ADVERTISEMENT

ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಇಲ್ಲ

ಕೇಂದ್ರ ಸರ್ಕಾರಕ್ಕೆ ಐ. ಟಿ ಉದ್ಯಮ ಭರವಸೆ

ಪಿಟಿಐ
Published 16 ಮೇ 2017, 19:40 IST
Last Updated 16 ಮೇ 2017, 19:40 IST
ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಇಲ್ಲ
ದೊಡ್ಡ ಪ್ರಮಾಣದ ಉದ್ಯೋಗ ಕಡಿತ ಇಲ್ಲ   

ನವದೆಹಲಿ: ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಡಿತ ಮಾಡುತ್ತಿಲ್ಲ ಎಂದು ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಯು ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದೆ.

‘ಉದ್ಯೋಗಿಗಳ ಕೆಲಸದ ವಾರ್ಷಿಕ ಮೌಲ್ಯಮಾಪನದ ಕಾರಣಕ್ಕೆ ಗುತ್ತಿಗೆ ನವೀಕರಣ ಮಾಡಿರದ ಕೆಲ ಪ್ರಕರಣಗಳು ವರದಿಯಾಗಿರುವುದು ನಿಜ’ ಎಂದು ಐ.ಟಿ ಕಾರ್ಯದರ್ಶಿ ಅರುಣಾ ಸುಂದರ್‌ರಾಜನ್‌ ತಿಳಿಸಿದ್ದಾರೆ.

ಉದ್ದಿಮೆಯು ಶೇ 8 ರಿಂದ 9ರಷ್ಟು ವೃದ್ಧಿ ದಾಖಲಿಸುತ್ತಿದೆ. ಆದರೂ, ಕ್ಲೌಡ್‌ ತಂತ್ರಜ್ಞಾನ, ಬಿಗ್‌ ಡೇಟಾ ಮತ್ತು ಡಿಜಿಟಲ್‌ ಪಾವತಿ ಕಾರಣಕ್ಕೆ ಸಾಫ್ಟ್‌ವೇರ್‌ ತಂತ್ರಜ್ಞರ ಕೆಲಸದ ಸ್ವರೂಪ ಬದಲಾಗುತ್ತಿದೆ. ಈ ವರ್ಷ ದೊಡ್ಡ ಪ್ರಮಾಣದಲ್ಲೇನೂ ಉದ್ಯೋಗ ಕಡಿತ ಆಗುತ್ತಿಲ್ಲ ಎಂದು ಕೆಲ ಸಂಸ್ಥೆಗಳು ತಿಳಿಸಿವೆ. 

‘ಸಿಬ್ಬಂದಿಯ ಕಾರ್ಯದಕ್ಷತೆ ಆಧರಿಸಿ ಕೆಲವರ ಗುತ್ತಿಗೆ ನವೀಕರಣ ಮಾಡದಿರುವುದನ್ನೇ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿಯನ್ನು ಮನೆಗೆ ಕಳಿಸಲಾಗುತ್ತಿದೆಯೆಂದು ಬಿಂಬಿಸುವುದು ಸರಿಯಲ್ಲ. ದೊಡ್ಡ ಪ್ರಮಾಣದಲ್ಲಿ ತಂತ್ರಜ್ಞರನ್ನು ಕೈಬಿಡುತ್ತಿಲ್ಲವೆಂದು ಐ.ಟಿ  ಸಂಸ್ಥೆಗಳು ಸರ್ಕಾರಕ್ಕೆ ಭರವಸೆ ನೀಡಿವೆ’ ಎಂದು ಅರುಣಾ ಹೇಳಿದ್ದಾರೆ.

‘ಐ.ಟಿ ಉದ್ಯಮದ ಪ್ರಗತಿ ಏಕಾಏಕಿ ಕುಂಠಿತಗೊಂಡಿದೆ ಎನ್ನುವ ತೀರ್ಮಾನಕ್ಕೆ ಬರಬಾರದು. ಸಾಫ್ಟ್‌ವೇರ್‌ ಸಂಸ್ಥೆಗಳು ನೇಮಕಾತಿ ಪ್ರಕ್ರಿಯೆ ಮುಂದುವರೆಸಿದ್ದು, ಎರಡೂವರೆ ವರ್ಷಗಳಲ್ಲಿ  5 ಲಕ್ಷದಷ್ಟು ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿವೆ’ ಎಂದು ಹೇಳಿದ್ದಾರೆ.

ಉದ್ಯೋಗ ಕಡಿತ ಸಾಧ್ಯತೆ: ಮುಂದಿನ ಮೂರು ವರ್ಷಗಳಲ್ಲಿ ದೇಶಿ ಐ.ಟಿ ವಲಯದಲ್ಲಿ ಪ್ರತಿ ವರ್ಷ 1.75 ಲಕ್ಷದಿಂದ 2 ಲಕ್ಷದವರೆಗೆ ಉದ್ಯೋಗ ಕಡಿತವಾಗಲಿವೆ. ಹೊಸ ತಂತ್ರಜ್ಞಾನವನ್ನುಅಳವಡಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿರುವುದೇ ಇದಕ್ಕೆ ಕಾರಣ ಎಂದು ಹೆಡ್‌ ಹಂಟರ್ಸ್‌ ಇಂಡಿಯಾ ಸಂಸ್ಥೆಯ ವರದಿ ಹೇಳಿದೆ. 

ಅರ್ಧದಷ್ಟು ಐ.ಟಿ ಉದ್ಯೋಗಿಗಳು ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಅಪ್ರಸ್ತುತ ಆಗಲಿದ್ದಾರೆ ಎಂದು ಮ್ಯಾಕಿನ್ಸೆ ಆ್ಯಂಡ್‌ ಕಂಪೆನಿ ಕೂಡ ವರದಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.