ADVERTISEMENT

ಇ-ಮೇಲ್‌ ಕಾಲ ಮುಗಿದರೆ ಮುಂದೇನು?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2017, 19:30 IST
Last Updated 1 ಆಗಸ್ಟ್ 2017, 19:30 IST
ಇ-ಮೇಲ್‌ ಕಾಲ ಮುಗಿದರೆ ಮುಂದೇನು?
ಇ-ಮೇಲ್‌ ಕಾಲ ಮುಗಿದರೆ ಮುಂದೇನು?   

ಅಮೆರಿಕದ ಅಧ್ಯಕ್ಷೀಯ ಚುನಾವಣೆ ವೇಳೆ ಭಾರೀ ಸದ್ದು ಮಾಡಿದ್ದ ಇ–ಮೇಲ್‌ ಹಗರಣಕ್ಕೆ ಇನ್ನೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ತಮ್ಮ ತಂದೆಯ ಪರ ಪ್ರಚಾರಕ್ಕಾಗಿ ಜೂನಿಯರ್‌ ಟ್ರಂಪ್‌, ರಷ್ಯಾದ ನೆರವು ಪಡೆಯಲು ಯತ್ನಿಸಿದ್ದರು ಎಂಬ ಸ್ಫೋಟಕ ಸುದ್ದಿಯನ್ನು ಹೊರಹಾಕಿದ್ದೂ ಸೋರಿಕೆಯಾದ ಇ–ಮೇಲ್‌ ಮಾಹಿತಿಯೇ.

ಹೀಗೆ ಇ–ಮೇಲ್‌ ಮಾಹಿತಿ ಸೋರಿಕೆಯಾಗುವುದು ಇಲ್ಲವೇ ಇ–ಮೇಲ್‌ ಖಾತೆಗೆ ಕನ್ನ ಹಾಕುವುದು, ಕನ್ನ ಹಾಕಿದ ಇ–ಮೇಲ್‌ನ ಮಾಹಿತಿಯನ್ನು ಬಹಿರಂಗಗೊಳಿಸುವುದು, ಆ ಮಾಹಿತಿ ದೊಡ್ಡ ಸುದ್ದಿಯಾಗುವುದು ಈಗ ಹೊಸತೇನೂ ಅಲ್ಲ ಎನ್ನುವಂತಾಗಿದೆ. ಅಷ್ಟರ ಮಟ್ಟಿಗೆ ಇ–ಮೇಲ್‌ ಈಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಹಿಲರಿ ಕ್ಲಿಂಟನ್‌, ಜಾನ್‌ ಪೊಡೆಸ್ಟಾ ಅವರ ಇ–ಮೇಲ್‌ ಪ್ರಕರಣಗಳೂ ಇ–ಮೇಲ್‌ ಸುರಕ್ಷತೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿವೆ. ಟ್ರಂಪ್‌, ಹಿಲರಿ, ಪೊಡೆಸ್ಟಾ ಅವರ ಇ–ಮೇಲ್‌ ಮಾಹಿತಿ ಬಹಿರಂಗ ಕೇವಲ ಕೆಲವು ಪ್ರಮುಖ ಉದಾಹರಣೆಗಳು ಮಾತ್ರ. ಪತ್ರಕರ್ತರು, ಇತಿಹಾಸಕಾರರು, ಖ್ಯಾತ ವಕೀಲರಿಗೆ ಇ–ಮೇಲ್‌ ಎಂಬುದು ಪ್ರಭಾವಿ ಸಂಸ್ಥೆಗಳ ಒಳಗೆ ಏನೇನು ನಡೆಯುತ್ತಿದೆ ಎಂಬ ಮಾಹಿತಿಯನ್ನು ಹೊರಗೆಳೆಯುವ ‘ಮುಖ್ಯ ಸಾಧನ’ವೂ ಆಗಿದೆ!
ಇ–ಮೇಲ್‌ ಅನ್ನು ಸಂಪೂರ್ಣವಾಗಿ ನಂಬಲಾರದಂಥ ಈ ದಿನಗಳಲ್ಲಿ ಪ್ರಮುಖ ಉದ್ಯಮಿಗಳು, ದೊಡ್ಡ ದೊಡ್ಡ ರಾಜಕಾರಣಿಗಳು ಇ–ಮೇಲ್‌ಗೆ ಪರ್ಯಾಯವಾಗಿ ‘ಸಿಗ್ನಲ್‌’ ಆ್ಯಪ್‌ನಂತಹ ಬೇರೆಯ ಸಂವಹನ ಸಾಧನಗಳ ಕಡೆಗೆ ಮುಖ ಮಾಡುತ್ತಿದ್ದಾರೆ.

