ADVERTISEMENT

ಆದಾಯ, ತೆರಿಗೆ ವಿನಾಯ್ತಿಗೆ ವಿಮೆ

ಜೆರ್ರಿ ಭುಟಿಯಾ
Published 12 ಜೂನ್ 2018, 19:30 IST
Last Updated 12 ಜೂನ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

2018-19 ನೇ ಸಾಲಿನ ಆರ್ಥಿಕ ವರ್ಷ ಆರಂಭವಾಗಿ ಈಗಾಗಲೇ ಎರಡು ತಿಂಗಳುಗಳು ಕಳೆದಿವೆ. ತೆರಿಗೆ ಹೊರೆಯನ್ನು  ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ಬಯಸುತ್ತಾನೆ. ಇತ್ತೀಚಿನವರೆಗೂ ಬಹುತೇಕ ನಾಗರಿಕರು ತಮ್ಮ ಹಣವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಸಾರ್ವಜನಿಕ ಭವಿಷ್ಯ ನಿಧಿಯತ್ತ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ –ಪಿಪಿಎಫ್)  ಗಮನ ಹರಿಸುವ ಏಕೈಕ ಮಾರ್ಗವಾಗಿತ್ತು. ಷೇರು ಸಂಬಂಧಿತ (ಈಕ್ವಿಟಿ ಲಿಂಕ್ಡ್) ಉಳಿತಾಯ ಯೋಜನೆ (ಇಎಲ್‍ಎಸ್‍ಎಸ್) ಹಾಗೂ ತೆರಿಗೆ ಉಳಿತಾಯದ ಸ್ಥಿರ ಠೇವಣಿಗಳಲ್ಲಿ ಹಣ ತೊಡಗಿಸುವುದರ ಮೂಲಕವೂ ಆದಾಯ ತೆರಿಗೆ ಪಾವತಿಸುವವರು ತಮ್ಮ ತೆರಿಗೆ ಪಾವತಿಯಿಂದ ಕೊಂಚ ನಿರಾಳತೆ ಪಡೆಯುತ್ತಿದ್ದರು.

ಕೇಂದ್ರ ಸರ್ಕಾರದ 2018ನೇ ಸಾಲಿನ ವಾರ್ಷಿಕ ಬಜೆಟ್ ಘೋಷಣೆಯಾದ ನಂತರ ಜನ ಹೂಡಿಕೆ ವಿಚಾರದಲ್ಲಿ ತಮ್ಮ ನಿಲುವಿನಲ್ಲಿ   ಕಡ್ಡಾಯವಾಗಿ ಒಂದು ಬದಲಾವಣೆ ಮಾಡಿಕೊಂಡಿದ್ದಾರೆ. ತೆರಿಗೆಯ ಉಳಿತಾಯದ ಜತೆಗೆ ಆದಾಯವನ್ನೂ ಗಳಿಸುವ ಉದ್ದೇಶ ಹೊಂದಿದ್ದಾರೆ. ದೀರ್ಘಾವಧಿ ಬಂಡವಾಳ ಹೂಡಿಕೆ ಮೂಲಕ ಲಾಭ ಗಳಿಸುವ (ಎಲ್‍ಟಿಸಿಜಿ) ತೆರಿಗೆಯತ್ತ ಮರು ಚಿಂತನೆ ನಡೆಸಿದ್ದಾರೆ. ಈಕ್ವಿಟಿ ಆಧಾರಿತ ಮ್ಯೂಚುವಲ್ ಫಂಡ್ ಮೂಲಕ ಗಳಿಕೆಯ ಮಾರ್ಗ ಹುಡುಕಿಕೊಳ್ಳುವ ಯತ್ನ ಆರಂಭಿಸಿದ್ದಾರೆ. ಷೇರುಪೇಟೆಯಲ್ಲಿನ ಹೂಡಿಕೆಯಿಂದ ಬರುವ ಲಾಭದತ್ತ  ಬಲವಂತವಾಗಿ  ದೃಷ್ಟಿ ಹರಿಸುವ ಸಂದರ್ಭ ಈಗ ಎದುರಾಗಿದೆ. ‘ಇಎಲ್‍ಎಸ್‍ಎಸ್’ನಂತಹ ವ್ಯವಸ್ಥಿತ ಹೂಡಿಕೆಯತ್ತಲೂ ಗಮನ ಹರಿಸುತ್ತಿದ್ದಾರೆ.

‘ಪಿಪಿಎಫ್’ ಮೂಲಕ ಮಾಡುವ ಹೂಡಿಕೆ ಹಾಗೂ ಅದರಿಂದ ಗಳಿಸುವ ಆದಾಯ ತೆರಿಗೆ ರಹಿತವಾಗಿರುತ್ತದೆ. ತೆರಿಗೆ ಉಳಿತಾಯದ ಸ್ಥಿರ ಠೇವಣಿ ಮೇಲೆ ಹೂಡಿಕೆ, ಆದಾಯ ತೆರಿಗೆ ಕಾಯ್ದೆಯ 80ಸಿ ಸೆಕ್ಷನ್ ಅಡಿ ಅರ್ಹತೆ ಗಳಿಸುವುದು, ತೆರಿಗೆ ವ್ಯಾಪ್ತಿ ಅಡಿ ಅನುಮತಿ ನೀಡಿದ ಮಿತಿಯೊಳಗೆ ಮಾತ್ರ ತೆರಿಗೆಯಿಂದ ವಿನಾಯಿತಿ ಪಡೆಯಲು ಸಾಧ್ಯವಾಗಲಿದೆ.

ADVERTISEMENT

ತೆರಿಗೆ ಉಳಿತಾಯಕ್ಕೆ ಉತ್ತಮ ಮಾರ್ಗ
ನಿಮ್ಮ ಅವಶ್ಯಕತೆ ಹಾಗೂ ಇಚ್ಛೆ ಆಧರಿಸಿ ತೆರಿಗೆಯಿಂದ ವಿನಾಯ್ತಿ ಪಡೆಯಲು, ನಿಮ್ಮ ಹಣಕಾಸಿನ ಗುರಿ ಮಾತ್ರ ಪೂರೈಸಲು ಸಹಕಾರಿಯಾಗು ಹೂಡಿಕೆಯನ್ನಷ್ಟೇ ನೀವು ಪರಿಗಣಿಸಬಹುದು. ಆದರೆ, ತೆರಿಗೆ ಉಳಿಸಲು ಸಹಕಾರಿಯಾಗುವಂತಹ ಹೂಡಿಕೆಗಳಿಗೆ  ಇಲ್ಲಿ ಉಲ್ಲೇಖಿಸಿರುವ ಯೋಜನೆಗಳು ಹೆಚ್ಚು ಪ್ರಯೋಜನಕಾರಿಯಾಗಿರುತ್ತವೆ.

ಟರ್ಮ್ ಯೋಜನೆಗಳ ಆಯ್ಕೆ
ಟರ್ಮ್ ಜೀವ ವಿಮೆ ಯೋಜನೆಗಳನ್ನು ಹೂಡಿಕೆಯ ಆಯ್ಕೆಯಾಗಿ ವಿಂಗಡಿಸಲು ಸಾಧ್ಯವಿಲ್ಲ. ಆದರೆ, ಇದು ನಿಮ್ಮ ಅನುಪಸ್ಥಿತಿಯಲ್ಲಿ ಕುಟುಂಬದ ರಕ್ಷಣೆಗೆ ಬದ್ಧವಾಗಿರುತ್ತದೆ. ಅಲ್ಲದೇ ನೀವು ಹೆಚ್ಚಿನ ಆತಂಕವಿಲ್ಲದೇ ನಿಮ್ಮ ಹೂಡಿಕೆಯತ್ತ ಗಮನ ಹರಿಸಬಹುದು. ಒಂದೊಮ್ಮೆ ವಿಮಾದಾರರು ಟರ್ಮ್ ಅವಧಿಯಲ್ಲೇ ನಿಧನರಾದರೆ ಜೀವವಿಮಾ ಕಂಪನಿಯು ವಿಮೆಯ ನಾಮಿನಿಗೆ ಸಮ್ ಅಶ್ಯೂರ್ಡ್ ಮೊತ್ತವನ್ನು ನೀಡಿ ಅವನ/ಅವಳ ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುತ್ತದೆ.

ಈ ಅನುಕೂಲವು ಕುಟುಂಬಕ್ಕೆ ದೀರ್ಘಾವಧಿ ಆರ್ಥಿಕ ಸುರಕ್ಷೆಯನ್ನು ಒದಗಿಸುತ್ತದೆ. ಜತೆಗೆ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಅಲ್ಲದೇ ಟರ್ಮ್ ಯೋಜನೆಗಳಲ್ಲಿ ಕಂತಿನ ಪಾವತಿ ಕೂಡ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯ್ತಿಗೆ ಒಳಪಟ್ಟಿರುತ್ತದೆ.

ಯೂನಿಟ್ ಆಧಾರಿತ ವಿಮೆ ಯೋಜನೆ
ಈ ‘ಯುಎಲ್‍ಐಪಿಎಸ್’ ಹೂಡಿಕೆ ಯೋಜನೆಗಳು ‘ವಿನಾಯಿತಿ-ವಿನಾಯಿತಿ-ವಿನಾಯಿತಿ’ (ಇಇಇ ) ಸೌಲಭ್ಯದಡಿ ಲಭ್ಯ ಇರುತ್ತದೆ. ಹೂಡಿಕೆದಾರರು ತ್ರಿವಳಿ ತೆರಿಗೆ ವಿನಾಯ್ತಿಯ ಲಾಭವನ್ನು ಈ ಯೋಜನೆಯಡಿ ಖಾತ್ರಿಯಾಗಿ ಪಡೆಯುತ್ತಾರೆ. ಇದನ್ನು ಹೂಡಿಕೆ, ಗಳಿಕೆ, ಮರಳಿ ಪಡೆಯುವ ಸಂದರ್ಭದಲ್ಲಿ ಪಡೆಯಬಹುದಾಗಿದೆ. ಯುಎಲ್‍ಟಿಪಿಗಳಲ್ಲಿ ಹೂಡಿಕೆ ಮಾಡುವುದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿ ಕಡಿತದ ಅರ್ಹತಾ ವ್ಯಾಪ್ತಿಗೆ ಬರುತ್ತದೆ. ಗಳಿಸಿದ ಹಣವನ್ನು ಮರಳಿ ಪಡೆಯುವ ಸಂದರ್ಭದಲ್ಲಿಯೂ ತೆರಿಗೆ ವಿನಾಯ್ತಿ ಲಭ್ಯ ಇರಲಿದೆ.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(10ಡಿ) ಅಡಿ ಈ ಲಾಭ ಪಡೆಯಬಹುದು. ದೀರ್ಘಾವಧಿ ಹಣ ಗಳಿಕೆ ತೆರಿಗೆ (ಎಲ್‍ಟಿಸಿಸಿ) ಪರಿಚಯದೊಂದಿಗೆ ಮ್ಯೂಚುವಲ್ ಫಂಡ್‍ಗಳು ಬಂದ ನಂತರ ಯುಎಲ್‍ಟಿಪಿ ಮೂಲಕ ಹೂಡಿಕೆ ಮಾಡುವುದು ಮ್ಯೂಚುವಲ್ ಫಂಡ್ ಹೂಡಿಕೆ ವಿಚಾರದಲ್ಲಿ ಅತ್ಯಂತ ಆಕರ್ಷಕ ಆಯ್ಕೆ ಎಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ ಸ್ಥಿರ ಠೇವಣಿ ನೀಡುವ ಸೌಲಭ್ಯಕ್ಕಿಂತ ಹೆಚ್ಚಿನ ಹಾಗೂ ಖಾತರಿ ಪ್ರತಿಫಲವನ್ನು ಇದು ನೀಡುತ್ತದೆ. ಇದು ಮೂಲಗಳಲ್ಲಿ ತೆರಿಗೆ ಕಡಿತ (ಟಿಡಿಎಸ್) ಎಷ್ಟು ಎನ್ನುವ ವಿಚಾರವನ್ನು ಆಧರಿಸಿ ಇರುತ್ತದೆ. ಗಳಿಕೆಯು ₹ 50,000 ಮೇಲ್ಪಟ್ಟಿದ್ದರೆ ಹಾಗೂ ಇಂತಹ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಿಂದ ನಿರೀಕ್ಷೆಗೂ ಮೀರಿದ ಲಾಭ ಗಳಿಸಬಹುದು.

