ADVERTISEMENT

ಸಮುದ್ರದಲ್ಲಿದ್ದಾಗ ಸಮುದ್ರ ಕಾಣದು!

ನೀತಿಕಥೆ

ಪಶ್ಚಿಮದ ಅರಿವು /ಹಾರಿತಾನಂದ
Published 26 ಏಪ್ರಿಲ್ 2019, 19:30 IST
Last Updated 26 ಏಪ್ರಿಲ್ 2019, 19:30 IST
ಕಲೆ: ವಿಜಯಶ್ರೀ ನಟರಾಜ್‌
ಕಲೆ: ವಿಜಯಶ್ರೀ ನಟರಾಜ್‌   

ಸಮುದ್ರದ ದೊಡ್ಡ ಮೀನನ್ನು ಸಣ್ಣ ಮೀನೊಂದು ಕೇಳಿತು: ‘ಅಜ್ಜ! ಅಜ್ಜ!! ಎಲ್ಲರೂ ಸಮುದ್ರ, ಸಮುದ್ರ ಅಂತ ಹೇಳ್ತಾ ಇರ್ತಾರೆ. ನೀನು ತುಂಬ ದೊಡ್ಡವ, ವಯಸ್ಸಾದವ. ನೀನು ಸಮುದ್ರವನ್ನು ನೋಡಿರಬಹುದು. ಹೌದು, ಸಮುದ್ರ ಹೇಗಿರುತ್ತೆ ಅಂತ ಹೇಳ್ತೀಯಾ ಅಜ್ಜಾ, ನಾನು ತುಂಬ ದಿನಗಳಿಂದ ಹುಡುಕುತ್ತಿರುವೆ?’

‘ಈಗ ನೀನು ಇರುವುದೇ ಸಮುದ್ರದಲ್ಲಿ, ಈಜುತ್ತಿರುವುದೇ ಸಮುದ್ರದಲ್ಲಿ, ನಿನ್ನ ಮನೆಯೇ ಸಮುದ್ರ’ ಎಂದಿತು ದೊಡ್ಡ ಮೀನು.

‘ಹೌದಾ?! ಇದು ನೀರು; ನಾನು ಕೇಳಿದ್ದು ಸಮುದ್ರ. ತಿಳಿದಿದ್ದರೆ ಹೇಳಬೇಕು; ಇಲ್ಲ ಅಂದ್ರೆ ಏನೇನೋ ಹೇಳಲು ಹೋಗಬಾರದು’ ಎಂದು ನಿರಾಶೆಯಿಂದಲೂ ತುಸು ಕೋಪದಿಂದಲೂ ಅಲ್ಲಿಂದ ಹೊರಟುಹೋಯಿತು.

ADVERTISEMENT

* * *

ಇದೊಂದು ಮಾರ್ಮಿಕವಾದ ಕಥೆ.

ಎಷ್ಟೋ ಸಲ ಹೀಗಾಗುತ್ತದೆ: ಕನ್ನಡಕವನ್ನು ಹಾಕಿಕೊಂಡಿರುತ್ತೇವೆ; ಆದರೆ ಅದನ್ನು ಎಲ್ಲೋ ಇಟ್ಟಿದ್ದೇವೆ ಎಂದು ಮನೆಯೆಲ್ಲ ಹುಡುಕುತ್ತಿರುತ್ತಿವೆ! ಆರೋಗ್ಯ ಎಂದರೆ ಏನು ಎಂದು ಗೊತ್ತಾಗುವುದೇ ನಮಗೆ ಕಾಯಿಲೆ ಬಂದಾಗ!! ಆರೋಗ್ಯವಾಗಿದ್ದಾಗ ನಮಗೆ ಆರೋಗ್ಯದ ಬಗ್ಗೆ ಗಮನವೂ ಇರದು; ಅದರ ಬೆಲೆಯೂ ಗೊತ್ತಾಗದು ಅಲ್ಲವೆ?

