ADVERTISEMENT

ಜಿಯೊ ಕೊಡುಗೆ ಹಿಂದಿರುವ ಮಾರುಕಟ್ಟೆ ತಂತ್ರ!

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2016, 19:30 IST
Last Updated 13 ಸೆಪ್ಟೆಂಬರ್ 2016, 19:30 IST
ಜಿಯೊ ಕೊಡುಗೆ ಹಿಂದಿರುವ ಮಾರುಕಟ್ಟೆ ತಂತ್ರ!
ಜಿಯೊ ಕೊಡುಗೆ ಹಿಂದಿರುವ ಮಾರುಕಟ್ಟೆ ತಂತ್ರ!   

ಕರೆ ಆಧಾರಿತ ಮೊಬೈಲ್‌ ಸೇವೆ ಅವಸಾನದ ಅಂಚಿಗೆ ಸರಿದು, ಇಂಟರ್‌ನೆಟ್‌ ದತ್ತಾಂಶ ಆಧರಿಸಿದ ಸೇವೆಗಳು ಮಾರುಕಟ್ಟೆ ಆಳುತ್ತಿರುವ ಕಾಲವಿದು. 2ಜಿ, 3ಜಿ ಸೇವೆ ಈಗಾಗಲೇ ಗ್ರಾಹಕ ಬಳಕೆಗೆ ಲಭ್ಯವಿದ್ದರೂ, ಆ ವೇಗವನ್ನು ಮೀರಿ ದತ್ತಾಂಶ ಮಾರುಕಟ್ಟೆ ಬೆಳೆಯುತ್ತಿದೆ.

ಈ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡೇ ಸಾಕಷ್ಟು ವ್ಯಾವಹಾರಿಕ ಜಾಣ್ಮೆಯೊಂದಿಗೆ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌, 4ನೇ ತಲೆಮಾರಿನ ಆರ್‌-ಜಿಯೊ ಸಿಮ್‌ ಬಿಡುಗಡೆ ಮಾಡಿದೆ.

ಮೇಲ್ನೋಟಕ್ಕೆ ಎಲ್ಲವೂ ಉಚಿತ ಎಂದು ಕಂಡರೂ, ಇದರ ಹಿಂದೆ ಮೊಬೈಲ್ ಡೇಟಾ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸ್ಥಾಪಿಸುವ ಬಹುದೊಡ್ಡ ಮಾರುಕಟ್ಟೆ ತಂತ್ರ ಅಡಗಿದೆ. ಯಾವುದೇ ಉತ್ಪನ್ನವಾದರೂ ದರವೇ ನಿರ್ಣಾಯಕ ಪಾತ್ರ ವಹಿಸುವ ದೇಶದ ಗ್ರಾಹಕ ಮಾರುಕಟ್ಟೆಯಲ್ಲಿ ರಿಲಯನ್ಸ್‌ ಕೂಡ ಈ ‘ಉಚಿತ’ ಮಂತ್ರದೊಂದಿಗೇ ಅಡಿಯಿಟ್ಟಿದೆ. ‘ಭಾರತೀಯರು ಈಗಾಗಲೇ ‘ಗಾಂಧಿಗಿರಿ’ಯನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬಿಟ್ಟಿದ್ದಾರೆ.

ನಾವು ಈಗ ‘ಡೇಟಾ ಗಿರಿ’ಯ ಹೊಸ ಶಕೆ ಪ್ರಾರಂಭಿಸುತ್ತಿದ್ದೇವೆ. ಕರೆ ಆಧಾರಿತ ಮೊಬೈಲ್‌ ಸೇವೆಗೆ ಇತಿಶ್ರೀ ಹಾಡಿ, ಡೇಟಾ  ಆಧಾರಿತ ಹೊಸ ಯುಗ ಪ್ರಾರಂಭಿಸುವ ಯೋಜನೆ ನಮ್ಮ ಮುಂದಿದೆ’ ಎಂದು ಮುಕೇಶ್‌ ಅಂಬಾನಿ ಜಿಯೊ ಸಿಮ್‌ ಬಿಡುಗಡೆ ಮುನ್ನ ನಡೆದ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೇಳಿದ್ದರು. ಜಿಯೊ  ಮಾರುಕಟ್ಟೆ ಪ್ರವೇಶದ ಹಿಂದೆ ಈ ಡೇಟಾ  ಆಧಾರಿತ ಮೊಬೈಲ್‌ ಸೇವೆಯೇ ನಿರ್ಣಾಯಕ ಪಾತ್ರ ವಹಿಸಿದೆ. 

ಮೊಬೈಲ್‌ ಸೇವಾ ಸಂಸ್ಥೆಗಳು, ಪ್ರತಿ ಗ್ರಾಹಕನಿಂದ ಬರುವ ಸರಾಸರಿ ವರಮಾನ (ಎಆರ್‌ಪಿಯು) ಆಧಾರದ ಮೇಲೆ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತವೆ. ಒಬ್ಬ ಬಳಕೆದಾರ  ಪ್ರತಿ ತಿಂಗಳು ಕರೆ ಮಾಡಲು, ಎಸ್‌ಎಂಎಸ್‌ ಕಳುಹಿಸಲು, ಇಂಟರ್‌ನೆಟ್‌ ಜಾಲಾಡಲು, ಇತರೆ ಮೌಲ್ಯವರ್ಧಿತ ಸೇವೆಗಳನ್ನು ಪಡೆಯಲು ಸರಾಸರಿ ಎಷ್ಟು ಮೊತ್ತ ವ್ಯಯಿಸುತ್ತಾನೆ ಎನ್ನುವುದನ್ನು ಲೆಕ್ಕಹಾಕಲಾಗುತ್ತದೆ. 

ತಿಂಗಳಿಗೆ ಒಬ್ಬ ಗ್ರಾಹಕ ಸರಾಸರಿ ₹ 500 ವ್ಯಯಿಸಿದ್ದರೆ ಅದರಲ್ಲಿ ಕರೆಗಳಿಗೆ ₹150 ಖರ್ಚಾಗಿರುತ್ತದೆ, ಇನ್ನುಳಿದ ₹ 350 ಡೇಟಾ ಶುಲ್ಕವಾಗಿ ಪಾವತಿಸಿರುತ್ತಾನೆ ಎನ್ನುತ್ತದೆ ಮೊಬೈಲ್‌ ಮಾರುಕಟ್ಟೆ ಅಧ್ಯಯನ ಸಂಸ್ಥೆಯೊಂದರ ವರದಿ.

ಸೆಪ್ಟೆಂಬರ್‌ 5ರಂದು ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಜಿಯೊ ಸಿಮ್‌, ಡಿಸೆಂಬರ್‌ 30ರವರೆಗೆ ಆರಂಭಿಕ ಕೊಡುಗೆಯಾಗಿ ಉಚಿತ ಕರೆ, ರೋಮಿಂಗ್‌ ಸೌಲಭ್ಯ. ₹499ಕ್ಕೆ  4 ಜಿಬಿ ಡೇಟಾ ನೀಡುವುದಾಗಿ ಹೇಳಿಕೊಂಡಿದೆ. ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಂಪೆನಿ ಕರೆ ಮತ್ತು ಎಸ್‌ಎಂಎಸ್‌ ದರವನ್ನು ಡೇಟಾ ಪ್ಲ್ಯಾನ್‌ ಜತೆಗೇ ವಿಲೀನಗೊಳಿಸಿದೆ.

ಉದಾಹರಣೆಗೆ ₹ 499 ತೆತ್ತು 4ಜಿಬಿ ಡೇಟಾ ರೀಚಾರ್ಜ್‌ ಮಾಡಿಕೊಂಡರೆ ಮಾತ್ರ ಉಚಿತ ಕರೆ ಭಾಗ್ಯ ಗ್ರಾಹಕರಿಗೆ ಲಭಿಸಲಿದೆ. ಡೇಟಾ ಯಾವಾಗ ಮುಗಿದುಹೋಗುತ್ತದೆಯೋ ಆ  ನಂತರ ಉಚಿತ ಕರೆಯೂ ಕಡಿತವಾಗುತ್ತದೆ.

4ಜಿ ವೇಗದ 4 ಜಿಬಿ ದತ್ತಾಂಶ ಮುಗಿಯಲು ಬೆರಳೆಣಿಕೆಯ ದಿನಗಳು ಸಾಕು. ಕರೆ ಉಚಿತವಾದರೂ, ಇದನ್ನು ಪಡೆಯಲು ಅನಿವಾರ್ಯವಾಗಿ ಗ್ರಾಹಕ ಡೇಟಾ ರೀಚಾರ್ಜ್‌ ಮಾಡಿಸುತ್ತಲೇ ಇರಬೇಕು. ಅಷ್ಟೇ ಅಲ್ಲ, ಜಿಯೊ ಅಪ್ಲಿಕೇಷನ್ಸ್‌ಗಳು ಇತರೆ ಮೊಬೈಲ್‌ ನೆಟ್‌ವರ್ಕ್‌ಗಳಲ್ಲಿ ಕೆಲಸ ಮಾಡುವುದಿಲ್ಲ.

ಕಚೇರಿಯಲ್ಲಿ ಅಥವಾ ಮನೆಯಲ್ಲಿ ಬೇರೆ ಇಂಟರ್‌ನೆಟ್‌ ಸೇವೆ ಲಭ್ಯವಿದ್ದರೂ ಜಿಯೊ ಡೇಟಾವನ್ನೇ ಬಳಸಬೇಕು, ಡೇಟಾ ಸೇವೆಯ ಮೂಲಕ, ಇಡೀ ಮೊಬೈಲ್‌ ಮಾರುಕಟ್ಟೆಯಲ್ಲಿ  ಆಧಿಪತ್ಯ ಸ್ಥಾಪಿಸುವ  ಯೋಜನೆ ಇದರ ಹಿಂದಿದೆ ಎನ್ನುತ್ತಾರೆ ಇಂಡಿಯಾ ರೇಟಿಂಗ್ಸ್‌ ಸಂಸ್ಥೆಯ ತನು ಶರ್ಮಾ.

ಪ್ರತಿಸ್ಪರ್ಧಿ ಕಂಪೆನಿಗಳಿಗೆ ಹೋಲಿಸಿದರೆ ಜಿಯೊ ಸಿಮ್‌  ಕರೆ ಆಧಾರಿತ ಮೊಬೈಲ್‌ ಸೇವೆಗಳಿಗೆ ನಿಗದಿಪಡಿಸಿರುವ ಸೇವಾ ಶುಲ್ಕ ಗರಿಷ್ಠ ಪ್ರಮಾಣದಲ್ಲೇನೂ ಇಲ್ಲ. ಆದರೆ, ಎಲ್ಲವನ್ನೂ ಡೇಟಾ ಆಧಾರಿತ ಸೇವೆಗಳ ಜತೆ ವಿಲೀನಗೊಳಿಸಿರುವುದರಿಂದ ಖಂಡಿತ ಕಂಪೆನಿಯ ‘ಎಆರ್‌ಪಿಯು’ ಹೆಚ್ಚಲಿದೆ.

ಇನ್ನೊಂದೆಡೆ ಪ್ರತಿಸ್ಪರ್ಧಿ ಕಂಪೆನಿಗಳ ಸರಾಸರಿ ವರಮಾನ ತಗ್ಗಲಿದೆ. ಹೀಗಾಗಿ ಪೈಪೋಟಿ ಎದುರಿಸಲು ಕಂಪೆನಿಗಳು ಕರೆ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇದು ಮೊಬೈಲ್‌ ಕಂಪೆನಿಗಳ ನಡುವೆ ಇನ್ನೊಂದು ಸುತ್ತಿನ ದರ ಸಮರಕ್ಕೆ ಕಾರಣವಾಗುತ್ತದೆ. ಅಂತಿಮವಾಗಿ ಗ್ರಾಹಕನಿಗೇ ಇದರ ಬಿಸಿ ತಟ್ಟಲಿದೆ ಎನ್ನುತ್ತಾರೆ ಅವರು.


ಡಿಸೆಂಬರ್‌ 30ರವರೆಗೆ ಗ್ರಾಹಕರಿಗೆ ಜಿಯೊ ಸಿಮ್‌ನ ಉಚಿತ ಕೊಡುಗೆ ಲಭಿಸಲಿದೆ. ನಂತರ ಕಂಪೆನಿ ನೀಡುವ 10  ಟ್ಯಾರಿಫ್‌ ಪ್ಲ್ಯಾನ್‌ಗಳಲ್ಲಿ ಒಂದನ್ನು ಗ್ರಾಹಕರು ಆಯ್ದುಕೊಳ್ಳಬೇಕು. ದಿನಕ್ಕೆ ₹ 19ರ ಯೋಜನೆಯೂ ಇದರಲ್ಲಿ ಸೇರಿದೆ.

