ADVERTISEMENT

ಟಿ.ವಿ ಬೆಲೆ ಏರಿಕೆಗೆ ನಿರ್ಧಾರ

ಪಿಟಿಐ
Published 25 ಫೆಬ್ರುವರಿ 2018, 20:13 IST
Last Updated 25 ಫೆಬ್ರುವರಿ 2018, 20:13 IST
ಟಿ.ವಿ ಬೆಲೆ ಏರಿಕೆಗೆ ನಿರ್ಧಾರ
ಟಿ.ವಿ ಬೆಲೆ ಏರಿಕೆಗೆ ನಿರ್ಧಾರ   

ನವದೆಹಲಿ: ಟೆಲಿವಿಷನ್‌ ತಯಾರಿಸುವ ಪ್ರಮುಖ ಸಂಸ್ಥೆಗಳಾದ ಸೋನಿ, ಎಲ್‌ಜಿ, ಪ್ಯಾನಾಸೋನಿಕ್‌ ಮತ್ತು ಸ್ಯಾಮ್ಸಂಗ್‌ ಸಂಸ್ಥೆಗಳು ತಮ್ಮ ಎಲ್‌ಇಡಿ / ಒಎಲ್‌ಇಡಿ ಸೆಟ್‌ಗಳ ಬೆಲೆಯನ್ನು ಶೇ 7ರವರೆಗೆ ಹೆಚ್ಚಳ ಮಾಡಲು ನಿರ್ಧರಿಸಿವೆ.

ಕೇಂದ್ರ ಸರ್ಕಾರವು ಇತ್ತೀಚಿಗೆ ಕಸ್ಟಮ್ಸ್‌ ಡ್ಯೂಟಿ ಹೆಚ್ಚಿಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ತನ್ನ ಟೆಲಿವಿಷನ್‌ ಸೆಟ್‌ಗಳ ಬೆಲೆಯನ್ನು ಶೇ 2 ರಿಂದ ಶೇ 7ರಷ್ಟು ಹೆಚ್ಚಿಸುವುದಾಗಿ ಪ್ಯಾನಾಸೋನಿಕ್‌ ತಿಳಿಸಿದೆ.  ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಇನ್ನೂ ಕೆಲ ಸಂಸ್ಥೆಗಳು ತಿಳಿಸಿವೆ. ಮಾರುಕಟ್ಟೆ ಮೂಲಗಳ ಪ್ರಕಾರ , ಸ್ಯಾಮ್ಸಂಗ್‌ ಶೇ 2 ರಿಂದ ಶೇ 6ರವರೆಗೆ ಬೆಲೆ ಹೆಚ್ಚಿಸಲು ನಿರ್ಧರಿಸಿದೆ.

‘ಬೆಲೆ ಏರಿಕೆ ತಪ್ಪಿಸಲು ಬೇರೆ ಮಾರ್ಗೋಪಾಯಗಳೇ ಇಲ್ಲ’ ಎಂದು ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಿ ವಾನ್‌ ಕಿಮ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಮುಂಬರುವ ದಿನಗಳಲ್ಲಿ ನಾವು ಕೂಡ ಬೆಲೆ ಏರಿಸುವ ಪರಿಸ್ಥಿತಿ ಬರಬಹುದು’ ಎಂದು ಸೋನಿ ಇಂಡಿಯಾ ಬ್ರೇವಿಯಾದ ವಹಿವಾಟು ಮುಖ್ಯಸ್ಥ ಸಚಿನ್‌ ರೈ ಹೇಳಿದ್ದಾರೆ.

ಈ ಬೆಲೆ ಏರಿಕೆಯು ಅಲ್ಪಾವಧಿಯಲ್ಲಿ ಟಿ.ವಿ ಬೇಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಎರಡು ವರ್ಷಗಳಿಂದ ಟೆಲಿವಿಷನ್ ತಯಾರಿಕಾ ಉದ್ಯಮವು ಕಠಿಣ ಪರಿಸ್ಥಿತಿ ಎದುರಿಸುತ್ತಿದೆ ಎಂದು ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ತಯಾರಿಕಾ ಸಂಘ (ಸಿಇಎಎಂಎ) ಅಭಿಪ್ರಾಯಪಟ್ಟಿದೆ. ಟಿ.ವಿ ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಡ್ಯೂಟಿಯನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಶೇ 10 ರಿಂದ ಶೇ 15ಕ್ಕೆ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.