ADVERTISEMENT

ಕಥೆ: ಚಂದು ಎಂಬ ಗಾಂಧಿ

ದೀಪಾ ಫಡ್ಕೆ
Published 31 ಅಕ್ಟೋಬರ್ 2020, 19:31 IST
Last Updated 31 ಅಕ್ಟೋಬರ್ 2020, 19:31 IST
ಕಲಾಕೃತಿ: ಸೃಷ್ಟಿ ವೈಷ್ಣವಿ ಕುಮಾರನ್‌
ಕಲಾಕೃತಿ: ಸೃಷ್ಟಿ ವೈಷ್ಣವಿ ಕುಮಾರನ್‌   

ಚಂದು, ಬೆಳಗ್ಗಿನ ತಿಂಡಿಗೆ ಬಂದು ಕೂತ. ಒಲೆಕಟ್ಟೆಯ ಬುಡದಲ್ಲಿ ಕೂತು ನೀರು ದೋಸೆ ಎರೆಯುತ್ತಿದ್ದ ಅವನಮ್ಮ, ಅವನಿಗೆಂದೇ ದೊಡ್ಡ ತಟ್ಟೆಯಲ್ಲಿ ದೋಸೆ ಎರೆದು ತಣ್ಣಗಾಗಿಸಿ ಇಟ್ಟಿದ್ದರು. ಉಳಿದೆಲ್ಲ ಮಕ್ಕಳಿಗೆ ಬಿಸಿ ಬಿಸಿ ದೋಸೆಯೇ ಆಗಬೇಕೆನ್ನುವ ತಗಾದೆಯಿದ್ದರೆ, ಸಣ್ಣವನಿದ್ದಾಗಿನಿಂದಲೂ ಇವನೊಬ್ಬನದು ಅಂಥ ಬೇಡಿಕೆಗಳು ಇರಲೇ ಇಲ್ಲ. ತಣ್ಣನೆಯ, ಬಿಸಿಯೋ ಏನೋ ಒಂದು... ಹತ್ತು ಹನ್ನೆರಡರ ಹುಡುಗ ಹಾಕಿದ್ದನ್ನು ತಿಂದು ಏಳುತ್ತಿದ್ದ. ಒಬ್ಬರಾದ ಮೇಲೊಬ್ಬರು ಬಂದು ಬಿಸಿಬಿಸಿ ದೋಸೆ ತಿಂದು ಏಳುವಾಗ, ಅಮ್ಮ ಒಲೆಕಟ್ಟೆ ಎದುರು ಕೂತು ಆಗಲೇ ಒಂದೆರಡು ಗಂಟೆಗಳಾಗಿದ್ದನ್ನು ಗಮನಿಸಿದ್ದ ಚಂದು, ‘ನಂಗೆ ತಣ್ಣಗೆಯ ದೋಸೆಯನ್ನೇ ಹಾಕು’ ಎನ್ನುತ್ತಿದ್ದ. ಅವನ ಮಾತಿನಂತೇ ನಂತರ ದೋಸೆ ಹಾಕಿ ಆರಿಸಿ ಇಡುತ್ತಿದ್ದುದು ವರ್ಷಗಳ ಅಭ್ಯಾಸವಾಗಿತ್ತು.

ಚಂದು, ಊಟಕ್ಕಾಗಲೀ ತಿಂಡಿಗಾಗಲಿ ಕೂತರೆ, ‘ಸಾಕು’ ಅಥವಾ ‘ಒಂದು ದೋಸೆ ಹಾಕು’ ಎಂಬ ಮಾತು ಬಿಟ್ರೆ ಹೆಚ್ಚು ಮಾತಿರಲಿಲ್ಲ. ಸದಾ ಧ್ಯಾನಸ್ಥ ಸ್ಥಿತಿಯಲ್ಲಿರುವವನಂತೇ ಇರುತ್ತಿದ್ದ ಚಂದುವಿನ ಈ ಮೌನ, ಮದುವೆಯಾದ ನಂತರ ಅವನ ಹೆಂಡತಿ ಸಹನಾಳಿಗೂ ಅಭ್ಯಾಸವಾಗಿ, ಅವಳೂ ಹೊಂದಿಕೊಂಡಿದ್ದಳು. ಮದುವೆಯಾದ ಹೊಸತರಲ್ಲಿ ಉತ್ಸಾಹದಿಂದ ಮಾತಿಗೆಳೆಯುತ್ತಿದ್ದರೂ ‘ಹು’, ‘ಆಯ್ತು’ ಎಂದಷ್ಟೇ ಉತ್ತರ ಸಿಕ್ಕಿ ಅಭ್ಯಾಸವಾದಾಗ, ‘ಎಷ್ಟು ಅಂತ ಮಾತಾಡಿಸಬಹುದು ಈ ಮನುಷ್ಯನನ್ನು’ ಎಂದು ಅವನ ಮೌನವನ್ನೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮುಂದುವರೆಸಿದ್ದಳು.

