ADVERTISEMENT

ಕಬ್ಬು ಉತ್ಪಾದನೆ ಶೇ 30 ಕುಸಿತ

ಅರೆಯುವಿಕೆ 1 ತಿಂಗಳು ವಿಳಂಬ: ಮಹಾದೇವಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಕಬ್ಬು ಉತ್ಪಾದನೆ ಶೇ 30 ಕುಸಿತ
ಕಬ್ಬು ಉತ್ಪಾದನೆ ಶೇ 30 ಕುಸಿತ   

ಚಾಮರಾಜನಗರ: ‘ಪ್ರಸಕ್ತ ವರ್ಷ ರಾಜ್ಯದಲ್ಲಿ ಶೇ 30ರಷ್ಟು ಕಬ್ಬಿನ ಉತ್ಪಾದನೆ ಕುಸಿತ ಕಂಡಿದೆ.  ಹೀಗಾಗಿ, ಸಕ್ಕರೆ ಕಾರ್ಖಾನೆಗಳೇ ರೈತರ ಜಮೀನಿಗೆ ತೆರಳಿ ಕಬ್ಬು ಖರೀದಿಸುವ ವಾತಾವರಣ ಸೃಷ್ಟಿಯಾಗಿದೆ’ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ರೈತ ಸಂಘಟನೆಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ‘ರಾಜ್ಯದಲ್ಲಿ ಆಲೆಮನೆಗಳ ಸಂಖ್ಯೆಯೂ ಹೆಚ್ಚಿದೆ. ಕಬ್ಬಿನ ಉತ್ಪಾದನೆ ಕಡಿಮೆ ಆಗಿರುವುದರಿಂದ ಬೆಲ್ಲಕ್ಕೂ ಉತ್ತಮ ಬೆಲೆ ಬಂದಿದೆ. ಹೀಗಾಗಿ, 1 ಟನ್‌ ಕಬ್ಬಿಗೆ ₹ 3 ಸಾವಿರ ನಿಗದಿಪಡಿಸಿ ಕಾರ್ಖಾನೆಗಳೇ ಖರೀದಿಗೆ ಮುಂದಾಗಿವೆ.

‘ಕೇಂದ್ರ ಸರ್ಕಾರ ಹಿಂದಿನ ವರ್ಷ (ಶೇ 9.5ರಷ್ಟು ಇಳುವರಿ) 1 ಟನ್ ಕಬ್ಬಿಗೆ ₹ 2,350 ದರ ನಿಗದಿಪಡಿಸಿತ್ತು. ಈ ವರ್ಷವೂ ಇದೇ ದರ ಮುಂದುವರಿಸಿದೆ. ಹೀಗಾಗಿ, ಶೀಘ್ರವೇ, ರಾಜ್ಯ ಸಲಹಾ ಬೆಲೆ ಸಮಿತಿಯ ಸಭೆ ಕರೆದು ಚರ್ಚಿಸಿ ಪ್ರಸಕ್ತ ವರ್ಷದ ಕಬ್ಬಿಗೆ ದರ ನಿಗದಿಪಡಿಸಲಾಗುವುದು. ‘ಈ ವೇಳೆಗಾಗಲೇ ಕಬ್ಬು ಅರೆಯುವ ಪ್ರಕ್ರಿಯೆ ಆರಂಭಿಸಬೇಕಿತ್ತು. ದರ ನಿಗದಿಪಡಿಸುವುದು ವಿಳಂಬವಾಗಿದೆ. ಇದರ ಪರಿಣಾಮವಾಗಿ ಕಬ್ಬು ಅರೆಯುವ ಪ್ರಕ್ರಿಯೆಯು ಒಂದು ತಿಂಗಳು ತಡವಾಗಲಿದೆ.

‘ಹಿಂದಿನ ವರ್ಷದ ಕಬ್ಬಿನ ಉಪ ಉತ್ಪನ್ನಗಳಿಗೆ ಬೆಲೆ ನಿಗದಿ ಸಂಬಂಧ 3 ತಂಡ ರಚಿಸಲಾಗಿದೆ. ಈ ತಂಡಗಳು ರಾಜ್ಯದ ಎಲ್ಲ 66 ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ಸಕ್ಕರೆ ದಾಸ್ತಾನು, ಮಾರಾಟ, ಉತ್ಪಾದನಾ ವಿವರದ ಬಗ್ಗೆ ಮಾಹಿತಿ ಸಂಗ್ರಹಿಸಲಿವೆ. ಇನ್ನು 12 ಕಾರ್ಖಾನೆಗಳಿಂದ ಮಾಹಿತಿ ಸಂಗ್ರಹಿಸುವುದು ಬಾಕಿ ಉಳಿದಿದೆ. ತಂಡಗಳಿಂದ ವರದಿ ಸಲ್ಲಿಸಿದ ಬಳಿಕ ರೈತರಿಗೆ ಹಣ ಕೊಡಿಸಲು ’ ಎಂದು ತಿಳಿಸಿದರು.

ಅವಧಿ ವಿಸ್ತರಣೆ: ರೈತರು ಸಹಕಾರ ಸಂಘಗಳಲ್ಲಿ ಪಡೆದಿರುವ ಮಧ್ಯಮಾವಧಿ ಮತ್ತು ಅಲ್ಪಾವಧಿ ಸಾಲದ ಅಸಲು ಪಾವತಿಸಿದರೆ ಬಡ್ಡಿಮನ್ನಾ ಮಾಡುವ ಅವಧಿಯನ್ನು ಸೆಪ್ಟೆಂಬರ್‌ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದರು.

ಹಿಂದಿನ ವರ್ಷ ಶೂನ್ಯ ಬಡ್ಡಿದರದಡಿ ರಾಜ್ಯದ 22 ಲಕ್ಷ ರೈತರಿಗೆ ₹ 10,600 ಕೋಟಿ ಸಾಲ ವಿತರಿಸಲಾಗಿದೆ. ಈ ಸಾಲ ಮನ್ನಾ ಮಾಡಿದರೆ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಹಾಗಾಗಿ, ಸಾಲ ಮನ್ನಾ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.