ADVERTISEMENT

ಗುರಿ ಮೀರಿದ ತೆರಿಗೆ ಸಂಗ್ರಹ

ಅವಧಿಗೂ ಮುನ್ನವೇ ದಾಖಲೆಯ ಸಾಧನೆ ಮಾಡಿದ ಆದಾಯ ತೆರಿಗೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 19:30 IST
Last Updated 20 ಮಾರ್ಚ್ 2017, 19:30 IST
ಗುರಿ ಮೀರಿದ ತೆರಿಗೆ ಸಂಗ್ರಹ
ಗುರಿ ಮೀರಿದ ತೆರಿಗೆ ಸಂಗ್ರಹ   
ಬೆಂಗಳೂರು:  ಕೇಂದ್ರ ಆದಾಯ  ತೆರಿಗೆ ಇಲಾಖೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅವಧಿಗೂ ಮುನ್ನವೇ  ಗುರಿ ಮೀರಿದ  ತೆರಿಗೆ ಸಂಗ್ರಹಿಸುವ ಮೂಲಕ  ಹೊಸ ದಾಖಲೆ ಮಾಡಿದೆ.
 
ಮಾರ್ಚ್‌ 31ಕ್ಕೆ ಕೊನೆಯಾಗುವ 2016–17ನೇ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ₹85,478 ಕೋಟಿ ತೆರಿಗೆ ಸಂಗ್ರಹ ಗುರಿ ನಿಗದಿ ಮಾಡಲಾಗಿತ್ತು. 
ಆದರೆ, ಮಾರ್ಚ್‌ 16ರಂದೇ ₹86,229 ಕೋಟಿ ತೆರಿಗೆ ಸಂಗ್ರಹಿಸುವ ಮೂಲಕ ಶೇ 22.48 ಪ್ರಗತಿ ಸಾಧಿಸಿದೆ. ಕಳೆದ ವರ್ಷ  ಇದೇ ಅವಧಿಯಲ್ಲಿ ₹70,400 ಕೋಟಿ ಸಂಗ್ರಹವಾಗಿತ್ತು.  
 
‘ಈ ಸಾಧನೆ ದೇಶ ಮತ್ತು ರಾಜ್ಯದ ತೆರಿಗೆ ಸಂಗ್ರಹ ಇತಿಹಾಸದಲ್ಲಿ ಇದೇ ಮೊದಲು’ ಎಂದು ಕೇಂದ್ರ ಆದಾಯ  ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತೆ ನೂತನ್‌ ಒಡೆಯರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
ಸತತ ಬರಗಾಲ, ನೋಟು ರದ್ದತಿ ಮತ್ತು  ಶೇ 57ರಷ್ಟು ಸಿಬ್ಬಂದಿ ಕೊರತೆ ನಡುವೆಯೂ ಈ ಸಾಧನೆ ಮಾಡಿರುವುದು ವಿಶೇಷ ಎಂದು ಅವರು ಹರ್ಷ ವ್ಯಕ್ತಪಡಿಸಿದರು. 
 
ವಲಯವಾರು ತೆರಿಗೆ ಸಂಗ್ರಹದಲ್ಲಿ  ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಮುಂಬೈ ಮತ್ತು ದೆಹಲಿ ಕ್ರಮವಾಗಿ ಮೊದಲೆರೆಡು ಸ್ಥಾನದಲ್ಲಿವೆ ಎಂದು ನೂತನ್‌ ಅವರು ತಿಳಿಸಿದರು. 
 
‘ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಯಲ್ಲಿ ಬೆಂಗಳೂರು ಮುಂದಿದ್ದು, ನೋಟು ರದ್ದತಿ ಯಾವ ಪರಿಣಾಮವನ್ನೂ ಬೀರಿಲ್ಲ’ ಎಂದು ಅವರು ಹೇಳಿದರು. 
ಕೊನೆಯ ಅವಕಾಶ: ಕಪ್ಪುಹಣಕ್ಕೆ ತೆರಿಗೆ ವಿಧಿಸಿ ಅದನ್ನು ಸಕ್ರಮಗೊಳಿಸಲು ಅವಕಾಶ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ (ಪಿಎಂಜಿಕೆವೈ)  ಮಾರ್ಚ್‌ 31ರಂದು ಕೊನೆಗೊಳ್ಳಲಿದೆ. 
 
 ನೋಟು ರದ್ದತಿ ನಂತರ ಬ್ಯಾಂಕಿಗೆ ದಾಖಲೆರಹಿತ ಹಣ ಜಮಾ ಮಾಡಿದವರು ಈ ಅವಕಾಶ ಬಳಸಿಕೊಳ್ಳಬಹುದು. ಜಮೆ ಮಾಡಿದ ಹಣದ ಶೇ 50ರಷ್ಟನ್ನು ತೆರಿಗೆ ಮತ್ತು ದಂಡ ರೂಪದಲ್ಲಿ ಪಾವತಿಸಬೇಕಾಗುತ್ತದೆ ಎಂದು ಮೂಲದಲ್ಲಿ ತೆರಿಗೆ ಸಂಗ್ರಹ (ಟಿಡಿಎಸ್‌) ವಿಭಾಗದ ಮುಖ್ಯ ಆಯುಕ್ತ  ವಿಶ್ವನಾಥ್‌ ಝಾ ಅವರು ತಿಳಿಸಿದರು.
 
ಯಾವುದೇ ಕಾರಣಕ್ಕೂ ಅವಧಿಯನ್ನು ವಿಸ್ತರಿಸುವುದಿಲ್ಲ. ನಂತರ ದಂಡ ಮತ್ತು  ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 
 
**
‘ಕಪ್ಪುಹಣ ಪರಿವರ್ತನೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ಪಾತ್ರ’
‘ನೋಟು ರದ್ದತಿಯ ನಂತರ ರಾಜ್ಯದ ಕೆಲವು ಸಹಕಾರಿ ಬ್ಯಾಂಕ್‌ಗಳು ಕಪ್ಪುಹಣವನ್ನು  ಬಿಳಿಯದನ್ನಾಗಿ ಪರಿವರ್ತಿಸಲು ನೆರವಾದ ಪ್ರಕರಣಗಳು ಕಂಡು ಬಂದಿವೆ’ ಎಂದು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಮಹಾ ನಿರ್ದೇಶಕ ಬಾಲಕೃಷ್ಣನ್‌ ತಿಳಿಸಿದರು.

‘ನೋಟು ರದ್ದತಿಯ ನಂತರ ಏಕಾಏಕಿ ಭಾರಿ ದೊಡ್ಡ ಮೊತ್ತದ ಠೇವಣಿ ಸಂಗ್ರಹಿಸಿ ಮತ್ತು ವಹಿವಾಟು ನಡೆಸಿದ ಶಿವಮೊಗ್ಗದ ಎರಡು ಮತ್ತು ಮಂಗಳೂರಿನ ಒಂದು ಸಹಕಾರಿ ಬ್ಯಾಂಕ್‌  ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ’ ಎಂದರು.  ‘ದೊಡ್ಡ ಮೊತ್ತದ ಠೇವಣಿದಾರರ ಬಗ್ಗೆ ಮಾಹಿತಿ ನೀಡದೆ ಮುಚ್ಚಿಟ್ಟ 55 ಬ್ಯಾಂಕ್‌ಗಳ ವಿರುದ್ಧ ದಂಡ ವಿಧಿಸಲು ನಿರ್ಧರಿಸಲಾಗಿದೆ.

ಈ ವರ್ಷ ಆದಾಯ ತೆರಿಗೆ ದಾಳಿ ವೇಳೆ ಒಟ್ಟು ₹ 4,828 ಕೋಟಿ ಮೊತ್ತದ ಘೋಷಿಸಿಕೊಳ್ಳದ ಆಸ್ತಿ ಪತ್ತೆ ಹಚ್ಚಲಾಗಿದ್ದು, ₹132 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಬಾಲಕೃಷ್ಣನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.