ADVERTISEMENT

ಜೇಟ್ಲಿ ಭೇಟಿ ಮಾಡಿದ ರಾಜನ್‌

ಆರ್‌ಬಿಐನಿಂದ ಮತ್ತೆ ಶೇ 0.25 ಬಡ್ಡಿದರ ಕಡಿತ: ಉದ್ಯಮ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಮೇ 2015, 20:17 IST
Last Updated 27 ಮೇ 2015, 20:17 IST
ಜೇಟ್ಲಿ ಭೇಟಿ ಮಾಡಿದ ರಾಜನ್‌
ಜೇಟ್ಲಿ ಭೇಟಿ ಮಾಡಿದ ರಾಜನ್‌   

ನವದೆಹಲಿ(ಪಿಟಿಐ): ಮುಂದಿನ ಮಂಗಳವಾರ (ಜೂನ್‌ 2) ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಣಕಾಸು ನೀತಿ ಪರಾಮರ್ಶೆ ನಡೆಸಲಿದೆ. ಹಣದುಬ್ಬರ ದಾಖಲೆ ಪ್ರಮಾಣದಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿರುವುದರಿಂದ ಆರ್‌ಬಿಐ ಬಡ್ಡಿದರವನ್ನು ಮತ್ತಷ್ಟು ಕಡಿತಗೊಳಿಸಬೇಕು ಎಂಬ ಒತ್ತಡ ವಾಣಿಜ್ಯ -ಉದ್ಯಮ ಕ್ಷೇತ್ರ ಸೇರಿದಂತೆ ಎಲ್ಲೆಡೆಯಿಂದಲೂ ಬರುತ್ತಿದೆ.

ಈ ಮಧ್ಯೆ ಆರ್‌ಬಿಐ ಗವರ್ನರ್‌ ರಘುರಾಂ ರಾಜನ್‌ ಅವರು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಸಚಿವಾಲಯದಲ್ಲಿ ಬುಧವಾರ ಭೇಟಿ ಮಾಡಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ರಾಜನ್‌, ‘ನಾವು ಹಲವು ವಿಚಾರಗಳನ್ನು ಚರ್ಚಿಸಿದೆವು’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.

ಕಳೆದ ವಾರವಷ್ಟೇ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ಬಡ್ಡಿದರ ಕಡಿತ ವಿಚಾರವಾಗಿ ಆರ್‌ಬಿಐ   ಆಲೋಚಿಸಬೇಕಿದೆ ಎಂದಿದ್ದರು.
ಬಡ್ಡಿದರ ಕಡಿತಕ್ಕೆ ಸಾಕಷ್ಟು ಅವಕಾಶ: ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್‌ ಸುಬ್ರಹ್ಮಣಿಯನ್‌ ಅವರು ಮಂಗಳವಾರ ಸುದ್ದಿಗಾರರ ಜತೆ ಮಾತನಾಡುತ್ತಾ, ‘ಹಣದುಬ್ಬರ ಮುಂದಿನ ದಿನಗಳಲ್ಲಿ ಹೇಗಿರಲಿದೆ ಎಂಬ ವಿಶ್ಲೇಷಣೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಸದ್ಯದ ಸ್ಥಿತಿಗತಿ, ದೇಶದ ವಿತ್ತೀಯ ಪರಿಸ್ಥಿತಿ ಮೊದಲಾದ ಅಂಶಗಳಿಗೆ ಹಣಕಾಸು ನೀತಿ ಪರಾಮರ್ಶೆಯು ಹೇಗೆ ಪ್ರತಿಕ್ರಿಯಿಸಬೇಕಿದೆ ಎಂಬುದು ಈಗಿನ ಮುಖ್ಯ ಅಂಶವಾಗಿದೆ. ನನ್ನ ಪ್ರಕಾರವಂತೂ ಬಡ್ಡಿದರ ಕಡಿತಕ್ಕೆ ಸಾಕಷ್ಟು ಅವಕಾಶಗಳಿವೆ’ ಎಂದಿದ್ದರು.

ಏಪ್ರಿಲ್‌ನಲ್ಲಿ ಸಗಟು ಧಾರಣೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ಮೈನಸ್‌ ಶೇ 2.7ರಷ್ಟು ದಾಖಲೆಯ ಕನಿಷ್ಠ ಮಟ್ಟಕ್ಕಿಳಿದಿದೆ. ಚಿಲ್ಲರೆ ಹಣದುಬ್ಬರವೂ ಶೇ 5ರ ಮಟ್ಟಕ್ಕಿಂತ ಕೆಳಗೇ (ಶೇ 4.87ರಲ್ಲಿ) ಇದೆ. ಇನ್ನೊಂದೆಡೆ ಕೈಗಾರಿಕಾ ಪ್ರಗತಿ ಸೂಚಿಯೂ ಇಳಿಜಾರಿನ ಹಾದಿಯಲ್ಲಿದೆ.

ವಾಣಿಜ್ಯೋದ್ಯಮ ಲೋಕದ ಆಗ್ರಹ: ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಆರ್‌ಬಿಐ ರೆಪೊ (ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ) ಬಡ್ಡಿದರವನ್ನು ಕನಿಷ್ಠ ಶೇ 0.25ರಷ್ಟಾದರೂ ತಗ್ಗಿಸಬೇಕಿದೆ ಎಂಬುದು ವಾಣಿಜ್ಯೋದ್ಯಮ ಲೋಕದ ಆಗ್ರಹವಾಗಿದೆ.
ಇದೇ ನಿಟ್ಟಿನಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ ಅಸೋಚಾಂ ಕೂಡ ಜೂ. 2ರ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್‌ಬಿಐ ಶೇ 0.25ರಷ್ಟು ಬಡ್ಡಿದರ ತಗ್ಗಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.