ADVERTISEMENT

ಇಂದು ಸ್ವಲ್ಪ ಹಣ ಉಳಿಸಿ ನಾಳೆ ಸುಖವಾಗಿ ಜೀವಿಸಿ

ಯು.ಪಿ.ಪುರಾಣಿಕ್
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ಉಳಿತಾಯ ಎಲ್ಲರ ಜೀವನದ ಕಡ್ಡಾಯ ಕ್ರಮವಾಗಬೇಕು. ‘ಬಡವಂ ಬಲ್ಲಿದನಾಗನೇ’ ಎನ್ನುವ ವಚನಕಾರರ ಮಾತು ಎಂದಿಗೂ ಸತ್ಯವೆ. ಕೇವಲ ರೂ3,000ವನ್ನು ಪ್ರತಿ ತಿಂಗಳೂ ಆರ್‌.ಡಿ ಮತ್ತು ಮರು ಹೂಡಿಕೆ ಠೇವಣಿಯಲ್ಲಿ ಹೂಡುತ್ತಾ ಬಂದರೆ 30 ವರ್ಷಗಳಲ್ಲಿ ರೂ54.56 ಲಕ್ಷದಷ್ಟು ದೊಡ್ಡ ಮೊತ್ತ ಕೈಸೇರುತ್ತದೆ ಎಂದರೆ ಯಾರಿಗಾದರೂ ಆಶ್ಚರ್ಯವೆ. ಸರಿಯಾದ ರೀತಿ ಹಣಕಾಸು ನಿರ್ವಹಣೆ ಹಾಗೂ ಸಮಸ್ಯೆ ರಹಿತ ಜೀವನಕ್ಕೆ ಕೆಳಕಂಡ ಸೂತ್ರಗಳನ್ನು ಸದಾ ಪಾಲಿಸಿರಿ.

ಅಡವಿಯಿಂದ ಆರಂಭಗೊಂಡ ಮಾನವನ ಹುಟ್ಟು ಹಂತಹಂತವಾಗಿ ನಾಗರಿಕತೆಯತ್ತ ಕಾಲು ಚಾಚುತ್ತಾ ಬಂದಿತು. ಆಹಾರ ಧಾನ್ಯ ಬೆಳೆಯಲು ಪ್ರಾರಂಭವಾದ ನಂತರ ವಸ್ತುಗಳ ವಿನಿಮಯದ ಅಗತ್ಯವನ್ನು ಮನುಷ್ಯ ಕಂಡುಕೊಂಡ. ನಂತರ ವಸ್ತುಗಳ ವಿನಿಮಯಕ್ಕಾಗಿ ಜನರು ಒಂದು ಕಡೆ ಸೇರುವುದು, ಒಂದು ವಸ್ತುವನ್ನು ಕೊಟ್ಟು ಇನ್ನೊಂದು ಕೊಳ್ಳುವ ಪದಾರ್ಥ ವಿನಿಮಯ (ಬಾರ್ಟರ್‌ ಸಿಸ್ಟೆಂ) ಪದ್ಧತಿ ಪ್ರಪಂಚದೆಲ್ಲೆಡೆ ಪ್ರಚಲಿತವಾಯಿತು. ಈ ಪದ್ಧತಿಯಲ್ಲಿ ಅಳವಡಿಸಲಾಗುವ ಮಾನದಂಡ ವೈಜ್ಞಾನಿಕವಲ್ಲ ಹಾಗೂ ಇದರಲ್ಲಿ ಬಹಳಷ್ಟು ನ್ಯೂನತೆಗಳು ಅಡಕವಾಗಿರುವುದರಿಂದ ಮಾರಾಟ ಮಾಡುವ ಅಥವಾ ಖರೀದಿಸುವ ವ್ಯಕ್ತಿಗೆ ಸರಿಯಾದ ಪ್ರತಿಫಲ ದೊರೆಯುತ್ತಿರಲಿಲ್ಲ. ‘ಅವಶ್ಯಕತೆಯೇ ಶೋಧನೆಯ ಮೂಲ’ (ನೆಸಿಸಿಟಿ ಈಸ್‌ ದ ಮದರ್‌ ಆಫ್‌ ಇನ್ವೆನ್ಷನ್‌) ಎನ್ನುವ ಮಾತಿನಂತೆ ಇಂತಹ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು, ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯವಾಯಿತು. ಇದರ ಫಲವೇ ‘ನಾಣ್ಯ, ನೋಟು ಮುದ್ರಣ’.

ಸಾಮಾನ್ಯವಾಗಿ ಎಲ್ಲಾ ವ್ಯಕ್ತಿಗಳಿಗೆ ಒಂದಲ್ಲಾ ಒಂದು ತರಹದ ಉದ್ಯೋಗ ಅಥವಾ ವ್ಯವಹಾರ ಇದ್ದೇ ಇರುತ್ತದೆ. ಆದರೆ ಹಣಕಾಸು ವ್ಯವಹಾರ ಹೊರತುಪಡಿಸಿ, ಜೀವಿಸಲು ಯಾವುದೇ ವ್ಯಕ್ತಿಗೆ ಸಾಧ್ಯವಾಗಲಾರದು. ಸಣ್ಣ ಸಣ್ಣ ವ್ಯವಹಾರ ಹೊರತುಪಡಿಸಿ, ಉಳಿದ ಎಲ್ಲಾ ಹಣಕಾಸು ವ್ಯವಹಾರ  ನಗದು ರೂಪದಲ್ಲಿ ಮಾಡುವುದು ಕೂಡಾ ಸುಲಭವಲ್ಲ. ಒಟ್ಟಿನಲ್ಲಿ ಪ್ರತಿಯೊಬ್ಬರೂ ಒಂದಲ್ಲಾ ಒಂದು ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆಯುವುದು ಅವಶ್ಯ ಹಾಗೂ ಅನಿವಾರ್ಯವಾಗಿದೆ.

