ADVERTISEMENT

ಚುನಾವಣಾ ಬಾಂಡ್‌: ರೂಪುರೇಷೆ ಶೀಘ್ರ

ಆರ್‌ಬಿಐ ಜತೆ ಚರ್ಚಿಸಿ ನಿರ್ಧಾರ: ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿಕೆ

ಪಿಟಿಐ
Published 11 ಫೆಬ್ರುವರಿ 2017, 19:30 IST
Last Updated 11 ಫೆಬ್ರುವರಿ 2017, 19:30 IST
ನವದೆಹಲಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಇದ್ದರು. – ಪಿಟಿಐ ಚಿತ್ರ.
ನವದೆಹಲಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌, ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಮತ್ತು ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಇದ್ದರು. – ಪಿಟಿಐ ಚಿತ್ರ.   

ನವದೆಹಲಿ: ‘ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಜತೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ಚುನಾವಣಾ ಬಾಂಡ್‌ ಯೋಜನೆಗೆ ಸೂಕ್ತ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

‘ರಾಜಕೀಯ ಪಕ್ಷಗಳ ನಿಧಿಯಲ್ಲಿ ಪಾರದರ್ಶಕತೆತರುವ ಉದ್ದೇಶದಿಂದ ‘ಚುನಾವಣಾ ಬಾಂಡ್‌’ ಹೊರತರುವ ಪ್ರಸ್ತಾವವನ್ನು ಮುಂದಿಡಲಾಗಿದೆ. ಬಾಂಡ್‌ ಅವಧಿ, ಪ್ರತಿ ಚುನಾವಣೆಗೂ ಎಷ್ಟು ದಿನ ಮುಂಚಿತವಾಗಿ ಬಾಂಡ್‌ ಬಿಡುಗಡೆ ಮಾಡಬೇಕು ಎನ್ನುವ ವಿಷಯಗಳ ಬಗ್ಗೆ ಆರ್‌ಬಿಐ ಜತೆ ಚರ್ಚೆ ನಡೆಸಲಾಗುವುದು’ ಎಂದು ಆರ್‌ಬಿಐ ಆಡಳಿತ ಮಂಡಳಿ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.

2017–18ನೇ ಸಾಲಿನ ಬಜೆಟ್‌ನಲ್ಲಿ ಚುನಾವಣಾ ಬಾಂಡ್‌ ಬಿಡುಗಡೆ ಮಾಡುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ. ಪಕ್ಷಕ್ಕೆ ದೇಣಿಗೆ ನೀಡುವವರು ನಿರ್ದಿಷ್ಟ ಬ್ಯಾಂಕ್‌ನಿಂದ ಚೆಕ್‌ ಅಥವಾ ಡಿಜಿಟಲ್‌ ಪಾವತಿ ಮೂಲಕ ಬಾಂಡ್‌ ಗಳನ್ನು ಖರೀದಿಸಬಹುದು. ನೋಂದಾ ಯಿತ ರಾಜಕೀಯ ಪಕ್ಷ ತನ್ನ ಅಧಿಕೃತ ಖಾತೆಯ ಮೂಲಕ ಬಾಂಡ್‌ ಹಿಂದಿರು ಗಿಸಿ ನಿಗದಿತ ಕಾಲಾವಧಿ ಯೊಳಗೆ ಹಣ ಪಡೆದುಕೊಳ್ಳಬೇಕು. ದೇಣಿಗೆ ನೀಡು ವವರ ಹೆಸರನ್ನು ಬಾಂಡ್‌ನಲ್ಲಿ ನಮೂದಿಸಿರುವುದಿಲ್ಲ.

ಸೆಬಿ ಕಾರ್ಯನಿರ್ವಹಣೆಗೆ ಮೆಚ್ಚುಗೆ: ‘ದೇಶದ ಬಂಡವಾಳ ಮಾರುಕಟ್ಟೆ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ  ಮೆಚ್ಚುಗೆ ಸೂಚಿಸಿದರು.

ಶನಿವಾರ ಇಲ್ಲಿ ಬಜೆಟ್‌ ನಿರ್ಣಯಗಳ ಕುರಿತು ‘ಸೆಬಿ’ ಆಡಳಿತ ಮಂಡಳಿ ಜತೆ ಚರ್ಚೆ ನಡೆಸಿದ ಅವರು, ಮಾರುಕಟ್ಟೆ ನಿಯಂತ್ರಣ ವ್ಯವಸ್ಥೆಯಾಗಿರುವ ‘ಸೆಬಿ’ ವಿಶ್ವಾಸಾರ್ಥಹತೆಯನ್ನು ಕಾಪಾಡಿಕೊಂಡಿದೆ ಎಂದು ಹೇಳಿದರು.

‘ಕಳೆದ ಐದಾರು ವರ್ಷಗಳಿದ ದೇಶದ ಮಾರುಕಟ್ಟೆಯು ಉತ್ತಮ ಬೆಳವಣಿಗೆ ಸಾಧಿಸಿದೆ. ನಿರ್ದಿಷ್ಟ ವಾಗಿ ಮಾರುಕಟ್ಟೆ ಕಾರ್ಯಾಚರಣೆಗೆ ತಂತ್ರಜ್ಞಾನ ಅಳವಡಿಕೆಗೆ ಸಂಬಂಧಿಸಿ ದಂತೆ  ಮಹತ್ವದ ಬದಲಾವಣೆಗಳು ನಡೆದಿವೆ’ ಎಂದು ಜೇಟ್ಲಿ ತಿಳಿಸಿದರು.

ಬಂಡವಾಳ ಮಾರುಕಟ್ಟೆಯ ನಿಯಂತ್ರಣ ವ್ಯವಸ್ಥೆಗೆ ಅಗತ್ಯವಿರುವ ತಂತ್ರಜ್ಞಾನ ಮತ್ತು ನಿಯಮಗಳಲ್ಲಿ ಆಗಬೇಕಿರುವ ಬದಲಾವಣೆಗಳ ಬಗ್ಗೆ ಸೆಬಿ ಸದಸ್ಯರೊಂದಿಗೆ ಚರ್ಚೆ ನಡೆಸಲಾಯಿತು ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಬಂಡವಾಳ ಮಾರುಕಟ್ಟೆಯ  ಬೆಳವಣಿಗೆ ಮತ್ತು ಸದ್ಯದ ಸ್ಥಿತಿಗತಿಗಳ ಕುರಿತು ಹಣಕಾಸು ಸಚಿವರಿಗೆ ಮಾಹಿತಿ ನೀಡಲಾಗಿದೆ ಎಂದು ಸೆಬಿ ಅಧ್ಯಕ್ಷ ಯು.ಕೆ.ಸಿನ್ಹಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT