ADVERTISEMENT

ತೆರಿಗೆ ವಂಚನೆ ಅಪರಾಧ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ನವದೆಹಲಿ(ಪಿಟಿಐ): ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಹೊಂದುವ ಮೂಲಕ ದೇಶಕ್ಕೆ ಆದಾಯ ತೆರಿಗೆಯನ್ನು ವಂಚಿಸುವುದು ‘ಅಕ್ರಮ ಹಣ ಸಾಗಣೆ ತಡೆ’ ಕಾನೂನಿನಡಿ ಅಪರಾಧ ಪ್ರಕರಣವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಬಜೆಟ್‌ ಮಂಡನೆ ವೇಳೆ ತೆರಿಗೆ ವಂಚನೆ ವಿಚಾರ ಪ್ರಸ್ತಾಪವಾದ ಸಂದರ್ಭದಲ್ಲಿ ಈ ಕುರಿತು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸ್ಪಷ್ಟನೆ ನೀಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಈವರೆಗೆ ಸಿವಿಲ್‌ ಪ್ರಕರಣ
ಸದ್ಯ, ತೆರಿಗೆ ವಂಚನೆಯು ಸಿವಿಲ್‌ ಪ್ರಕರಣದ ವ್ಯಾಪ್ತಿಯಲ್ಲಿದ್ದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ನಡಿ ಸೂಕ್ತ ಕಾನೂನು ಕ್ರಮ ಜರುಗಿಸ­ಲಾಗುತ್ತಿದೆ. ಇದೀಗ ತೆರಿಗೆ ವಂಚನೆಯನ್ನು ಅಕ್ರಮವಾಗಿ ಹಣ ಸಾಗಣೆ ತಡೆ ಕಾಯ್ದೆಯಡಿ ತರಲು ನಿರ್ಧರಿಸಲಾಗಿದೆ. ಈ ಮೂಲಕ ತೆರಿಗೆ ವಂಚನೆಯನ್ನು ‘ಅಪರಾಧ ಪ್ರಕರಣ’ ಎಂದು ಪರಿಗಣಿಸುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆರಿಗೆ ವಂಚನೆಯನ್ನು ಗುರುತಿಸುವ ಮತ್ತು ಪ್ರತ್ಯೇಕವಾಗಿ ಅಪರಾಧ ಪ್ರಕರಣ ದಾಖಲಿಸುವ ಅವಕಾಶವನ್ನು ಸಿಬಿಐ, ಜಾರಿ ನಿರ್ದೇಶನಾಲಯ, ಪೊಲೀಸ್‌, ಎನ್‌ಸಿಬಿ ಮತ್ತು ‘ಸೆಬಿ’ಗೆ ನೀಡಲಾ­ಗುವುದು ಎಂದು ಅವರು ಹೇಳಿದ್ದಾರೆ. ವಿದೇಶದಲ್ಲಿ ಅಕ್ರಮವಾಗಿ ಆಸ್ತಿ ಹೊಂದುವ ಮೂಲಕ ತೆರಿಗೆ ವಂಚನೆ ಮಾಡಿದರೆ ಅದನ್ನು ‘ಉದ್ದೇಶಿತ ಅಪರಾಧ’ ಎಂದೇ ಪರಿಗಣಿಸ­ಲಾಗುವುದು. ಆದರೆ, ದೇಶದಲ್ಲಿಯೇ ಅಕ್ರಮ ಆಸ್ತಿ ಹೊಂದಿದ್ದು, ತೆರಿಗೆ ವಂಚಿಸಿದರೆ ಸಿವಿಲ್‌ ಐ.ಟಿ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.