ಉಳಿತಾಯ ಖಾತೆಯನ್ನು ಆರಂಭಿಸುವುದೇ ಉಳಿತಾಯದ ಪ್ರಥಮ ಪಾಠ. ಈ ಖಾತೆಯ ಹೆಸರೇ ಅನ್ವರ್ಥನಾಮವಾಗಿದೆ.
ಕೈಯಲ್ಲಿ ಹಣ ಇರುವಾಗ ಖರ್ಚು ಮಾಡುವ ಮನಸ್ಸು ಬರುವುದು ಸಹಜ. ಪೇಟೆ ತಿರುಗಾಡುವಾಗ ಜನರು ಬಹಳಷ್ಟು ಆಕರ್ಷಣೆಗೆ ಒಳಗಾಗುತ್ತಾರೆ. ಒಂದು ಕೊಂಡರೆ ಇನ್ನೊಂದು ಉಚಿತ, ಶೇ 50ರವರೆಗೂ ರಿಯಾಯಿತಿ ಮಾರಾಟ,  ದೊಡ್ಡ ಮತ್ತದ  ಖರೀದಿ ಮಾಡಿದಾಗ ಉಡುಗೊರೆ, ಹಳೆ ಸಾಮಾನು ಕೊಟ್ಟರೆ ಹೊಸದರೊಂದಿಗೆ ಬದಲಾವಣೆ... ಹೀಗೆ ಹತ್ತು ಹಲವು ಕೊಡುಗೆಗಳು ಜನಸಾಮಾನ್ಯರನ್ನು ಕಾಡುತ್ತಿರುತ್ತವೆ. ಈ ಸನ್ನಿವೇಶದಲ್ಲಿ ಮನಸ್ಸು ಬಲಹೀನ ಹಾಗೂ ದುರ್ಬಲವಾಗುವುದು ಸಹಜ. ಮನುಷ್ಯ ಪ್ರತಿಯೊಂದು ಹಂತದಲ್ಲಿಯೂ ‘ಅವಶ್ಯಕತೆ – ಅಗತ್ಯ ಹಾಗೂ ಅನಿವಾರ್ಯ’ ಎನ್ನುವ ಈ ಮೂರು ಲಕ್ಷ್ಮಣ ರೇಖೆ ದಾಟದಿರಲು ಪ್ರಯತ್ನಿಸಬೇಕು. ಹಣದ ದೇವತೆಯಾದ ಲಕ್ಷ್ಮಿ ಚಂಚಲೆ ಅವಳನ್ನು ಪ್ರೀತಿಸಿ ಕಾಪಾಡಿಕೊಂಡು, ಸದಾ ನಿಮ್ಮೊಡನಿರುವಂತೆ ನೋಡಿಕೊಳ್ಳಬೇಕು, ಬಲಾಬಲಗಳಲ್ಲಿ ಹಣದ ಬಲಕ್ಕಿಂತ ಮಿಗಿಲಾದ ಬಲ ಬೇರೊಂದಿಲ್ಲ. ದೇಹದಲ್ಲಿ ನಿರಂತರವಾಗಿ ರಕ್ತ ಸಂಚರಿಸುವಂತೆ, ಜೀವನದಲ್ಲಿ ಸದಾ ಹಣದ  ಚಲಾವಣೆಯಾಗುತ್ತಿದ್ದು ಸಂಪತ್ತು ವೃದ್ಧಿಯಾಗಬೇಕು. ಆರ್ಥಿಕ ಶಿಸ್ತಿನಿಂದ ಮಾತ್ರ ಈ ಕಾರ್ಯ ಸಾಧ್ಯ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ವ್ಯಕ್ತಿಯ ಆದಾಯ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಬರುವ ಖರ್ಚು ಇವೆರಡರ ಅಂತರವೇ ಆತನಿಗೆ ಉಳಿತಾಯ ಮಾಡಲು ದೊರೆಯುವ ಹಣ.

ಹೀಗೆ ಉಳಿಸಬಹುದಾದ ಹಣ ಭದ್ರವಾದ ಹೂಡಿಕೆಯಲ್ಲಿ ನಿರಂತರವಾಗಿ ಪ್ರಾರಂಭದಿಂದಲೂ ತೊಡಗಿಸಿ  ಬೆಳೆಯಲು ಬಿಟ್ಟಲ್ಲಿ ಕೆಲವು ವರ್ಷಗಳಲ್ಲಿ ನಿಮ್ಮ ಸಂಪತ್ತು ದ್ವಿಗುಣವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.

ಇದೇ ವೇಳೆ ಸಂಪತ್ತಿನಿಂದ ಕೂಡಿದ ಜೀವನ ನಿಮ್ಮನ್ನು ಸುಖ ಹಾಗೂ ಶಾಂತಿಯತ್ತ ಕರೆದೊಯ್ಯುತ್ತದೆ. ಉಳಿತಾಯಕ್ಕೆ ನೂರಾರು ದಾರಿಗಳಿವೆ. ಆದರೆ ಹೂಡಿಕೆಯಲ್ಲಿ ‘ಭದ್ರತೆ, ದ್ರವ್ಯತೆ ಹಾಗೂ ಹೆಚ್ಚಿನ  ವರಮಾನ’ ಈ ಮೂರು ತತ್ವಗಳು ಮುಖ್ಯವಾಗಿ ಹಾಸು ಹೊಕ್ಕಾಗಿರಬೇಕು. ಭದ್ರತೆ ಅತೀ ಮುಖ್ಯ. ಅದೇ ರೀತಿ ನೀವು ಕೂಡಿಟ್ಟ ಸಂಪತ್ತು, ಆಪತ್ತಿನಲ್ಲಿ ನಿಮಗೆ ಒದಗಬೇಕು. ಇವೆರಡು ಮಾನದಂಡ ದಾಟಿ ಬಂದ ಮೇಲೆ, ನಿಮ್ಮ ಹೂಡಿಕೆ ಬಹುಬೇಗ ಬೆಳೆಯಲು ಹೆಚ್ಚಿನ ವರಮಾನದಿಂದಲೂ ಕೂಡಿರಬೇಕು. ಆದರೆ ಭದ್ರತೆ ಇಲ್ಲದ ಹೆಚ್ಚಿನ ವರಮಾನ, ಉಡುಗೊರೆ, ಕಮಿಷನ್‌ ಇಂತಹ ಆಮಿಷಗಳಿಗೆ ಎಂದಿಗೂ ಒಳಗಾಗಬಾರದು.

ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದ ಜನರು ಅವರವರ ಆದಾಯಕ್ಕೆ ಅನುಗುಣವಾಗಿ ಹೇಗೆ ಹಣ ಉಳಿಸಬಹುದು ಎನ್ನುವುದನ್ನು ನೋಡೋಣ. ತಿಂಗಳಿಗೆ ರೂ15,000 ಅಥವಾ ರೂ20,000 ಅಥವಾ ರೂ25,000 ಅಥವಾ ರೂ30,000 ಸಂಬಳ ಪಡೆಯುವ, ವರಮಾನವಿರುವ ನಾಲ್ಕು ವರ್ಗಗಳನ್ನು ಆಧಾರವಾಗಿಟ್ಟುಕೊಂಡು, ಆಯಾ ವರ್ಗದ ಜನರು ಹೇಗೆ ಹಣ ಉಳಿತಾಯ ಮಾಡಬಹುದು ಹಾಗೂ ಎಲ್ಲಿ ಹೂಡಿಕೆ ಮಾಡಿದರೆ ಅವರ ಜೀವನದ ಸಂಜೆಯನ್ನು ಸುಖಮಯವಾಗಿಸಿಕೊಳ್ಳಬಹುದು ಎನ್ನುವ ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.

