ADVERTISEMENT

ಇದಿರಿನಲ್ಲಿ ತನ್ನನರಸುವ ಕಾವ್ಯ

ಎಸ್.ನಟರಾಜ ಬೂದಾಳು
Published 21 ಫೆಬ್ರುವರಿ 2015, 19:30 IST
Last Updated 21 ಫೆಬ್ರುವರಿ 2015, 19:30 IST
ಇದಿರಿನಲ್ಲಿ ತನ್ನನರಸುವ ಕಾವ್ಯ
ಇದಿರಿನಲ್ಲಿ ತನ್ನನರಸುವ ಕಾವ್ಯ   

ಮರವನಪ್ಪಿದ ಬಳ್ಳಿ
ಲೇ: ಜಿ.ಕೆ. ರವೀಂದ್ರ ಕುಮಾರ್
ಬೆ: ರೂ. 75
ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಗೋಕುಲಂ ಮೂರನೇ ಹಂತ, ಮೈಸೂರು

ಬಡಿಸಿಟ್ಟ ಎಲೆ ಪಂಕ್ತಿಯಲ್ಲಿ ಯಾವ ಎಲೆ ನನ್ನದೋ
ಅಲ್ಲಿ ಇಲ್ಲಿ ಎಣಿಸಿ ಕೂರುವಲ್ಲಿ ಅರಳುವುದೇ ಎಲೆಯ ಖುಷಿಯು
ನನ್ನ ಹೆಸರು ಬರೆದು ಕಾಯುವುದಂತೆ ಅಗುಳು, ಹೇಳಿದವನು ಎಲ್ಲೋ

ಪ್ರತಿ ನೋಟದೊಳಗೂ ಒಂದು ಚಿತ್ರ
ಅದರ ಸುತ್ತ ನಾವು ನೋಡಲಾಗದ ಚಿತ್ರ
ಸರಿದಂತೆ ನೋಟ ಬದಲಾಗುವ ದೃಶ್ಯ
ನೋಡಿದ ನೋಡುವ ನೋಡಲಾಗದ ಚಿತ್ರಪಟ

ಇರುವ ಕಥೆಯಲ್ಲಿ ಇಲ್ಲದ ಕಥೆಯೂ ಅದರ ಪಾಡಿಗೆಯಾವುದನ್ನು ಅಭಿವ್ಯಕ್ತ ಪ್ರಪಂಚ ಎಂದು ಪರಿಭಾವಿಸುತ್ತಿದ್ದೇವೆಯೋ ಅದು ಕೇವಲ ನಾವು ಕಂಡ ಪ್ರಪಂಚ ಎಂಬ ಅರಿವಿನೊಂದಿಗೆ ಕಾವ್ಯಯಾನದ ಆರಂಭ ಮಾಡುವ ರವೀಂದ್ರಕುಮಾರರ ಐದನೆಯ ಕವನ ಸಂಕಲನದ ಕೆಲವು ಸಾಲುಗಳು ಇವು.

ಹಿಂದೆಯೇ, ಕಾವ್ಯವೆನ್ನುವುದು ಕಣ್ಣುಪಟ್ಟಿ ಕಟ್ಟಿಸಿಕೊಂಡು ಕಟ್ಟಿದವರ ಹುಡುಕುವ ಆಟವೆಂಬ ಭಿನ್ನ ನಿಲುವೂ ವ್ಯಕ್ತವಾಗುತ್ತದೆ.  ಅರಿಯಲಾರದ ಆರಂಭ–ಮುಗಿತಾಯಗಳ ನಡುವಿನ ವ್ಯಕ್ತಮಧ್ಯವನ್ನು ತಡಕಾಡುತ್ತ ಹಿಡಿಯಲು ಮಾಡುವ ಪ್ರಯತ್ನವಾಗಿ ಅವರು ಕಾವ್ಯವನ್ನು ಪರಿಭಾವಿಸುತ್ತಾರೆ. ಅವರ ಕಾವ್ಯದ ಮೀಮಾಂಸಾ ನಿಲುವುಗಳೆಂದೇ ಕೆಲವು ಕವನಗಳನ್ನು ಓದಬಹುದು.

