ADVERTISEMENT

ಕಪ್ಪುಹಣ: ಸೆ.30 ಕೊನೆ ಗಡುವು

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST
ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ, ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಸಮಾಲೋಚನೆ ನಡೆಸಿದರು  ಪಿಟಿಐ ಚಿತ್ರ
ನವದೆಹಲಿಯಲ್ಲಿ ಮಂಗಳವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ, ರೆವಿನ್ಯೂ ಕಾರ್ಯದರ್ಶಿ ಹಸ್ಮುಖ್‌ ಆಧಿಯಾ ಸಮಾಲೋಚನೆ ನಡೆಸಿದರು ಪಿಟಿಐ ಚಿತ್ರ   

ನವದೆಹಲಿ (ಪಿಟಿಐ):  ಕಪ್ಪುಹಣ ಮತ್ತು ಅಕ್ರಮ ಆಸ್ತಿ ಘೋಷಣೆಗೆ ಕೇಂದ್ರ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ಸೆಪ್ಟೆಂಬರ್‌ 30ರ ಒಳಗಾಗಿ ಕಪ್ಪುಹಣ ಮತ್ತು ಅಘೋಷಿತ ಆಸ್ತಿ ಘೋಷಿಸಿಕೊಳ್ಳುವಂತೆ ಹಣಕಾಸು ಸಚಿವ ಅರುಣ್‌ ಜೇಟ್ಲಿ ಗಡುವು ನೀಡಿದ್ದಾರೆ.

‘ನಿಗದಿತ ತೆರಿಗೆ ಮತ್ತು ದಂಡ ಪಾವತಿಸಿ ಅಕ್ರಮ ಆಸ್ತಿ ಮತ್ತು ಕಪ್ಪುಹಣ ಸಕ್ರಮಗೊಳಿಸಿಕೊಳ್ಳಲು ಇದು ಕೊನೆಯ ಅವಕಾಶವಾಗಿದ್ದು, ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಎಲ್ಲ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಮತ್ತು  ಸರ್ಕಾರದ ಇನ್ನಿತರ ಇಲಾಖೆಗಳ ಜೊತೆಯೂ ಹಂಚಿಕೊಳ್ಳುವುದಿಲ್ಲ’  ಎಂದೂ  ಭರವಸೆ ನೀಡಿದ್ದಾರೆ. ತೆರಿಗೆ ತಜ್ಞರು ಮತ್ತು ಕೈಗಾರಿಕಾ ಸಂಸ್ಥೆಗಳ ಪದಾಧಿಕಾರಿಗಳು, ಲೆಕ್ಕಪರಿಶೋಧಕರ ಜತೆ ಈ ಕುರಿತು ಮಂಗಳವಾರ ಜೇಟ್ಲಿ ಸಮಾಲೋಚನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಪ್ಪುಹಣಕ್ಕೆ ಕಡಿವಾಣ ಹಾಕುವ ಹೊಸ ಕಾನೂನು ಅತ್ಯಂತ ಕಠಿಣವಾಗಿದ್ದು ತೆರಿಗೆಗಳ್ಳರು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಅಕ್ರಮ ಆಸ್ತಿ ಮತ್ತು  ಕಪ್ಪುಹಣ ಘೋಷಣೆಗೆ ಒಂದು ಬಾರಿಯ ಸರ್ಕಾರದ ಯೋಜನೆಯ ಅವಧಿ ಜೂನ್‌ 1ರಿಂದ ಆರಂಭವಾಗಿ ಸೆಪ್ಟೆಂಬರ್‌ 30ರಂದು ಮುಕ್ತಾಯವಾಗಲಿದೆ. ಈ ಯೋಜನೆಯಲ್ಲಿ ಶೇ 45ರಷ್ಟು ತೆರಿಗೆ ಮತ್ತು ದಂಡ ಕಟ್ಟಿ ಅಕ್ರಮ ಆಸ್ತಿ ಮತ್ತು ಕಪ್ಪುಹಣವನ್ನು ಸಕ್ರಮಗೊಳಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.