ನಮ್ಮ ಹುಡುಕಾಟಗಳು ಹೀಗೇ ಇರುತ್ತವೆ. ಸಂತೋಷ ಎಂದರೆ ಏನು – ಎಂದು ಹುಡುಕುತ್ತಿರುತ್ತೇವೆ. ಅದಕ್ಕಾಗಿ ಏನೆಲ್ಲ ಮಾಡುತ್ತೇವೆ. ನೆಮ್ಮದಿಯಾಗಿ ಒಂದೆಡೆ ಕುಳಿತು ಊಟ ಮಾಡುವುದಕ್ಕೂ ಸಮಯವಿಲ್ಲದಂತೆ ಹುಡುಕುತ್ತೇವೆ; ಮನೆಯವರೊಂದಿಗೆ ಕಾಲ ಕಳೆಯುವುದನ್ನೂ ನಿಲ್ಲಿಸಿ ಹುಡುಕುತ್ತೇವೆ; ಸಂತೋಷ ಅದರಲ್ಲಿದೆ, ಇದರಲ್ಲಿದೆ – ಎಂದು ಹುಚ್ಚರಂತೆ ಹುಡುಕುತ್ತಿರುತ್ತೇವೆ. ಈ ಹುಡುಕಾಟದಲ್ಲಿ ನಾವು ‘ಸಂತೋಷ ಎಂದರೇನು’ ಎಂದು ಪ್ರಶ್ನಿಸಿಕೊಳ್ಳುವುದನ್ನೇ ಮರೆತುಹೋಗಿರುತ್ತೇವೆ! ನಮ್ಮ ಪಾಡು ಹೇಗಿರುತ್ತದೆ ಎಂದರೆ – ಸಂತೋಷದಲ್ಲಿಯೇ ಇರುತ್ತೇವೆ; ಆದರೆ ನಮಗೆ ಅದು ಸಂತೋಷ ಎಂದು ಗೊತ್ತಿರುವುದಿಲ್ಲ. ಹೀಗಾಗಿ ಅದನ್ನು ಅಲ್ಲೂ ಇಲ್ಲೂ ಹುಡುಕುತ್ತಿರುತ್ತೇವೆ. ಆತ್ಮೀಯರ ಒಡನಾಟ, ನೆಮ್ಮದಿಯ ನಿದ್ರೆ, ರುಚಿಯಾದ ಊಟ, ಶಕ್ತಿಗೆ ಸಾರ್ಥಕತೆಯನ್ನು ಕೊಡುವ ಮೈದುಡಿತ, ನ್ಯಾಯಬುದ್ಧ ಜೀವನವಿಧಾನ, ಬೇರೊಬ್ಬರಿಗೆ ನೆರವಾಗುವುದು – ಇಂಥ ವಿವರಗಳಲ್ಲಿ ಸಂತೋಷ ಅಡಗಿರುತ್ತದೆ. ಆದರೆ ನಾವು ಅವನ್ನು ಗಮನಿಸುವುದಿಲ್ಲ, ಅಷ್ಟೆ! ಹೀಗಾಗಿ ಇವುಗಳನ್ನು ಹೊರತಾಗಿ ಸಂತೋಷ ಎಲ್ಲೋ ಇದೆಯೆಂದು ವ್ಯರ್ಥವಾಗಿ ಹುಡುಕುತ್ತಿರುತ್ತೇವೆ.

ಸಣ್ಣ ಮೀನು ಇದ್ದದ್ದು ಸಮುದ್ರದಲ್ಲಿಯೇ. ಆದರೆ ಅದಕ್ಕೆ ಅದರ ಅರಿವು ಇಲ್ಲವಾಗಿತ್ತು. ನಮ್ಮ ನಿತ್ಯಜೀವನದ ವಿವರಗಳೇ ಸಂತೋಷಮಯ. ಆದರೆ ಅದರ ಅರಿವು ನಮಗೆ ಇಲ್ಲವಾಗಿರುತ್ತದೆ. ಯಾರಾದರೂ ಈ ಸಂಗತಿಯನ್ನು ನಮ್ಮ ಗಮನಕ್ಕೆ ತಂದರೂ ನಾವು ಅದನ್ನು ಒಪ್ಪಲು ಸಿದ್ಧವಿರುವುದಿಲ್ಲ. ಏಕೆಂದರೆ ನಮ್ಮ ಮುಂದಿರುವ ವಾಸ್ತವವನ್ನು ನಂಬುವುದಕ್ಕಿಂತಲೂ ಊಹೆಯೇ ನಮಗೆ ಹೆಚ್ಚು ಸತ್ಯವಾಗಿರುತ್ತದೆ! ಜೀವನದ ವಾಸ್ತವಗಳನ್ನು ಸ್ವೀಕರಿಸಿದಷ್ಟೂ ನಾವು ಸಂತೋಷಕ್ಕೂ ಹತ್ತಿರವಾಗುತ್ತಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.