ಉಳಿತಾಯ ಕಡ್ಡಾಯ ರೂಢಿಯಾಗಲಿ

ADVERTISEMENT

ಉಳಿತಾಯ ಎಂಬುದು ಎಲ್ಲರ ನಿತ್ಯ ಜೀವನದ ಕಡ್ಡಾಯವಾದ ರೂಢಿಯಾಗಿರಬೇಕು. ‘ಬಡವಂ ಬಲ್ಲಿದನಾಗನೇ’ ಎನ್ನುವ ವಚನಕಾರರ ಮಾತು ಎಂದಿಗೂ ಸತ್ಯಕ್ಕೆ ದೂರವಲ್ಲ. ಕೇವಲ ರೂ3,000ವನ್ನು ನಿರಂತರವಾಗಿ ಪ್ರತಿ ತಿಂಗಳೂ ಹೂಡಿಕೆ ಮಾಡುತ್ತಾ ಬಂದರೆ 30 ವರ್ಷಗಳ ಅವಧಿಯಲ್ಲಿ ರೂ54.56 ಲಕ್ಷದಷ್ಟು ದೊಡ್ಡ ಮೊತ್ತ ಕೈಸೇರುತ್ತದೆ ಎಂದರೆ ಯಾರಿಗೆ ತಾನೆ ಆಶ್ಚರ್ಯವೆನಿಸದು. ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಇದೇನು ಅಸಾಧ್ಯದ ಕೆಲಸವಲ್ಲ. ಸರಿಯಾದ ರೀತಿಯ ಹಣಕಾಸು ನಿರ್ವಹಣೆ ಹಾಗೂ ಸಮಸ್ಯೆ ರಹಿತ ಜೀವನಕ್ಕೆ ಕೆಳಕಂಡ ಸೂತ್ರಗಳನ್ನು ಸದಾ ಪಾಲಿಸಿರಿ.
ತಿಂಗಳು ಉಳಿಸಬಹುದಾದ ಹಣವನ್ನೂ ಖರ್ಚಿನ ಪಟ್ಟಿಯಲ್ಲಿ ಸೇರಿಸಿ ಮರೆತುಬಿಡಿ

*ಗೃಹಸಾಲ ಹಾಗೂ ಶಿಕ್ಷಣ ಸಾಲ ಹೊರತುಪಡಿಸಿ ಬೇರಾವುದೇ ಸಾಲವನ್ನೂ ಮಾಡದಿರಿ
*ಕ್ರೆಡಿಟ್‌ ಕಾರ್ಡ್‌ ಬಳಕೆಯಲ್ಲಿ ತುಂಬಾ ಜಾಗ್ರತೆ ವಹಿಸಿರಿ
*ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಆಧಾರದ ಮೇಲೆ ಉಳಿತಾಯ ಮಾಡಿ ತೆರಿಗೆ ವಿನಾಯ್ತಿ ಪಡೆಯಿರಿ
*ರಜೆ ವೇಳೆ ಅನಾವಶ್ಯಕ ತಿರುಗಾಟ ಮಾಡದಿರಿ ಹಾಗೂ ಹೆಂಡತಿ ಮಕ್ಕಳೊಂದಿಗೆ ಕಾಲಕಳೆಯಿರಿ
*ವಾರದ ಅಂತ್ಯದಲ್ಲಿ (ವೀಕೆಂಡ್‌) ಹೊರಹೋಗಿ ತಿನ್ನುವ ಸಂಸ್ಕೃತಿಯಿಂದ ದೂರವಿರಿ. ಇಲ್ಲಿ ಹಣ ವೆಚ್ಚವಾಗುವುದಷ್ಟೇ ಅಲ್ಲ ಆರೋಗ್ಯ ಕೂಡಾ ಹಾಳಾಗುತ್ತದೆ
*ಅಗತ್ಯಕ್ಕಿಂತ ಹೆಚ್ಚಿನ ಖರ್ಚು ಮಾಡದಿರಿ
*ಉಳಿತಾಯ ಹಾಗೂ ಹೂಡಿಕೆಯಲ್ಲಿ ಸ್ಥಿರ ಆಸ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿರಿ.
ನಿವೇಶನ ಖರೀದಿಸುವುದಾದರ ಬೆಂಗಳೂರಿನಲ್ಲಿಯೇ ಎನ್ನುವ ಛಲ ಬೇಡ. ಭಾರತ ಬೆಳೆಯುತ್ತಿರುವ ರಾಷ್ಟ್ರ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಮೈಸೂರು, ಮಂಗಳೂರು, ಹುಬ್ಬಳ್ಳಿ ಅಲ್ಲದೇ, ನಿಮಗೆ ಸಮೀಪ ಎನಿಸುವ ಬೇರಾವುದೇ ಜಿಲ್ಲಾ ಕೇಂದ್ರಗಳಲ್ಲಿಯೂ ಕೊಂಡುಕೊಳ್ಳಿ. ಎಲ್ಲಿಯೂ ಒಂದೆಡೆ ನಿಮ್ಮದು ಎನ್ನುವಂತಹ ನಿವೇಶನ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಬರಿಗೈಗಿಂತ ಕಬ್ಬಿಣದ ಕಡಗ ಲೇಸು ಎನ್ನುವ ಅನುಭವಿಗಳ ಕಿವಿಮಾತನ್ನು ನೆನಪಿಸಿಕೊಳ್ಳಿ.
*ಬ್ಯಾಂಕ್‌ನಿಂದ ಗೃಹಸಾಲ ಪಡೆದು ಮನೆ ಕಟ್ಟಲು/ಖರೀದಿಸಲು ಇದು ಪರ್ವಕಾಲ. ನೀವು ಈಗ ಪ್ರತಿ ತಿಂಗಳೂ ಕೊಡುತ್ತಿರುವ ಮನೆ ಬಾಡಿಗೆ ಹಾಗೂ ಗೃಹಸಾಲ ಪಡೆಯುವುದರಿಂದ ಲಭಿಸುವ ತೆರಿಗೆ ವಿನಾಯ್ತಿ ಪ್ರಯೋಜ ನ ಲೆಕ್ಕಹಾಕಿದರೆ ಗೃಹ ಸಾಲದ ಇ.ಎಂ.ಐ (ಸಮಾನ ಮಾಸಿಕ ಕಂತು) ಭರಿಸುವುದು ಕಷ್ಟವೇನೂ ಆಗಲಾರದು.
*ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಗರಿಷ್ಠ ರೂ10,000 ಮಾತ್ರ ಇಟ್ಟು ಉಳಿದ ಹಣವನ್ನು ಅವಧಿ ಠೇವಣಿಗೆ ವರ್ಗಾಯಿಸಿರಿ.
‘ಹತ್ತಾಗುವುದು ನಿನ್ನಿಂದ–ಮತ್ತಾಗುವುದು ನನ್ನಿಂದ’ ಎನ್ನುವ ಗಾದೆ ಮಾತಿನಂತೆ, ಒಬ್ಬ ವ್ಯಕ್ತಿ ಹಣ ಗಳಿಸಿ ಉಳಿಸಿ ದೊಡ್ಡ ಮೊತ್ತವಾದಾಗ, ಆ ಹಣವೂ ತನ್ನಷ್ಟಕ್ಕೇ ಬೆಳೆಯುತ್ತಾ ಹೋಗುತ್ತದೆ.

ಆರ್ಥಿಕ ಶಿಸ್ತು ಸಮೃದ್ಧಿ ತರುವುದರೊಂದಿಗೆ ಸಮಾಜದಲ್ಲಿ ಸ್ಥಾನಮಾನವನ್ನೂ ತಂದುಕೊಡುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಆರ್ಥಿಕ ಶಿಸ್ತು ಪರಿಪಾಲಿಸುವುದರಲ್ಲಿ ಪ್ಲಾನಿಂಗ್‌ ಬೇಕು ಆದರೆ ಪ್ಲಾನಿಂಗ್‌ಗಿಂತ ಪ್ಲಾನಿನಂತೆ ನಡೆದುಕೊಳ್ಳುವುದು ಎಲ್ಲಕ್ಕೂ ಮುಖ್ಯ ಎನ್ನುವುದನ್ನು ನೆನಪಿಡಿರಿ.

