ADVERTISEMENT

ಜಾಗತೀಕರಣದ ಅತಿರೇಕಕ್ಕೆ ಪರಿಹಾರ ಕಂಡುಕೊಳ್ಳಿ: ಕ್ಸಿ

ಪಿಟಿಐ
Published 17 ಜನವರಿ 2017, 19:30 IST
Last Updated 17 ಜನವರಿ 2017, 19:30 IST
ಕ್ಸಿ ಜಿನ್‌ ಪಿಂಗ್‌
ಕ್ಸಿ ಜಿನ್‌ ಪಿಂಗ್‌   

ದಾವೋಸ್‌: ‘ಜಾಗತೀಕರಣದ ಅತಿರೇಕಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯ ಈಗ ಎದುರಾಗಿದೆ’ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರು ವಿಶ್ವದ ಮುಖಂಡರಿಗೆ ಒತ್ತಾಯಿಸಿದ್ದಾರೆ.

‘ದಶಕಗಳ ಕಾಲ ಆರ್ಥಿಕ ಬೆಳವಣಿಗೆಗೆ ನೆರವಾಗಿರುವ ವಿದ್ಯಮಾನಗಳಿಂದ ದೂರ ಸರಿಯದೇ, ಜಾಗತೀಕರಣದಿಂದ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರ  ಹುಡುಕಿಕೊಳ್ಳಬೇಕಾಗಿದೆ’ ಎಂದು ಅವರು ವಿಶ್ವದ ರಾಜಕೀಯ ಮತ್ತು ಉದ್ಯಮ ದಿಗ್ಗಜರಿಗೆ ಸಲಹೆ ನೀಡಿದ್ದಾರೆ.

‘ಸದ್ಯಕ್ಕೆ ವಿಶ್ವದಾದ್ಯಂತ ಕಂಡು ಬರುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಜಾಗತೀಕರಣವನ್ನು ದೂಷಿಸಬಾರದು.  ಇಂತಹ ದೂಷಣೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೂ ಆಗಲಾರದು’ ಎಂದರು.

ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ಅನೇಕರು ಜಾಗತೀಕರಣದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವುದರ ವಿರುದ್ಧ  ಜಿನ್‌ಪಿಂಗ್‌ ಪರೋಕ್ಷ ವಾಗ್ದಾಳಿ ನಡೆಸಿದರು. ಸದ್ಯದ ಜಾಗತಿಕ ಆರ್ಥಿಕ ವ್ಯವಸ್ಥೆ ಕಾಪಾಡಿಕೊಳ್ಳುವುದು ಮತ್ತು  ಮುಕ್ತ ವ್ಯಾಪಾರ ನೀತಿ ಅನುಸರಿಸುವುದರ  ಅಗತ್ಯವನ್ನು ಅವರು ಬಲವಾಗಿ ಪ್ರತಿಪಾದಿಸಿದರು.

‘ಸಮಸ್ಯೆಗಳು ಎದುರಾಗುವುದು ಹೆದರಿ ಪಲಾಯನ ಮಾಡಲು ಅಲ್ಲ ಎನ್ನುವುದನ್ನು ಮನುಕುಲದ ಇತಿಹಾಸ ನಮಗೆ ಪಾಠ ಕಲಿಸಿದೆ. ಸಮಸ್ಯೆಗಳನ್ನು ಎದುರಿಸಲು ಹಿಂದೇಟು ಹಾಕುವುದು ಕಳವಳಕಾರಿ ಬೆಳವಣಿಗೆ’ ಎಂದರು. ವ್ಯಾಪಾರ ಸಮರದಿಂದ ಯಾರೊಬ್ಬರೂ ಗೆಲ್ಲುವುದಿಲ್ಲ ಎಂದೂ ಅವರು ಎಚ್ಚರಿಸಿದರು.

ಅಸಮಾನತೆ ಹೆಚ್ಚಳ:  ಒಂದು ದಶಕದ ಅವಧಿಯಲ್ಲಿ ಆರ್ಥಿಕ ಅಸಮಾನತೆ ಗಮನಾರ್ಹವಾಗಿ ಹೆಚ್ಚುತ್ತಿದೆ ಎಂದು ಭಾರ್ತಿ ಸಮೂಹದ  ಅಧ್ಯಕ್ಷ ಸುನಿಲ್‌ ಮಿತ್ತಲ್‌ ಅಭಿಪ್ರಾಯಪಟ್ಟಿದ್ದಾರೆ. ಬೃಹತ್‌ ಉದ್ದಿಮೆಯ ಭವಿಷ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಚಾಲಕ ಶಕ್ತಿ
ವಿಶ್ವದ ಎರಡನೆ ಅತಿದೊಡ್ಡ ಆರ್ಥಿಕತೆಯಾಗಿರುವ ಚೀನಾದ ಆರ್ಥಿಕ ವೃದ್ಧಿ ದರ ಸದ್ಯಕ್ಕೆ ಕುಂಠಿತಗೊಂಡಿದ್ದರೂ,  ವಿಶ್ವದ ಆರ್ಥಿಕ ಬೆಳವಣಿಗೆಯ ದೊಡ್ಡ ಚಾಲಕ ಶಕ್ತಿಯಾಗಿದೆ. ಹಿಂದಿನ ವರ್ಷದ ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಚೀನಾದ ಪಾಲು ಶೇ 39ರಷ್ಟಿದೆ  ಎಂದು ವಿಶ್ವ ಆರ್ಥಿಕ ವೇದಿಕೆ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.