ADVERTISEMENT

ಇ–ತ್ಯಾಜ್ಯ: 5ನೇ ಸ್ಥಾನದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ವಿಶ್ವಸಂಸ್ಥೆ (ಪಿಟಿಐ): ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಇ–ತ್ಯಾಜ್ಯ ಉತ್ಪಾದನೆ  ಮಾಡುವ ರಾಷ್ಟ್ರಗಳ ಪಟ್ಟಿ ಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. 2014ರಲ್ಲಿ 17 ಲಕ್ಷ ಟನ್‌ಗಳಷ್ಟು ಎಲೆಕ್ಟ್ರಾನಿಕ್‌ ಮತ್ತು ಎಲೆಕ್ಟ್ರಾನಿಕ್‌ ಉಪಕ ರಣಗಳ ತ್ಯಾಜ್ಯಗಳನ್ನು ಉತ್ಪಾದಿಸಿದೆ.

ಜಾಗತಿಕ ಇ–ತ್ಯಾಜ್ಯದ ಪ್ರಮಾಣವು ಮುಂದಿನ ಮೂರು ವರ್ಷಗಳಲ್ಲಿ ಶೇ 21ರಷ್ಟು ಹೆಚ್ಚುವ ಸಾಧ್ಯತೆ ಇದ್ದು, 500 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

2014ರಲ್ಲಿ ಅಮೆರಿಕ ಮತ್ತು ಚೀನಾ ಶೇ 36ರಷ್ಟು ಇ–ತ್ಯಾಜ್ಯ ಉತ್ಪಾದಿಸಿವೆ ಎಂದು ವಿಶ್ವಸಂಸ್ಥೆಯ ‘ಜಾಗತಿಕ ಇ–ತ್ಯಾಜ್ಯ ಮೇಲ್ವಿಚಾರಣೆ–2014ರಲ್ಲಿ ವಿವರಿಸಲಾಗಿದೆ.

ಅಮೆರಿಕ, ಚೀನಾ, ಜಪಾನ್‌ ಮತ್ತು ಜರ್ಮನಿ ನಂತರದ ಸ್ಥಾನದಲ್ಲಿ ಭಾರತ ಇದೆ. ಜಾಗತಿಕ ಮಟ್ಟದಲ್ಲೇ ಏಷ್ಯಾದಲ್ಲಿ ಅತಿ ಹೆಚ್ಚು ಅಂದರೆ 160 ಲಕ್ಷ ಟನ್‌ ಅಥವಾ ಪ್ರತಿ ವ್ಯಕ್ತಿಗೆ 3.7 ಕೆ.ಜಿಯಷ್ಟು ಇ–ತ್ಯಾಜ್ಯ ಉತ್ಪಾದನೆಯಾಗಿದೆ. ಇದರಲ್ಲಿ ಚೀನಾ, ಜಪಾನ್‌ ಮತ್ತು ಭಾರತ ಮುಂಚೂಣಿ ಯಲ್ಲಿವೆ.

ಆಫ್ರಿಕಾ ದೇಶದಲ್ಲಿ ಪ್ರತಿ ವ್ಯಕ್ತಿಗೆ ಕೇವಲ 1.7ಕಿ.ಗ್ರಾಂನಷ್ಟು ಮಾತ್ರ ಇ–ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಈ ದೃಷ್ಟಿಯಂದ ಅತಿ ಕಡಿಮೆ ಇ–ತ್ಯಾಜ್ಯ ಉತ್ಪಾದಿಸುವ ದೇಶ ಎನಿಸಿಕೊಂಡಿದೆ.

ಒಟ್ಟು ಇ–ತ್ಯಾಜ್ಯದಲ್ಲಿ ಶೇ 60ರಷ್ಟು ಅತಿ ಹೆಚ್ಚಿನ ಇ–ತ್ಯಾಜ್ಯವು ಗೃಹ ಬಳಕೆ ಮತ್ತು ವ್ಯಾಪಾರ ಉದ್ದೇಶಗಳಿಗೆ ಬಳಸಿರುವ ಎಲೆಕ್ಟ್ರಾನಿಕ್‌ ಉಪಕರಣ ಗಳಿಂದ ಸೃಷ್ಟಿಯಾಗಿವೆ.

2014ರಲ್ಲಿ ಉತ್ಪಾದನೆಯಾಗಿರುವ ಇ–ತ್ಯಾಜ್ಯದಲ್ಲಿ 16,500 ಕಿ.ಟನ್‌ಗಳಷ್ಟು ಕಬ್ಬಿಣ, 1,900 ಕಿ.ಟನ್‌ಗಳಷ್ಟು ತಾಮ್ರ ಮತ್ತು 300 ಟನ್‌ಗಳಷ್ಟು ಚಿನ್ನ ಒಳಗೊಂಡಿದೆ. ಇಷ್ಟೇ ಅಲ್ಲದೆ, ಬೆಳ್ಳಿ, ಪ್ಲಾಸ್ಟಿಕ್‌, ಅಲ್ಯುಮಿನಿಯಂ ತ್ಯಾಜ್ಯ ಗಳೂ ಸೇರಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.