ವ್ಯಾಕರಣ ಮೀರಿಯೂ ಬಾಳಲು ಸಾಧ್ಯವಿದೆ
ಎಂದು ವ್ಯಾಕರಣಕ್ಕೆ ಗೊತ್ತಿಲ್ಲ
ಜೀವನದ ಸ್ಫೂರ್ತಿಯಿರುವುದೇ ಇಲ್ಲಿ
ಬೊಗಸೆಯನ್ನು ಒಡ್ಡದೆಯೂ ಭಿಕ್ಷೆ ಬೇಡುತ್ತ

ಆದರೂ ಯಾರೋ ಸರಿಯಾಗಿ ಓದುತ್ತಿದ್ದಾರೆ
ಎಂಬ ಒಂದೇ ನಂಬಿಕೆಯಲ್ಲಿ
ಕಣ್ಣು ಕಟ್ಟಿಸಿಕೊಂಡು
ಕಟ್ಟಿದವರನ್ನೇ ಹುಡುಕಿಕೊಂಡು

ಉಲ್ಲಂಘನೆಯೇ ಜೀವಂತಿಕೆ ಎಂಬು ತುಸು ಉದಾರೀ ನೆಲೆಯಿಂದ ಎಲ್ಲವನ್ನೂ ನೋಡಿದರೆ ಹಿತವೆಂಬ ಆರೋಗ್ಯಕರ ಆಶಯವನ್ನು ಪ್ರಕಟಿಸುವ ಈ ಕವಿಗೆ ಅವಳಿ ವಿರುದ್ಧಗಳನ್ನು ಇದಿರಾಗಿಸಿದಾಗ ಉಂಟಾಗುವ ಕೌತುಕವನ್ನು ಹಿಡಿವ ಗೀಳು. ಅವಳಿ ವಿರುದ್ಧಗಳ ನಿರಸನ ಕನ್ನಡ ಕಾವ್ಯ ಪರಂಪರೆಯ ಪ್ರಮುಖ ಉದ್ಯೋಗ.

ಅದು ಭಾರತೀಯ ಕಾವ್ಯಮೀಮಾಂಸೆಯ ‘ಧ್ವನಿ’ಗಿಂತ ಮಿಗಿಲೆಂದರೂ ನಡೆದೀತು. ಆದರೆ ಈ ನಿರಸನಕ್ಕೆ ಅನೇಕ ಉದ್ದೇಶಗಳಿವೆ. ಲೋಕಸಾಮರಸ್ಯವನ್ನು ಕಂಡುಕೊಳ್ಳಲು ಕನ್ನಡದ ಮನಸ್ಸೊಂದು ತುಡಿವ ಬಗೆ ಇದು ಎಂದರೂ ಸರಿಯೆ. ಇದು ಲೌಕಿಕ ಮತ್ತು ಪಾರಲೌಕಿಕ ಎರಡಕ್ಕೂ ಸಲ್ಲುವ ಮಾತು.

ಈ ನಿರಸನವನ್ನು ಕನ್ನಡ ಕಾವ್ಯ ಪರಂಪರೆಯು ಒಂದು ಜವಾಬುದಾರಿಯನ್ನಾಗಿ ಭಾವಿಸಿದೆ. ತನ್ನನ್ನು ಬಿಟ್ಟುಕೊಟ್ಟು ಲೋಕದ ನಡೆಯೊಂದಿಗೆ ಸಮೀಕರಣಗೊಳ್ಳುವುದು ಮತ್ತು ವ್ಯಷ್ಟಿಯನ್ನು ಸಮಷ್ಟಿಯೊಂದಿಗೆ ಹೊಂದಿಸುವುದರಿಂದ ಹಿಡಿದು, ತಾನು ನಂಬಿದ ಪರಮಾರ್ಥದೊಂದಿಗೆ ತನ್ನನ್ನು ಅರ್ಥೈಸಿಕೊಳ್ಳುವವರೆಗೆ ಈ ಉದ್ಯೋಗ ನಡೆದಿದೆ. ಮನುಷ್ಯನ ತಾಕಲಾಟದ ಮೊದಲ ಕಾರಣ ಇದೇ ಆಗಿರುವುದರಿಂದ ಸೂಕ್ಷ್ಮ ಸ್ತರದ ಕಾವ್ಯ ಅದನ್ನೇ ಮೊದಲಿಗೆ ಎತ್ತಿಕೊಳ್ಳುತ್ತದೆ.
 