ದೋಸೆ ತಿನ್ನುತ್ತಿದ್ದ ಚಂದುವಿಗೆ ತೋಟದ ಮೂಲೆಯಿಂದ `ಕಿಚಿಕಿಚಿ... ಟ್ರಿಯುಂ.. ಟ್ರಿಯುಂ......’ ಎನ್ನುವ ಸದ್ದು ಕೇಳಿಸಿತು. ಕೂಡಲೇ ಅರಿತ, ಮಂಗಗಳ ಗುಂಪು ತೋಟಕ್ಕೆ ಬಂದಿದೆ ಎಂದು. ಬೇಗ ಬೇಗನೇ ತಿಂಡಿ ತಿಂದು ಎದ್ದು ಕೈ ತೊಳೆದು ತೋಟದೆಡೆಗೆ ಓಡಿದ. ನೋಡಿದರೆ, ತೋಟದ ನಡುವಿನ ಖಾಲಿಯಿದ್ದ ಜಾಗದಲ್ಲಿ ಅಡಿಕೆ ಮರಗಳ ನಡುನಡುವೆ ವಾರದ ಹಿಂದೆಯಷ್ಟೇ ನೆಟ್ಟಿದ್ದ ಐವತ್ತು ಬಾಳೆಗಿಡಗಳು ನೆಲಸಮವಾಗಿದ್ದವು. ಗೊನೆ ಮೂಡದೇ ಇದ್ದ ಗಿಡಗಳು ಪುಡಿಪುಡಿಯಾಗಿ ಕೈಗೆ ಸಿಕ್ಕಿದ್ದ ಬಾಳೆದಿಂಡನ್ನು ಕೋತಿಗಳು ಚೀಪುತ್ತಿದ್ದವು. ಒಮ್ಮೆ ಚಂದುವಿನ ಮನಸ್ಸು ಸಿಟ್ಟಿಗೆದ್ದರೂ ಬಾಳೆದಿಂಡನ್ನು ಕೋತಿಗಳು ಚೀಪುತ್ತಿದ್ದ ರೀತಿಗೆ ದುಃಖವಾಯಿತು. ಅದರಲ್ಲೂ ಗುಂಪಿನಲ್ಲಿದ್ದ ಮರಿ ಕೋತಿಯೊಂದು ಮಗುವಿನಂತೇ ದಿಂಡಿನ ರಸ ಹೀರುತ್ತಿದ್ದ ದೃಶ್ಯ ಅವನನ್ನು ಸಂಕಟಕ್ಕೆ ತಳ್ಳಿತು. ಕ್ಷಣ ಕಾಲ ನೋಡುತ್ತಾ ಇದ್ದವನು ನಂತರ ಸುಮ್ಮನೇ ಮನೆಯತ್ತ ಹಿಂತಿರುಗಿದ.

ADVERTISEMENT

ಮನದಲ್ಲಿ ಯೋಚನೆಗಳು... ಎಷ್ಟು ಹಳೆಯದು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ! ಯಾರದಿದು ತೋಟ? ಯಾರಿಗೆಲ್ಲ ಸೇರಬೇಕು ಇಲ್ಲಿನ ಉತ್ಪತ್ತಿ? ಸಿಗುವ ಉತ್ಪತ್ತಿಯಲ್ಲಿ ಯಾರ್ಯಾರ ಪಾಲು ಏಷ್ಟು? ಭೂಮಿಯದ್ದೆಷ್ಟು? ಕಾಡು ಕಡಿದು ತೋಟವಿಟ್ಟ ಮನುಷ್ಯನದ್ದೆಷ್ಟು? ಕಾಡಿನ ನಿಜವಾದ ವಾರಸುದಾರರದ್ದೆಷ್ಟು?... ಉತ್ತರವಿರದ ಪ್ರಶ್ನೆಗಳು ಚಂದುವಿಗೆ ಕಾಡತೊಡಗಿದವು.

