ADVERTISEMENT

ಆಕರ್ಷಣೆ ಕಳೆದುಕೊಂಡ ಸ್ಟಾರ್ಟ್‌ಅಪ್ಸ್‌

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಆಕರ್ಷಣೆ ಕಳೆದುಕೊಂಡ ಸ್ಟಾರ್ಟ್‌ಅಪ್ಸ್‌
ಆಕರ್ಷಣೆ ಕಳೆದುಕೊಂಡ ಸ್ಟಾರ್ಟ್‌ಅಪ್ಸ್‌   

ನವದೆಹಲಿ (ಪಿಟಿಐ): ಇದುವರೆಗೂ ಹೊಸ ಉದ್ಯೋಗ ಸೃಷ್ಟಿಯ  ಆಕರ್ಷಕ ತಾಣವಾಗಿದ್ದ ನವೋದ್ಯಮದ (ಸ್ಟಾರ್ಟ್ಅಪ್ಸ್‌) ಮೇಲೆ ಫ್ಲಿಪ್‌ಕಾರ್ಟ್‌ನ ಹೊಸ ವಿವಾದವು ಭಾರಿ ಪರಿಣಾಮ ಬೀರುವ ಸಾಧ್ಯತೆ ಕಂಡುಬರುತ್ತಿದೆ.

ಅಹಮದಾಬಾದ್‌ನ ಐಐಎಂ ಮತ್ತು ಐಐಟಿಯಿಂದ ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಉದ್ಯೋಗ ಸೇರ್ಪಡೆ ದಿನವನ್ನು  ಫ್ಲಿಪ್‌ಕಾರ್ಟ್ ಆರು ತಿಂಗಳು ಮುಂದೂಡಿರುವುದು ಹೊಸ ಬೆಳವಣಿಗೆಗೆ ನಾಂದಿಯಾಗಿದೆ.

ಹಾಗೆ ನೋಡಿದರೆ ಕೇವಲ ಫ್ಲಿಪ್‌ಕಾರ್ಟ್ ಮಾತ್ರವಲ್ಲ, ಬಹುತೇಕ ಇ–ಕಾಮರ್ಸ್‌ ಕಂಪೆನಿಗಳು ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಸೇರ್ಪಡೆ ದಿನವನ್ನು ಮುಂದೂಡಿವೆ. ಇನ್ ಮೊಬಿ, ಕಾರ್‌ದೇಖೊ, ಹಾಪ್‌ಸ್ಕಾಚ್‌ನಂಥ ಪ್ರತಿಷ್ಠಿತ ಇ–ಕಾಮರ್ಸ್‌ ಕಂಪೆನಿಗಳೂ ಈ ಪಟ್ಟಿಯಲ್ಲಿವೆ ಎನ್ನುತ್ತಾರೆ ಮಾರುಕಟ್ಟೆ ಮತ್ತು ಮಾನವ ಸಂಪನ್ಮೂಲ ತಜ್ಞರು.

ಹೀಗಾಗಿ ಉದ್ಯೋಗಾಕಾಂಕ್ಷಿಗಳು ಸಂಬಳ ತುಸು ಕಡಿಮೆಯಾದರೂ ಪರವಾಗಿಲ್ಲ, ನವೋದ್ಯಮಗಳಿಗಿಂತ ಈಗಾಗಲೇ ನೆಲೆವೂರಿದ ಕಂಪೆನಿಗಳಲ್ಲಿ  ಕೆಲಸ ಗಿಟ್ಟಿಸಿಕೊಳ್ಳುವುದು ಒಳಿತು ಎಂಬ  ನಿರ್ಧಾರ ತಳೆದಿದ್ದಾರೆ.

ನವೋದ್ಯಮಗಳು ಕಷ್ಟದಲ್ಲಿರುವುದು ನಿಜ. ಹಾಗಂತ ಇದು ಶಾಶ್ವತವಲ್ಲ. ತಾತ್ಕಾಲಿಕ ಮಾತ್ರ. ನವೋದ್ಯಮ ಮತ್ತೇ ತನ್ನ ಆಕರ್ಷಣೆ ಮರಳಿ ಪಡೆಯಲಿದೆ ಎನ್ನುವುದು ಝೋಪರ್‌ ಇ–ಕಾಮರ್ಸ್‌ ಕಂಪೆನಿ ಸಹ ಸಂಸ್ಥಾಪಕ ನೀರಜ್ ಜೈನ್‌ ಅವರ ವಿಶ್ವಾಸ.

ಫ್ಲಿಪ್‌ಕಾರ್ಟ್‌ನಲ್ಲಿ ಹಣ ಹೂಡಿದ ಫಿಡೆಲಿಟಿ ಇನ್ವೆಸ್ಟ್‌ಮೆಂಟ್ಸ್‌, ಟಿ ರೋವ್‌ ಪ್ರೈಸ್‌, ಮಾರ್ಗನ್‌ ಸ್ಟ್ಯಾನ್ಲಿ ಕಂಪೆನಿಗಳ ಷೇರು ಮೌಲ್ಯ ಕುಸಿದಿರುವುದರಿಂದ ಫ್ಲಿಪ್‌ಕಾರ್ಟ್‌ ಆದಾಯ ಇಳಿಮುಖವಾಗಿರುವುದು ಬೆಳವಣಿಗೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.