ADVERTISEMENT

ನಿಫ್ಟಿ ಸಾರ್ವಕಾಲೀನ ದಾಖಲೆ

ಚುನಾವಣೆ, ಫೆಡರಲ್‌ ರಿಸರ್ವ್‌ ಬಡ್ಡಿದರ ಪರಾಮರ್ಶೆ ಪ್ರಭಾವ

ಪಿಟಿಐ
Published 18 ಮಾರ್ಚ್ 2017, 19:30 IST
Last Updated 18 ಮಾರ್ಚ್ 2017, 19:30 IST
ನಿಫ್ಟಿ ಸಾರ್ವಕಾಲೀನ ದಾಖಲೆ
ನಿಫ್ಟಿ ಸಾರ್ವಕಾಲೀನ ದಾಖಲೆ   

ಮುಂಬೈ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಈ ವಾರ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟಿಗೆ ಕಾರಣವಾಯಿತು.

ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಾಧನೆಯನ್ನು ಹೂಡಿಕೆದಾರರು ಸ್ವಾಗತಿಸಿದ್ದಾರೆ. ಚುನಾವಣೆಯಲ್ಲಿ ಸಿಕ್ಕಿರುವ ಜನಬೆಂಬಲ ಬಿಜೆಪಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಇದರಿಂದ ಬಂಡವಾಳ ಮಾರುಕಟ್ಟೆಯ ಸುಧಾರಣೆಯೂ ಸೇರಿದಂತೆ ಆರ್ಥಿಕ ಪ್ರಗತಿಗೆ ಪೂರಕವಾದ ನಿರ್ಧಾರಗಳು ಹೊರಬೀಳಲಿವೆ ಎಂದು ತಜ್ಞರು ಹೇಳಿದ್ದಾರೆ. ಈ ವಾರ ಷೇರುಪೇಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆಯಾಗಿದ್ದು, ಉತ್ತಮ ವಹಿವಾಟು ನಡೆಯಿತು.

ನಿಫ್ಟಿ ಹೊಸ ದಾಖಲೆ: ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ವಾರದ ವಹಿವಾಟು ಅವಧಿಗಳಲ್ಲಿ ಮೂರು ದಿನ ಸಾರ್ವಕಾಲೀನ ಗರಿಷ್ಠ ಮಟ್ಟವನ್ನು ತಲುಪಿತು.

ಮಂಗಳವಾರದ ವಹಿವಾಟಿನಲ್ಲಿ ನಿಫ್ಟಿ 152 ಅಂಶ ಏರಿಕೆ ಕಂಡು, 9,087 ಅಂಶಗಳಿಗೆ ಏರಿಕೆ ಕಾಣುವ ಮೂಲಕ ಹೊಸ ದಾಖಲೆ ಬರೆದಿತ್ತು. ಗುರುವಾರ 69 ಅಂಶ ಏರಿಕೆ ಕಂಡು, 9,154 ಅಂಶಗಳಿಗೆ ತಲುಪಿ ಹೊಸ ಗರಿಷ್ಠ ಮಟ್ಟ ತಲುಪಿತ್ತು.

ಶುಕ್ರವಾರದ ವಹಿವಾಟಿನಲ್ಲಿಯೂ 6 ಅಂಶ ಹೆಚ್ಚಾಗಿ, ಸಾರ್ವಕಾಲೀನ ಗರಿಷ್ಠ ಮಟ್ಟವಾದ 9,160 ರಲ್ಲಿ ವಹಿವಾಟು ಅಂತ್ಯಕಂಡಿತು. ವಾರದ ವಹಿವಾಟಿನಲ್ಲಿ ನಿಫ್ಟಿ 225 ಅಂಶಗಳಷ್ಟು ಗಳಿಕೆ ಕಂಡುಕೊಂಡಿದೆ.

ಬಿಎಸ್‌ಇ ಗರಿಷ್ಠ ಏರಿಕೆ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 703 ಅಂಶಗಳಷ್ಟು ಗರಿಷ್ಠ ಏರಿಕೆ ಕಂಡು 29,649 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ. ಕಳೆದ ವಾರ ಕೇವಲ 114 ಅಂಶಗಳಷ್ಟು ಏರಿಕೆ ಕಂಡಿತ್ತು.

ಉತ್ತಮ ಖರೀದಿ: ಎಫ್‌ಎಂಸಿಜಿ, ಗ್ರಾಹಕ ಬಳಕೆ ವಸ್ತುಗಳು, ವಿದ್ಯುತ್‌, ಲೋಹ, ಬ್ಯಾಂಕ್‌, ವಾಹನ, ಆರೋಗ್ಯ ಸೇವೆ, ಐ.ಟಿ, ಸರ್ಕಾರಿ ಸ್ವಾಮ್ಯದ ಕಂಪೆನಿಗಳು, ತೈಲ ಮತ್ತು ಅನಿಲ ಹಾಗೂ ತಂತ್ರಜ್ಞಾನ ವಲಯದ ಷೇರುಗಳಲ್ಲಿ ಉತ್ತಮ ವಹಿವಾಟು ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.