ರೂ15000 ಸಂಬಳದವರು
ಸಣ್ಣ ಸಂಬಳ ಅಥವಾ ಆದಾಯವಿರುವವರು ಏನೂ ಹಣ ಉಳಿಸಲು ಸಾಧ್ಯವಿಲ್ಲ ಎನ್ನುವ ಮಾತು ಸತ್ಯಕ್ಕೆ ದೂರವಾದ ವಿಚಾರ. ಆಪತ್ತಿನಲ್ಲಿ ಕೂಡಾ ಸಂಪತ್ತನ್ನು ಕಾಣದ ದೂರದೃಷ್ಟಿ ಇದ್ದಲ್ಲಿ ಹಾಗೂ ಸರಿಯಾದ ಪ್ಲಾನ್‌ ಮಾಡಿದಲ್ಲಿ ಅಲ್ಪ ಸ್ವಲ್ಪವನ್ನಾದರೂ ಉಳಿಸಬಹುದು. ಸಾಮಾನ್ಯವಾಗಿ (Beginners) ಹೆಚ್ಚಿನ ಸಂಬಳ ಪಡೆಯದಿರುವುದು ವಾಸ್ತವ ಸಂಗತಿ. ಇದೇ ವೇಳೆ ಇಂತಹ ವ್ಯಕ್ತಿಗಳಿಗೆ ಖರ್ಚು ಕೂಡಾ ಕಡಿಮೆ ಇರುತ್ತದೆ. ರೂ15,000 ಸಂಬಳ ಪಡೆಯವ ವ್ಯಕ್ತಿಗಳು ತಿಂಗಳಿಗೆ ಕನಿಷ್ಠ ರೂ8000ರಿಂದ ರೂ10,000ದವರೆಗೂ ಉಳಿಸಲೇಬೇಕು.  ತಿಂಗಳಿಗೆ ರೂ4000ದಿಂದ ರೂ5000 ದೊಳಗೇ ತಿಂಗಳ ವೆಚ್ಚ ನಿಭಾಯಿಸುವಂತೆ ಯೋಜನೆ ಹಾಕಿಕೊಳ್ಳಬೇಕು.

ಪ್ರತಿಯೊಂದು  ವ್ಯಕ್ತಿಗೂ ಜೀವವಿಮೆ ಯೋಜನೆಯಲ್ಲಿ ಹಣ ತೊಡಗಿಸುವುದು ಅತ್ಯಗತ್ಯ. ಒಟ್ಟು ಆದಾಯದ ಶೇ 10ರಿಂದ 15ರಷ್ಟು ಜೀವವಿಮೆಯಲ್ಲಿ ಉಳಿತಾಯ ಮಾಡಬೇಕು. ರೂ15,000 ವರಮಾನ ವರ್ಗದವರು ದುಡಿಯಲು ಆರಂಭಿಸಿದ ತಕ್ಷಣ ತಿಂಗಳಿಗೆ ರೂ1500–2000ದಷ್ಟನ್ನು ಸಂಬಳದಿಂದ ಪ್ರತೀ ತಿಂಗಳ ಕಡಿತವಾಗುವಂತೆ (Salory Savings Scheme) ಯೋಜಿಸಿ ಎಲ್‌.ಐ.ಸಿಯ ಜೀವನ್‌ ಆನಂದ್‌ ವಿಮಾ ಪಾಲಿಸಿ ಮಾಡಿಸಬೇಕು. ನಂತರ ಉಳಿಯುವ ಹಣದಲ್ಲಿ  ರೂ6000ದಿಂದ ರೂ8000ದಷ್ಟನ್ನು ಎರಡು ವರ್ಷಗಳ ಅವಧಿಗೆ ಆರ್‌.ಡಿ ಮಾಡಬೇಕು. ಎರಡು ವರ್ಷಗಳ ಅವಧಿ ಮುಗಿಯುತ್ತಲೇ (ಇಂದಿನ ಶೇ 9ರ ಬಡ್ಡಿ ದರದಲ್ಲಿ) ರೂ6000 ಆರ್‌.ಡಿಗಾದರೆ ರೂ1,58,184 ಹಾಗೂ  ರೂ8000 ಆರ್‌.ಡಿಗಾದರೆ ರೂ2,10,912 ಕ್ರಮವಾಗಿ ಪಡೆಯಬಹುದು. ಈ ರೀತಿ ಉಳಿಸಿದ ಹಣವನ್ನು ತಮ್ಮ ಮದುವೆಗೆ ಬಳಸಿಕೊಳ್ಳಲು ಅವಕಾಶವಾಗುತ್ತದೆ.

ಮದುವೆ ನಂತರ ಸ್ವಲ್ಪ ಹೆಚ್ಚಿನ ಖರ್ಚು ಬರುವುದು ಸಹಜ. ಆದರೆ ವಾರ್ಷಿಕ ಡಿ.ಎ (ತುಟ್ಟಿಭತ್ಯೆ) ಹೆಚ್ಚಳವಾಗುವುದರಿಂದ ಖರ್ಚಿನ ಮಟ್ಟ ವೂ ಸಮತೋಲನವಾಗುತ್ತದೆ. ಇನ್‌ಕ್ರಿಮೆಂಟ್‌ ಹಾಗೂ  ಡಿ.ಎ ಹಣದಲ್ಲಿ ಸ್ವಲ್ಪಮಟ್ಟಿಗೆ ಹಣ ಉಳಿಸಿ, ಅಲ್ಪಾವಧಿ ಆರ್‌.ಡಿ ಅಂದರೆ, ಒಂದು ವರ್ಷಕ್ಕೆ ಆರ್‌.ಡಿ ಮಾಡುತ್ತಾ ಬಂದರೆ ವರ್ಷದ ಅಂತ್ಯಕ್ಕೆ ಬಡ್ಡಿಸಹಿತ ಸಿಗುವ ಹಣದಿಂದ ಸ್ವಲ್ಪ ಬಂಗಾರದ ನಾಣ್ಯಗಳನ್ನು ಕೊಂಡುಕೊಳ್ಳಬಹುದು.

ಇಂತಹ ವ್ಯಕ್ತಿಗಳು ಸರಿಯಾದ ಉಳಿತಾಯ ಯೋಜನೆ ಮಾಡಿ ಅದರಂತೆಯೇ ನಡೆದುಕೊಂಡರೆ ಮಧ್ಯವಯಸ್ಸಿಗೆ ಬರುವ ವೇಳೆಗೆ ತಮ್ಮದೇ ಉಳಿತಾಯದ ಹಣದಿಂದ ನಿವೇಶನ ಖರೀದಿಸಲು ಸಾಧ್ಯವಾಗುತ್ತದೆ ಹಾಗೂ ನಿವೃತ್ತಿ ನಂತರ ಬರುವ ಗ್ರ್ಯಾಚುಯಿಟಿ, ಭವಿಷ್ಯನಿಧಿ, ವಿಮಾ ಪಾಲಿಸಿ ಹಣದಿಂದ ಆ ನಿವೇಶನದಲ್ಲಿ ಮನೆಯನ್ನೂ ಕಟ್ಟಿಕೊಳ್ಳಬಹುದು.

ರೂ20,000 ವರಮಾನದವರು
ತಿಂಗಳಿಗೆ ರೂ20,000 ವರಮಾನ ಅಥವಾ ಸಂಬಳ ಎಂಬುದು ಬಹಳ ದೊಡ್ಡ ಮೊತ್ತವೇನೂ ಅಲ್ಲ. ಆದರೆ ಭಾರತದಲ್ಲಿ ರೂ20,000 ತಿಂಗಳಿಗೆ  ವರಮಾನ ಪಡೆಯುವ ವ್ಯಕ್ತಿಗಳ ಸಂಖ್ಯೆಯೇ ಶೇ 80ರಷ್ಟಿದೆ ಎಂದರೆ ಆಶ್ಚರ್ಯವಾಗುತ್ತದೆ.

ಇದೇ ವೇಳೆ ರೂ20,000 ತಿಂಗಳ ವರಮಾನ ಕಡಿಮೆಯೇನಲ್ಲ. ಗಂಡ ಹೆಂಡತಿ ಒಂದು ಅಥವಾ ಎರಡು ಮಕ್ಕಳು ಇರುವ ಸಂಸಾರಕ್ಕೆ ತಿಂಗಳಿಗೆ ಬೇಕಾಗುವ ಆಹಾರ ಪದಾರ್ಥಗಳ ವೆಚ್ಚ ರೂ2500ದಷ್ಟಿರುತ್ದೆ. ಹಗಲಿನಲ್ಲಿ ಹೆಚ್ಚಿನ ವೇಳೆ ಕೆಲಸದ ಪ್ರಯುಕ್ತ ಮನೆಯಿಂದ ಹೊರಗೇ ಉಳಿಯುವುದರಿಂದ ಕಡಿಮೆ ಬಾಡಿಗೆಯ ಸಣ್ಣ ಮನೆ ಹಿಡಿಯುವುದು ಸೂಕ್ತ. ಮನೆ ಮತ್ತು ಆಫೀಸ್‌ ಇದರ ಅಂತರ ಒಂದೆರಡು ಕಿ.ಮೀ ಒಳಗಿರುವಂತೆ ಯೋಜಿಸಿ ಮನೆ ಹುಡುಕಿಕೊಳ್ಳುವುದು ಜಾಣತನ. ಇದರಿಂದ ತಿರುಗಾಟದ ಖರ್ಚು ತುಂಬಾ ಕಡಿಮೆ ಆಗುತ್ತದೆ.

ಜೊತೆಗೆ ನಿಮ್ಮ ಕೆಲಸ ಮುಗಿದ ನಂತರ  ಮನೆ ಸೇರಿ ಹೆಚ್ಚಿನ ಸಮಯವನ್ನು ಜೀವನ ಸಂಗಾತಿ ಹಾಗೂ ಮುದ್ದು ಮಕ್ಕಳೊಂದಿಗೆ ಕಳೆಯಬಹುದು. ಇಂತಹ ಉತ್ತಮ ರೂಢಿ ಮಕ್ಕಳ ಮೇಲೆ ಒಳ್ಳೆಯ ಪರಿಣಾಮವನ್ನೂ ಬೀರುತ್ತವೆ ಎಂಬುದನ್ನು ಮರೆಯಬಾರದು.
ಉಳಿತಾಯದ ವಿಚಾರಕ್ಕೆ ಬಂದಾಗ ಇಂತಹ ಕುಟುಂಬಕ್ಕೆ ಪ್ರತಿ ತಿಂಗಳೂ ರೂ2000ದಿಂದ ರೂ2500 ಪಾವತಿಸುವಂತೆ ಜೀವ ವಿಮೆ ಯೋಜನೆಯ ಅಗತ್ಯವಿರುತ್ತದೆ. ಮನೆ  ಬಾಡಿಗೆ ರೂ5000, ದಿನಸಿಗೆ ರೂ2500, ವಿದ್ಯುತ್‌ ಶುಲ್ಕ ರೂ500, ನೀರು ರೂ250, ಫೋನ್‌ ರೂ250, ಮಕ್ಕಳ ಶಾಲೆ ಶುಲ್ಕ ರೂ2000, ಎಲ್‌.ಐ.ಸಿಗೆ ರೂ2000 ಹಾಗೂ ಇನ್ನಿತರೆ ಖರ್ಚು ರೂ1500 ಎಲ್ಲವೂ ಸೇರಿ ರೂ14,000 ತಿಂಗಳಿಗೆ ಬೇಕಾಗುತ್ತದೆ. ಆಗ ತಿಂಗಳಿಗೆ ಕನಿಷ್ಠ ರೂ6000 ಉಳಿಯುತ್ತದೆ.

ಉಳಿಯುತ್ತದೆ ಎನ್ನುವುದಕ್ಕಿಂತ ಮುಂದಿನ ಭವಿಷ್ಯಕ್ಕಾಗಿ ಹಣ ಉಳಿಸಲೇಬೇಕು. ಹೀಗೆ ಉಳಿಸಬಹುದಾದ ರೂ6000ದಲ್ಲಿ ಒಂದು ವರ್ಷದ ಅವಧಿಗೆ ರೂ1000ವನ್ನು ಆರ್‌.ಡಿ ಮಾಡಿದರೆ ವರ್ಷಾಂತ್ಯಕ್ಕೆ ಬಡ್ಡಿ ಸಹಿತ ಒಟ್ಟು ರೂ 12,596 ಪಡೆಯಬಹುದು. ಈ ಹಣದಿಂದ ಬಂಗಾರದ ನಾಣ್ಯ ಕೊಂಡುಕೊಳ್ಳಿರಿ. ಈ ಆರ್‌.ಡಿ ಮತ್ತು ಬಂಗಾರ ಖರೀದಿ ಪ್ರಕ್ರಿಯೆ ನಿರಂತರವಾಗಿರಲಿ. ಮುಂದೆ ಮಕ್ಕಳ ಮದುವೆ ಸಮಯದಲ್ಲಿ ಸಹಾಯವಾಗುತ್ತದೆ.

ಉಳಿದ ರೂ5000ವನ್ನು 10 ವರ್ಷಗಳ ಅವಧಿಗೆ ಆರ್‌.ಡಿ ಮಾಡಬೇಕು. ಆಗ 10 ವರ್ಷಗಳ ಅಂತ್ಯಕ್ಕೆ ಶೇ 9ರ ಬಡ್ಡಿ ದರದಲ್ಲಿ ಒಟ್ಟು ರೂ9,71,060 ಸಿಗುತ್ತದೆ. ಇದಕ್ಕೆ ಇನ್ನಷ್ಟು ಹಣ ಸೇರಿಸಿ ಒಟ್ಟು ರೂ10 ಲಕ್ಷವಾಗಿಸಿ ಅದೇ ಬ್ಯಾಂಕಿನಲ್ಲಿ ಒಮ್ಮೆಲೇ ಬಡ್ಡಿ ಬರುವ ಮರು ಹೂಡಿಕೆ ಠೇವಣಿಯಲ್ಲಿ ತೊಡಗಿಸಬೇಕು. 10 ವರ್ಷಗಳ ಅಂತ್ಯಕ್ಕೆ  ರೂ24,35,200 ಪಡೆಯುವಿರಿ.

ಮೊದಲ 10 ವರ್ಷಗಳ  ಆರ್‌.ಡಿ ಅವಧಿ ಮುಗಿದು ಮರು ಹೂಡಿಕೆ ಠೇವಣಿ ಮಾಡುವುದರೊಂದಿಗೇ ಹೊಸದಾಗಿ ಇನ್ನೊಂದು ರೂ5000 ಆರ್‌.ಡಿಯನ್ನು 10 ವರ್ಷಗಳ ಅವಧಿಗೆ ಮಾಡಬೇಕು. ಅಂದರೆ, ಆರಂಭದ ದಿನಗಳಿಂದ ಒಟ್ಟು 20 ವರ್ಷಗಳಲ್ಲಿ ಈ ಉಳಿತಾಯ ಪ್ರಕ್ರಿಯೆಯಿಂದ ಒಟ್ಟಾರೆಯಾಗಿ ರೂ34,06,260 (ಮೊದಲ ಆರ್‌.ಡಿ ಮತ್ತು ಠೇವಣಿಯಿಂದ ರೂ24,35200 +  ಎರಡನೇ ಅವಧಿ ಆರ್‌.ಡಿ ರೂ9,71,060 =ರೂ34,06,260) ನಿಮ್ಮದಾಗುವುದು. ಈ ದೊಡ್ಡ ಮೊತ್ತದಿಂದ ತಕ್ಷಣ ನಿವೇಶನ ಕೊಂಡುಕೊಳ್ಳಿ. ಪ್ರತಿವರ್ಷ ಬರುವ ಇನ್‌ಕ್ರಿಮೆಂಟ್‌ ಹಾಗೂ ಅರ್ಧ ವರ್ಷಕ್ಕೆ ಬರುವ ಡಿ.ಎ.ಯಲ್ಲಿ ಕನಿಷ್ಠ ಶೇ 10ರಷ್ಟು ಮೊತ್ತವನ್ನು ದೀರ್ಘಾವಧಿ ಆರ್‌.ಡಿಯಲ್ಲಿ ತೊಡಗಿಸುತ್ತಾ ಬರಬೇಕು. ಇಂತಹ ಉಳಿತಾಯದ ಯೋಜನೆಯನ್ನು ನಿರಂತರವಾಗಿ ಮಾಡುತ್ತಾ ಬಂದರೆ ನಿವೃತ್ತಿ ನಂತರದ ಜೀವನ ಹಸನಾಗಿರುತ್ತದೆ.

ರೂ25,000 ವರಮಾನದವರು
ತಿಂಗಳಿಗೆ ರೂ25,000 ನಿಜವಾಗಿಯೂ ಉತ್ತಮ ವರಮಾನ ಎಂದೇ ಪರಿಗಣಿಸಬಹುದು. ಇಂದಿನ ಆದಾಯ ತೆರಿಗೆ ವಿನಾಯ್ತಿಯ ಮಿತಿ ರೂ2.50 ಲಕ್ಷವಿದೆ. ಹಾಗಾಗಿ ರೂ25,000 ವರಮಾನ ಇರುವವರು ಆದಾಯ ತೆರಿಗೆಗೆ ಒಳಪಡುತ್ತಾರೆ.

ಪ್ರತೀ ತಿಂಗಳ ಉಳಿತಾಯದ  ಯೋಜನೆಯಲ್ಲಿ ರೂ2500 ಜೀವ ವಿಮೆಗೆ ಹಾಗೂ ರೂ1500ವನ್ನು ಒಂದು ವರ್ಷದ ಆರ್‌.ಡಿ.ಗೆ ಕಡ್ಡಾಯವಾಗಿ ಮೀಸಲಿಡಬೇಕು. ವರ್ಷದ ಅಂತ್ಯದಲ್ಲಿ ಆರ್.ಡಿ.ಯಿಂದ ಬರುವ  ಹಣವನ್ನು ಬ್ಯಾಂಕ್‌ನಲ್ಲಿ ಐದು ವರ್ಷಗಳ ಅವಧಿಯ ತೆರಿಗೆ ಉಳಿತಾಯದ ಅವಧಿ ಠೇವಣಿಯಲ್ಲಿ ಇರಿಸಬೇಕು.

ವಾರ್ಷಿಕ ಜೀವವಿಮೆ ಕಂತು ರೂ30,000, ಆರ್‌.ಡಿ ಅವಧಿ ಮುಗಿದ ನಂತರ ಬಡ್ಡಿ ಸೇರಿಸಿ ಬರುವ ರೂ18,894 ಹಾಗೂ ವೇತನದಲ್ಲಿಯೇ ಕಡಿತವಾಗುವ ಭವಿಷ್ಯನಿಧಿ ಮೊತ್ತ ಸೇರಿದರೆ ವಾರ್ಷಿಕ ರೂ50,000ಕ್ಕೂ ಹೆಚ್ಚಿನ ಮೊತ್ತವಾಗುವುದರಿಂದ, ಆದಾಯ ತೆರಿಗೆ ಕಾನೂನಿನ ಸೆಕ್ಷನ್‌ 80ಸಿ ಅನ್ವಯ ತೆರಿಗೆ ಹೊರೆಯಿಂದ ಹೊರಗುಳಿಯಬಹುದು. ವಾರ್ಷಿಕ ಆದಾಯ ರೂ3 ಲಕ್ಷವೇ ಆದರೂ ತೆರಿಗೆ ಕೊಡುವ ಅವಶ್ಯವಿರುವುದಿಲ್ಲ.

ಈ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಜೀವ ವಿಮೆ ಹಾಗೂ ದೀರ್ಘಾವಧಿ ಠೇವಣಿ ಇರಿಸಿದಂತಾಗುತ್ತದೆ. ತಿಂಗಳ ಖರ್ಚು ಪರಿಗಣಿಸುವಾಗ, ಮನೆ ಬಾಡಿಗೆ ರೂ8000, ದಿನಸಿ ಖರ್ಚು ರೂ2500, ತೆರಿಗೆ ಉಳಿತಾಯಕ್ಕೆಂದು ಪ್ರತಿ ತಿಂಗಳೂ ಕಟ್ಟುವ ಆರ್‌.ಡಿಗೆ ರೂ1500 (ಈ ಹಣ ಖರ್ಚಿನ ಪಟ್ಟಿಯಲ್ಲಿದ್ದರೂ ಇದೊಂದು ಹೂಡಿಕೆಯೇ ಆಗಿರುತ್ತದೆ), ಜೀವ ವಿಮೆ ಕಂತು ರೂ2500, ವಿದ್ಯುತ್‌ ಬಿಲ್‌ ರೂ550, ನೀರು ರೂ250, ದೂರವಾಣಿಗೆ ರೂ250, ಮಕ್ಕಳ ಶಾಲಾ ಶುಲ್ಕು ರೂ2000 ಹಾಗೂ ಇತರೆ ಖರ್ಚು ರೂ1500 ಸೇರಿ ಒಟ್ಟಾರೆಯಾಗಿ ತಿಂಗಳಿಗೆ   ರೂ19,000 ಬೇಕಾಗುತ್ತದೆ. ನಂತರ ರೂ6000 ಉಳಿಯುತ್ತದೆ.

ತಿಂಗಳಿಗೆ ರೂ20,000 ಹಾಗೂ ರೂ25,000 ಸಂಬಳ ಪಡೆಯವವರ ಉಳಿತಾಯ ಸಾಮರ್ಥ್ಯದಲ್ಲಿ ಬಹಳಷ್ಟು ವ್ಯತ್ಯಾಸವೇನೂ ಇರುವುದಿಲ್ಲ. ಜೀವನದ ನಿರ್ವಹಣೆ ವಿಧಾನದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು. ಈ ವರ್ಗದ ಜನರು ಕೂಡಾ ರೂ20,000 ಸಂಬಳ ಪಡೆಯವವರಿಗೆ ಸೂಚಿಸಿದ ಉಳಿತಾಯ ಕ್ರಮವನ್ನೇ ಅನುಸರಿಸಿ ಹೆಚ್ಚಿನ ಸಂಪತ್ತನ್ನು ಭವಿಷ್ಯತ್ತಿಗಾಗಿ ಕ್ರೋಢಿಕರಿಸಬಹುದು.

ರೂ30,000 ವೇತನದಾರರು
ನಿವೃತ್ತಿಯ ನಂತರದಲ್ಲಿ ಪಿಂಚಣಿ ಸೌಲಭ್ಯ ಎಲ್ಲಾ ವರ್ಗದ ಜನರಿಗೂ ಇರುವುದಿಲ್ಲ ಹಾಗೂ 2004ರ ನಂತರ ಸೇವೆಗೆ ಸೇರಿದವರು, ಪಿಂಚಣಿ ಅನುಕೂಲದಿಂದ ಪೂರ್ಣವಾಗಿ ಹೊರಗೇ ಉಳಿದಿದ್ದಾರೆ.

ವರ್ಷ ಕಳೆಯುತ್ತಿದ್ದಂತೆ ಮನುಷ್ಯನ ಜವಾಬ್ದಾರಿ ಕೂಡಾ ಹೆಚ್ಚಾಗುತ್ತದೆ. ಮಕ್ಕಳ ಮದುವೆ, ವಿದ್ಯಾಭ್ಯಾಸ, ಸ್ವಂತ ಮನೆ ಹೊಂದುವುದು ಹಾಗೂ ನಿವೃತ್ತಿ ನಂತರ ಸುಖವಾಗಿ ಜೀವಿಸುವುದು.... ಎಲ್ಲವೂ ಒಂದೊಂದಾಗಿ ಕ್ರಮವಾಗಿ ಬರುತ್ತಿರುತ್ತವೆ. ಇವೆಲ್ಲವನ್ನೂ ನಿಭಾಯಿಸಲು ಕೊನೆಯ ಗಳಿಗೆಯಲ್ಲಿ ಕಷ್ಟವಾಗುವ ಸಾಧ್ಯತೆ ಬಹಳ.

ನೆಪೋಲಿಯನ್‌ ಹೇಳಿದಂತೆ ಅಸಾಧ್ಯ ಎನ್ನುವ ಪದ ನಿಘಂಟಿನಲ್ಲಿ ಇಲ್ಲವೇ ಇಲ್ಲ. ‘ಹನಿಗೂಡಿ ಹಳ್ಳ ತೆನೆಗೂಡಿ ಬಳ್ಳ’ ಎನ್ನುವ ಗಾದೆ ಮಾತಿನಂತೆ, ವೃತ್ತಿ ಅಥವಾ ಉದ್ಯೋಗದ ಆರಂಭದ ದಿನಗಳಲ್ಲಿಯೇ ಸರಿಯಾದ ರೀತಿ ಯೋಜನೆ ರೂಪಿಸಿ ಅದರಂತೆಯೇ ನಡೆದುಕೊಂಡರೆ, ಸದಾ ಕಾಲವೂ ಬದುಕಿನಲ್ಲಿ ಆರ್ಥಿಕ ಸದೃಢತೆ ಇರುತ್ತದೆ ಹಾಗೂ ಭವಿಷ್ಯದ ಜೀವನ ಸರಳ ಹಾಗೂ ಸುಖದಿಂದ ಕೂಡಿರುತ್ತದೆ.

ಈ ಮೊದಲು ವಿವರಿಸಿದಂತೆ ಪ್ರತಿಯೊಬ್ಬರಿಗೂ ಕಂಟಕರಹಿತ ಜೀವನಕ್ಕೆ ಆದಾಯದ ಶೇ 10ರಿಂದ ಶೇ 15ರಷ್ಟನ್ನು ಜೀವವಿಮೆ ಯೋಜನೆಗಳಲ್ಲಿ ತೊಡಗಿಸಬೇಕಾದ ಅಗತ್ಯವಿದ್ದೇ ಇದೆ. ರೂ30,000 ಸಂಬಳ ಪಡೆಯುವವರು ಕನಿಷ್ಠ ರೂ10,000ವನ್ನು ತಿಂಗಳಿಗೆ ಉಳಿಸಲೇಬೇಕು. ಇಂತಹ ವ್ಯಕ್ತಿಗಳು ಸ್ವಯಂ ಪಿಂಚಣಿ ಯೋಜನೆಯನ್ನು ಹಾಕಿಕೊಳ್ಳಬೇಕು. ರೂ5,000 ಆರ್‌.ಡಿ ಆರಂಭಿಸಿ, ಅವಧಿಯ ಕೊನೆಗೆ ಬರುವ ಹಣವನ್ನು ಬ್ಯಾಂಕಿನಲ್ಲಿ ಮರು ಹೂಡಿಕೆ  ಠೇವಣಿಯಲ್ಲಿ ಇರಿಸುತ್ತಾ ಬಂದಲ್ಲಿ, 30 ವರ್ಷಗಳಲ್ಲಿ ಬಡ್ಡಿ ಅಸಲು ಸೇರಿ ಒಟ್ಟು ರೂ75 ಲಕ್ಷಗಳಷ್ಟು ದೊಡ್ಡ ಮೊತ್ತ ಕೈಸೇರುತ್ತದೆ. ನಿವೃತ್ತಿಯಿಂದ ಬರುವ ಇತರೆ ಹಣದಿಂದ (ಟರ್ಮಿನಲ್‌ ಬೆನಿಫಿಟ್‌ನಿಂದ) ಮನೆ ಕಟ್ಟಿಸಿಕೊಳ್ಳಬಹುದು. ರೂ5,000 ಮೊತ್ತವನ್ನು ನಿರಂತರವಾಗಿ 30 ವರ್ಷ ಉಳಿಸುತ್ತಾ ಬಂದ ಹಣವನ್ನು ಬ್ಯಾಂಕ್‌ ಠೇವಣಿಯಲ್ಲಿ ಇರಿಸಿದರೆ ತಿಂಗಳಿಗೆ ಕನಿಷ್ಠ ರೂ60,000 ಬಡ್ಡಿ ಪಡೆಯಬಹುದು. ಇದನ್ನೇ ಪಿಂಚಣಿ ಎಂದುಕೊಂಡು ನೆಮ್ಮದಿಯಿಂದ ನಿವೃತ್ತಿ ಜೀವನ ಸಾಗಿಸಬಹುದು.

