ADVERTISEMENT

ಜಿಎಸ್‌ಟಿ: ಹೆಚ್ಚು ಬದಲಿಲ್ಲ

ಪಿಟಿಐ
Published 28 ಏಪ್ರಿಲ್ 2017, 19:46 IST
Last Updated 28 ಏಪ್ರಿಲ್ 2017, 19:46 IST
ಸಿಐಐ ವಾರ್ಷಿಕ ಸಭೆಯಲ್ಲಿ  ಸಚಿವ ಅರುಣ್ ಜೇಟ್ಲಿ.  – ಪಿಟಿಐ ಚಿತ್ರ
ಸಿಐಐ ವಾರ್ಷಿಕ ಸಭೆಯಲ್ಲಿ ಸಚಿವ ಅರುಣ್ ಜೇಟ್ಲಿ. – ಪಿಟಿಐ ಚಿತ್ರ   

ನವದೆಹಲಿ: ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ವ್ಯವಸ್ಥೆಯ ತೆರಿಗೆ ದರ ನಿಗದಿಯಲ್ಲಿ ಹೆಚ್ಚು  ಬದಲಾವಣೆ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

‘ಜುಲೈ 1ರಿಂದ ದೇಶದಾದ್ಯಂತ  ಹೊಸ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದ್ದು, ಸದ್ಯದ ತೆರಿಗೆಗಳಿಗೆ ಹೋಲಿಸಿದರೆ ಹೊಸ ತೆರಿಗೆ ದರಗಳು ಜನರಿಗೆ ಹೊರೆಯಾಗುವುದಿಲ್ಲ. ಸದ್ಯ ಜಾರಿಯಲ್ಲಿರುವ ರಾಜ್ಯ ಮತ್ತು ಕೇಂದ್ರ ತೆರಿಗೆಯ ಸಂಕೀರ್ಣ ವ್ಯವಸ್ಥೆಗೆ ಜಿಎಸ್‌ಟಿ ಅಂತ್ಯ ಹಾಡಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ವಾರ್ಷಿಕ ಸಭೆಯಲ್ಲಿ ‘ಜಾಗತೀಕರಣದ ಭವಿಷ್ಯ: ಭಾರತ ಯಶಸ್ವಿಯಾಗಬಲ್ಲದೆ?’ ಎಂಬ ವಿಷಯ ಕುರಿತು  ಅವರು ಮಾತನಾಡುತ್ತಿದ್ದರು. ಜೇಟ್ಲಿ ನೇತೃತ್ವದ ಜಿಎಸ್‌ಟಿ ಮಂಡಳಿ ಮೇ 18–19ರಂದು ಶ್ರೀನಗರದಲ್ಲಿ ಸಭೆ  ಸೇರಲಿದ್ದು ಜಿಎಸ್‌ಟಿ ತೆರಿಗೆ ದರಗಳನ್ನು ಅಂತಿಮಗೊಳಿಸಲಿದೆ.

‘ಸದ್ಯ ಜಾರಿಯಲ್ಲಿರುವ ಕನಿಷ್ಠ 10 ಪರೋಕ್ಷ ತೆರಿಗೆಗಳು ಏಕರೂಪ ತೆರಿಗೆ ವ್ಯವಸ್ಥೆಯಲ್ಲಿ ವಿಲೀನಗೊಳ್ಳಲಿವೆ.  ತೆರಿಗೆ ದರ ಕಡಿತದ ಲಾಭವನ್ನು   ಗ್ರಾಹಕರಿಗೆ ತಲುಪಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಕೇಂದ್ರೀಯ ತೆರಿಗೆ, ಸೇವಾಶುಲ್ಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್‌)ಗಳನ್ನು ಒಟ್ಟುಗೂಡಿಸಿರುವ ಜಿಎಸ್‌ಟಿ ಮಂಡಳಿ ಹೊಸದಾಗಿ ಶೇ 5, 12, 18 ಮತ್ತು ಶೇ 28 ಹೀಗೆ ನಾಲ್ಕು ಹಂತದ ತೆರಿಗೆ ವ್ಯವಸ್ಥೆ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.