ಬಂಡಾಜೆ ಘಾಟಿ ಇಳಿದು ಮುಂದೆ ಬಂದಾಗ ಸಿಗುವ ಊರು ಮಂಜಾಡಿಯಲ್ಲಿ ಅಡಿಕೆ ತೋಟಗಳದ್ದೇ ರಾಜ್ಯಭಾರ. ಅಡಿಕೆಯೊಂದಿಗೆ ಕೋಕೊ, ಕರಿಮೆಣಸು, ಏಲಕ್ಕಿ ಅಷ್ಟೇ ಅಲ್ಲದೇ ಇತ್ತೀಚೆಗಿನ ದಶಕಗಳಲ್ಲಿ ಇಳಿಜಾರು ಇದ್ದ ಭೂಮಿಯಲ್ಲಿ ರಬ್ಬರು ನೆಟ್ಟು ಕೈತುಂಬಾ ಸಂಪಾದಿಸಿದ ಊರೂ. ಧರ್ಮಣ್ಣನ ಬಾಡಿಗೆ ಕಾರೊಂದೇ ಸಂಚಾರಕ್ಕೆ ನಂಬುಗೆಯ ವಾಹನ ವ್ಯವಸ್ಥೆಯಾಗಿದ್ದ ಊರಿಗೆ, ಅಡಿಕೆ, ರಬ್ಬರು ಬಂಗಾರದ ಬೆಳೆಯಾಗಿ ಪರಿವರ್ತನೆಯಾದಾಗ ಮನೆಮನೆಗಳಲ್ಲಿ ಒಂದು ಕಾರು, ಅಗತ್ಯ ಸಾಮಾನು ಮತ್ತು ಅಡಿಕೆ ಸಾಗಿಸಲು ಒಂದು ಜೀಪು ಎಂದು ಬದುಕು ಮೇಲ್ದರ್ಜೆಗೇರಿದ್ದು ಮೊನ್ನೆ ಮೊನ್ನೆಯ ಸುದ್ದಿ. ಮನೆಯ ಹೆಂಗಸರ ಕುತ್ತಿಗೆಯಲ್ಲಿ ಗಟ್ಟಿ ಕರಿಮಣಿ ಕಂಠಿಯೊಂದು ಇದ್ದರೆ ಸಾಕೆಂದು ಅಂದುಕೊಳ್ಳುತ್ತಿದ್ದ ಊರಿಗೆ, ಅಡಿಕೆಗೆ ಚಿನ್ನದ ಬೆಲೆ ಬಂದೊಡನೇ ಪಕ್ಕದ ಮಂಗಳೂರಿನ ಸರಾಫು ಕಟ್ಟೆಯಲ್ಲಿ ಮಂಜಾಡಿಯ ಹೆಂಗಸರೂ ಜೊತೆಯಲ್ಲಿ ಕೈಯಲ್ಲಿ ದುಡ್ಡಿನ ಬ್ಯಾಗನ್ನು ತೆಗೆದುಕೊಂಡು ‘ಎಂಥ ಮಾರಾಯ್ತಿ? ಎಷ್ಟು ಹೊತ್ತು ನಿಮ್ಮ ರಾಮಾಯಣ? ಇನ್ನೂ ಮುಗಿಲಿಲ್ವ?’ ಎಂದು ಚಡಪಡಿಸುತ್ತಾ ಕೂರುವ ಗಂಡಸರ ದೃಶ್ಯ ಸಾಮಾನ್ಯವಾಗಿತ್ತು. ಇವರ ನಡುವೆ ಚಂದ್ರಶೇಖರ ಅರ್ಥಾತ್ ಚಂದು ಇಡೀ ಊರಿನ ಬದಲಾದ ಚಿತ್ರಣಕ್ಕೇ ಸವಾಲಾಗುವಂತೇ ಅವನ ಪಾಡಿಗೇ ಕಾಡಿನ ಅನೂಹ್ಯ ಮೌನದೊಳಕ್ಕೆ ತೂರಿಕೊಂಡು ಇಷ್ಟವಿಲ್ಲದೆಯೂ ಸತ್ಯನಾರಾಯಣ ಪೂಜೆಗೆ, ತಿಥಿಗಳಿಗೆ ಹೋಗಿಕೊಂಡು ಊರಿನ ಆಗುಹೋಗುಗಳಿಗೆ ಮೂಕ ಪ್ರೇಕ್ಷಕನಾಗಿದ್ದ.

ಬೆಳ್ಳಂಬೆಳಿಗ್ಗೆ ತೋಟಕ್ಕೆ ಒಂದು ಸುತ್ತು ಹಾಕಿ ಬಂದಾಗಲೇ ಚಂದುವಿಗೆ ಸಮಾಧಾನವಾಗೋದು. ಒಂದು ಗ್ಲಾಸ್ ಕಾಫಿ ಕುಡಿದು ತೋಟದ ಕಡೆಗೆ ಹೊರಟ ಎಂದರೆ ಅವನ ಅಂದಿನ ಧ್ಯಾನದ ಹೊತ್ತು ಆರಂಭವಾಯಿತು ಎಂದರ್ಥ. ಬಿಸಿಲು ಇನ್ನೂ ಏರದಿದ್ದ, ಬಾಳೆ ಎಲೆ, ಕೊಕ್ಕೊ ಎಲೆಗಳ ಮೇಲೆ ಬಿದ್ದಿರುವ ಇಬ್ಬನಿಯಿನ್ನೂ ನೀರಾಗಿ ಮೆಲ್ಲಗೆ ತೊಟ್ಟಿಕ್ಕಲು ಶುರುವಾಗದೇ ಇರುವ ಮುಂಜಾವಿನ ಹೊತ್ತದು. ಒಂದ್ಹತ್ತು ನಿಮಿಷ ತಡವಾದರೂ ಎಲೆಗಳ ಮೇಲಿಂದ ಇಬ್ಬನಿ, ನೀರಾಗಿ ಎಲೆ ಬಾಗಿದ್ದ ಬದಿಯಿಂದ ಇಳಿದು ಬಿಡುತ್ತಿತ್ತು. ಚಂದುವಿಗೆ ಈ ಇಬ್ಬನಿ ಎಂದರೆ ಅದೇನೋ ಮೋಡಿ. ನಾಜೂಕಾಗಿ ಮುತ್ತಿನ ಮಣಿಗಳನ್ನು ಪೋಣಿಸಿದಂತೇ ಇರುವ ಇಬ್ಬನಿಯು ಮುಟ್ಟಿದ ತಕ್ಷಣ ಇಳಿದು ನೀರಾಗುವಾಗ, ಕಾಲದ ಒಂದೊಂದು ಕ್ಷಣ ಹನಿಯಾಗಿ ಹರಿದು ತೊಟ್ಟಿಕ್ಕುವಂತೆ ಕಾಣುತ್ತಿತ್ತು. ನಿಧಾನಕ್ಕೆ ನಡೆಯುತ್ತಾ ಹೋದಂತೇ ಮೈಗೆ ತುಸುವೇ ಮುಟ್ಟಿದಂತೆ ಸವರುವ ಗಿಡಗಳ ಸ್ಪರ್ಶ ನವಿರೇಳುವಂತೆ ಮಾಡುತ್ತಿತ್ತು. ಈ ತೋಟದೊಳಗಿನ ಬೆಳಗಿನ ಒಂದು ಸುತ್ತಿನ ನಡಿಗೆಯಲ್ಲಿ ಬಿದ್ದ ತೆಂಗಿನಕಾಯೋ, ರಾತ್ರಿ ಬಂದು ಶುಂಠಿ, ಏಲಕ್ಕಿ, ಬಾಳೆಗಿಡಗಳನ್ನು ಬುಡಮೇಲು ಮಾಡಿ ಕೊಚ್ಚಿ ಹಾಕಿ ಹೋಗುತ್ತಿದ್ದ ಹಂದಿಗಳ ರಾದ್ಧಾಂತವೋ ಕಣ್ಣಿಗೆ ಬೀಳುತ್ತಿತ್ತು. ಚಂದುವಿಗೆ ಈ ಕಾಡುಪ್ರಾಣಿಗಳ ಉಪಟಳ ನಿಜಕ್ಕೂ ಅಂಥ ದೊಡ್ಡ ತೊಂದರೆಯಾಗಿ ಕಾಣುತ್ತಲೇ ಇರಲಿಲ್ಲ. ಆರಂಭದಲ್ಲಿ ಒಂದಷ್ಟು ಬಾಳೆಗೊನೆಗಳನ್ನು ಕೋತಿಗಳು ತಿಂದು ಹೋಗಿದ್ದಾಗಲೂ ‘ಅವುಗಳು ತಿಂದು ಉಳಿದದ್ದು ನಮಗೆ ಸಾಕು’ ಎಂದಿದ್ದು ಅವನ ಅಣ್ಣಂದಿರಿಗೆ ಸಿಟ್ಟು ತರಿಸಿತ್ತು. ‘ಈ ರೀತಿ ಇವನು ಕೃಷಿ ಮಾಡಿದರೆ ಕ್ರಾಪ್ ಲೋನು ಕೂಡ ಕಟ್ಟಲು ಅಸಾಧ್ಯವಾದೀತು ಸಹನಾ, ಅವನಿಗೆ ಸ್ವಲ್ಪ ಬುದ್ಧಿ ಹೇಳು’ ಎಂದು ಹೆಂಡತಿಗೆ ಹೇಳಿ ಹೋಗಿದ್ದರು. ಮಾತಾಡಲು ಬಂದ ಹೆಂಡತಿ ಸಹನಾಳಿಗೆ ‘ನೀನು ಅವರಿವರ ರಾಯಭಾರ ಮಾಡಬೇಡ. ನಮಗೆ ಬದುಕಲು ಆಗದಷ್ಟು ಬಡತನ ಬರದೇ ಇರುವ ಹಾಗೆ ನೋಡಿಕೊಳ್ಳುವೆ. ಅದಕ್ಕಿಂತ ಹೆಚ್ಚು ಎಷ್ಟು ಸೇರಿಸಿಟ್ಟರೂ ಅದು ಉಪಯೋಗವಿಲ್ಲ’ ಎಂದಾಗ ಅವನ ಮಾತಿನ ಸ್ಪಷ್ಟತೆಗೆ ಏನೂ ಹೇಳಲು ತೋಚದೆ ಮೂಕಳಾಗಿದ್ದಳು.

ಎಂ.ಎಸ್.ಡಬ್ಲ್ಯು ಓದಿದ್ದ ಚಂದು, ವಿದೇಶದ ಉದ್ಯೋಗಾವಕಾಶವನ್ನೂ ತೊರೆದು ಊರಿನಲ್ಲಿಯೇ ಏನಾದ್ರೂ ಮಾಡಬೇಕೆನ್ನುವ ಹಂಬಲದಿಂದ ಬಂದಾಗ ಹಿರಿಯಣ್ಣ ಬೇಸರಪಟ್ಟಿದ್ದ. ‘ಇಷ್ಟು ಓದಿದ್ದಕ್ಕಾದರೂ ಒಂದ್ಹತ್ತು ವರ್ಷ ಕೆಲಸ ಮಾಡಬೇಕಿತ್ತು ಚಂದು’ ಎಂದು ಹೇಳಿದ್ದ. ‘ಓದು ಅನ್ನೋದು ಉದ್ಯೋಗವನ್ನೇ ಮಾಡಬೇಕೆನ್ನುವ ಗುರಿ ಹೊತ್ತುಕೊಂಡಿರಲ್ಲ ಅಣ್ಣ. ಓದು ನಮ್ಮ ತಿಳಿವಳಿಕೆಯನ್ನು ವಿಸ್ತರಿಸಲು ಮತ್ತು ಒಂದಷ್ಟು ಆಧುನಿಕ ಎನಿಸುವ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಇಲ್ಲೇ ಏನಾದ್ರೂ ಮಾಡಬೇಕೆಂದು ಅಂದುಕೊಂಡೇ ನಾನು ಓದಿದ್ದು. ಓದಿದ್ದನ್ನು ಇಲ್ಲಿನ ಜೀವನದಲ್ಲೇ ಅಳವಡಿಸಿಕೊಳ್ಳುತ್ತೇನೆ’ ಎಂದಿದ್ದ. ಅದಕ್ಕೆ ಹಿರಿಯಣ್ಣ ಮುಲಾಜಿಲ್ಲದೇ ‘ಆರಂಭದಲ್ಲಿ ನಮಗೆಲ್ಲರಿಗೂ ಇಂಥದ್ದೇ ಯೋಚನೆಗಳು ಇದ್ದುದ್ದು. ಸಂಸಾರ ದೊಡ್ಡದಾದಾಗ ಅರ್ಥವಾಗ್ತದೆ, ಪುಸ್ತಕದ ಥಿಯರಿಗಳು ಪುಸ್ತಕದೊಳಕ್ಕೇ ಸರಿ ಎಂದು’ ಅಂದಾಗ ಚಂದುವಿನಲ್ಲಿ ಉತ್ತರವಿರಲಿಲ್ಲ.

