ADVERTISEMENT

ಕೆನರಾ ಬ್ಯಾಂಕ್‌ ಲಾಭ ಕುಸಿತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಕೆನರಾ ಬ್ಯಾಂಕ್‌ ಲಾಭ ಕುಸಿತ
ಕೆನರಾ ಬ್ಯಾಂಕ್‌ ಲಾಭ ಕುಸಿತ   

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್‌ ₹ 85 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ₹656 ಕೋಟಿಗೆ ಹೋಲಿಸಿದರೆ ಈ ಬಾರಿ ನಿವ್ವಳ ಲಾಭದಲ್ಲಿ ಶೇ 87ರಷ್ಟು ಭಾರಿ ಕುಸಿತ ಕಂಡುಬಂದಿದೆ.

ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ₹14,021 ಕೋಟಿಗಳಿಂದ  ₹19,813 ಕೋಟಿಗಳಿಗೆ ಏರಿಕೆಯಾಗಿರುವುದೇ ಫಲಿತಾಂಶದಲ್ಲಿ ಇಳಿಕೆ ಕಾಣಲು ಮುಖ್ಯ ಕಾರಣ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಡವಾಳ ಲಭ್ಯತೆ ಪ್ರಮಾಣ ಶೇ 11.54ಕ್ಕೆ ಅಂದರೆ, ಬಾಸೆಲ್‌–3 ಮಾನದಂಡದ ಪ್ರಕಾರ ಶೇ 96ರಷ್ಟು ಏರಿಕೆಯಾಗಿದೆ. ಚಿಲ್ಲರೆ ವಹಿವಾಟಿನಲ್ಲಿ ಉತ್ತಮ ಪ್ರಗತಿಯಾಗಿದೆ. ಆನ್‌ಲೈನ್‌ ವರ್ಗಾವಣೆ ಶೇ 45.35 ರಿಂದ ಶೇ 55.97ಕ್ಕೆ ಏರಿಕೆಯಾಗಿದೆ. ಈ ಸಕಾರಾತ್ಮಕ ಅಂಶಗಳ ಜತೆಗೆ  ಎನ್‌ಪಿಎ ತಗ್ಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳ ಲಾಗುತ್ತಿದೆ. ಈ ಮೂಲಕ ಬ್ಯಾಂಕ್‌ನ ಪ್ರದರ್ಶನ ಮಟ್ಟವನ್ನು ಹೆಚ್ಚಿಸುವ ವಿಶ್ವಾಸವಿದೆ ಎಂದು ಅವರು ಹೇಳಿದರು.

ಬ್ಯಾಂಕ್‌ನ ಒಟ್ಟು ವರಮಾನವೂ ₹12,228 ಕೋಟಿಗಳಿಂದ ₹12,050 ಕೋಟಿಗಳಿಗೆ ಇಳಿಕೆಯಾಗಿದೆ.

ತ್ರೈಮಾಸಿಕದಲ್ಲಿ ಕಾರ್ಯಾಚರಣೆ ವೆಚ್ಚ ₹1,797 ಕೋಟಿಗಳಿಂದ ₹1,552 ಕೋಟಿಗಳಿಗೆ ತಗ್ಗಿದೆ.

ಒಂಬತ್ತು ತಿಂಗಳ ಪ್ರಗತಿ: ಪ್ರಸಕ್ತ ಹಣಕಾಸು ವರ್ಷದ 9 ತಿಂಗಳಿನಲ್ಲಿ ಬ್ಯಾಂಕ್‌ನ ನಿವ್ವಳ ಲಾಭ ₹2,090 ಕೋಟಿಗಳಿಂದ ₹1,093 ಕೋಟಿಗಳಿಗೆ ಇಳಿಕೆಯಾಗಿದೆ.

ಒಟ್ಟು ವರಮಾನವು ಶೇ 2.54ರಷ್ಟು ಹೆಚ್ಚಿದ್ದು,  ₹23,856 ಕೋಟಿ ಸಾಲ /ಮುಂಗಡ  ಒಳಗೊಂಡು ₹36,781 ಕೋಟಿಗಳಿಗೆ ತಲುಪಿದೆ.

ವೆಚ್ಚದ ಪ್ರಮಾಣ ಶೇ 2.05ರಷ್ಟು ಅಂದರೆ ₹31,281 ಕೋಟಿಗಳಷ್ಟು ಹೆಚ್ಚಾಗಿದೆ. ಕಾರ್ಯಾಚರಣಾ ಲಾಭ  ₹5,218 ಕೋಟಿಗಳಿಂದ ₹5,500 ಕೋಟಿಗಳಿಗೆ ಏರಿಕೆಯಾಗಿದೆ ಎಂದು ರಾಕೇಶ್‌ ಶರ್ಮಾ ತಿಳಿಸಿದರು.

ಅಂಕಿ–ಅಂಶ
₹8.23 ಲಕ್ಷ ಕೋಟಿ ಒಟ್ಟು ವಹಿವಾಟು ಮೊತ್ತ
₹4.91 ಲಕ್ಷ ಕೋಟಿ ಒಟ್ಟು ಠೇವಣಿ ಮೊತ್ತ
5,794 ಒಟ್ಟು ಶಾಖೆಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.