ಕೇಳಿದ್ದು ಸುಳ್ಳಾಗಬಹುದು ನೋಡಿದ್ದೂ ಸುಳ್ಳಾಗಬಹುದು
ಎಂಬುದೇ ಸುಳ್ಳಾಗಿ ಎಲ್ಲವೂ ನಿಜವಾಗಬಹುದು
ಎಂಬುದೂ ಹುಸಿಯಾಗಬಹುದು
ಈ ಕಾಲದಲ್ಲಿ
ಎಂಬ ಕಾಲವೇ ಕಾಲಗೊಂಡು
ನನ್ನ ಮಾತು ನನ್ನ ನಗು ನನ್ನ ಅಳುವೂ ನನ್ನದಲ್ಲವೆಂಬಂತೆ
ಇದ್ದ ಬಿದ್ದ ಚೂರೂ ಪಾರು ಅಹಂಕಾರವೂ ತಬ್ಬಲಿಯಾಗಿ
ನನ್ನದೇ ಮನಸು ಸ್ವಪ್ನಗಳನ್ನು ಯಾರೋ ಕತ್ತರಿಸುವ ಮೊದಲು...

ಯಾರೋ ತಂದು ನಿಲ್ಲಿಸಿದ ತೇರನ್ನು ಮುಂದೆ ನಿಂತವರ ಕೈಗೆ ಒಪ್ಪಿಸುವ ಕಾಯಕವನ್ನು ಕಾವ್ಯ ಮಾಡುತ್ತದೆ ಎಂಬ ನಿರ್ಲಿಪ್ತತೆ ಅನೇಕ ಕಡೆ ವ್ಯಕ್ತವಾದರೆ, ಅಭಿವ್ಯಕ್ತಿ ಎನ್ನುವುದೇ ಭಿನ್ನ ಓದಿನ ಪರಿಣಾಮವಾದುದರಿಂದ ಕಾವ್ಯ ಹುಟ್ಟುವುದೇ ಇಂತಹ ಸಂಯೋಜನೆಯಲ್ಲಿ ಎಂಬ ಇಹದ ನಿಲುವು ಕೆಲವು ಕಡೆ ಕಾಣಿಸುತ್ತದೆ. ಆದರೆ ಈ ಪ್ರಕ್ರಿಯೆ ಒಂದು ತಾರ್ಕಿಕ ನಿಲುವಾಗದೆ ಈ ವಿರುದ್ಧಗಳ ನಿರಸನದಾಚೆಗಿನ ಮತ್ತೊಂದು ನಿರ್ಣಾಯಕವೆಂಬುದನ್ನು ಪ್ರಕಟಿಸುತ್ತದೆ.

