ADVERTISEMENT

’ಕನ್ನಡದ ವಿಷಯ ನಾನು ಬೇರೆಯವರಿಂದ ಕಲಿಯಬೇಕಿಲ್ಲ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 19:30 IST
Last Updated 25 ನವೆಂಬರ್ 2017, 19:30 IST
’ಕನ್ನಡದ ವಿಷಯ ನಾನು ಬೇರೆಯವರಿಂದ ಕಲಿಯಬೇಕಿಲ್ಲ’
’ಕನ್ನಡದ ವಿಷಯ ನಾನು ಬೇರೆಯವರಿಂದ ಕಲಿಯಬೇಕಿಲ್ಲ’   

ಮೈಸೂರು: 'ಮಾಹಿತಿ ಕೊರತೆಯಿಂದಾಗಿ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಭಾಷಾನೀತಿಗೆ ಸಂಬಂಧಿಸಿದ ವಿಚಾರ ತಪ್ಪಾಗಿ ಪ್ರಸ್ತಾಪವಾಗಿದೆ. ಭಾಷಾನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು.

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶುಕ್ರವಾರ ಮಾತನಾಡಿದ್ದ ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, 'ತನ್ವೀರ್ ಸೇಠ್ ಶಿಕ್ಷಣ ಸಚಿವರಾಗಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಭಾಷಾನೀತಿ ವಿಚಾರದಲ್ಲಿ ಅವರು ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಅವರನ್ನು ಸಂಪುಟದಿಂದ ಕೈಬಿಡಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದರು.

ಚಂಪಾ ಅವರ ಮಾತಿಗೆ ಸಮ್ಮೇಳನದ ವೇದಿಕೆಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, 'ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾನು ಮಾಡಿರುವ ಕೆಲಸ ನನಗೆ ತೃಪ್ತಿ ನೀಡಿದೆ. ಕನ್ನಡ ಭಾಷೆ ವಿಷಯದಲ್ಲಿ ನಾನು ಬೇರೆಯವರಿಂದ ಕಲಿಯಬೇಕಾದ ಅಗತ್ಯವಿಲ್ಲ. ಕೊನೆಯ ಉಸಿರು ಇರುವವರೆಗೂ ನಾನು ಕನ್ನಡಕ್ಕಾಗಿ ಹೋರಾಡುತ್ತೇನೆ' ಎಂದರು.

ADVERTISEMENT

'ಪ್ರಾಥಮಿಕ ಶಿಕ್ಷಣ ಕಾಯ್ದೆ ಹಾಗೂ ಭಾಷಾನೀತಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನೆರೆ ರಾಜ್ಯ ಹಾಗೂ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ' ಎಂದು ಹೇಳಿದರು.

ಬಳಿಕ ಮಾತನಾಡಿದ ಕಸಾಪ ಅಧ್ಯಕ್ಷ ಮನು ಬಳಿಗಾರ್, 'ನೀವು ಆಡಿದ ಮಾತನ್ನು ಅನುಷ್ಠಾನಕ್ಕೆ ತನ್ನಿ. ಉನ್ನತ ಶಿಕ್ಷಣದಲ್ಲಿ ಕನ್ನಡ ಪ್ರಾಧ್ಯಾಪಕರ ಸಮಸ್ಯೆಗಳೂ ಸಾಕಷ್ಟಿವೆ. ಆ ಸಮಸ್ಯೆಗಳನ್ನೂ ಬಗೆಹರಿಸಲು ಸರ್ಕಾರ ಮುಂದಾಗಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.