ಊರಿನಲ್ಲಿ ಪದೇ ಪದೇ ಹೀಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾದಾಗಲೂ ‘ಅವರ ಭೂಮಿಯನ್ನು ತಾನೇ ನಾವು ಲಪಟಾಯಿಸಿದ್ದು’ ಎಂದು ಹೇಳಿ ಎಲ್ಲರಿಂದ ಬೈಸಿಕೊಂಡಿದ್ದ. ಊರಿನ ಜನರೆಲ್ಲರೂ ಚಂದುವನ್ನೇ ಕಾಡುಪ್ರಾಣಿಯನ್ನು ನೋಡಿದಂತೇ ನೋಡಿದ್ದರು. ‘ನೋಡು ಚಂದು, ನಿನ್ನ ಪ್ರಾಣಿಪ್ರೀತಿ ನಿನ್ನ ಮಟ್ಟಿಗಿರಲಿ. ನಾವು ತೋಟವನ್ನೇ ನಂಬಿಕೊಂಡು ಬದುಕುತ್ತಾ ಇರುವವರು. ನಮ್ಮ ತೋಟದ ಉತ್ಪತ್ತಿಗೆ ಈ ಕಾಡು ಪ್ರಾಣಿಗಳು ಕಂಟಕವೇ. ಸಹಾನುಭೂತಿ ತೋರಿಸಿದರೆ ಇಡೀ ತೋಟ ಗುಂಡಾಂತರವಾದೀತು. ಮುಂದಿನ ವರ್ಷ ಭಿಕ್ಷೆ ಬೇಡಬೇಕಾದೀತು. ನಿನ್ನ ತೋಟ ಹಾಳಾದರೆ ನಮಗೇನು ಎಂದು ಬಿಡುವ ಹಾಗಿಲ್ಲ ಮಾರಾಯ. ಕೋತಿಗಳ ದಂಡು ನಿನ್ನ ತೋಟದ ಬಾಳೆ, ಹಲಸು ಮಾವು ಮುಗಿಸಿ ಮುಂದೆ ನಮ್ಮ ತೋಟದ ಕಡೆಗೂ ಪ್ರಯಾಣ ಬೆಳೆಸುತ್ತವೆ. ಅದೇ ಸಮಸ್ಯೆ’ ಎಂದವರ ಮಾತಿಗೆ ವಿರೋಧ ವ್ಯಕ್ತಪಡಿಸಲೂ ಅವನಿಗೆ ಸಾಧ್ಯವಾಗಿರಲಿಲ್ಲ.

ಮಧ್ಯಾಹ್ನದ ಸಣ್ಣ ನಿದ್ದೆಗೆ ಜಾರಿದವನಿಗೆ ಅಂಗಳದ ಅಂಚಿನಲ್ಲಿ ಕಟ್ಟಿದ್ದ ನಾಯಿ ತೋಟದೆಡೆಗೆ ನೋಡುತ್ತಾ ಬೊಗಳಲು ಆರಂಭಿಸಿತು. ಮತ್ತೆ ಸ್ವಲ್ಪ ಹೊತ್ತಿನಲ್ಲಿ ಕಿಚಿಕಿಚಿ ಸದ್ದೂ ಕೇಳಿಸಿತು. ಎದ್ದು ತೋಟದ ಕಡೆಗೆ ಹೋದರೆ ವಾನರ ಸೈನ್ಯ ತೋಟದಲ್ಲಿ ದಾಂದಲೆ ಎಬ್ಬಿಸಿತ್ತು. ಉದ್ದನೆಯ ಕೋಲು ಹಿಡಿದು ಕೋತಿಗಳೆಡೆಗೆ ತೋರಿದರೆ ಗುಂಪಿನ ನಾಯಕ ಕೋತಿ, ಚಂದುವಿಗೇ ಇಷ್ಟಗಲ ಬಾಯಿ ತೆರೆದು ಗುರ್ರ್ ಎಂದು ತಿರುಗಿ ಹೆದರಿಕೆ ಹುಟ್ಟಿಸಿತ್ತು. ಮನೆಗೆ ಬಂದವನೇ ಯಾವಾಗಲೋ ತಂದಿಟ್ಟಿದ್ದ ಗರ್ನಾಲು ಪಟಾಕಿಯನ್ನು ಒಯ್ದು ಹಚ್ಚಿ ಹೆದರಿಸಲು ನೋಡಿದ. ಸುತ್ತ ನೋಡಿದರೆ ಅರ್ಧರ್ಧ ಕುಡಿದು ಎಸೆದು ಹೋದ ಎಳನೀರು, ಚೆಲ್ಲಾಪಿಲ್ಲಿಯಾಗಿದ್ದ ಕೋಕೊ ಹಣ್ಣು, ಬಾಳೆಗೊನೆಯಲ್ಲಿ ಒಂದಷ್ಟು ಬಾಳೆ ಕಾಯಿ ಉಳಿದಿದ್ದವು. ‘ತಿನ್ನುವ ಪ್ರಮಾಣಕ್ಕಿಂತಲೂ ಹಾಳು ಮಾಡುವ ಪ್ರಮಾಣವೇ ಜಾಸ್ತಿ ಕೋತಿಗಳದ್ದು’ ಎಂದುಕೊಂಡು ನಿಟ್ಟುಸಿರಾದ. ಹೊಟ್ಟೆ ತುಂಬಿತೋ ಅಥವಾ ಗರ್ನಾಲಿನ ಸದ್ದಿಗೋ ಒಂದೆರಡು ಗಂಟೆಗಳಲ್ಲಿ ಕೋತಿಗಳ ದಂಡು ತೋಟ ಬಿಟ್ಟು ಗುಡ್ಡೆಯ ಕಡೆಗೆ ಹೊರಟಿತ್ತು.

ಸಂಜೆ ಮನೆಯ ಜಗುಲಿಯಲ್ಲಿ ಕೂತು ಮನೆಯ ಮುಂದೆ ಕಾಣುವ ಎದೆಯುಬ್ಬಿಸಿ ನಿಂತ ಪುಷ್ಪಗಿರಿ ಬೆಟ್ಟವನ್ನು ನೋಡುವುದು ಅವನ ಅಭ್ಯಾಸ. ಸುಮ್ಮನೇ ಕೂತವನನ್ನು ಬಂದು ಎಚ್ಚರಿಸಿದಳು ಸಹನಾ. ‘ಚಂದು, ಹೀಗೆ ಕೂತರೆ ಆಗುತ್ತಾ? ನಾನು ಇದುವರೆಗೂ ನಿಮ್ಮಲ್ಲಿ ತೋಟಕ್ಕೆ ಸಂಬಂಧಪಟ್ಟ ಯಾವುದೇ ವಿಷಯವಾಗಲಿ ನಿಮ್ಮ ನಿರ್ಧಾರವನ್ನಾಗಲಿ ಪ್ರಶ್ನಿಸಿರಲಿಲ್ಲ. ಆದರೆ ಈಗ ಮಂಗಗಳ ಕಾಟ ವಿಪರೀತವಾಗಿದೆ. ಹೀಗೆ ಬಿಟ್ರೆ ತೋಟದಲ್ಲಿ ಎನೂ ಉಳಿಲಿಕ್ಕಿಲ್ಲ. ಎಲ್ಲರಿಗೂ ಅವರವರ ಬದುಕು ಮುಖ್ಯ ಅಲ್ವಾ? ಆದರ್ಶದ ಗುಂಗಿನಲ್ಲಿ ನಿತ್ಯದ ಜೀವನ ಹಾಳಾಗಬಾರದಲ್ವಾ. ನೀವು ಸುಮ್ಮನಿದ್ದರೆ ನಮ್ಮ ತೋಟ ಮಾತ್ರವಲ್ಲ, ನಮ್ಮಿಂದಾಗಿ ಎಲ್ಲರಿಗೂ ತೊಂದ್ರೆ ಆಗ್ತಿದೆ. ಇದು ಸರಿಯಲ್ಲ, ಏನು ಮಾಡಬಹುದು ಎಂದು ಸರಿಯಾಗಿ ಯೋಚಿಸಿ’ ಎಂದು ಹೇಳಿ ಎದ್ದಾಗ ಚಂದು ಕೈ ಹಿಡಿದು ಕೂರಿಸಿದ.

‘ಸಹನಾ, ನಾನಂತೂ ಮಂಗಗಳನ್ನು ಕೊಲ್ಲೊದಾಗಲಿ ಅವುಗಳಿಗೆ ಹಿಂಸೆ ಕೊಡೊದಾಗಲಿ ಖಂಡಿತ ಮಾಡಲಾರೆ. ಈ ಭೂಮಿ ಮನುಷ್ಯಂದೆಷ್ಟೋ ಅಷ್ಟೇ ಪ್ರಾಣಿಗಳದ್ದು ಕೂಡಾ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ ಸಹನಾ’ ಎಂದ.

‘ಹಾಗಂತ ನೀವು ಈಗ ಸುಮ್ಮನಿದ್ದರೆ ಊರಿನವರೊಡನೆ ನಾವು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತೇ ಅಲ್ವಾ. ಮೊದಲೇ ನಿಮ್ಮ ಮೇಲೆ ಸಿಟ್ಟಿದೆ. ಹಾಗಿರುವಾಗ ಅದನ್ನು ಜಾಸ್ತಿ ಮಾಡಿಕೊಳ್ಳಬೇಡಿ ಅಷ್ಟೇ. ಎನೋ ಒಂದು ದಾರಿ ಹುಡುಕಲೇಬೇಕು’ ಪಟ್ಟು ಹಿಡಿದಳು ಸಹನಾ.