ಯಾರೋ ಬೆಳಕಿನೊಳಗೆ ಇಳಿದು
ಕತ್ತಲಲ್ಲಿ ನನ್ನ ತಡವುತ್ತಿದ್ದಾರೆ
ನನ್ನ ಜಗತ್ತನ್ನು ಅವರು ಭಾವಿಸುತ್ತಿರಬೇಕು
ನನ್ನ ದೇವರ ನಿತ್ಯ ಕಾಯಕದಂತೆ

ಭಾಷೆಗೆ ಸಾಧ್ಯವಿರುವ ನಾಲ್ಕು ಸಂಭಾವ್ಯ ಉತ್ತರಗಳನ್ನು (ಇದೆ, ಇಲ್ಲ, ಎರಡೂ ಹೌದು, ಮತ್ತು ಎರಡೂ ಅಲ್ಲ)  ಹಾಗೂ ಭಾಷಾತೀತತೆಗೆ ಸಾಧ್ಯವಿರುವ ಅನೇಕ ಉತ್ತರಗಳಲ್ಲಿ ಒಂದನ್ನು ಮಾತ್ರ (ದೈವ) ಆತುಕೊಂಡಿರುವ ಈ ಕವಿಗೆ ಕಾವ್ಯ ರಚನೆಯೆನ್ನುವುದು ಇವುಗಳ ಅನೇಕ ರೀತಿಯ ಸಂಯೋಜನೆಗಳ ಆಟ. ಇಂತಹ ಸಂಯೋಜನೆಗಳು ಭಾಷಿಕ ಮಟ್ಟದಲ್ಲಿ ನಿತ್ಯದ ಅನುಭವಗಳನ್ನು ಕಾವ್ಯವಾಗಿಸಲು ಸಲಿಲವಾಗಿ ಒದಗಿಬರುತ್ತವೆ. ಕಾವ್ಯದ ಓದು ಕೂಡ ಆಕರ್ಷಕವಾಗಿಯೇ ಕಾಣುತ್ತದೆ. ಆದರೆ ಅದೊಂದು ಆಕರ್ಷಕ ಪದರಂಗದ ಅನುಭವವನ್ನು ಮಾತ್ರ ಒದಗಿಸುತ್ತದೆ.

ಒಂದೊಂದು ಅಕ್ಷರ ನಾಪತ್ತೆಯಾದ ಪದಗಳನ್ನೂ
ಸರಿಯಾಗಿಯೇ ಓದಿಬಿಡುತ್ತೇವೆ
ಒಂದೊಂದು ಗುಣ ನಾಪತ್ತೆಯಾದ ಮನುಷ್ಯರನ್ನೂ
ಸರಿಯಾಗಿಯೇ ತಿಳಿದುಬಿಡುತ್ತೇವೆ
ವ್ಯಾಕರಣ ನಡುಗುತ್ತ ನನ್ನ ಕೈ ಹಿಡಿಯಿತು
ನಾನು ಯಾರು ಎಂದು ಹೇಳು ಎಂದೆ
ಅದು ನಾಲ್ಕು ಸಂಭಾವ್ಯ ಉತ್ತರಗಳಿವೆ ಎಂದಿತು

ಜಿ.ಕೆ. ರವೀಂದ್ರಕುಮಾರ ಅವರ ಕಾವ್ಯದ ಒಡನಾಟ ಮನುಷ್ಯ ಸಂಬಂಧಗಳ ಸೂಕ್ಷ್ಮ ತಾಕಲಾಟಗಳ ಜೊತೆಗೆ ಬೆಸೆದುಕೊಂಡಿದೆ. ಅಲ್ಲಲ್ಲಿ ತಮಗೆ ಎಟುಕಿದ ನಿಸರ್ಗದ ನೋಟಗಳನ್ನು ಒದಗಿಸಿಕೊಳ್ಳುತ್ತಾರೆ. ಕನ್ನಡದ ವಿಸ್ತಾರವಾದ ದೀರ್ಘಕಾಲೀನ ಕಾವ್ಯ ಸಂಪ್ರದಾಯದ ನೆರವನ್ನು ಪಡೆಯಲು ಅವರಿಗೆ ಸಾಧ್ಯವಾಗಿಲ್ಲ. ಆಧುನಿಕ ಬದುಕಿನ ಅನೇಕ ಇಕ್ಕಟ್ಟುಗಳನ್ನು ಅನೇಕ ಕವನಗಳು ವಸ್ತುವಾಗಿಸಿಕೊಂಡಿವೆ.

ಮಗೂಗೊಂದು ಸ್ಮಾರ್ಟ್‌ಫೋನ್ ಬುಕ್ ಮಾಡಿ ಎಂದಳು
ಅವಳ ಹೊಟ್ಟೆಯಲ್ಲಿ ಮಗು ಕಾಲು ಆಡಿಸಿತು
ಎಂಥ ರೋಮಾಂಚನ
ತಕ್ಷಣ ಇದನ್ನು ಟ್ವೀಟ್ ಮಾಡಬೇಕು
ಇಬ್ಬರೂ ಎದ್ದರು
ಗುಡ್‌ನೈಟ್

ಸ್ಪಷ್ಟತೆ, ನಿರ್ದಿಷ್ಟತೆ ಕಾವ್ಯದ ಗುಣವಲ್ಲದಿದ್ದರೂ ಅತಿ ಅಸ್ಷಷ್ಟತೆ ಅನಿರ್ದಿಷ್ಟತೆಗಳಿಂದಾಗಿ ಕಾವ್ಯವೇ ನಮ್ಮಿಂದ ಕಳೆದುಹೋಗಲು ಸಾಧ್ಯ. ಕಾವ್ಯವೂ ಸಂದರ್ಭಬಂಧಿಯಾದುದರಿಂದ ಇದನ್ನು ನಿರ್ಧರಿಸುವಾಗ ಓದುಗರ ಸಂದರ್ಭವೇ ನಿರ್ಣಾಯಕ. ಅಲ್ಲಮಗುರುವಿನ ವಚನಗಳು ಅಕೆಡೆಮಿಕ್ ವಲಯದವರಿಗೆ ಕಠಿಣವೇ ಹೊರತು ನಮ್ಮ ನಡುವೆಯೇ ಇರುವ, ಗಂಭೀರ ಕಾವ್ಯಾನುಸಂಧಾನದಲ್ಲಿ ತೊಡಗಿರುವ ತತ್ವಪದಕಾರರಿಗಲ್ಲ. ಬರೆದ ಕವಿ ಯಾರು ಎನ್ನುವುದು ಎಷ್ಟು ಮುಖ್ಯವೋ ಓದುವ ಓದುಗರು ಯಾರು ಎನ್ನುವುದೂ ಅಷ್ಟೇ ಮುಖ್ಯ. ಹಾಗಾಗಿ ಕವನ ಕವಿಯದಷ್ಟೇ ಅಲ್ಲ. ಈ ತೀರ್ಮಾನ ಕವಿಯೊಬ್ಬನದ್ದೇನಲ್ಲ.

ದೇವರು ನಮ್ಮೊಳಗೆ ಇರುವಂತೆ ನಾವೂ ಇರಬಹುದು ಅಲ್ಲಿ ಕಾಣದಂತೆ
ಇಲ್ಲವೆನ್ನುವ ಎಲ್ಲವೂ ಇರುವಲ್ಲಲಿ ಇರುವ ನಾವೂ ಇಲ್ಲದಿರುವಂತೆ
ಈ ಎಲ್ಲವೂ ಹೇಳುತ್ತಿವೆ ಈ ಕವಿತೆ ನನ್ನದಲ್ಲವಂತೆ.

ಇದನ್ನೆಲ್ಲ ಹೇಳಿಕೊಂಡದ್ದು ಯಾರಲ್ಲಿ
ಮುಂದಿನ ಪುಟಕ್ಕೆ ಹೋಗುವ ಮುನ್ನ ನಿಂತ ನಿಮ್ಮ ನಿಲುದಾಣದಲ್ಲಿ
ಈ ಕವಿತೆ ಹೂವೇ ಬೀಜವೇ ಪರಿಮಳವೇ
ನಿಮಗೆ ಕಾಣುವುದು ಹೇಗೆಂದು ಕೇಳುವಲ್ಲಿ
ಎಲ್ಲಿ ಹೋದಿರಿ ನೀವು?

ಈ ಕವನಸಂಕಲನದ ಉದ್ದಕ್ಕೂ ಅನೇಕ ಧರ್ಮಜಿಜ್ಞಾಸೆಯೆಂದು ಕರೆದುಕೊಂಡ ಕವನಗಳಿವೆ. ಕನ್ನಡಕ್ಕೆ ಈಗ ಒದಗಿರುವ ವಿಸ್ತರಣೆಗಳಲ್ಲಿ ಸೂಕ್ಷ್ಮ ಸ್ತರದ ಬೈನರಿ ಭಾಷಾ ಮಾಧ್ಯಮ, ವಿಶ್ವದ ಬೇರೆ ಬೇರೆ ತಾತ್ವಿಕತೆಗಳ ಒಡನಾಟ, ವಿಜ್ಞಾನದ ಕಟು ಎಚ್ಚರ ಮುಖ್ಯವಾದವು. ಇವೆಲ್ಲ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳಲು ಕನ್ನಡಕ್ಕೆ ಒದಗಿಬಂದಿರುವ ಜ್ಞಾನ ವಿಸ್ತರಣೆಗಳು.ಹೊಸ ಪೀಳಿಗೆಯವರು ಸಾಹಿತ್ಯದ ಓದಿಗೆ ಇವುಗಳನ್ನು ಒದಗಿಸಿಕೊಳ್ಳುವ ಲಕ್ಷಣಗಳು ಕಾಣಬರುತ್ತಿವೆ.

ನಡುವೆ ಧರ್ಮದ ಗೊಡ್ಡೆಮ್ಮೆಗಳನ್ನು ಕಾಯಹಚ್ಚುವ ಮಾಧ್ಯಮಸನ್ಯಾಸಿಗಳಿಗೆ ಬಲಿಯಾಗುವವರೂ ಇದ್ದಾರೆ. ಏನೇ ಆದರೂ ತರ್ಕದ ಹರಿತವಾದ ಹತಾರುಗಳನ್ನು ನಿರ್ವಹಿಸುತ್ತಿರುವ ಹೊಸ ಪೀಳಿಗೆಯವರ ಓದನ್ನು ಮುಗ್ಧವೆಂದು ಭಾವಿಸಲಾಗದು. ಅವರು ಗಂಭೀರ ಸವಾಲಿನ ಕಾವ್ಯಕ್ಕಾಗಿ ಕಾಯುತ್ತಿರುವಂತೆ ಭಾಸವಾಗುತ್ತಿದೆ.

ಪರಂಪರೆಯ ಕೊಳಕು, ಆಧುನಿಕತೆಯ ರೋಗ ಎರಡನ್ನೂ ನಿರ್ವಹಿಸುವ ಎಚ್ಚರದ ನಡೆಯನ್ನು ಕವಿ ಕಂಡುಕೊಳ್ಳದೇ ಹೋದರೆ ಮುಂದೆ ಹೋಗುವುದು ಕಷ್ಟ. ಇಂತಹ ಇಕ್ಕಟ್ಟುಗಳು ವ್ಯಕ್ತವಾಗುವ ಅನೇಕ ಕವನಗಳು ಈ ಸಂಕಲನದಲ್ಲಿವೆ.

ಎಷ್ಟೇ ಬಳಿ ಬಳಿದು ನೆಕ್ಕಿದರೂ ಅಷ್ಟಿಷ್ಟು ಉಳಿಯುವ ಸಾರು ತಟ್ಟೆಯಲ್ಲಿಎಷ್ಟೇ ಎಳೆದೆಳೆದು ಚೀಪಿದರೂ ಚೂರು ಪಾರು ಬೆರಳಿನಲ್ಲಿ ನಾಕಾರು ಇರುವೆಗಳಿಗೆ ವಾರಕ್ಕಾಗುವಷ್ಟು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.