ADVERTISEMENT

ಉತ್ಪ್ರೇಕ್ಷಿತ ಆತಂಕ ಬೇಡ: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST

ನವದೆಹಲಿ (ಪಿಟಿಐ): ‘ದೇಶದ ಷೇರುಪೇಟೆ ಮತ್ತು ಕರೆನ್ಸಿ ಮಾರುಕಟ್ಟೆ ಯಲ್ಲಿ ಆಗುತ್ತಿರುವ ಏರಿಳಿತದ ಬಗ್ಗೆ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.  ದೇಶದ ಅರ್ಥವ್ಯವಸ್ಥೆಯಲ್ಲಿ ವಿಶ್ವಾಸ  ಇರಿಸಿ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹೂಡಿಕೆದಾರರಿಗೆ ಮನವಿ ಮಾಡಿದ್ದಾರೆ.

ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ದೇಶದ ಷೇರುಪೇಟೆ ಮತ್ತು ಕರೆನ್ಸಿ ಮಾರುಕಟ್ಟೆ ಇಳಿಮುಖವಾಗಿದೆ. ಆದರೆ, ದೇಶದ ಆರ್ಥಿಕತೆಯು ಬಲಿಷ್ಠ ತಳಹದಿಯ ಮೇಲೆ ನಿಂತಿರುವುದರಿಂದ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ಗುರುವಾರದ ವಹಿವಾಟಿನಲ್ಲಿ ಬಿಎಸ್‌ಇ ಸೂಚ್ಯಂಕ 807 ಅಂಶ ಕುಸಿತ ಕಂಡಿತ್ತು. ಅಲ್ಲದೆ, ರೂಪಾಯಿ ಮೌಲ್ಯ 29 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ಈ ಬಗ್ಗೆ ಹೆಚ್ಚು ಕಳವಳಕ್ಕೆ ಒಳಗಾಗದಿರಿ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜೇಟ್ಲಿ ಹೂಡಿಕೆ ದಾರರರಿಗೆ ತಿಳಿಹೇಳಿದ್ದಾರೆ.

ಜಾಗತಿಕ ಅರ್ಥಿಕತೆ ಮಂದಗತಿಯಲ್ಲಿದ್ದರೂ ಸಹ ಭಾರತ ಶೇ 7.5ರಷ್ಟು ಜಿಡಿಪಿ ಪ್ರಗತಿ ಸಾಧಿಸಿದೆ. ದೇಶದ ಅರ್ಥವ್ಯವಸ್ಥೆ ಬಲಿಷ್ಠವಾಗಿದೆ ಎನ್ನುವು ದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ. ಹೀಗಾಗಿ, ಉತ್ಪ್ರೇಕ್ಷಿತ ಆತಂಕ ಬೇಡ ಎಂದಿದ್ದಾರೆ.

ದೇಶದ ಪ್ರಗತಿಗಾಗಿ ಸರ್ಕಾರ ಸುಧಾರಣಾ ಕ್ರಮಗಳನ್ನು ಮುಂದುವರಿಸಲಿದೆ ಎಂದಿದ್ದಾರೆ.

ಸೂಚ್ಯಂಕ ಅಲ್ಪ ಚೇತರಿಕೆ
ಗುರುವಾರ 807 ಅಂಶಗಳಷ್ಟು ಭಾರಿ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಶುಕ್ರವಾರ 34 ಅಂಶ ಚೇತರಿಕೆ ಕಂಡು, 22,986 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿತು.

ವಾರದ ವಹಿವಾಟಿನಲ್ಲಿ ಸೂಚ್ಯಂಕವು 1,631 ಅಂಶಗಳಷ್ಟು ಕುಸಿತ ಕಂಡಿದೆ. ಇದು 6 ವರ್ಷಗಳಲ್ಲಿಯೇ ವಾರದ ವಹಿವಾಟಿನ  ಗರಿಷ್ಠ ಕುಸಿತವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, ವಾರದ ವಹಿವಾಟಿನಲ್ಲಿ 508 ಅಂಶಗಳಷ್ಟು ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT