ADVERTISEMENT

ಚಿನ್ನಾಭರಣ ವರ್ತಕರ ಮುಷ್ಕರ ಯಶಸ್ವಿ

ಪ್ಯಾನ್‌ಕಾರ್ಡ್‌ ಕಡ್ಡಾಯ ನಿರ್ಧಾರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2016, 10:35 IST
Last Updated 11 ಫೆಬ್ರುವರಿ 2016, 10:35 IST
ಕರ್ನಾಟಕ ಚಿನ್ನಾಭರಣ ವರ್ತಕರ ಸಂಘದ ಸದಸ್ಯರು ಬೆಂಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು  ಪ್ರಜಾವಾಣಿ ಚಿತ್ರ
ಕರ್ನಾಟಕ ಚಿನ್ನಾಭರಣ ವರ್ತಕರ ಸಂಘದ ಸದಸ್ಯರು ಬೆಂಗಳೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ₹ 2 ಲಕ್ಷಕ್ಕಿಂತ  ಹೆಚ್ಚಿನ ಮೊತ್ತದ ಚಿನ್ನಾಭರಣಗಳ ಖರೀದಿಯಲ್ಲಿ ಪ್ಯಾನ್‌ ಕಾರ್ಡ್ ಸಂಖ್ಯೆ ಉಲ್ಲೇಖಿಸುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಚಿನ್ನಾಭರಣ ವರ್ತಕರ ಸಂಘಗಳು ಕರೆ ನೀಡಿದ್ದ ಒಂದು ದಿನದ ದೇಶವ್ಯಾಪಿ ಮುಷ್ಕರವು ಬುಧವಾರ ರಾಜ್ಯದಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಸಾಂಕೇತಿಕವಾಗಿ ಒಂದು ದಿನದ ಮಟ್ಟಿಗೆ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಮುಷ್ಕರದ ಕರೆಗೆ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸುವ ಗ್ರಾಹಕರು ಪ್ಯಾನ್‌ ಕಾರ್ಡ್‌ ವಿವರ ನೀಡುವ ನಿಬಂಧನೆಯಿಂದ ಶೇ 40ರಿಂದ ಶೇ 50ರಷ್ಟು ವಹಿವಾಟು ಕುಸಿದಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್‌ ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘₹ 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಆಭರಣಗಳ ಖರೀದಿಗೆ ಪ್ಯಾನ್‌ ಕಾರ್ಡ್‌ ಸಂಖ್ಯೆ ಉಲ್ಲೇಖಿಸುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಉದ್ದೇಶ ಒಳ್ಳೆಯದು. ಆದರೆ ಅದನ್ನು ಜಾರಿಗೆ ತರಲು ಆಯ್ಕೆ ಮಾಡಿಕೊಂಡ ವಿಧಾನ ಸರಿಯಲ್ಲ.  ದೇಶದಲ್ಲಿ ಕೇವಲ ಶೇ  10 ರಿಂದ 12ರಷ್ಟು ಜನರು ಮಾತ್ರ ಪ್ಯಾನ್‌ ಕಾರ್ಡ್‌ ಹೊಂದಿದ್ದಾರೆ. ಪ್ಯಾನ್‌ ಕಾರ್ಡ್‌ ಹೊಂದಿರದಿದ್ದರೆ ಅರ್ಜಿ ನಮೂನೆ ಭರ್ತಿ ಮಾಡಲು ಸೂಚಿಸಲಾಗಿದೆ. ಚಿನ್ನಾಭರಣ ಖರೀದಿಗೆ ಬಂದವರಿಂದ ಇದನ್ನೆಲ್ಲ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬಿಕ್ಕಟ್ಟಿನಲ್ಲಿ ಉದ್ಯಮ (ಮುಂಬೈಯಿಂದ ಪಿಟಿಐ ವರದಿ): ಗ್ರಾಮೀಣ ಪ್ರದೇಶ ಮತ್ತು ಸಣ್ಣ – ಪುಟ್ಟ ನಗರಗಳಲ್ಲಿನ ಬಹುಸಂಖ್ಯಾತ  ಜನರು ಪ್ಯಾನ್‌ ಕಾರ್ಡ್‌  ಹೊಂದಿರದ ಕಾರಣಕ್ಕೆ  ಚಿನ್ನಾಭರಣ ವರ್ತಕರು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ. ದೇಶದಲ್ಲಿ 22.3 ಕೋಟಿಗಳಷ್ಟು ಪ್ಯಾನ್‌ ಕಾರ್ಡ್‌ ವಿತರಣೆಯಾಗಿವೆ.

ಇಡೀ ಉದ್ದಿಮೆಯೇ ಈಗ ಬಿಕ್ಕಟ್ಟು ಎದುರಿಸುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ   ಕುಶಲ ಕರ್ಮಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಸಂಘಗಳ ಒಕ್ಕೂಟದ (ಜಿಜೆಎಫ್‌) ನಿರ್ದೇಶಕ ಅಶೋಕ್‌ ಮೀನಾವಾಲಾ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ಯಾನ್‌ ಕಾರ್ಡ್‌ ಕಡ್ಡಾಯವನ್ನು ಸದ್ಯದ ₹ 2 ಲಕ್ಷಕ್ಕೆ ಬದಲಿಗೆ ₹ 10 ಲಕ್ಷಕ್ಕೆ ನಿಗದಿಪಡಿಸಲು ಸರ್ಕಾರವನ್ನು ಒತ್ತಾಯಿಸಲಾಗಿದೆ. ಬಜೆಟ್‌ವರೆಗೆ ಕಾಯಲಾಗುವುದು. ಆಗಲೂ ನಮ್ಮ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟ ಅವಧಿವರೆಗೆ ಮುಷ್ಕರ ನಡೆಸಬೇಕಾಗಿ ಬರಬಹುದು ಎಂದು ಅವರು ಹೇಳಿದ್ದಾರೆ.

****
₹ 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಸುವ ಗ್ರಾಹಕರು ಪ್ಯಾನ್‌ ಕಾರ್ಡ್‌ ವಿವರ ನೀಡುವ ನಿಬಂಧನೆಯಿಂದ ಶೇ 40ರಿಂದ ಶೇ 50ರಷ್ಟು ವಹಿವಾಟು ಕುಸಿದಿದೆ
-ವೆಂಕಟೇಶ್‌ ಬಾಬು, ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.