ಆರೋಗ್ಯ ವಿಮೆ
ಆರೋಗ್ಯ ವಿಮೆಯನ್ನು ನಿಮಗಾಗಿ ಹಾಗೂ ನಿಮ್ಮ ಅವಲಂಬಿತರಿಗಾಗಿ ಪಡೆಯಲು ಮರೆಯಬೇಡಿ. ಪ್ರತಿಯೊಬ್ಬರೂ ತಮ್ಮ ಸ್ವಂತಕ್ಕೆ ಒಂದು ಆರೋಗ್ಯ ವಿಮೆ ಹೊಂದುವ ಅಗತ್ಯವಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಡಿ ನೀಡುವ ನಿಬಂಧನೆಗಳ ಅಡಿ ಇದು ಲಭ್ಯವಿದೆ. ಆರೋಗ್ಯ ವಿಮೆ ಕೊಳ್ಳುವ ಗ್ರಾಹಕ ₹ 25,000 ವರೆಗಿನ ಕಂತಿನ ಮೊತ್ತದ ಮೇಲಿನ ತೆರಿಗೆಯನ್ನು ಉಳಿಸಿಕೊಳ್ಳಬಹುದಾಗಿದೆ.

ನಿಮ್ಮ ಪಾಲಕರು 60 ವರ್ಷ ಮೀರಿದವರಾಗಿದ್ದರೆ, ನೀವು ಅವರಿಗೆ ಒಂದು ಆರೋಗ್ಯ ವಿಮೆ ಮಾಡಿಸಿ ಕೊಡುವುದಕ್ಕಿಂತ ಉತ್ತಮ ಪರಿಹಾರ ಮಾರ್ಗ ಇನ್ನೊಂದಿಲ್ಲ. ಅವರೂ ಸಾಕಷ್ಟು ನಿರಾಳತೆ ಹೊಂದಬಹುದು.

ಕೇಂದ್ರ ಸರ್ಕಾರದ 2018–19ನೇ ಹಣಕಾಸು ವರ್ಷದ ಬಜೆಟ್‍ನಲ್ಲಿ ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ ಕೂಡ ವಿಸ್ತರಿಸಲಾಗಿದೆ. ಇದುವರೆಗೂ ₹ 30,000 ಇದ್ದ ಮೊತ್ತವನ್ನು ಈಗ ₹ 50,000ಕ್ಕೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಈ ಅನುಕೂಲ ಲಭ್ಯವಿದೆ.

ಆದಾಯದೊಂದಿಗೆ, ತೆರಿಗೆ ಪಾವತಿಸುವ ಹೊಣೆಗಾರಿಕೆ ಕೂಡ ಬರುತ್ತದೆ. ಇದಕ್ಕಾಗಿ ಮೊದಲು ಆದಾಯ ತೆರಿಗೆ ಪ್ರಸ್ತಾವಗಳನ್ನು ಮೊದಲು ಗಮನವಿಟ್ಟು ಓದಿಕೊಳ್ಳಬೇಕು. ಸರ್ಕಾರದ ಕಾನೂನು ಪ್ರಕಾರ ನ್ಯಾಯಸಮ್ಮತವಾಗಿ ಹೆಚ್ಚು ಪ್ರಮಾಣದ ತೆರಿಗೆಯನ್ನು ಉಳಿಸುವ ಹಾಗೂ ಉತ್ತಮ ಹೂಡಿಕೆ ಮಾಡುವುದು ಉತ್ತಮ ಆದಾಯವನ್ನು ಕೂಡ ಒದಗಿಸುತ್ತದೆ.

(ಲೇಖಕ: ‘ಪಾಲಿಸಿಬಜಾರ್‌ಡಾಟ್‌ಕಾಂ’ನ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.