‘ಆಯ್ತು ನೋಡೋಣಾ. ನಂಗೆ ಕೃಷಿ ಎಷ್ಟು ಮುಖ್ಯಾನೋ ಪ್ರಾಣಿಗಳ ಜೀವವೂ ಅಷ್ಟೇ ಮುಖ್ಯ. ಇದು ಪರಿಹಾರವಿಲ್ಲದ ಸಮಸ್ಯೆ. ಆದರೂ ಸರ್ಕಾರಕ್ಕೆ ಒಂದು ಪತ್ರ ಬರೆಯುತ್ತೇನೆ. ಮಂಗಗಳ ಹಾವಳಿಗೆ ಏನಾದ್ರೂ ದಾರಿ ತೋರಿಸಿ ಎಂದು ಕೇಳ್ತೇನೆ, ನೋಡೋಣಾ’ ಎಂದು ಊರಿನ ತಹಶೀಲ್ದಾರಿಗೆ ಪತ್ರವನ್ನೂ ಬರೆದು ಮರುದಿನ ಪೋಸ್ಟ್ ಮಾಡಿಯೂ ಬಂದ.

ನಿಧಾನಕ್ಕೆ, ಸತ್ಯನಾರಾಯಣ ಪೂಜೆಯಲ್ಲಿ, ತಿಥಿಗಳಲ್ಲಿ ಊರಿನ ಜನರ ಮಾತಿನ ವಿಷಯವೇ ಮಂಗಗಳ ಕಾಟವಾಗುತ್ತಾ ಹೋಯಿತು. ಮಂಗಗಳನ್ನು ಹಿಡಿದು ಮತ್ತೊಂದು ಊರಿನ ಕಾಡಿಗೆ ಬಿಟ್ಟೆ ಎಂದೋ, ಹಾಗೆ ಆ ಮತ್ತೊಂದು ಊರಿನವರೂ ಅಲ್ಲಿನ ತೋಟಗಳಿಗೆ ಬಂದ ಮಂಗಗಳನ್ನು ಹಿಡಿದು ಈ ಊರಿಗೆ ಬಿಟ್ಟಿದ್ದಾರೆಂದೋ ಹೀಗೆ ಊರಿನವರ ಮಾತಿಗೆ ಮಂಗಗಳೂ ಸಿಕ್ಕಿಕೊಂಡು ಬಿಟ್ಟವು. ಮನೆಯ ತೀರುವೆ ಕಟ್ಟಲು ಪಂಚಾಯಿತಿ ಕಚೇರಿಗೆ ಹೋಗಿದ್ದ ಚಂದು ಹಾಗೇ ತಾಲ್ಲೂಕು ಕಚೇರಿಗೆ ಹೋಗಿ ತಹಶೀಲ್ದಾರರನ್ನು ಭೇಟಿ ಮಾಡಿ ಮಂಗಗಳ ಹಾವಳಿ ಬಗ್ಗೆ ದೂರು ಕೊಟ್ಟು ಬಂದ. ‘ಈ ಸಮಸ್ಯೆ ಅರಣ್ಯ ಇಲಾಖೆಗೆ ಬರುತ್ತೆ ಸರ್. ಅವರಿಗೊಂದು ದೂರು ಬರೆದು ಕೊಡಿ’ ಎಂದು ಹೇಳಿದ್ದಕ್ಕೆ ಹಾಗೆ ಮಾಡಿ ಬಂದ. ದೂರನ್ನು ನೋಡಿ ಸುಮ್ಮನಾದ ಅರಣ್ಯಾಧಿಕಾರಿ, ‘ಕೋತಿಗಳ ಆಹಾರವಾದ ಕಾಡುತ್ಪತ್ತಿಯನ್ನೂ ಕಾಡಿಗೆ ನುಗ್ಗಿ ಜನ ಹೋಗಿ ತಂದರೆ ಜನರ ತೋಟಗಳಿಗೆ ಕೋತಿಗಳು ನುಗ್ಗೋದು ಸಹಜ ಅಲ್ವ ಸ್ವಾಮಿ. ಯಾರಾದ್ರೂ ಕೋತಿಗಳನ್ನು ಹಿಡಿಯೋರಿದ್ರೆ ಕರಿಸಿ ಅವುಗಳನ್ನು ಹಿಡಿದು ದೂರ ಎಲ್ಲಾದ್ರೂ ಬಿಟ್ಟು ಬನ್ನಿ, ಈ ಸಲಹೆ ಅಷ್ಟೇ ಕೊಡಬಲ್ಲೆ’ ಎಂದು ಉಡಾಫೆಯಿಂದ ಅಂದಾಗ ಚಂದು ಎದ್ದು ಬಂದಿದ್ದ.