ಕನಿಷ್ಠ ಪ್ರಮಾಣದ ದತ್ತಾಂಶ ಬಳಸುವವರಿಗೆ ತಿಂಗಳಿಗೆ ₹149ರ ಮತ್ತು ಗರಿಷ್ಠ ಪ್ರಮಾಣದ ಡೇಟಾಬಳಸುವವರಿಗೆ ₹ 4,999ರ ವರೆಗಿನ ಯೋಜನೆಗಳೂ ಇದರಲ್ಲಿ ಸೇರಿವೆ. ರಿಲಯನ್ಸ್‌ ಕಂಪೆನಿಯು ದೂರಸಂಪರ್ಕ  ನಿಯಂತ್ರಣ ಪ್ರಾಧಿಕಾರ ‘ಟ್ರಾಯ್‌’ಗೆ ಸಲ್ಲಿಸಿರುವ ವರದಿಯಲ್ಲಿ 1ಜಿಬಿ ಡೇಟಾ ಬಳಕೆಗೆ ಸರಾಸರಿ ₹ 50 ಶುಲ್ಕ ವಿಧಿಸುವುದಾಗಿ ಹೇಳಿದೆ. 

ಪ್ರತಿ ಸ್ಪರ್ಧಿ ಕಂಪೆನಿಗಳು ಸದ್ಯ 1ಜಿಬಿ 3ಜಿ ಡೇಟಾಕ್ಕೆ ₹ 200 ರಿಂದ ₹ 250 ದರ ವಿಧಿಸುತ್ತಿದೆ. ಕರೆ ಆಧಾರಿತ ಸೇವೆಗೆ ಮತ್ತು ಡೇಟಾ ಆಧಾರಿತ ಸೇವೆಗೆ ಪ್ರತ್ಯೇಕ ಸಿಮ್‌ಗಳನ್ನು ಬಳಸುವವರಿಗೆ ಜಿಯೊ ಪರ್ಯಾಯ ಆಯ್ಕೆಯಾಗಿ ಕಾಣಬಹುದು, ಆದರೆ, ಪ್ರತಿಸ್ಪರ್ಧಿ ಕಂಪೆನಿಗಳಿಗೆ ಹೋಲಿಸಿದರೆ ಸರಾಸರಿ ಡೇಟಾ ದರದಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ ಎನ್ನುತ್ತಾರೆ ಭಾರತೀಯ ಮೊಬೈಲ್‌ ಸೇವಾ ಸಂಸ್ಥೆಗಳ ಒಕ್ಕೂಟದ (ಸಿಒಎ) ಅಧ್ಯಕ್ಷ ರಾಜನ್‌ ಮಾಥ್ಯೂಸ್‌.

ನಿರ್ದಿಷ್ಟ ಮೊತ್ತದ ಡೇಟಾ ಪ್ಯಾಕ್‌ ಮುಗಿದ ನಂತರ, ಪ್ರತಿ ಜಿಬಿಗೆ ₹ 250 ಕೊಡಲೇಬೇಕು. ಹೀಗಾಗಿ ₹ 50ಕ್ಕೆ ಒಂದು ಜಿಬಿ ಡೇಟಾ ಎನ್ನುವ ಕಂಪೆನಿಯ ಘೋಷಣೆ ಸಮೀಪಕ್ಕೇ ಬರುವುದಿಲ್ಲ ಎನ್ನುತ್ತಾರೆ ಅವರು.   ರಿಲಯನ್ಸ್‌ ಜಿಯೊ ಒಟ್ಟು 10 ಕೋಟಿ ಗ್ರಾಹಕರ ಸೇರ್ಪಡೆ ಗುರಿ ನಿಗದಿಪಡಿಸಿದೆ.

ಅಂದರೆ ಸೆಪ್ಟೆಂಬರ್‌ 5 ರಿಂದ ಪ್ರತಿ ದಿನ ಸರಾಸರಿ 10 ಲಕ್ಷ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳುವಂತೆ ಯೋಜನೆ ರೂಪಿಸಲಾಗಿದೆ. ಡಿಸೆಂಬರ್‌ 30ಕ್ಕೆ ಉಚಿತ ಕೊಡುಗೆ ಮುಗಿಯಲಿದೆ. ನಂತರ  2017ರ ಜನವರಿ 1ರಿಂದ ಡೇಟಾಸೇವೆಗಳ ದರ ಪ್ರಕಟಿಸುವುದಾಗಿ ಹೇಳಿಕೊಂಡಿದೆ. ಈ ಡೇಟಾಬಳಕೆ ಶುಲ್ಕ ಪ್ರಕಟಗೊಂಡ ನಂತರವೇ ಗ್ರಾಹಕರಿಗೆ ಶ್ರೇಷ್ಠವಾದುದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT