ADVERTISEMENT

ಲೇಖಕಿಯ ಕಿರು ಆತ್ಮಚರಿತ್ರೆ

2015 ನನ್ನ ಇಷ್ಟದ ಪುಸ್ತಕ

ಮಂಜುನಾಥ ವಿ.ಎಂ.
Published 2 ಜನವರಿ 2016, 19:30 IST
Last Updated 2 ಜನವರಿ 2016, 19:30 IST

‘ಅಮ್ಮಾ, ಇವೊತ್ತು ಜೈಲಿಗೆ ಊಟ ತಕ್ಕೊಂಡು ಹೋಗಿದ್ದೆ. ಟಿಫಿನ್ ಕ್ಯಾರಿಯರ್‍ ಅನ್ನು ಒದ್ದು ಅನ್ನವನ್ನೆಲ್ಲಾ ಚೆಲ್ಲಾಡಿಬಿಟ್ಟ. ‘ಆ ಕಂಪ್ಲೇಂಟ್ ಕೊಟ್ಟಿರೋವನೂ ಸಾಬರೇ, ಆ ಲಾಯರೂ ಸಾಬರೇ... ಇನ್ನು ಆ ಲಾಯರಮ್ಮ ನನ್ನನ್ನ ಬಿಡಿಸ್ತಾಳಾ?’ ಅಂತ ಬಯ್ದು, ನನ್ನ ಮಾತಾಡಿಸದೇ ಒಳಹೋಗಿಬಿಟ್ನಮ್ಮಾ...’ ಎಂದು ಬಿಕ್ಕಿದ್ದಳು.

ನಾನು ಅಪ್ರತಿಭಳಾದೆ, ದಂಗುಬಡಿದು ಹೋದೆ, ಮಾತೇ ಹೊರಬರಲಿಲ್ಲ. ಕೂಡಲೇ ಪ್ರಥಮ ವರದಿಯನ್ನು ನೋಡಿದೆ. ಹೌದಲ್ಲಾ, ಫಿರ್ಯಾದಿ ಅಂತ ಮಾತ್ರಾ ಪರಿಗಣಿಸಿದ್ದು ಮುಸ್ಲಿಂ ಅಂತಲೋ... ಅವನ ಜೊತೆ ಶಾಮೀಲಾಗಿ ನನ್ನ ಕಕ್ಷಿದಾರನಿಗೆ ನ್ಯಾಯ ದೊರಕಿಸದಂತಹಾ ಅಪ್ರಾಮಾಣಿಕತೆ ನನ್ನಲ್ಲಿರಲಿಲ್ಲ, ಮೋಸಗಾರ್ತಿ! ಎಂತೆಂತಹಾ ಬಯ್ಗಳು, ಆರೋಪಗಳು... ನಾನು ಸಾವರಿಸಿಕೊಂಡು ಹೇಳಿದೆ, ‘ಶಾಂತಮ್ಮ, ನೋ ಅಬ್ಜಕ್ಷನ್ ಬರೆದು ಫೈಲ್ ನಿನಗೆ ವಾಪಸ್ ಕೊಡ್ತೀನಿ, ಬೇರೆ ಲಾಯರ್ ಮೂಲಕ ಜಾಮೀನು ಪಡೆದುಕೊಳ್ಳಮ್ಮಾ...’ ಆ ಸಂದರ್ಭದಲ್ಲಿಯೂ ಬೇರೆ ಹಿಂದೂ ಲಾಯರ್ ಎಂಬ ಮಾತು ನನ್ನಿಂದ ಬರಲಿಲ್ಲ.

... ನನ್ನ ಹೃದಯಕ್ಕಾದ ಗಾಯ ರಕ್ತ ಒಸರುತ್ತಿತ್ತು. ನನಗೆ ನಾನೇ ಆದೇಶ ಮಾಡಿಕೊಂಡೆ, ‘ಬಾನು ಇಷ್ಟೊಂದು ಸೂಕ್ಷ್ಮ ಮನಸ್ಸಿನವಳಾಗಬೇಡಾ’ ಹಾಗಾದರೆ, ನಾನು ಈ ದೇಶದಲ್ಲಿ ಬದುಕಬೇಕಾದಲ್ಲಿ, ಮುಸ್ಲಿಮಳಾಗಬೇಕಾದಲ್ಲಿ ನನ್ನೆಲ್ಲಾ ಸೂಕ್ಷ್ಮತೆಗಳನ್ನು ಕಳೆದುಕೊಂಡು, ಸಂವೇದನೆಗಳನ್ನು ನಾಶಪಡಿಸಿಕೊಂಡು ಬದುಕಬೇಕೇನು? ನಾವು ಯಾಕೆ ಅಂತಃಕರಣದ ಧ್ವನಿಗಳನ್ನು ಆಲಿಸುತ್ತಿಲ್ಲ. ಸುಮಾರು ಮೂರ್ನಾಲ್ಕು ದಿನಗಳವರೆಗೆ ನಾನು ತುಂಬಾ ಖಿನ್ನಳಾಗಿದ್ದೆ. ಆನಂತರ ಅವನಿಗೆ ಜಾಮೀನು ದೊರಕಿತು. ಆ ಪ್ರಕರಣದ ವಿಚಾರಣೆಯನ್ನು ನಾನೇ ನಡೆಸಿದೆ. ಆದರೆ, ನನ್ನ ಹೃದಯ ಗಾಯಗಳು ಮಾಯಲಿಲ್ಲ’.

ಚಿಂತಕಿ, ಲೇಖಕಿ ಮತ್ತು ವೃತ್ತಿಯಲ್ಲಿ ವಕೀಲೆಯೂ ಆದ ಬಾನುಮುಷ್ತಾಕರ ಪ್ರಬಂಧ ಸಂಕಲನ ‘ಹೂ ಕಣಿವೆಯ ಚಾರಣ’ದಿಂದ ಆಯ್ದ ಪ್ರಬಂಧವೊಂದರ ಮುಖ್ಯಭಾಗವನ್ನು ಮೇಲೆ ಪ್ರಸ್ತಾಪಿಸಿದ್ದೇನೆ. ಇಲ್ಲಿನ ಸನ್ನಿವೇಶ ಮತ್ತು ಸಂದರ್ಭದಲ್ಲಿ ಇವರ ಬದಲಿಗೆ ಮತ್ತೊಬ್ಬರು ಇದ್ದಿದ್ದರೆ ಎಂತಹ ನಿರ್ಧಾರ ತಾಳುತ್ತಿದ್ದರು ಎಂಬುದನ್ನು ನಾವು ಸಲೀಸಾಗಿ ಊಹಿಸಿಬಿಡಬಹುದು. ಪ್ರಗತಿಪರ ಚಿಂತನೆ, ಸಮಾಜವಾದಿ ನಡೆಯ ಇವರು ಈ ಭೀಕರ ತಾಕಲಾಟವನ್ನು ನಿಭಾಯಿಸುವ ಛಾತಿ ಈ ಪ್ರಬಂಧದಲ್ಲಿ ಕಾಣಬಹುದು.

ಹಾಗೆ ನೋಡಿದರೆ ಅವರ ಕಿರು ಆತ್ಮಚರಿತ್ರೆಯಾದಂತಿರುವ ಈ ಕೃತಿ, ಹೆಣ್ಣೊಬ್ಬಳ ಆಳದ ತಳಮಳಗಳನ್ನು ಸೂಕ್ಷ್ಮವಾಗಿ ತೆರೆದು ತೋರುತ್ತದೆ. ಇವರನ್ನು ದೇವಸ್ಥಾನಕ್ಕೆ ಬಿಟ್ಟುಕೊಳ್ಳುವ ಇಲ್ಲಿನ ಕಂದಾಚಾರಿಗಳು ಅಸ್ಪೃಶ್ಯ ಹೆಣ್ಣಿಗೆ ಪ್ರವೇಶ ಕೊಡಲು ನಿರಾಕರಿಸುತ್ತಾರೆ. ಲೇಖನಿಗೆ ಜೀವ ಮೂಡುವ ಹೊತ್ತು ಅನ್ನುವಂತೆ ಸಮಾಜದಲ್ಲಿ ಸೃಷ್ಟಿಯಾಗುವ ಕೋಮುದಳ್ಳುರಿ, ಅಸ್ಪೃಶ್ಯತೆ, ರಾಜಕೀಯ ಅರಾಜಕತೆ ಇವರೊಳಗೆ ಚಳವಳಿ, ಪ್ರತಿಭಟನೆ ನೆರೆಯುಕ್ಕಲು ಅನುವು ಮಾಡಿಕೊಡುತ್ತವೆ.

ಇಲ್ಲಿನ ಬಹುಪಾಲು ಪ್ರಬಂಧಗಳು ನಿರ್ಧರಿಸುವ ಅನೇಕ ಸನ್ನಿವೇಶಗಳು ಸಾಮಾಜಿಕ ಅಸ್ಥಿರತೆಯನ್ನು ಆತ್ಯಂತಿಕವಾಗಿ ಬಗೆಯುವಂಥವು. ಕಳೆದ ನಾಲ್ಕೈದು ದಶಕಗಳಿಂದ ಲೇಖಕರು ನಡೆಸಿದ ಸಾಮಾಜಿಕ ಮತ್ತು ವೈಯಕ್ತಿಕ ಹೋರಾಟದ ವಿವಿಧ ಕವಲು ದಾರಿಗಳನ್ನು ಸ್ಪಷ್ಟವಾಗಿ ಈ ಕೃತಿಯಲ್ಲಿ ಕಾಣಬಹುದಾಗಿದೆ. ಹೇಗೆ ಲೇಖಕರು ಸಮಾಜವನ್ನು ಹೂತುಕೊಂಡ ಕೆಸರಿನಾಳದಿಂದ ಮೇಲೆತ್ತಿ ತರುವ ಬಗೆ ಇಲ್ಲಿನ ಪ್ರತಿಯೊಂದು ಪ್ರಬಂಧಗಳಲ್ಲೂ ನಿಚ್ಚಳವಾಗಿ ಕಾಣಬಹುದು, ಅದು ನೋವಿನ ಮತ್ತು ಉಲ್ಲಸಿತ ಗಳಿಗೆಗಳು ಹೌದು.

ಆ ಹಾದಿಗಳಲ್ಲಿ ಎದ್ದ ಘೋರ ಅನ್ಯಾಯ, ಜಾತಿದಾಂಧಲೆಗಳ ಕೊಲಾಜ್‌ಗಳು ನೇರ ನಿರ್ಭಿಡೆಯಿಂದ ಇಲ್ಲಿ ದಾಖಲಾಗಿವೆ. ಬಹಳ ಮುಖ್ಯವಾಗಿ ಲೇಖಕಿ ತನ್ನ ಧರ್ಮದಲ್ಲಿರಬಹುದಾದ ಕ್ರೂರತೆಯನ್ನು ಸಹಿಸದೆ ಅದರಿಂದ ಹೊರಜಿಗಿಯಲು ಮತ್ತು ಪ್ರತಿಭಟಿಸಲು ಆರಿಸಿಕೊಂಡಿದ್ದು ಬರವಣಿಗೆಯನ್ನು; ಕಟ್ಟಕಡೆಗೆ ಬರವಣಿಗೆಯೇ ಅವರನ್ನು ಮುನ್ನಡೆಸುವ ರೀತಿ ರೋಚಕವಾದದ್ದು. ಅಸಹಿಷ್ಣುತೆ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಈ ಕೃತಿ ಅದರ ಎಲ್ಲಾ ಹುನ್ನಾರಗಳನ್ನು, ಮಾರ್ಗೋಪಾಯಗಳನ್ನು ಬಗ್ಗುಬಡಿಯುವ ಕ್ರಿಯೆ ಇಲ್ಲಿ ಹೆಣೆದುಕೊಂಡಿದೆ. ಬರವಣಿಗೆಯ ಅನಿವಾರ್ಯತೆಯನ್ನು ದಿಟ್ಟವಾಗಿ ಹೇಳಲ್ಪಡುವ ‘ಹೂ ಕಣಿವೆಯ ಚಾರಣ’ ಕೇಳಲು, ಓದಲು ಕಾವ್ಯಾತ್ಮಕವಾಗಿದ್ದು, ಬಾನು ಮುಷ್ತಾಕರು ಮುಂದೆ ಬರೆಯಬಹುದಾದ ಆತ್ಮಚರಿತ್ರೆಗೆ ಅತ್ಯಂತ ಅರ್ಥಪೂರ್ಣ ಶೀರ್ಷಿಕೆ ಎಂದೆನಿಸುತ್ತದೆ.  
*
ಹೂ ಕಣಿವೆಯ ಚಾರಣ (ಪ್ರಬಂಧಗಳು)
ಲೇ:
ಬಾನು ಮುಷ್ತಾಕ
ಪುಟ:100
ರೂ.80
ಪ್ರ: ಹಾಡ್ಲಹಳ್ಳಿ ಪ್ರಕಾಶನ, ಸಿ.ಎಸ್‌.ಐ. ಆಸ್ಪತ್ರೆ ಎದುರು, ಆರ್.ಸಿ. ರಸ್ತೆ, ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.