ADVERTISEMENT

ಆರ್‌ಬಿಐ ಗವರ್ನರ್‌ ಅಧಿಕಾರ ಅವಧಿ 5 ವರ್ಷ ಇರಲಿ: ರಾಜನ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST
ಆರ್‌ಬಿಐ ಗವರ್ನರ್‌ ಅಧಿಕಾರ ಅವಧಿ 5 ವರ್ಷ ಇರಲಿ: ರಾಜನ್‌
ಆರ್‌ಬಿಐ ಗವರ್ನರ್‌ ಅಧಿಕಾರ ಅವಧಿ 5 ವರ್ಷ ಇರಲಿ: ರಾಜನ್‌   

ನವದೆಹಲಿ (ಪಿಟಿಐ): ‘ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಹುದ್ದೆಯ ಅಧಿಕಾರಾವಧಿ 5 ವರ್ಷಗಳವರೆಗೆ ಇರಬೇಕು’ ಎಂದು ರಘುರಾಂ ರಾಜನ್‌ ಅಭಿಪ್ರಾಯಪಟ್ಟಿದ್ದಾರೆ.

ಹಣಕಾಸಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಗೆ ಗುರುವಾರ ಇಲ್ಲಿ ದೇಶದ ಆರ್ಥಿಕತೆ, ಬ್ಯಾಂಕ್‌ಗಳ ವಸೂಲಾಗದ ಸಾಲ ಮತ್ತಿತರ ವಿದ್ಯಮಾನಗಳ ವಿವರ ನೀಡಿದ ಸಂದರ್ಭದಲ್ಲಿ, ಆರ್‌ಬಿಐ ಗವರ್ನರ್‌ ಹುದ್ದೆಯಿಂದ ಶೀಘ್ರದಲ್ಲಿಯೇ ಹೊರ ನಡೆಯಲಿರುವ ರಾಜನ್‌ ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಆರ್‌ಬಿಐ ಗವರ್ನರ್‌ ಹುದ್ದೆಗೆ 3 ವರ್ಷಗಳ ಅಧಿಕಾರಾವಧಿ ನಿಗದಿ ಮಾಡಿರುವುದು ಕಡಿಮೆಯಾಗಿದೆ. ಇದು ಕನಿಷ್ಠ  5 ವರ್ಷಗಳವರೆಗೆ ಇರಬೇಕು. ಈ ವಿಷಯದಲ್ಲಿ ಜಾಗತಿಕವಾಗಿ ಬಳಕೆಯಲ್ಲಿ ಇರುವ ನಿಯಮಗಳನ್ನು ಭಾರತವೂ ಪಾಲಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐ ಗವರ್ನರ್‌ ಹುದ್ದೆಯ ಅಧಿಕಾರಾವಧಿ ಎಷ್ಟು ವರ್ಷಗಳವರೆಗೆ ಇರಬೇಕು ಎಂದು  ಸಂಸದರು ಕೇಳಿದ ಪ್ರಶ್ನೆಗೆ ರಾಜನ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.  ಅಮೆರಿಕದ ಫೆಡರಲ್‌ ರಿಸರ್ವ್‌ನ ನಿದರ್ಶನವನ್ನೂ ರಾಜನ್‌, ಸಮಿತಿಯ ಗಮನಕ್ಕೆ ತಂದಿದ್ದಾರೆ.ರಾಜನ್‌ ಅವರ ಅಧಿಕಾರಾಧಿ ಇದೇ ಸೆಪ್ಟೆಂಬರ್‌ 4ಕ್ಕೆ ಕೊನೆಗೊಳ್ಳಲಿದೆ. ಎರಡನೆ ಬಾರಿಗೆ ಗವರ್ನರ್‌ ಹುದ್ದೆಯಲ್ಲಿ ಮುಂದುವರೆಯಲು ಅವರು ಈಗಾಗಲೇ ನಿರಾಕರಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯಿಲಿ ನೇತೃತ್ವದ ಸಮಿತಿಗೆ ರಾಜನ್‌ ಅವರು ದೇಶಿ ಅರ್ಥ ವ್ಯವಸ್ಥೆ, ಆರ್‌ಬಿಐ ಕೈಗೊಂಡ ಸುಧಾರಣಾ ಕ್ರಮ ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಸವಾಲುಗಳ ಕುರಿತು ಮಾಹಿತಿ ನೀಡಿದರು. ವಸೂಲಾಗದ ಸಾಲದ ಪ್ರಮಾಣ (ಎನ್‌ಪಿಎ) ಸಮಸ್ಯೆ ಪರಿಹರಿಸಲು ಆರ್‌ಬಿಐ ಕೈಗೊಂಡ ಕ್ರಮಗಳ ಬಗ್ಗೆಯೂ ವಿವರಿಸಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.