ADVERTISEMENT

ಝೀ ಗ್ರೂಪ್‌ಗೆ ಇನ್ನೊಂದು ಅವಕಾಶ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಹೈದರಾಬಾದ್‌: ಲಕ್ಷಾಂತರ ಠೇವಣಿದಾರರಿಗೆ ವಂಚನೆ ಎಸಗಿರುವ ಆರೋಪ ಎದುರಿಸುತ್ತಿರುವ ಅಗ್ರಿಗೋಲ್ಡ್‌ ಸಂಸ್ಥೆಯ ಸ್ವಾಧೀನಕ್ಕೆ, ಝೀ ಎಸ್ಸೆಲ್‌ ಗ್ರೂಪ್‌ಗೆ ಹೈಕೋರ್ಟ್‌ ಇನ್ನೊಂದು ಅವಕಾಶ ನೀಡಿದೆ.

ಅಗ್ರಿಗೋಲ್ಡ್‌ನ ಆಸ್ತಿಗಳ ಹರಾಜು ಪ್ರಕ್ರಿಯೆ ವಿಳಂಬ ಆಗುತ್ತಿರುವುದನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ನ ಪೀಠವು, ಈ ನಿರ್ಧಾರ ಪ್ರಕಟಿಸಿದೆ.

ಜೂನ್‌ 5ರ ವೇಳೆಗೆ ಕೋರ್ಟ್‌ನಲ್ಲಿ ₹ 1,000 ದಿಂದ ₹ 1,500 ಕೋಟಿಗಳಷ್ಟು ಮೊತ್ತವನ್ನು ಠೇವಣಿ ಇರಿಸಲು ಆದೇಶಿಸಿದೆ.

ADVERTISEMENT

ಬ್ಯಾಂಕೇತರ ಹಣಕಾಸು ಸಂಸ್ಥೆಯ ಸ್ಥಿರಾಸ್ತಿ ಪರಿಗಣಿಸಿ ಅದನ್ನು ಖರೀದಿಸಲು ಮುಂದೆ ಬಂದಿದ್ದನ್ನು ಪೀಠವು ಝೀ ಸಮೂಹಕ್ಕೆ ನೆನಪಿಸಿದೆ. ಅಗ್ರಿಗೋಲ್ಡ್‌ನ ಆಸ್ತಿಗಳಿಗಿಂತ ಅದರ ಹೊಣೆಗಾರಿಕೆಗಳ ಮೊತ್ತವೇ ಹೆಚ್ಚಿಗೆ ಇದೆ ಎಂದು ಹೇಳಿ ಸಂಸ್ಥೆಯು ಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿತ್ತು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹಿರಿಯ ರಾಜಕಾರಣಿ ಅಮರಸಿಂಗ್‌ ಅವರ ಪ್ರಭಾವ ಬಳಸಿ ಝೀ ಸಮೂಹವು ಈ ಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಮುಂದಿನ ವಿಚಾರಣೆಯನ್ನು ಜೂನ್‌ 5ಕ್ಕೆ ನಿಗದಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.