ADVERTISEMENT

ಎಚ್‌–1ಬಿ ವೀಸಾ ನೆಚ್ಚಿಕೊಂಡಿಲ್ಲ

ಇನ್ಫೊಸಿಸ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶಾಲ್‌ ಸಿಕ್ಕಾ ಅಭಿಮತ

ಪಿಟಿಐ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ವಿಶಾಲ್‌ ಸಿಕ್ಕಾ
ವಿಶಾಲ್‌ ಸಿಕ್ಕಾ   

ವಾಷಿಂಗ್ಟನ್‌: ಭಾರತದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಯು ತನ್ನ ವಹಿವಾಟಿಗಾಗಿ ಅಮೆರಿಕದ ‘ಎಚ್‌–1ಬಿ’ ವೀಸಾ ಅನ್ನೇ ಹೆಚ್ಚಾಗಿ ಅವಲಂಬಿಸಿದೆ ಎನ್ನುವುದನ್ನು  ಇನ್ಫೊಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಅವರು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.

‘ದೇಶಿ ಸಾಫ್ಟ್‌ವೇರ್‌ ಸಂಸ್ಥೆಗಳೆಲ್ಲ ‘ಎಚ್‌–1ಬಿ’ ವೀಸಾಗಳನ್ನೆ ನೆಚ್ಚಿಕೊಂಡಿರುವುದಾಗಿ ನಿರ್ಣಯಕ್ಕೆ ಬರುವುದು ಸರಿಯಲ್ಲ. ಉದಾಹರಣೆಗೆ, ಹಿಂದಿನ 10 ವರ್ಷಗಳ  ಅಂಕಿ ಅಂಶಗಳನ್ನೆ ಲೆಕ್ಕಕ್ಕೆ ತೆಗೆದುಕೊಂಡರೆ ಈ ಗ್ರಹಿಕೆ ಸುಳ್ಳು ಎನ್ನುವುದು ಸಾಬೀತಾಗುತ್ತದೆ. ಪ್ರತಿ ವರ್ಷ 65 ಸಾವಿರದಷ್ಟು ವೀಸಾಗಳನ್ನು ನೀಡಲಾಗಿದೆ ಎಂದು ಭಾವಿಸಿದರೂ, 6.50 ಲಕ್ಷ ವೀಸಾ ವಿತರಿಸಲಾಗಿದೆ ಎಂದರ್ಥ.

ಈ ಅವಧಿಯಲ್ಲಿ ದೇಶಿ ಐ.ಟಿ ಸಂಸ್ಥೆಗಳು ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿವೆ.  ಇನ್ಫೊಸಿಸ್‌ ಒಂದರಲ್ಲಿಯೇ 2 ಲಕ್ಷ ಉದ್ಯೋಗಿಗಳು ಇದ್ದಾರೆ. ಟಿಸಿಎಸ್‌ ಸಂಖ್ಯೆ ಇದರ ಎರಡು ಪಟ್ಟು ಇದೆ. ಹೀಗಾಗಿ ಐ.ಟಿ ಸಂಸ್ಥೆಗಳು ತಮ್ಮ ವಹಿವಾಟು ವೃದ್ಧಿ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿ ವಿಷಯದಲ್ಲಿ ಅಮೆರಿಕದ ವೀಸಾಗಳನ್ನೆ ಅವಲಂಬಿಸಿದೆ ಎನ್ನುವ ನಿರ್ಧಾರಕ್ಕೆ ಬರುವುದು ಸರಿಯಲ್ಲ.

ADVERTISEMENT

ಅಮೆರಿಕದ ಸಂಸ್ಥೆಗಳು ವೀಸಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ವಿದೇಶಿ ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತಿರುವುದರ ವಿರುದ್ಧ ಡೊನಾಲ್ಡ್‌ ಟ್ರಂಪ್‌ ಆಡಳಿತವು ಕಠಿಣ ಕ್ರಮ ಕೈಗೊಂಡಿದೆ. ಅಮೆರಿಕದಲ್ಲಿನ  ಉದ್ಯೋಗ ಅವಕಾಶಗಳು ಬೇರೆಯವರ ಪಾಲಾಗಬಾರದು ಎನ್ನುವ ಕಾರಣಕ್ಕೆ ವೀಸಾ ನಿಯಮಗಳನ್ನು ಕಠಿಣಗೊಳಿಸಿದೆ. ಇದರಿಂದ ಟಿಸಿಎಸ್‌, ಇನ್ಫೊಸಿಸ್‌, ವಿಪ್ರೊ  ಸಂಸ್ಥೆಗಳ ವಹಿವಾಟಿಗೆ ಧಕ್ಕೆ ಒದಗಲಿದೆ ಎನ್ನುವ ಆತಂಕ ವ್ಯಕ್ತವಾಗುತ್ತಿರುವ  ಸಂದರ್ಭದಲ್ಲಿಯೇ ಸಿಕ್ಕಾ ಅವರು ಅಂತಹ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.

‘ಅತ್ಯಂತ ತ್ವರಿತವಾಗಿ ಬದಲಾಗುತ್ತಿರುವ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ಭಾರತವು ತನ್ನ ಮುಂಚೂಣಿ ನಾಯಕತ್ವ ಕಾಯ್ದುಕೊಳ್ಳಲು ಕೃತಕ ಬುದ್ಧಿಮತ್ತೆಯಂತಹ ಹೊಸ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಸಿಕ್ಕಾ ಹೇಳಿದ್ದಾರೆ.

ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಿಂದ ನೀಡಿದ ದೂರವಾಣಿ ಸಂದರ್ಶನದಲ್ಲಿ ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ಒಂದೂವರೆ ದಶಕದಲ್ಲಿ ದೇಶಿ ಸಂಸ್ಥೆಗಳು ವೀಸಾಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಬಳಸಿರುವುದು ನಿಜ. ಇದರಿಂದ ಅಮೆರಿಕೆಗೆ ಸಾಕಷ್ಟು ಪ್ರಯೋಜನ ಲಭಿಸಿದೆ. ಇನ್ನು ಮುಂದೆ ಅಂತಹ ಪ್ರಯೋಜನಗಳ ಸ್ವರೂಪವು ನಾಟಕೀಯವಾಗಿ ಬದಲಾಗುತ್ತಿದೆ.  ಸಾಗರೋತ್ತರ ಉದ್ಯೋಗಗಳು ಭಾರತಕ್ಕೆ  ವರ್ಗಾವಣೆಗೊಳ್ಳಲಿವೆ. ದೇಶಿ ತಂತ್ರಜ್ಞರು ವೀಸಾ ಪಡೆದು ವಿದೇಶಿ ಸಂಸ್ಥೆಗಳ ಕಚೇರಿಯಲ್ಲಿ ಕೆಲಸ ಮಾಡುವುದರ ಸ್ಥಳದಲ್ಲಿ ಸ್ವಯಂಚಾಲಿತ ವ್ಯವಸ್ಥೆ ಆಕ್ರಮಿಸಿಕೊಳ್ಳಲಿದೆ.

‘ಹೆಚ್ಚೆಚ್ಚು ಕೆಲಸಗಳು ಸ್ವಯಂಚಾಲಿತಗೊಳ್ಳುವುದರಿಂದ  ದೇಶಿ ಐ.ಟಿ ಸಂಸ್ಥೆಗಳು ಹೊಸ ನೆಲೆಗಳತ್ತ ತಮ್ಮ ಗಮನ ಕೇಂದ್ರೀಕರಿಸಬೇಕಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಯಂತ್ರಗಳ ಕಲಿಕೆ, ಧ್ವನಿ ಮೂಲಕ ಸಂವಾದ, ಛಾಯಾ ವಾಸ್ತವ, ಸೈಬರ್‌ ಸುರಕ್ಷತೆ ಕ್ಷೇತ್ರಗಳು ಹೊಸ ಅವಕಾಶಗಳನ್ನು ಒದಗಿಸಲಿವೆ.

‘ನಮ್ಮ ಬದುಕಿನ ಪ್ರತಿಯೊಂದು ಹಂತದಲ್ಲಿ ಸಾಫ್ಟ್‌ವೇರ್‌ ಪ್ರಮುಖ ಪಾತ್ರ ವಹಿಸಲಿದೆ. ಎಲ್ಲೆಡೆ ಕೃತಕ ಬುದ್ಧಿಮತ್ತೆಯ ಪ್ರಾಬಲ್ಯ ಕಂಡು ಬರಲಿದೆ. ತಂತ್ರಜ್ಞಾನ ಸೃಷ್ಟಿಸಿರುವ ಇಂತಹ ಹೊಸ ಸಾಧ್ಯತೆಗಳ ಪ್ರಯೋಜನವನ್ನು ಐ.ಟಿ ಉದ್ದಿಮೆಯು ಬಳಸಿಕೊಳ್ಳಬೇಕಾಗಿದೆ.

‘ಇನ್ಫೊಸಿಸ್‌ ಸೇರಿದಂತೆ ದೇಶಿ ಐ.ಟಿ ಸಂಸ್ಥೆಗಳೆಲ್ಲ ಈ  ಹೊಸ ಪಥದಲ್ಲಿ  ಸಾಗಬೇಕಾಗಿದೆ.  ಈ ವಿಷಯದಲ್ಲಿ ಐ.ಟಿ ಉದ್ಯಮ ಇನ್ನೂ  ಆರಂಭಿಕ ಹಂತದಲ್ಲಿ ಇದೆ, ನಮ್ಮ ಸಂಸ್ಥೆಯಲ್ಲಿನ ಪ್ರಗತಿ ಬಗ್ಗೆ ನನಗೆ ತೃಪ್ತಿ ಇದೆ.

‘ಸಂಸ್ಥೆಯು ಅಮೆರಿಕದಲ್ಲಿ ನೇಮಿಸಿಕೊಳ್ಳಲಿರುವ 10 ಸಾವಿರ ತಂತ್ರಜ್ಞರು ಕೃತಕ ಬುದ್ಧಿಮತ್ತೆ, ಪರಸ್ಪರ ಸಂಪರ್ಕ, ಕ್ಲೌಡ್‌ ಆಧಾರಿತ ತಂತ್ರಜ್ಞಾನ ರಂಗದಲ್ಲಿ  ಗರಿಷ್ಠ ಕೌಶಲ್ಯ ಪಡೆದಿರುತ್ತಾರೆ’ ಎಂದು ಸಿಕ್ಕಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ಅಮೆರಿಕೆಗೆ ಭೇಟಿ ನೀಡಿದಾಗ, ಟ್ರಂಪ್‌ ಅವರ ಜತೆ ವೀಸಾ ವಿವಾದವನ್ನು ಪ್ರಸ್ತಾಪಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.