ADVERTISEMENT

ಚಿನ್ನಾಭರಣ ಖರೀದಿ ಭರಾಟೆ

ಪಿಟಿಐ
Published 28 ಏಪ್ರಿಲ್ 2017, 19:43 IST
Last Updated 28 ಏಪ್ರಿಲ್ 2017, 19:43 IST
ಅಕ್ಷಯ ತೃತೀಯ ಪ್ರಯುಕ್ತ ಬೆಂಗಳೂರಿನ ಅಂಗಡಿಯೊಂದರಲ್ಲಿ ಚಿನ್ನಾಭರಣ ಖರೀದಿಸುತ್ತಿರುವ ಮಹಿಳೆಯರು.  – ಪ್ರಜಾವಾಣಿ ಚಿತ್ರ
ಅಕ್ಷಯ ತೃತೀಯ ಪ್ರಯುಕ್ತ ಬೆಂಗಳೂರಿನ ಅಂಗಡಿಯೊಂದರಲ್ಲಿ ಚಿನ್ನಾಭರಣ ಖರೀದಿಸುತ್ತಿರುವ ಮಹಿಳೆಯರು. – ಪ್ರಜಾವಾಣಿ ಚಿತ್ರ   

ನವದೆಹಲಿ / ಮುಂಬೈ: ಚಿನ್ನ ಖರೀದಿಗೆ ಪವಿತ್ರ ದಿನವಾದ ‘ಅಕ್ಷಯ ತೃತೀಯ’ ಸಂದರ್ಭದಲ್ಲಿ ಗ್ರಾಹಕರು ಶುಕ್ರವಾರ ದೇಶದಾದ್ಯಂತ   ಚಿನ್ನಾಭರಣ ಅಂಗಡಿಗಳಿಗೆ ತೆರಳಿ ಆಭರಣ ಖರೀದಿಸಲು ಉತ್ಸಾಹ ತೋರಿದರು.

ಗ್ರಾಹಕರ ಖರೀದಿ ಆಸಕ್ತಿ ಫಲವಾಗಿ ಎಲ್ಲೆಡೆ ಆಭರಣಗಳ ಮಾರಾಟವು ಭರ್ಜರಿಯಾಗಿಯೇ ನಡೆದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 40ರಷ್ಟು ಖರೀದಿ ಹೆಚ್ಚಿದೆ ಎಂದು ಚಿನಿವಾಲ ಪೇಟೆ ಮೂಲಗಳು ತಿಳಿಸಿವೆ.

ಅನುಕೂಲಕರ ಬೆಲೆ ಮಟ್ಟ ಮತ್ತು ಮದುವೆ ದಿನಗಳ ಬೇಡಿಕೆಯಲ್ಲಿನ ಹೆಚ್ಚಳದ ಫಲವಾಗಿ ಈ ಏರಿಕೆ ಕಂಡು ಬಂದಿದೆ. ಬೆಂಗಳೂರು, ಮುಂಬೈ, ದೆಹಲಿ ಮಹಾನಗರಗಳಲ್ಲಿನ ಚಿನ್ನಾಭರಣ ಅಂಗಡಿಗಳಲ್ಲಿ ಬೆಳಿಗ್ಗೆಯಿಂದಲೇ ಗ್ರಾಹಕರ ದಟ್ಟಣೆ ಕಂಡುಬಂದಿತು.

‘ಚಿನ್ನಾಭರಣಗಳ ಮಾರಾಟದ ಪ್ರಮಾಣ ಮತ್ತು ಮೊತ್ತವು ಶೇ 30 ರಿಂದ ಶೇ 40ರಷ್ಟು ಏರಿಕೆಯಾಗಿದೆ. ದೇಶದಾದ್ಯಂತ ಚಿನ್ನಾಭರಣ ಖರೀದಿಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ವರ್ಷಗಳ ನಂತರ ಈ ಬಾರಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಗೆ ಆಸಕ್ತಿ ತೋರಿಸಿದ್ದಾರೆ’ ಎಂದು  ಚಿನ್ನಾಭರಣ ವರ್ತಕರ ಸಂಘದ (ಐಬಿಜೆಎ) ನಿರ್ದೇಶಕ ಸೌರಭ್‌ ಗಾಡ್ಗಿಲ್‌ ಹೇಳಿದ್ದಾರೆ.

ಕಳೆದ ವರ್ಷ ಹಲವು ಸವಾಲುಗಳನ್ನು ಎದುರಿಸಿದ್ದ ಚಿನ್ನಾಭರಣ ಮಾರಾಟ ಉದ್ದಿಮೆಯಲ್ಲಿ ಈಗ ಸ್ಥಿರತೆ ಕಂಡುಬಂದಿದೆ. ಡಾಲರ್‌ ಎದುರು ರೂಪಾಯಿ ಮೌಲ್ಯವರ್ಧನೆ ಕಾರಣಕ್ಕೆ ಗ್ರಾಹಕರ ಪಾಲಿಗೆ ಚಿನ್ನದ ದರ ಹೆಚ್ಚು ಆಕರ್ಷಕವಾಗಿ ಕಂಡಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ನಂತರ ಚಿನ್ನದ ದರ ಹೆಚ್ಚಳಗೊಳ್ಳುವ ನಿರೀಕ್ಷೆಯೂ, ಖರೀದಿ ಭರಾಟೆ ಹೆಚ್ಚಿಸಲು ಇಂಬು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.