು ಮನುಷ್ಯನ ಆಹಾರವಾಗಿಯೂ ಮತ್ತೆ ಕೆಲವು ವ್ಯವಸಾಯ ಬದುಕಿಗೆ ನೆರವು ಒದಗಿಸುವಂಥವಾಗಿಯೂ ಅದರಲ್ಲಿ ದನ–ಕರುಗಳನ್ನು ಕಣ್ಣೆದುರಿನ ದೈವವೆಂದು ಜನ ಪೂಜಿಸಿಕೊಂಡು, ಎಳ್ಳು–ಬೆಲ್ಲದ ಸಿಹಿ ಹಂಚಿಕೊಂಡು ಬಂದದ್ದಿದೆ. ಇದು ಸಂಕ್ರಾಂತಿ ಹಬ್ಬದ ಮುಖ್ಯ ಆಚರಣೆ. ದನ–ಕರುಗಳ ಆರಾಧನೆ ದಕ್ಷಿಣ ಕರ್ನಾಟಕದಲ್ಲಿ ಈ ಹೊತ್ತಿನಲ್ಲಾದರೆ, ಉತ್ತರ ಕರ್ನಾಟಕದ ಅಲ್ಲಲ್ಲಿ ದೀಪಾವಳಿ ಹಿಂದೆ ಮುಂದೆ ನಡೆಯುತ್ತ, ಅಲ್ಲಿ ಇನ್ನೂ ಹಲವಾರು ಆಚರಣೆಗಳು ಮತ್ತು ಹಂತಿ ಹಾಡುಗಳ ಹೇಳಿಕೆ–ಕೇಳಿಕೆ ಇರುತ್ತದೆ.
ಪುಣ್ಯಕೋಟಿಯ ಸತ್ಯಸಂಧತೆ
ಜನಪದರ ನಡುವಣ ದನ ಕರುಗಳ ಪಾರಮ್ಯವು ಈ ನೆಲದ ಆರಾಧನೆಗಷ್ಟೇ ನಿಲ್ಲದೆ ಅದು ಲೋಕ ಪರಿಪಾಲಕ ಶಿವನ ವೃಷಭ ವಾಹನವೂ ಆಗಿ, ಇತ್ತ ಭಾಗವತ ಸಂಪ್ರದಾಯದಲ್ಲಿ ಕೃಷ್ಣನ ಸನಿಹ ಹಾಲು ಕರೆಯುವ ಗೋ ಮಾತೆಯೂ ಆಗಿ ನಿಂತಿರುತ್ತದೆ. ಇದೆಲ್ಲದರೊಂದಿಗೆ ಲೋಕ ಸಮಸ್ತರನ್ನೂ ಅವರ ಅವಸಾನದ ನಂತರ ಬಾಲದ ಮೂಲಕವೇ ಸ್ವರ್ಗಕ್ಕೆ ದಾಟಿಸುವ ಮುಕ್ತಿ ಪ್ರದಾಯಕ ಜೀವವೂ ಆಗಿರುವ ವಿವರಗಳನ್ನು ಪುರಾಣ ಕಥೆಗಳು ಬಿತ್ತರಿಸುತ್ತವೆ. ಕೊನೆಗೆ ಇದರ ಶ್ರೇಷ್ಠತೆಯ ತುದಿ ಎಂದರೆ ಲೋಕದ ದೈವಗಳೂ ಗೋವಿನ ಅಂಗೋಪಾಂಗಗಳಲ್ಲಿಯೇ ನೆಲೆಸಿವೆಯೆಂದು ತಿಳಿಯಲಾಗಿದೆ. ಈ ಬಗೆಯ ಭಕ್ತಿಯೂ, ಗೋವುಗಳ ಆರಾಧನೆಯ ಭಾವವೂ ಇದೀಗ ದ್ವಂದ್ವ ನಿಲುವುಗಳಿಗೆ ಸಿಕ್ಕು ಅದು ರಾಜಕೀಯ ಪಕ್ಷಗಳ ಆಹಾರವಾಗಿರುತ್ತದೆ. ಈ ಚರ್ಚೆ, ವಾದ–ಪ್ರತಿವಾದ ವರ್ತಮಾನದ್ದಾದರೂ ಭಾರತೀಯ ಜನಪದರು ಗೋವೃಂದವನ್ನು ದೀಪಾವಳಿಯ ಕಾಲದಲ್ಲೋ, ಸಂಕ್ರಾಂತಿ ವೇಳೆಯಲ್ಲೋ ತತ್ಸಂಬಂಧ ಅನೇಕ ಆಚರಣೆಗಳನ್ನು ರೂಢಿಸಿಕೊಂಡಿರುವುದುಂಟು. ಇದೇ ಸಂಕ್ರಾಂತಿಯ ಸಮಯಕ್ಕೆ ಗೋವಿನ ಕಥೆಯೂ ಸೇರಿಕೊಂಡು ದನ–ಕರುಗಳಿಗೆ ಪುಣ್ಯಕೋಟಿಯ ಸತ್ಯಸಂಧತೆಯೂ ಪ್ರಾಪ್ತವಾಗಿಬಿಟ್ಟಿರುತ್ತದೆ. ಗೋವಿನ ಕಥೆಗೂ ಸಂಕ್ರಾಂತಿಗೂ ಸಂಬಂಧವಿರುವುದು ದಕ್ಷಿಣ ಕರ್ನಾಟಕದಲ್ಲಿ. ಬ್ರಹ್ಮಪುರಾಣ ಮೂಲದ ಈ ಸ್ವಾರಸ್ಯ, ಕುತೂಹಲಕರ ಗೋವಿನ ಕಥೆ ಕರ್ನಾಟಕದಾದ್ಯಂತ ಕಳೆದ ಶತಮಾನದಲ್ಲಿ ಪ್ರಚಾರಕ್ಕೆ ಬಂದು ಅದು ಸಂಕ್ರಾಂತಿಗೆ ಸೇರಿಕೊಂಡಿದೆ. ಹಬ್ಬಗಳ ಮೋಜಿಗೆ ಬೇಟೆಯಾಟ ಸೇರಿ ಅದು ಆಹಾರವೆಂದಾದರೆ, ಗೋವಿನ ಕಥೆಯಂಥವು ಅಂತರಂಗದ ನಿಯಮ ನೀತಿಗೆ ಎಂದಾಯಿತು.
ಒಮ್ಮೊಮ್ಮೆ ನಂಬಿಕೆ ಆಚರಣೆಗಳು ಮೇಲು ಪದರದಲ್ಲಿ ಬೆಳೆದುಕೊಂಡು ಬಂದವು ಸರಿ. ಆದರೆ ದನಕರುಗಳ ಕೊಟ್ಟಿಗೆಯಲ್ಲಿ ಸಂಕ್ರಾತಿಯಂದು ಗೋವಿನ ಸಮೇತ ಕೊಳಲೂದುತ್ತಿರುವ ಪ್ರಕೃತಿ ಮೈಬಣ್ಣದ ಕೃಷ್ಣನ ಪಟದ ಮುಂದೆ ಓದುವ ಗೋವಿನ ಕತೆಯ ‘ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ವಾಕ್ಯವಿದೆಯಲ್ಲ, ಅದು ದೊಡ್ಡದು. ಕೇಳಿಸಿಕೊಳ್ಳಬೇಕಾದುದು, ಪಾಲಿಸಬೇಕಾದುದು. ಒಂದು ಹಸು ಮನುಷ್ಯಕೋಟಿಗೆ ನೀಡಿದ ಸಾರ್ವಕಾಲಿಕ ಸಂದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.