ಕ್ಲೌಡ್‌ ಸಂಪರ್ಕದಲ್ಲಿ ಕಾರ್ಯನಿರ್ವಹಿಸುವ ಇಂತಹ ಆ್ಯಪ್‌ಗಳು ಸಂವಹನದ ಗುಟ್ಟನ್ನು ಕನ್ನಕೋರರಿಗೆ ಬಿಟ್ಟುಕೊಡದ ಮಟ್ಟಿಗೆ ಈಗ ನಂಬಿಕೆ ಉಳಿಸಿಕೊಂಡಿವೆ. ಸದ್ಯ ಇ–ಮೇಲ್‌ ವ್ಯವಸ್ಥೆಗೆ ಹೋಲಿಸಿದರೆ ‘ಸಿಗ್ನಲ್‌’ನಂತಹ ಆ್ಯಪ್‌ಗಳು ತಕ್ಕಮಟ್ಟಿಗೆ ಉತ್ತಮ. ಖಾಸಗಿ ಮಾಹಿತಿಯನ್ನು ಕಾಪಿಟ್ಟುಕೊಳ್ಳುವುದೇ ಕಷ್ಟ ಮತ್ತು ದುಬಾರಿ ಎಂಬಂತಾಗಿರುವ ಇಂದಿನ ದಿನಗಳಲ್ಲಿ, ಇ–ಮೇಲ್‌ ವ್ಯವಸ್ಥೆಗೆ ಎಳ್ಳು ನೀರು ಬಿಟ್ಟು ‘ಸಿಗ್ನಲ್‌’ ರೀತಿಯ ಆ್ಯಪ್‌ಗಳ ಮೊರೆ ಹೋಗುವುದು ಹೆಚ್ಚಾಗಿದೆ.

ADVERTISEMENT

ಆದರೆ, ಇ–ಮೇಲ್‌ ವ್ಯವಸ್ಥೆಯ ಮಹತ್ವವನ್ನೂ ನಾವು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಹಲವು ಪ್ರಮುಖ ಪ್ರಕರಣಗಳಲ್ಲಿ ಇ–ಮೇಲ್‌ ಸಂವಹನದ ಮಾಹಿತಿಯನ್ನು ನ್ಯಾಯಾಲಯಗಳು ಸಾಕ್ಷ್ಯ ಎಂದು ಪರಿಗಣಿಸಿವೆ. ಆದರೆ, ಹೊಸ ಸಂವಹನ ಆ್ಯಪ್‌ಗಳು ಫೈಲ್‌ಗಳನ್ನು ಎನ್‌ಸ್ಕ್ರಿಪ್ಟ್‌ (ಗೂಢಲಿಪಿ) ಆಗಿ ಉಳಿಸಿಕೊಳ್ಳುವುದರಿಂದ ಮುಂದೆ ಈ ಆ್ಯಪ್‌ಗಳ ಮಾಹಿತಿಯನ್ನೂ ನ್ಯಾಯಾಲಯಗಳು ಸಾಕ್ಷ್ಯ ಎಂದು ಪರಿಗಣಿಸಬಹುದೇನೋ.

ಗುಟ್ಟಾದ ದೂರವಾಣಿ ಸಂಭಾಷಣೆಗಳು ಸೋರಿಕೆಯಾಗಿ ‘ದೂರವಾಣಿ ಕದ್ದಾಲಿಕೆ’ ಎಂದು ಸುದ್ದಿಯಾಗುವ ದಿನಗಳೂ ಇನ್ನು ಮುಂದೆ ಇಲ್ಲವಾಗಬಹುದು. ಏಕೆಂದರೆ ಹೊಸ ಸಂವಹನ ಆ್ಯಪ್‌ಗಳು ಅಷ್ಟರಮಟ್ಟಿಗೆ ಸುರಕ್ಷಿತವಾಗಿವೆ. ಎನ್‌ಸ್ಕ್ರಿಪ್ಟ್‌ ಆಗಿ ಉಳಿಯುವ ಆ್ಯಪ್‌ನ ಮಾಹಿತಿ ಸಂಗ್ರಹದ ಕ್ಲೌಡ್ ಸರ್ವರ್‌ ಸದ್ಯಕ್ಕಂತೂ ಹೆಚ್ಚು ಸುರಕ್ಷಿತವಾಗಿದೆ ಎಂದು ನಂಬಲಾಗಿದೆ. ಆದರೆ, ಮುಂದೆ ಸುರಕ್ಷತೆಯ ಈ ಭದ್ರಕೋಟೆಗೂ ಕನ್ನಹಾಕುವ ಕಳ್ಳದಾರಿಯನ್ನು ಕುತಂತ್ರಿಗಳು ಕಂಡುಕೊಂಡರೆ ಅದು ಅಚ್ಚರಿಯೇನೂ ಅಲ್ಲ.
-ನ್ಯೂಯಾರ್ಕ್‌ ಟೈಮ್ಸ್‌’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.