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಆಧಾರದ ಮೇಲೆ ಪಿ.ಎಫ್‌(ಭವಿಷ್ಯನಿಧಿ), ಜೀವವಿಮೆ, ಹಾಗೂ ಐದು ವರ್ಷಗಳ ಅವಧಿಯ ತೆರಿಗೆ ಉಳಿಸುವ ಬ್ಯಾಂಕ್‌ ಠೇವಣಿ (ಟ್ಯಾಕ್ಸ್‌ ಸೇವಿಂಗ್‌ ಡಿಪಾಜಿಟ್‌), ಹೀಗೆ ಈ ಮೂರು ಬಗೆ ಉಳಿತಾಯದಿಂದ ವಾರ್ಷಿಕ ರೂ1.10 ಲಕ್ಷವನ್ನು ಉಳಿಸಿದರೆ ಆದಾಯ ತೆರಿಗೆ ವ್ಯಾಪ್ತಿಯಿಂದಲೂ ಹೊರಗುಳಿಯಬಹುದು.

ರಾಜಲಕ್ಷ್ಮಿ, ಬಳ್ಳಾರಿ
ನಾನು ಗೃಹಿಣಿ ವಯಸ್ಸು 42. ನಾನು ಕಳೆದ ಮೂರು ವರ್ಷಗಳಿಂದ ಪ್ರಜಾವಾಣಿ–ವಾಣಿಜ್ಯ ಪುರವಣಿಯನ್ನು ತಪ್ಪದೇ ಓದುತ್ತಿದ್ದೇನೆ. ಹಣಕಾಸಿನ ವಿಚಾರದಲ್ಲಿ ಬರುವ ಪ್ರಶ್ನೋತ್ತರ ತುಂಬಾ ಸೊಗಸಾಗಿ ಮೂಡಿಬರುತ್ತಿದೆ. ನನಗೆ ಒಬ್ಬಳೇ ಮಗಳು. ವಯಸ್ಸು 15 ವರ್ಷ. ಇವಳಿಗೆ ಒಡವೆ ಮಾಡಿಸಬೇಕೆಂದಿದ್ದೆ. ಆದರೆ ಪ್ರಶ್ನೋತ್ತರದಲ್ಲಿ ಒಡವೆಗಿಂತ ಬಂಗಾರದ ನಾಣ್ಯ ಕೊಳ್ಳುವುದೇ ಮೇಲು ಎಂಬುದಾಗಿ ತಿಳಿಸಿದ್ದರು. ಇದನ್ನು ಓದಿದ ನಾನು ಸುಮಾರು 25 ತಿಂಗಳಿಂದ ಪ್ರತಿ ತಿಂಗಳೂ 5 ಗ್ರಾಂ ಬಂಗಾರದ ನಾಣ್ಯ ಖರೀದಿಸಿ ಬ್ಯಾಂಕ್‌ ಲಾಕರ್‌ನಲ್ಲಿ ಇಡುತ್ತಿದ್ದೇನೆ. ‘ಆರ್.ಡಿ’ ಠೇವಣಿ ಎಂಬುದೊಂದು ಇದೆ ಎಂಬುದೇ ನನಗೆ ತಿಳಿದಿರಲಿಲ್ಲ. ನಾನು 2013ರಲ್ಲಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ರೂ5,000ದ ಆರ್.ಡಿಯನ್ನು 10 ವರ್ಷಗಳ ಅವಧಿಗೆ ಆರಂಭಿಸಿದೆ. ಇದರಿಂದ ಮಗಳ ಮದುವೆ ವೇಳೆಗೆ ಸರಿಯಾಗಿ ರೂ10 ಲಕ್ಷ ಬರುತ್ತದೆ. ಇಂತಹ ಕ್ರಮಬದ್ಧವಾದ ಉಳಿತಾಯ ಯೋಜನೆಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಕೃಷ್ಣ ಶಾನುಭಾಗ, ಬೆಂಗಳೂರು
ನಾನು ಬಹುರಾಷ್ಟ್ರೀಯ ಕಂಪೆನಿಯಲ್ಲಿ  (ಎಂಎನ್‌ಸಿಯಲ್ಲಿ) ನೌಕರಿ ಮಾಡುತ್ತಿದ್ದೇನೆ. ವಯಸ್ಸು 32 ವರ್ಷ. ಮೂಲತಃ ಹೊನ್ನಾವರ ಸಮೀಪದ ಹಳ್ಳಿಯವನು. ಕೆಲಸಕ್ಕೆ ಸೇರಿ ಐದು ವರ್ಷಗಳಾದುವು. ತಿಂಗಳ ಸಂಬಳ ರೂ62,000. ಸ್ವಂತ ಮನೆ ಖರೀದಿಸಿ ತಂದೆ ತಾಯಿಯನ್ನೂ ಬರಮಾಡಿಕೊಂಡು ನಾವೆಲ್ಲರೂ ಒಟ್ಟಿಗೆ ಜೀವಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಮನೆ ಕೊಳ್ಳಲು ಬ್ಯಾಂಕಿನಲ್ಲಿ ಪ್ರತಿ ತಿಂಗಳು ರೂ25,000 ಎಫ್‌.ಡಿ ಮಾಡುತ್ತಿದ್ದೆ. ಒಮ್ಮೆ ನಾನು ಊರಿಗೆ ಹೋಗಿದ್ದೆ. ವಾಣಿಜ್ಯ ಪುರವಣಿಯಲ್ಲಿ ಯು.ಪಿ.ಪುರಾಣಿಕರು ಒಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ಹಣ ಠೇವಣಿ ಮಾಡುತ್ತಾ ಮುಂದೆಂದೋ ಸ್ಥಿರಾಸ್ತಿ ಮಾಡುವುದರ ಬದಲಾಗಿ, ಈಗಲೇ ಗೃಹಸಾಲ ಪಡೆದು ಮನೆ ಮಾಡುವುದೇ ಲೇಸು ಎಂಬುದಾಗಿ ಸಲಹೆ ನೀಡಿದ್ದನ್ನು ಊರಿನಲ್ಲಿ ತಂದೆಯವರು ತೋರಿಸಿದರು. ಈಗ ಕೊಡುತ್ತಿರುವ ಬಾಡಿಗೆ, ಆದಾಯ ತೆರಿಗೆ ಉಳಿತಾಯದಿಂದಲೇ ಬಹುಪಾಲು ಗೃಹಸಾಲದ ಇ.ಎಂ.ಐ (ಸಮಾನ ಮಾಸಿಕ ಕಂತು) ಭರಿಸಬಹುದು. ಜತೆಗೆ ಹಣದುಬ್ಬರ ಎದುರಿಸಲು ಇದಕ್ಕಿಂತ ಮಿಗಿಲಾದ ಮಾರ್ಗ ಬೇರೊಂದಿಲ್ಲ ಎಂಬುದಾಗಿ ತಿಳಿಸಿದ್ದರು.

ಆ ಮಾರ್ಗದರ್ಶನದಂತೆಯೇ ರೂ35 ಲಕ್ಷ ಗೃಹಸಾಲ ಪಡೆದು ಬೆಂಗಳೂರಿನ ವಸತಿ ಸಂಕೀರ್ಣವೊಂದರಲ್ಲಿ ಒಂದು ಫ್ಲ್ಯಾಟ್‌ ಖರೀದಿಸಿ ಸುಖವಾಗಿ ಜೀವಿಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.