ADVERTISEMENT

ಕಾರ್ಪೊರೇಟ್‌ ಬಾಂಡ್‌: ನೇರ ವಹಿವಾಟು–ವಿದೇಶಿಯರಿಗೆ ಒಪ್ಪಿಗೆ

ಪಿಟಿಐ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST

ನವದೆಹಲಿ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದಲ್ಲಾಳಿಗಳ ಸಹಾಯವಿಲ್ಲದೆ ನೇರವಾಗಿ ಕಾರ್ಪೊರೇಟ್‌ ಬಾಂಡ್‌ಗಳಲ್ಲಿ ವಹಿವಾಟು ನಡೆಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಅವಕಾಶ ಕಲ್ಪಿಸಿದೆ.

ಒಂದು ಮತ್ತು ಎರಡನೇ ವರ್ಗದ  ವಿದೇಶಿ ಹೂಡಿಕೆದಾರರಿಗೆ ಮಾತ್ರವೇ ಈ ಸೌಲಭ್ಯ ಲಭ್ಯವಿದೆ. ಕಾರ್ಪೊರೇಟ್‌ ಬಾಂಡ್‌ ಮಾರುಕಟ್ಟೆಯಲ್ಲಿ ಇದಕ್ಕೆ ಸಿಗುವ ಪ್ರತಿಕ್ರಿಯೆಯನ್ನು ಗಮನಿಸಿ ಬಂಡವಾಳ ಮಾರುಕಟ್ಟೆಯ ಉಳಿದ ವಿಭಾಗಗಳಿಗೂ ಈ ಸೌಲಭ್ಯ ವಿಸ್ತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಹೆಚ್ಚು ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಕಾರ್ಪೊರೇಟ್‌ ಬಾಂಡ್‌ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಇದಕ್ಕೆ ಒಪ್ಪಿಗೆ ನೀಡಿರುವುದಾಗಿ  ‘ಸೆಬಿ’ ತಿಳಿಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ ವಹಿವಾಟು ನಡೆಸಲು ಷೇರುಪೇಟೆಯ ಸದಸ್ಯರಾಗಲು ಅನುಮತಿ ನೀಡುವಂತೆ ಕೇಂದ್ರವನ್ನು ಕೇಳಲಾಗುವುದು ಎಂದಿದೆ. ಸದ್ಯದ ನಿಯಮದಂತೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರು ಷೇರುಪೇಟೆಯಲ್ಲಿ ನೋಂದಾಯಿಸಿಕೊಂಡ ದಲ್ಲಾಳಿಗಳ ಮೂಲಕವೇ ವಹಿವಾಟು ನಡೆಸಬೇಕಿದೆ.

ಪಾಲು ಏರಿಕೆ: ವಿದೇಶಿ ಹೂಡಿಕೆ ಆಕರ್ಷಿಸಲು ಸೆಬಿ, ದೇಶದ ಷೇರು ಮತ್ತು ಸರಕು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಪಾಲನ್ನು ಶೇ 5 ರಿಂದ ಶೇ 15ಕ್ಕೆ ಏರಿಕೆ ಮಾಡಿದೆ. ವಿದೇಶಿ ಹೂಡಿಕೆದಾರರ ಷೇರುಪಾಲನ್ನು ಶೇ 15ಕ್ಕೆ ಏರಿಸಲು ಜುಲೈನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.