ಆರೆಂಟು ತಿಂಗಳ ಕಾಲ ಕೋತಿಗಳು ತೋಟದಿಂದ ತೋಟಕ್ಕೆ ಓಡಾಡಿಕೊಂಡು ಸಿಕ್ಕಿದ್ದನ್ನು ತಿಂದುಕೊಂಡು ಮಂಜಾಡಿಯ ಜನರಿಗೆ ದುಃಸ್ವಪ್ನದಂತೆ ಕಾಡಿದವು. ಕೆಲವು ತೋಟದ ಮಾಲಿಕರು ಕೋತಿಗಳನ್ನು ಹಿಡಿದು ದೂರದ ಕಾಡಿಗೆ ಬಟ್ಟು ಬಂದರೆ, ಕೆಲವರು ಕೋತಿಗೆ ಕೋವಿಯಿಂದ ಗುಂಡಿಟ್ಟು ಕೊಂದದ್ದೂ ಆಯಿತು. ಇನ್ನೂ ಕೆಲವರು ಕೋತಿಗಳನ್ನು ಹಿಡಿದು ಗೋಣಿಯಲ್ಲಿ ಹಾಕಿ ನದಿಗೋ ಕೆರೆಗೊ ಎಸೆದು ಸಿಟ್ಟು ತೀರಿಸಿಕೊಂಡರು. ಇದೆಲ್ಲವನ್ನು ನೋಡುತ್ತಾ ಚಂದುವಿನ ಮನಸ್ಸು ವಿಲವಿಲ ಒದ್ದಾಡಿತು. ಇತ್ತ ಊರ ಜನರ ಬೇರೆ ಬೇರೆ ಉಪಾಯಗಳಿಂದ ಪರಿಹಾರವೂ ಇಲ್ಲದೇ ಪತ್ರಗಳ ಮೇಲೆ ಪತ್ರಗಳನ್ನೂ ಬರೆದರೂ ಸರ್ಕಾರದ ನಿರ್ಲಕ್ಷ್ಯವನ್ನು ಸಹಿಸಿಕೊಂಡು ರೋಸಿ ಹೋದ ಚಂದು, ಒಂದು ನಿರ್ಧಾರಕ್ಕೆ ಬಂದ.

ಸೋಮವಾರ ಬೆಳಿಗ್ಗೆಯೇ ತಾಲ್ಲೂಕು ಕಚೇರಿಯಲ್ಲಿ ಕೆಲಸ ಇದೆ ಎಂದು ಸಹನಾಗೆ ಹೇಳಿ ಹೊರಟ. ನಂಬುಗೆಯ ಆಳು ಚೆನ್ನಪ್ಪನೂ ಜೊತೆಗಿದ್ದ. ತನ್ನ ಮನೆ ಮುಂದೆ ಬಂದು ನಿಂತ ಜೀಪಿಗೆ ಒಂದ್ಹತ್ತು ತುಂಬಿದ್ದ ಗೋಣಿ ಚೀಲಗಳನ್ನು ತುಂಬಿ ಮುಂದೆ ಬಂದು ಕೂತ. ಬೆಳಗಿನ ಎಂಟೂವರೆಯಷ್ಟೇ. ತಾಲ್ಲೂಕು ಕಚೇರಿಯ ಗುಮಾಸ್ತನೂ ಬಂದಿರಲಿಲ್ಲ. ಚಂದು ಮತ್ತು ಚನ್ನಪ್ಪ ತಾಲ್ಲೂಕು ಕಚೇರಿಯ ಕಾಂಪೌಂಡ್ ಒಳಗಡೆ ಒಂದೈದು ಗೋಣಿ ಚೀಲಗಳ ಬಾಯನ್ನು ಸ್ವಲ್ಪವೇ ತೆರೆದು ಬಿಡಿಸಿಟ್ಟರು. ಅಲ್ಲಿಂದ ಅರಣ್ಯಾಧಿಕಾರಿಯ ಕಚೇರಿ ಬಳಿ ಬಂದು ಅಲ್ಲೂ ಉಳಿದೆಲ್ಲ ಗೋಣಿಚೀಲಗಳ ಬಾಯಿ ತೆರೆದು ಕಾಂಪೌಂಡ್ ಒಳಗಡೆ ಇಟ್ಟು ಅಲ್ಲಿಂದ ಹೊರಟರು.

ಹತ್ತು ಗಂಟೆಗೆ ಕಚೇರಿಗೆ ಬಂದ ತಹಶೀಲ್ದಾರರೂ, ಅರಣ್ಯಾಧಿಕಾರಿಯೂ ಆವರಣದ ಸ್ಥಿತಿ ನೋಡಿ ಬೆಚ್ಚಿ ಬಿದ್ದರು. ಗುಮಾಸ್ತ ಬಾಯಿ ಬಿಟ್ಟು ನಿಂತಿದ್ದ. ಕಚೇರಿಯ ಆವರಣದ ತುಂಬಾ ಕೋತಿಗಳು ದಾಂಧಲೆ ಎಬ್ಬಿಸುತ್ತಿದ್ದವು. ಅರಣ್ಯಾಧಿಕಾರಿ ಗಾಬರಿಯಿಂದ ಗುಮಾಸ್ತನಿಗೆ, ‘ಎನ್ ನೋಡ್ತಿದ್ದೀಯಾ, ಯಾರಾದ್ರು ಕೋತಿ ಹಿಡಿಯುವವರಿಗೆ ಫೋನ್ ಮಾಡು’ ಎಂದು ಅಬ್ಬರಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.